ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ (Karnataka Election 2023) ಕಣದ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ರಾಜಧಾನಿಯಲ್ಲಿ ನಡೆಯಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರ ರೋಡ್ ಶೋದಲ್ಲಿ ಮತ್ತೆ ಅದಲು ಬದಲು ಮಾಡಲಾಗಿದೆ.
ಭಾನುವಾರ ಬೆಳಗ್ಗೆ ನಿಗದಿಯಾಗಿದ್ದ ರೋಡ್ ಶೋ ಶನಿವಾರಕ್ಕೆ ಹಾಗೂ ಶನಿವಾರ ಬೆಳಗ್ಗೆ ನಿಗದಿಯಾಗಿದ್ದ ರೋಡ್ ಶೋ ಭಾನುವಾರಕ್ಕೆ ನಿಗದಿ ಮಾಡಲಾಗಿದೆ. ನೀಟ್ ಪರೀಕ್ಷೆ ನಡೆಯಲಿರುವ ಹಿನ್ನೆಲೆಯಲ್ಲಿ ಪ್ರಧಾನಿ ಕಚೇರಿ ನಿರ್ದೇಶನದಂತೆ ರೋಡ್ ಶೋ ಬದಲಾವಣೆ ಮಾಡಲಾಗಿದೆ.
ಶನಿವಾರ ಬೆಳಗ್ಗೆ 10 ಗಂಟೆಯಿಂದ 12.30ರವರೆಗೆ ರೋಡ್ ಶೋ ನಡೆಯಲಿದೆ. ಜೆ.ಪಿ. ನಗರ ಬ್ರಿಗೇಡ್ ಮಿಲೇನಿಯಂನಿಂದ ಮಲ್ಲೇಶ್ವರಂ ಸರ್ಕಲ್ ಮಾರಮ್ಮ ಟೆಂಪಲ್‌ವರೆಗೆ ರೋಡ್ ಶೋ ಪ್ರಯಾಣಿಸಲಿದೆ. ಭಾನುವಾರ ಬೆಳಗ್ಗೆ 10 ಗಂಟೆಯಿಂದ 11.30ರವರೆಗೆ ಸುರಂಜನ್ ದಾಸ್ ಸರ್ಕಲ್‌ನಿಂದ ಟ್ರಿನಿಟಿ ಸರ್ಕಲ್‌ವರೆಗೆ ರೋಡ್ ಶೋ ನಡೆಯಲಿದೆ. ಭಾನುವಾರ ನಡೆಯುವ ರೋಡ್ ಶೋದ ಉದ್ದವನ್ನು 4 ಕಿ.ಮೀ. ಕಡಿತಗೊಳಿಸಲಾಗಿದೆ.
ರಸ್ತೆಗಳು ಫಳಫಳ
ಪ್ರಧಾನಿ ಮೋದಿ ರೋಡ್ ಶೋ ಹಿನ್ನೆಲೆಯಲ್ಲಿ ಅಲರ್ಟ್ ಆದ ಬಿಬಿಎಂಪಿ ಅಧಿಕಾರಿಗಳು ಮೋದಿ ಸಂಚಾರ ಮಾಡುವ ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯ ಮತ್ತು ಬ್ಯಾರಿಕೆಡ್ ಅಳವಡಿಕೆ ಕಾರ್ಯ ಮಾಡಿಸುತ್ತಿದ್ದಾರೆ.
ರೋಡ್ ಶೋ ವೇಳೆ ಕೆಲ ರಸ್ತೆಗಳಲ್ಲಿ ಅಡ್ಡಿಯಾಗುವ ಹಿನ್ನೆಲೆ ಮರಗಳ ರೆಂಬೆ ಕೊಂಬೆಗಳ ತೆರವು ಮಾಡಲಾಗುತ್ತಿದ್ದು, ಮಾಗಡಿ ರೋಡ್ ಬಾಳೆಕಾಯಿ ಮಂಡಿ ರಸ್ತೆಯಲ್ಲಿ ಕೆಲ ಕಾಮಗಾರಿ ಮಾಡಿ ಕಾಂಕ್ರೀಟ್ ಹಾಕಿ ಫಳ ಫಳ ಹೊಳೆಯುವಂತೆ ಮಾಡಲಾಗುತ್ತಿದೆ. ಹಲವಾರು ಕಡೆ ಬ್ಯಾರಿಕೇಡ್ ಹಾಕಲಾಗುತ್ತಿದ್ದು, ವಾಹನ ಸವಾರರಿಗೆ ಇನ್ನೆರಡು ಸುತ್ತಿ ಬಳಸಿ ಹೋಗುವುದೇ ಕಾಯಂ ಆಗಿದೆ. ರೋಡ್ ಶೋ ವೇಳೆ ಮರಗಳು ಅಡ್ಡಿಯಾಗದಂತೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ.
ಇದನ್ನೂ ಓದಿ: ವಿಸ್ತಾರ Top 10 News : ಹನುಮಾನ್ ಚಾಲೀಸಾ ಮಂತ್ರ, ಮೋದಿ ರೋಡ್ ಶೋ ಹೊಸ ತಂತ್ರ ಸಹಿತ ಪ್ರಮುಖ ಸುದ್ದಿಗಳು