ಬೆಂಗಳೂರು: ಕೆಲವು ಯೋಜನೆಗಳು ತಾತ್ಕಾಲಿಕವಾಗಿ ಅನ್ಯಾಯದಂತೆ ಅನಿಸಬಹುದು. ಆದರೆ ದೇಶ ಕಟ್ಟಲು ಅಂಥ ಯೋಜನೆಗಳು ಅಗತ್ಯವಾಗಿವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಮಾತು ಇದೀಗ ದೇಶದ ನೆಮ್ಮದಿ ಕೆಡಿಸಿರುವ ಅಗ್ನಿಪಥ್ ಯೋಜನೆಯ ಕುರಿತು ಬಂದಿದೆ ಎಂದು ತರ್ಕಿಸಲಾಗಿದೆ. ಆದರೆ ಈ ಭಾಷಣದಲ್ಲಿ ಎಲ್ಲೂ ಮೋದಿಯವರು ಅಗ್ನಿಪಥ್ ಯೋಜನೆಯ ಹೆಸರನ್ನು ಉಲ್ಲೇಖ ಮಾಡಿಲ್ಲ.
ಬೆಂಗಳೂರಿನಲ್ಲಿ ಸೋಮವಾರ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಈ ಮಾತನ್ನು ಹೇಳಿದ್ದಾರೆ. ಬೆಂಗಳೂರಿನ ನಾನಾ ಕಡೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಮೋದಿ, ಡಾ.ಅಂಬೇಡ್ಕರ್ ಅವರ ಪ್ರತಿಮೆ ಅನಾವರಣ ಮತ್ತು ಹಲವಾರು ಯೋಜನೆಗಳಿಗೆ ಚಾಲನೆ ನೀಡಿದ್ದರು. ಮಂಗಳವಾರ ಅವರು ಮೈಸೂರಿನಲ್ಲಿ ಯೋಗ ದಿನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.
ʼʼಕೆಲವು ಯೋಜನೆಗಳು ಆ ಕ್ಷಣಕ್ಕೆ ಅನ್ಯಾಯದ್ದು ಎಂಬಂತೆ ಕಾಣಿಸುತ್ತವೆ, ಆದರೆ ದೇಶವನ್ನು ಕಟ್ಟುವ ದೃಷ್ಟಿಯಿಂದ ಅಂಥ ಯೋಜನೆಗಳು ಅಗತ್ಯವಾಗಿರುತ್ತವೆʼʼ ಎಂದು ಮೋದಿ ಉಲ್ಲೇಖಿಸಿದರು. ಅಗ್ನಿಪಥ್ ಯೋಜನೆಯು ದೇಶಾದ್ಯಂತ ನಾನಾ ಪ್ರತಿಭಟನೆಗಳಿಗೆ ಕಾರಣವಾಗಿದೆ. ಕರ್ನಾಟಕದಲ್ಲಿಯೂ ಕೆಲವೆಡೆ ಪ್ರತಿಭಟನೆಯ ಕಿಚ್ಚು ಸಿಡಿದಿದೆ. ಈ ಹಿನ್ನೆಲೆಯಲ್ಲಿ ಮೋದಿಯವರು ಈ ಮಾತನ್ನು ಹೇಳಿರಬಹುದು. ಅಗ್ನಿಪಥ್ ಯೋಜನೆಯಲ್ಲಿ 17ರಿಂದ 23 ವರ್ದ ಯುವಕರಿಗೆ ಸೇನೆ ಸೇರಿ ನಾಲ್ಕು ವರ್ಷ ಸೇವೆ ಸಲ್ಲಿಸುವ ಅವಕಾಶ ಕಲ್ಪಿಸಲಾಗಿದೆ. ಬಿಹಾರ ಮುಂತಾದ ಕಡೆ ಪ್ರತಿಭಟನೆ ದೊಡ್ಡದಾಗಿದ್ದು, ಸೋಮವಾರ ಭಾರತ್ ಬಂದ್‌ಗೆ ಕರೆ ನೀಡಲಾಗಿತ್ತು.
ಇದನ್ನೂ ಓದಿ: Modi in Karnataka | ರಾಜ್ಯದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ: ಪ್ರಧಾನಿ ನರೇಂದ್ರ ಮೋದಿ ಭರವಸೆ