ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಅದೊಂದು ಕೊಲೆ ಪೊಲೀಸರಿಗೆ ತಲೆನೋವಾಗಿದೆ. 13 ವರ್ಷದ ಬಾಲಕಿಯ ನಿಗೂಢ ಸಾವಿನ ಸುತ್ತ ಅನುಮಾನದ ಹುತ್ತ ಮೂಡಿದೆ. ಗರ್ಗಿ ಮುರುಳೀಧರ್ ಎಂಬಾಕೆ ನಿಗೂಢವಾಗಿ ಮೃತಪಟ್ಟವಳು. ನಿದ್ದೆಗೆ ಜಾರಿದ 13 ವರ್ಷದ ಬಾಲಕಿಯನ್ನ ಕೊಂದಿದ್ಯಾರು? ಎಂಬ ಪ್ರಶ್ನೆ ಕಾಡುತ್ತಿದೆ. ಅಸಹಜ ಸಾವು ಅಂದುಕೊಂಡಿದ್ದ ಪೊಲೀಸರಿಗೆ ಪಿಎಂ ಹಾಗೂ ಎಫ್‌ಎಸ್‌ಎಲ್ ರಿಪೋರ್ಟ್ ಅದೊಂದು ಸುಳಿವು ನೀಡಿತ್ತು. ಎರಡು ತಿಂಗಳ ಹಿಂದೆ ಯುಡಿಆರ್ ಆಗಿದ್ದ ಪ್ರಕರಣ ನಂತರ ಕೊಲೆ ಕೇಸ್ ಆಗಿ ಬದಲಾಗಿದೆ.
ಮುರುಳೀಧರ್ ಹಾಗೂ ಶೃತಿ ದೇಶಪಾಂಡೆ ದಂಪತಿಯ ಒಬ್ಬಳೇ ಮಗಳು ಗರ್ಗಿ ಎಂಬಾಕೆ ತಿಲಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಯನಗರ ಉಷಾ ಅಪಾರ್ಟ್ಮೆಂಟ್‌ನಲ್ಲಿ ವಾಸವಿದ್ದರು. ಖಾಸಗಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಗರ್ಗಿ ಮುರಳೀಧರ್, ಬೇಸಿಗೆ ರಜೆ ಹಿನ್ನೆಲೆಯಲ್ಲಿ ಎರಡು ತಿಂಗಳು ಟ್ಯೂಷನ್‌ಗೆ ತೆರಳುತ್ತಿದ್ದಳು. ಕೃಷ್ಣ ಮೂರ್ತಿ ಎಂಬುವವರ ಬಳಿ ಗಣಿತ ಟ್ಯೂಷನ್‌ಗೆ ತೆರಳುತ್ತಿದ್ದಳು. ಕಳೆದ ಮೇ 22ರಂದು ಬೆಳಗ್ಗೆ 8:45 ಗರ್ಗಿ ತನ್ನ ಅಮ್ಮನ ಜತೆ ಅಶೋಕನಗರದಲ್ಲಿರುವ ತಾತನ ಮನೆಗೆ ತೆರಳಿದ್ದಳು. ಸಂಜೆ 5:30 ಕ್ಕೆ ತಾಯಿ ಶೃತಿ ದೇಶಪಾಂಡೆ ಹಾಗೂ ಗರ್ಗಿ ಮುರುಳೀಧರ್ ವಾಪಸ್ ಆಗಿದ್ದಳು.
ಸಂಜೆ 7ಕ್ಕೆ ಶೃತಿ ದೇಶಪಾಂಡೆ, ಮಗಳು ಗರ್ಗಿ ಹಾಗೂ ಶೃತಿ ಸಹೋದರಿ ಚಾಟ್ಸ್ ತಿನ್ನಲು ಹೊರಗೆ ಹೋಗಿದ್ದರು. ವಾಪಸ್ 8 ಗಂಟೆಗೆ ಬಂದವರೇ ಗರ್ಗಿ ರಾತ್ರಿ 10:30ಕ್ಕೆ ಮಲಗಲು ರೂಂಗೆ ತೆರಳಿದ್ದಳು. ಎಂದಿನಂತೆ ಬೆಳಗ್ಗೆ 7 ನೋಡಿದಾಗ ಗರ್ಗಿ ಮಲಗಿದ್ದಲೇ ಮೂತ್ರ ವಿಸರ್ಜನೆ ಮಾಡಿಕೊಂಡಿದ್ದಳು. ಎಷ್ಟೇ ಕೂಗಿ ಎಬ್ಬಿಸಿಲು ಪ್ರಯತ್ನಿಸಿದ್ದರು ಎದ್ದೇಳದೆ ಇದ್ದಾಗ ಪೋಷಕರು ಗಾಬರಿಗೊಂಡಿದ್ದರು. ಕೂಡಲೇ ಅಪಾರ್ಟ್‌ಮೆಂಟ್‌ನಲ್ಲಿದ್ದ ವೈದ್ಯರನ್ನು ಕರೆದು ಪರೀಕ್ಷಿಸಿದ್ದಾರೆ. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಆದರೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದಾಗ ದಾರಿ ಮಧ್ಯೆ ಮೃತಪಟ್ಟಿದ್ದಾಗಿ ವೈದ್ಯರು ಖಚಿತ ಪಡಿಸಿದ್ದಾರೆ.
ಇದನ್ನೂ ಓದಿ: Murder case : ಬೆಂಗಳೂರಲ್ಲಿ ಬಿಹಾರಿ ಮೂಲದ ವ್ಯಕ್ತಿಯನ್ನು ದೊಣ್ಣೆಯಿಂದ ಹೊಡೆದು ಭೀಕರ ಹತ್ಯೆ
ಘಟನೆ ಸಂಬಂಧ ತಿಲಕನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ದಾಖಲಾಗಿತ್ತು. ಆದರೆ ಮಗಳ ದಿಢೀರ್ ಸಾವಿನಿಂದ ಪೋಷಕರು ಅನುಮಾನ ವ್ಯಕ್ತಪಡಿಸಿದ್ದರು. ಆರೋಗ್ಯವಾಗಿದ್ದ ಮಗಳು ಹೀಗೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಮೃತಪಟ್ಟಿರುವುದರಿಂದ ಹಲವು ಅನುಮಾನಗಳು ಮೂಡುತ್ತಿವೆ. ಹೀಗಾಗಿ ತನಿಖೆಯನ್ನು ನಡೆಸುವಂತೆ ದೂರು ನೀಡಿದ್ದರು. ಗರ್ಗಿಯ ಮರಣೋತ್ತರ ಪರೀಕ್ಷೆಯನ್ನು ನಡೆಸಿದಾಗ, ಬಾಲಕಿ ಉಸಿರುಗಟ್ಟಿ ಮೃತಪಟ್ಟಿದ್ದಾಳೆ ಎಂದು ವರದಿ ಬಂದಿದೆ.
ಹೀಗಾಗಿ ಯುಡಿಆರ್ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ಕೊಲೆಕೇಸ್ ದಾಖಲಿಸಿಕೊಂಡಿದ್ದಾರೆ. ಆದರೆ ಮನೆಯೊಳಗೆ ಮಲಗಿದ್ದ ಬಾಲಕಿಯನ್ನು ಉಸಿರುಗಟ್ಟಿಸಿ ಕೊಂದವರು ಯಾರು ಎಂಬ ಪ್ರಶ್ನೆ ಹಾಗೇ ಉಳಿದಿದೆ. ಜುಲೈ 18 ರಂದು ಯುಎಇಆರ್ ಪ್ರಕರಣ 302 ಅಡಿಯಲ್ಲಿ ಎಫ್ಐಆರ್ ಆಗಿ ದಾಖಲಿಸಿಕೊಂಡಿರುವ ಪೊಲೀಸರು, ಕುಟುಂಬಸ್ಥರ ವಿಚಾರಣೆ ನಡೆಸುತ್ತಿದ್ದಾರೆ. ಪಿಎಂ ರಿಪೋರ್ಟ್‌ನಲ್ಲಿ ಬಾಲಕಿ ಕಿವಿಯನ್ನು ಬಲವಾಗಿ ಒತ್ತಿದ್ದಾರೆ. ದಿಂಬು ಅಥವಾ ಬೇರೆ ವಸ್ತುವಿನಿಂದ ಉಸಿರುಗಟ್ಟಿಸಿಕೊಂದಿದ್ದಾರೆಂಬ ಮಾಹಿತಿ ಇದೆ. ಪ್ರಕರಣ ಸೂಕ್ಷ್ಮತೆ ಅರಿತ ಡಿಸಿಪಿ ಪ್ರಕರಣವನ್ನು ಎಸಿಪಿಗೆ ರವಾನೆ ಮಾಡಿದ್ದಾರೆ. ಸದ್ಯ ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿರುವ ಪೊಲೀಸರು ಆರೋಪಿಯ ಹುಡುಕಾಟದಲ್ಲಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ