Site icon Vistara News

ಶೀಘ್ರದಲ್ಲೆ ಬೆಂಗಳೂರಿನ ರಾಜಕಾಲುವೆಗಳ ಒತ್ತುವರಿ ತೆರವು: ಸಿಎಂ ಬೊಮ್ಮಾಯಿ

ಸಿಎಂ

ಬೆಂಗಳೂರು: ರಾಜಕಾಲುವೆಗಳ ಒತ್ತುವರಿಯಿಂದ ಚರಂಡಿ, ಮಳೆ ನೀರು ಸರಾಗವಾಗಿ ಸಾಗುತ್ತಿಲ್ಲ. ಹೀಗಾಗಿ ಒತ್ತುವರಿ ತೆರವಿಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಗುರುವಾರ ತಿಳಿಸಿದರು.
ನಗರದ ಜೆ.ಸಿ.ನಗರ, ನಾಗವಾರ, ಹೆಚ್‌ಬಿಆರ್‌ ಲೇಔಟ್‌ ಮತ್ತಿತರಮಳೆ ಹಾನಿ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಗೃಹಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಜೆ.ಸಿ.ನಗರ ವಾರ್ಡ್ ನಲ್ಲಿ ಪ್ರವಾಹದ ಪ್ರದೇಶಗಳು, ನಾಗವಾರ ಮೆಟ್ರೋ ನಿಲ್ದಾಣ, ಹೆಚ್‌ಬಿಆರ್‌ ಲೇಔಟ್‌ನ 5ನೇ ಬ್ಲಾಕ್‌ನಲ್ಲಿ ರೈಲ್ವೆ ಸೇತುವೆ ಬಳಿ ಹಿನ್ನೀರಿನಿಂದ ಆಗುತ್ತಿರುವ ಸಮಸ್ಯೆ ಹಾಗೂ ಹೆಬ್ಬಾಳ ತ್ಯಾಜ್ಯನೀರು ಸಂಸ್ಕರಣಾ ಘಟಕದ ಬಳಿಯ ಸಮಸ್ಯೆಗಳನ್ನು ವೀಕ್ಷಿಸಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ | Bengaluru Rain | ಅಬ್ಬರಿಸಿದ ಮಳೆ-ತತ್ತರಿಸಿದ ಬೆಂಗಳೂರು: ಇಬ್ಬರು ಕಾರ್ಮಿಕರ ಸಾವು

ರಾಜ್ಯದಲ್ಲಿ ಕಳೆದ 40-50 ವರ್ಷಗಲ್ಲೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿದೆ. ಕೆಲವೆಡೆ 100 ಮಿ.ಮೀ, 120 ಮೀ.ಮೀ ಮಳೆ ಬಿದ್ದಿದ್ದು, ಅಲ್ಪ ಸಮಯದದಲ್ಲಿ ಭಾರಿ ಮಳೆಯಾಗಿ ಹೆಚ್ಚಿನ ಹಾನಿಯಾಗಿ ಜನರಿಗೆ ತೊಂದರೆಯಾಗಿದೆ. ಸಾಮಾನ್ಯವಾಗಿ ಮೇ ತಿಂಗಳ 15 ದಿನಗಳಲ್ಲಿ ಸುರಿಯಬೇಕಿದ್ದ ಮಳೆ ಕೇವಲ ನಾಲ್ಕೈದು ತಾಸುಗಳಲ್ಲಿ ಬಿದ್ದಿದೆ. ಹೀಗಾಗಿ ನಗರದ ತಗ್ಗು ಪ್ರದೇಶಗಲ್ಲಿ ನೀರು ತುಂಬಿ ಸಮಸ್ಯೆ ಉಂಟಾಗಿದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಕಳೆದ ಮೂರು ನಾಲ್ಕು ದಶಕಗಳಿಂದ ಮಳೆಯಿಂದ ತೊಂದರೆಯಾಗುತ್ತಿದೆ. ಇದಕ್ಕೆ ಹಲವಾರು ಪರಿಹಾರ ಕಾರ್ಯ ಕೈಗೊಂಡರೂ, ನಗರ ಬೆಳವಣಿಗೆ ಆಗುತ್ತಿರುವುದರಿಂದ ಸಮಗ್ರವಾಗಿ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗಿಲ್ಲ. ಕಳೆದ ಬಾರಿ ಮಳೆಯಾದಾಗ ಎಲ್ಲ ಶಾಸಕರು ಹಾಗೂ ವಿರೋಧ ಪಕ್ಷದ ನಾಯಕರೊಂದಿಗೆ ಸಭೆ ನಡೆಸಿ ಕೆಲವು ತೀರ್ಮಾಣ ಮಾಡಿದ್ದೇವೆ ಎಂದು ವಿವರಿಸಿದರು.

ಈ ಸಮಸ್ಯೆಗಳನ್ನು ಪರಿಹರಿಸಲು ಪ್ರಮುಖವಾಗಿ ಕಣಿವೆ (ವ್ಯಾಲಿ) ಪ್ರಕಾರ ಅಭಿವೃದ್ಧಿ ಮಾಡಬೇಕಾದ ಅಗತ್ಯವಿದೆ. ಇವುಗಳಲ್ಲಿ ವೃಷಭಾವತಿ, ಚಲ್ಲಘಟ್ಟ, ಹೆಬ್ಬಾಳ ಸೇರಿ ಆರೇಳು ಕಣಿವೆಗಳು ಇದ್ದು, ಇವುಗಳನ್ನು ಸಮಗ್ರವಾಗಿ ಪುನಶ್ಚೇತನಗೊಳಿಸಲು ನಿರ್ಧಾರ ಮಾಡಲಾಗಿದೆ. ಇದಕ್ಕೆ ವಿಸ್ತೃತ ಯೋಜನಾ ವರದಿಯನ್ನು(ಡಿಪಿಆರ್‌) ಸಿದ್ಧಪಡಿಸಲಾಗಿದೆ. ಪ್ರಥಮ ಹಂತದಲ್ಲಿ ಸುಮಾರು ₹1600 ಕೋಟಿ ಖರ್ಚು ಮಾಡಲು ಬಜೆಟ್‌ನಲ್ಲೂ ಅನುಮೋದನೆ ನೀಡಲಾಗಿದೆ. ಡಿಪಿಆರ್‌ ಪೂರ್ಣಗೊಂಡ ನಂತರ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.

ಹೂಳು ತುಂಬಿರುವ, ಒಳಚರಂಡಿ ವ್ಯವಸ್ಥೆ ಶಿಥಿಲವಾಗಿರುವ ಹಾಗೂ ಬ್ಲಾಕ್ಸ್‌ ಇರುವ ಕಡೆ ದುರಸ್ತಿ ಮಾಡಲು ₹400 ಕೋಟಿ ವೆಚ್ಚದಲ್ಲಿ ಈಗಾಗಲೇ ಅನುಮತಿ ನೀಡಲಾಗಿದೆ. ತುರ್ತಾಗಿ ರಾಜಕಾಲುವೆ, ಒಳಚರಂಡಿಗಳಲ್ಲಿ ಹೂಳು ತೆಗೆಯುವ ಕೆಲಸ ಆಗಬೇಕಿದೆ. ಹೆಚ್‌ಬಿಆರ್‌ ಲೇಔಟ್‌ನಲ್ಲಿ 2.5 ಕಿ.ಮೀ. ರಾಜಕಾಲುವೆ ಹೂಳುತೆಗೆಯಲು ತಿಳಿಸಲಾಗಿದೆ. ರಾಜಕಾಲುವೆಗಳ ನಿರ್ವಹಣೆಗೆ ಸರ್ಕಾರ ಹಣ ನೀಡುತ್ತದೆ. ಒಳಚರಂಡಿ, ಸಣ್ಣ ಚರಂಡಿಗಳನ್ನು ನಿರ್ವಹಣೆ ಮಾಡಲು ಬಿಬಿಎಂಬಿಗೆ ಸೂಚಿಲಾಗಿದೆ.

ಎಸ್ಟಿಪಿ ಪ್ಲಾಂಟ್‌ ಸಾಮರ್ಥ್ಯ ಹೆಚ್ಚಳ

ಈಗಾಗಲೇ 40 ಎಂಎಲ್‌ಡಿ ಸಾಮರ್ಥ್ಯದ ತ್ಯಾಜ್ಯನೀರು ಸಂಸ್ಕರಣಾ ಘಟಕ ನಿರ್ಮಾಣ ಮಾಡಲು ಅನುಮತಿ ನೀಡಲಾಗಿದ್ದು, ಬಿಡಬ್ಲ್ಯುಎಸ್‌ಎಸ್‌ಬಿ ಕೆಲಸ ಪ್ರಾರಂಭ ಮಾಡುತ್ತಿದೆ. ಹೆಬ್ಬಾಳ ಎಸ್ಟಿಪಿಯಲ್ಲಿ 100 ಎಂಎಲ್‌ಡಿ ಸಾಮರ್ಥ್ಯದ ಘಟಕವಿದ್ದು, ಇನ್ನೂ 60 ಎಂಎಲ್‌ಡಿ ಸಾಮರ್ಥ್ಯದ ಘಟಕಕ್ಕೆ ಬೇಡಿಕೆ ಇದ್ದು, ಇದಕ್ಕೂ ಹಣಕಾಸಿನ ನೆರವು ನೀಡಲಾಗುವುದು. ಅದೇ ರೀತಿ ವೃಷಭಾವತಿ ವ್ಯಾಲಿಯಲ್ಲಿ ಹಳೇಯ ಸೇತುವೆಗಳಿದ್ದು, ಅವುಗಳನ್ನು ನವೀಕರಣ ಮಾಡಲು ಸೂಚಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಇದನ್ನೂ ಓದಿ | ನೀರು ನುಗ್ಗಿರುವ ಮನೆಗಳಿಗೆ ₹25,000 ಪರಿಹಾರ: CM ಬಸವರಾಜ ಬೊಮ್ಮಾಯಿ

Exit mobile version