ಬೆಂಗಳೂರು: ಸಾರ್ವಜನಿಕರಿಂದ ಹಣ ಸುಲಿಗೆ ಮಾಡುವ ಕೆಲ ಪೊಲೀಸರ ಕೃತ್ಯ ಬಯಲಾದ ಹಿನ್ನೆಲೆಯಲ್ಲಿ ಅಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗಿದ್ದರೂ, ಪೊಲೀಸ್ ಸಿಬ್ಬಂದಿ ವಿರುದ್ಧ ಸುಲಿಗೆ ಆರೋಪ ಮುಂದುವರಿದಿದೆ.
ಯುವಕನೊಬ್ಬನನ್ನು ಸ್ಟೇಷನ್‌ನಲ್ಲಿ ಕೂಡಿಹಾಕಿ 40 ಸಾವಿರ ರೂ. ಹಣ ವಸೂಲಿ ಮಾಡಿದ ಆರೋಪವನು ಬೊಮ್ಮನಹಳ್ಳಿ ಠಾಣೆಯ ಹೆಡ್ ಕಾನ್ಸ್ಟೇಬಲ್ ಲಕ್ಷ್ಮಣ್ ಕೆ. ಪವಾರ್ ಎಂಬವರ ಮೇಲೆ ಹೊರಿಸಲಾಗಿದೆ. ಕಳೆದ ಜುಲೈ 29ರಂದು ಈಜಿಪುರ ಸಿಗ್ನಲ್ ಬಳಿ ನಿಂತಿದ್ದ ಆಶೀಶ್ ಅವರನ್ನು ಕರೆದೊಯ್ದಿದ್ದ ಹೆಡ್ ಕಾನ್‌ಸ್ಟೇಬಲ್, ಎರಡು ಗಂಟೆಗಳ ಕಾಲ ಲಾಕಪ್‌ನಲ್ಲಿ ಕೂಡಿ ಹಾಕಿ ಡ್ರಗ್ ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕಿ ಎರಡು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಬಳಿಕ 40 ಸಾವಿರ ಹಣ ಪಡೆದಿದ್ದರು. ಲಕ್ಷ್ಮಣ್ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ನಡೆಸಿದ್ದ ಕೃತ್ಯ ಇದಾಗಿದೆ.
ಹಣ ಕೊಟ್ಟು ಹೊರಬಂದಿದ್ದ ಆಶೀಶ್ ಪೊಲೀಸರ ದೌರ್ಜನ್ಯದ ವಿರುದ್ಧ ಮಾನವಹಕ್ಕು ಆಯೋಗಕ್ಕೆ ದೂರು ನೀಡಿದ್ದಾರೆ. ತನಿಖೆ ನಡೆಸಿದ ಆಯೋಗಕ್ಕೆ ಲಕ್ಷ್ಮಣ್ ಕರ್ತವ್ಯಲೋಪ ಎಸಗಿರುವುದು ಖಚಿತವಾಗಿದೆ. ಆಶೀಶ್ ಮಾಡಿದ್ದ ಆರೋಪಕ್ಕೆ ಸಂಬಂಧಿಸಿ ಮೊಬೈಲ್ ಸಿಡಿಆರ್ ಮಾಹಿತಿ ಪಡೆದಾಗ, ಆ ವೇಳೆ ಆಶೀಶ್ ಹಾಗೂ ಲಕ್ಷ್ಮಣ್ ಬಂಡೇಪಾಳ್ಯ ಪೊಲೀಸ್ ಠಾಣೆ ಮೊದಲ ಮಹಡಿಯಲ್ಲಿ ಒಟ್ಟಿಗೆ ಇದ್ದ ಮಾಹಿತಿ ದೊರೆತಿದೆ. ಆದರೆ ಆಶೀಶ್‌ನನ್ನು ಠಾಣೆಗೆ ಕರೆತಂದಿರಲಿಲ್ಲ, ಅಲ್ಲೇ ವಿಚಾರಣೆ ಮಾಡಿ ಬಿಟ್ಟಿದ್ದಾಗಿ ಲಕ್ಷ್ಮಣ್ ಹೇಳಿದ್ದರು.
ಆಶಿಶ್ ಹೇಳಿದ ಠಾಣೆಯ ಸ್ಕೆಚ್ ಹಾಕಿಸಿದಾಗ, ಅದು ಬಂಡೇಪಾಳ್ಯ ಠಾಣೆ ಎಂದು ದೃಢಪಟ್ಟಿದೆ. ಪೊಲೀಸರು ಪಡೆದ ಹಣ ಎಟಿಎಂನಿಂದ ಡ್ರಾ ಆಗಿದ್ದುದಕ್ಕೆ ಎಟಿಎಂ ಸ್ಲಿಪ್ ದಾಖಲೆಯಿದೆ. ಈ ಎಲ್ಲಾ ಆಧಾರದ ಮೇಲೆ ಹೆಡ್ ಕಾನ್ಸ್ಟೇಬಲ್ ಲಕ್ಷ್ಮಣ್ ಹಣ ಪಡೆದಿರುವುದು ಸಾಬೀತಾಗಿದ್ದು, ಸೂಕ್ತ ಕ್ರಮಕ್ಕೆ ಆಯೋಗದಿಂದ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಲಾಗಿದೆ. ಜನವರಿ 5ರೊಳಗೆ ಇಲಾಖೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.
ಇದನ್ನೂ ಓದಿ | Theft case | ಏಳು ಮಂದಿ ಖತರ್ನಾಕ್ ಕಳ್ಳರು, ಸುಲಿಗೆಕೋರರ ಬಂಧನ: 2೦ ಲಕ್ಷ ಮೌಲ್ಯದ ಸೊತ್ತು ವಶ