ಬೆಂಗಳೂರು: ಪಿಎಸ್‌ಐ (PSI scam) ನೇಮಕಾತಿ ಅಕ್ರಮದಲ್ಲಿ ಬಂಧಿತರಾಗಿದ್ದ ಎಡಿಜಿಪಿ ಅಮೃತ್‌ಪಾಲ್‌ಗೆ 1ನೇ ಎಸಿಎಂಎಂ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. ಸಿಐಡಿ ವಶದಲ್ಲಿದ್ದ ಅಮೃತ್ ಪಾಲ್ ಅವಧಿ ಮುಕ್ತಾಯವಾದ ಹಿನ್ನೆಲೆ ಅವರನ್ನು ಕೋರ್ಟ್‌ಗೆ ಶುಕ್ರವಾರ ಹಾಜರುಪಡಿಸಲಾಗಿತ್ತು. ಇನ್ನು ಅಮೃತ್ ಪಾಲ್ ಪರ ವಕೀಕರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೋರ್ಟ್ ಶನಿವಾರಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಕುಟುಂಬದವರ ಭೇಟಿಗೆ ಅವಕಾಶ
ಕುಟುಂಬದವರ ಭೇಟಿಗೆ ಕೋರ್ಟ್ ಅವಕಾಶ ಕಲ್ಪಿಸಿದೆ. ಜೈಲಿನಲ್ಲಿರುವ ಸಮಯದಲ್ಲಿ ದಿನದಲ್ಲಿ 30 ನಿಮಿಷ ಕುಟುಂಬಸ್ಥರ ಭೇಟಿಗೆ ಅನುಮತಿ ನೀಡಲಾಗಿದೆ. ಅನಾರೋಗ್ಯದ ಕಾರಣದಿಂದಾಗಿ ಮನೆಯಿಂದಲ್ಲೇ ಊಟ ತರಿಸಿಕೊಳ್ಳಲು ಅನುಮತಿ ನೀಡಿದೆ.
ಮಂಪರು ಪರೀಕ್ಷೆಗೆ ಕೋರಿಕೆ
ಸಿಐಡಿ ಪರ ನ್ಯಾಯವಾದಿ ಪ್ರಸನ್ನಕುಮಾರ್, ಮಂಪರು ಪರೀಕ್ಷೆಗೆ ಅನುಮತಿಯನ್ನು ಕೋರಿದ್ದಾರೆ. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಅಮೃತ್ ಪೌಲ್ ನ್ಯಾಯವಾದಿ, ಪಾಲ್‌ಗೆ ಆರೋಗ್ಯ ಸಮಸ್ಯೆ ಇದ್ದು, ಹಾಲಿ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಹೀಗಾಗಿ ಪಾಲಿಗ್ರಫಿ ಟೆಸ್ಟ್‌ಗೆ ಅನುಮತಿ ನೀಡಬಾರದು ಎಂದು ಮನವಿ ಮಾಡಿದ್ದಾರೆ.
ಅಮೃತ್ ಪಾಲ್ ಮೇಲಿರುವ ಆರೋಪವೇನು?
545 ಪಿಎಸ್‌ಐ ಅಕ್ರಮದಲ್ಲಿ ಎಡಿಜಿಪಿ ಅಮೃತ್ ಪಾಲ್ ಹಾಗೂ ಆರೋಪಿ ಶಾಂತಕುಮಾರ್ ನಡುವೆ 1.36 ಕೋಟಿ ರೂಪಾಯಿ ಹಣ ವರ್ಗಾವಣೆ ಆಗಿದ್ದು, ಮೊಬೈಲ್ ದತ್ತಾಂಶವನ್ನು ಅಳಿಸಿ ಹಾಕಲಾಗಿದೆ ಎಂದು ಸಿಐಡಿ ತಂಡ ಆರೋಪಿಸಿದೆ. ಸತತ ಮೂರು ಬಾರಿ ವಿಚಾರಣೆ ನಡೆಸಿದ ಸಿಐಡಿ ಜುಲೈ 4ರಂದು ಅಮೃತ್ ಪಾಲ್‌ರನ್ನು ವಶಕ್ಕೆ ಪಡೆದುಕೊಂಡಿತ್ತು.
ಇದನ್ನೂ ಓದಿ | ಅಮೃತ್ ಪಾಲ್ ತನಿಖೆ ಸರಿಯಾಗಿ ನಡೆಯುತ್ತಿದೆ ಎಂದು ನಂಬುವುದು ಹೇಗೆ? ಸಿಐಡಿಗೆ ಹೈಕೋರ್ಟ್ ಪ್ರಶ್ನೆ