ಬೆಂಗಳೂರು: ಟಿಪ್ಪರ್ ಲಾರಿಗೆ ಸಿಲುಕಿ ಬೈಕ್ ಸವಾರರೊಬ್ಬರು ದುರ್ಮರಣ (Road Accident) ಹೊಂದಿದ್ದಾರೆ. ಬೆಂಗಳೂರಿನ ಬೊಮ್ಮನಹಳ್ಳಿ ಜಂಕ್ಷನ್ ಬಳಿ ಸೋಮವಾರ ಮಧ್ಯಾಹ್ನ ಅಪಘಾತ ನಡೆದಿದೆ. ಕೂಡ್ಲು ನಿವಾಸಿ ವೇಣುಗೋಪಾಲ್ (53) ಮೃತ ದುರ್ದೈವಿ.
ಬೊಮ್ಮನಹಳ್ಳಿಯಿಂದ ಮಡಿವಾಳ ಕಡೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಲಾರಿಯ ಎಡಭಾಗದಲ್ಲಿ ಹೋಗುತ್ತಿದ್ದ ಬೈಕ್‌ಗೆ ಟಚ್ ಆಗಿದೆ. ಈ ವೇಳೆ ನಿಯಂತ್ರಣ ತಪ್ಪಿದ ವೇಣುಗೋಪಾಲ್ ಕೆಳಗಡೆ ಬಿದ್ದಿದ್ದಾರೆ. ಬಳಿಕ ಟಿಪ್ಪರ್ ಲಾರಿ ಹರಿದಿದೆ. ಕೂಡಲೇ ಸಹಾಯ ಧಾವಿಸಿದ ಸ್ಥಳೀಯರು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಆದರೆ ಮಾರ್ಗ ಮಧ್ಯೆ ವೇಣುಗೋಪಾಲ್ ಕೊನೆಯುಸಿರೆಳೆದಿದ್ದಾರೆ.
ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸದ್ಯ ಲಾರಿ ಚಾಲಕನನ್ನು ಸಂಚಾರ ಪೊಲೀಸರು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.
ಆಂಧ್ರ ಬಸ್ ಪಲ್ಟಿ; ಪ್ರಯಾಣಿಕರು ಗಂಭೀರ
ಬೆಂಗಳೂರಿನಿಂದ ಪುಟ್ಟಪರ್ತಿ ಕಡೆಗೆ ಹೋಗುತ್ತಿದ್ದ ಆಂಧ್ರ ಬಸ್‌ವೊಂದು ಪಲ್ಟಿಯಾಗಿದೆ. ಆಂಧ್ರ ಬಸ್ ಪಲ್ಟಿಯಾಗಿ 13 ಪ್ರಯಾಣಿಕರಿಗೆ ಗಂಭೀರ ಗಾಯವಾಗಿದೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಚಿಕ್ಕಬಳ್ಳಾಪುರದ ರಾಷ್ಟ್ರೀಯ ಹೆದ್ದಾರಿ 44 ಚೆಂಡೂರಿನ ಬಳಿ ಎಪಿಎಸ್ ಆರ್ ಸಿ ಬಸ್ ಪಲ್ಟಿಯಾಗಿದೆ. ಗಾಯಾಳುಗಳಿಗೆ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಗುಡಿಬಂಡೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Techie Missing: ಬೆಂಗಳೂರಿನಲ್ಲಿ ಮತ್ತೊಬ್ಬ ಟೆಕ್ಕಿ ಮಿಸ್ಸಿಂಗ್! ಪತಿಯನ್ನು ಹುಡುಕಿಕೊಡಿ ಎಂದು ಅಂಗಲಾಚಿದ ಪತ್ನಿ
ಮೈಸೂರಿನಲ್ಲಿ ರಸ್ತೆಗೆ ಅಡ್ಡ ಬಂದ ಮೊಸಳೆ
ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕಂಬದಕೊಲ್ಲಿ ಗ್ರಾಮದ ಬಳಿ ಮೊಸಳೆ ಪ್ರತ್ಯಕ್ಷಗೊಂಡಿದೆ. ಹುಲ್ಲಹಳ್ಳಿ ಮತ್ತು ಕಂಬದಕೊಲ್ಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಹೋಗುತ್ತಿದ್ದ ಕಾರಿಗೆ ಮೊಸಳೆ ಅಡ್ಡ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಚಿಕ್ಕೋಡಿಯಲ್ಲಿ ಮೊಸಳೆಯನ್ನು ಹಿಡಿದ ಗ್ರಾಮಸ್ಥರು
ಪ್ರವಾಹ ತಗ್ಗುತ್ತಿದ್ದಂತೆ ನದಿ ತೀರದ ಜನರಿಗೆ ಮೊಸಳೆ ಕಾಟ ಶುರುವಾಗಿದೆ. ಕೃಷ್ಣಾ ನದಿ ತೀರದಲ್ಲಿ ಗ್ರಾಮಸ್ಥರು ಮೊಸಳೆ ಸೆರೆ ಹಿಡಿದಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಘಟನೆ ನಡೆದಿದೆ. ನದಿ ತೀರದ ಜಮೀನಿನಲ್ಲಿದ್ದ 6 ಅಡಿ ಮೊಸಳೆ ಸೆರೆ ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ