ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ಮೂಲಕ ರಸ್ತೆ ಗುಂಡಿಗಳನ್ನು ಈಗಾಗಲೇ ಗುರುತಿಸಲಾಗಿದೆ. ಆಯಾ ವಲಯ ವ್ಯಾಪ್ತಿಯ ಪ್ರಮುಖ ರಸ್ತೆಗಳಾದ ಆರ್ಟಿರಿಯಲ್, ಸಬ್ ಆರ್ಟಿರಿಯಲ್ ರಸ್ತೆ ಹಾಗೂ ವಾರ್ಡ್ ರಸ್ತೆಗಳಲ್ಲಿ, ರಸ್ತೆ ಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚಲು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಹಾಗೂ ಮಳೆ ಮುಂಜಾಗ್ರತಾ ಕ್ರಮಗಳಿಗೆ ಸಂಬಂಧಿಸಿ ವರ್ಚುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ನಗರದಲ್ಲಿ ಇದುವರೆಗೆ ಗುರುತಿಸಿರುವ ಗುಂಡಿಗಳನ್ನು ಕೂಡಲೆ ಮುಚ್ಚಲು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಆಯಾ ವಲಯಗಳ ಮುಖ್ಯ ಅಭಿಯಂತರರು ಪಾಲಿಕೆಯ ಬ್ಯಾಚ್ ಮಿಕ್ಸ್ ಪ್ಲಾಂಟ್ ಜೊತೆ ಸಮನ್ವಯ ಸಾಧಿಸಿ ಅಗತ್ಯ ಡಾಂಬರನ್ನು ಪಡೆದು ರಸ್ತೆ ಗುಂಡಿಗಳನ್ನು ಮುಚ್ಚಲು ಸೂಚಿಸಿದ್ದಾರೆ.
ಖುದ್ದು ಪರಿಶೀಲನೆಗೆ ಸೂಚನೆ
ಬ್ಯಾಚ್ ಮಿಕ್ಸ್ ಪ್ಲಾಂಟ್ನಿಂದ ಬರುವ ಡಾಂಬರಿನ ಪ್ರಮಾಣವನ್ನು ಸರಿಯಾಗಿ ಪರಿಶೀಲಿಸಬೇಕು. ಜತೆಗೆ ಗುಣಮಟ್ಟವನ್ನು ಕಾಪಾಡಿಕೊಂಡು ರಸ್ತೆ ಗುಂಡಿಗಳನ್ನು ಮುಚ್ಚಬೇಕು. ರಸ್ತೆ ಗುಂಡಿ ಬಿದ್ದ ಸ್ಥಳವನ್ನು ಶುಚಿಮಾಡಿ ವೆಟ್ ಮಿಕ್ಸ್ (ಹಸಿ ಜೆಲ್ಲಿ ಮಿಶ್ರಣ) ಹಾಕಿದ ನಂತರ ಡಾಂಬರನ್ನು ಹಾಕಿ ರೋಲರ್ ಮೂಲಕ ಸಮತಟ್ಟು ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರಲ್ಲದೇ, ಈ ಕಾರ್ಯವನ್ನು ಹಗಲು-ರಾತ್ರಿ ಖುದ್ದು ಪರಿಶೀಲನೆ ನಡೆಸುವಂತೆ ವಲಯ ಆಯುಕ್ತರು ಹಾಗೂ ಜಂಟಿ ಆಯುಕ್ತರುಗಳಿಗೆ ಸೂಚಿಸಿದ್ದಾರೆ.
ಪ್ರತಿನಿತ್ಯ 25 ಲೋಡ್ ಡಾಂಬರು
ಬಿಬಿಎಂಪಿಯ ಬ್ಯಾಚ್ ಮಿಕ್ಸ್ ಪ್ಲಾಂಟ್ನಿಂದ ಎಲ್ಲ ವಲಯಗಳಿಗೂ ಪ್ರತಿನಿತ್ಯ 25 ಲೋಡ್ (ಹಗಲು 18 ಲೋಡ್, ರಾತ್ರಿ 7 ಲೋಡ್) ಕಡ್ಡಾಯವಾಗಿ ಕಳುಹಿಸಬೇಕು. ಈ ಮೂಲಕ ಆಯಾ ವಲಯಗಳಲ್ಲಿ ಗುರುತಿಸಿರುವ ರಸ್ತೆ ಗುಂಡಿಗಳನ್ನು ತ್ವರಿತವಾಗಿ ಮುಚ್ಚಬೇಕು. ಅದನ್ನು ವಲಯ ಆಯುಕ್ತರು ಮೇಲ್ವಿಚಾರಣೆ ಮಾಡಲು ಮುಖ್ಯ ಆಯುಕ್ತರು ಸೂಚನೆ ನೀಡಿದ್ದಾರೆ.
ಸಾರ್ವಜನಿಕ ಸ್ಥಳ ತೆರವು ಮಾಡಿ
ಜಲಮಂಡಳಿ, ಬೆಸ್ಕಾಂ, ಗೇಲ್ ಸೇರಿದಂತೆ ಇನ್ನಿತರೆ ಇಲಾಖೆಗಳು ಕಾಮಗಾರಿಗಳಿಗೆ ಸಂಬಂಧಿಸಿದ ಸಾಮಗ್ರಿಗಳನ್ನು ಸಾರ್ವಜನಿಕ ಸ್ಥಳ ಅಥವಾ ರಸ್ತೆ ಬದಿ ಅಥವಾ ಪಾದಚಾರಿ ಮಾರ್ಗಗಳಲ್ಲಿಯೇ ಹಾಕಿರುತ್ತಾರೆ. ಇದರಿಂದ ಸಾರ್ವಜನಿಕರು ಹಾಗೂ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಲಿದೆ. ಈ ಸಂಬಂಧ ಎಲ್ಲೆಲ್ಲಿ ಸಾಮಗ್ರಿಗಳನ್ನು ಹಾಕಿದ್ದಾರೆ ಎಂಬುದನ್ನು ಗುರುತಿಸಿ ಕೂಡಲೆ ಪಾಲಿಕೆಯ ವಶಕ್ಕೆ ಪಡೆದು ಸಂಬಂಧಪಟ್ಟ ಗುತ್ತಿಗೆದಾರರಿಗೆ ದಂಡ ವಿಧಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅತಿ ಸೂಕ್ಷ್ಮಹಾಗೂ ಸೂಕ್ಷ್ಮತಾಣಗಳಲ್ಲಿ ಮುಂಜಾಗ್ರತಾ ಕ್ರಮ
ನಗರದಲ್ಲಿ 27 ಅತಿ ಸೂಕ್ಷ್ಮತಾಣ ಹಾಗೂ 45 ಸೂಕ್ಷ್ಮತಾಣ ಸೇರಿ 72 ಪ್ರವಾಹ ತಾಣಗಳಿದ್ದು, ಅಂತಹ ಪ್ರದೇಶದಲ್ಲಿ ಪ್ರವಾಹ ಆಗುವುದನ್ನು ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರವಾಹ ತಾಣಗಳ ಬಳಿ ಸಂಪೂರ್ಣವಾಗಿ ಹೂಳೆತ್ತುವ ಕಾರ್ಯ ಆಗಬೇಕು. ಮುನ್ನೆಚ್ಚರಿಕಾ ಕ್ರಮವಾಗಿ ಸ್ಯಾಂಡ್ ಬ್ಯಾಗ್ಸ್ (ಮರಳು ಮೂಟೆಗಳು) ಲಭ್ಯವಿಟ್ಟುಕೊಳ್ಳಬೇಕು. ಇದಲ್ಲದೆ ಪರ್ಯಾಯ ಮಾರ್ಗವಾಗಿ ಪೈಪ್ ಅಳವಡಿಸಿ ಆ ಮೂಲಕ ನೀರು ಬೇರೆಡೆ ಹೋಗುವ ವ್ಯವಸ್ಥೆ ಕಲ್ಪಿಸಬೇಕೆಂದು ಬೃಹತ್ ನೀರುಗಾಲುವೆ ವಿಭಾಗದ ಮುಖ್ಯ ಅಭಿಯಂತರ ಲೋಕೇಶ್ ರವರಿಗೆ ಸೂಚನೆ ನೀಡಿದ್ದಾರೆ.
ಶಿಲ್ಟ್ ಅಂಡ್ ಟ್ರ್ಯಾಕ್ಟರ್ ಮೂಲಕ ಸ್ವಚ್ಛತಾ ಕಾರ್ಯ
ಪಾಲಿಕೆಯ ಎಲ್ಲ ವಾರ್ಡ್ಗಳಲ್ಲೂ ಶಿಲ್ಟ್ ಅಂಡ್ ಟ್ರ್ಯಾಕ್ಟರ್ಗಳಿದ್ದು, ಅವುಗಳಿಂದ ರಸ್ತೆ ಬದಿ ಚರಂಡಿಗಳಲ್ಲಿ ಹೂಳೆತ್ತುವ ಕೆಲಸ, ರಸ್ತೆ ಬದಿ ಸಂಗ್ರಹವಾಗಿರುವ ಮಣ್ಣು, ಶೋಲ್ಡರ್ ಡ್ರೈನ್ಗಳನ್ನು ಸ್ವಚ್ಛಗೊಳಿಸಿ ರಸ್ತೆಗಳ ಮೇಲೆ ಬೀಳುವ ನೀರು ಸರಾಗವಾಗಿ ಚರಂಡಿಗೆ ಹರಿದು ಹೋಗುವಂತೆ ಮಾಡಬೇಕು.
ಮಳೆಗಾಲದ ಸಮಯದಲ್ಲಿ ಆಯಾ ವಲಯ ವ್ಯಾಪ್ತಿಯ ಪ್ರಮುಖ ರಸ್ತೆಗಳು ಹಾಗೂ ವಾರ್ಡ್ ರಸ್ತೆಗಳಲ್ಲಿ ನೀರು ನಿಲ್ಲುವ ಬಗ್ಗೆ ಸಂಚಾರಿ ಪೊಲೀಸರು ನೀಡಿರುವ ಮಾಹಿತಿಯನುಸಾರ ಸ್ಥಳ ಪರಿಶೀಲಿಸಿ ರಸ್ತೆ ಮೇಲೆ ನೀರು ನಿಲ್ಲದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ತುಷಾರ್ ಗಿರಿನಾಥ್ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಬಿಬಿಎಂಪಿ ಚುನಾವಣೆ: ಕೆಂಪೇಗೌಡ ಪೌರ ಸಭಾಂಗಣಕ್ಕೆ ಹೈಟೆಕ್ ಸ್ಪರ್ಶ