Site icon Vistara News

ಮಂತ್ರಿ ಮಾಲ್‌ ಬಳಿ ಹಾಡಹಗಲೇ ಮಚ್ಚಿನೇಟು, ರೌಡಿ ಶೀಟರ್‌ ಗಂಭೀರ

rowdy attacked

ಬೆಂಗಳೂರು: ರಾಜಧಾನಿಯಲ್ಲಿ ರೌಡಿಗಳ ಅಟ್ಟಹಾಸ ಮಿತಿಮೀರುತ್ತಿದೆ ಎಂಬುದಕ್ಕೆ ಇನ್ನೊಂದು ಸಾಕ್ಷ್ಯ ಲಭ್ಯವಾಗಿದೆ. ಮಂಗಳವಾರ ಹಾಡಹಗಲೇ ಬೆಂಗಳೂರಿನ ಹೃದಯಭಾಗದಲ್ಲಿರುವ ಮಂತ್ರಿ ಮಾಲ್‌ ಬಳಿ ರೌಡಿ ಶೀಟರ್‌ ಒಬ್ಬಾತನ ಮೇಲೆ ವೈರಿ ಗ್ಯಾಂಗ್‌ನವರು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಹಾಡಹಗಲೇ ಗಣೇಶ ಅಲಿಯಾಸ್‌ ಕುಂದಾಪ್ರಿ ಗಣೇಶ್ ಎಂಬಾತನ ಮೇಲೆ ಮಚ್ಚು ಲಾಂಗ್‌ಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಮಲ್ಲೇಶ್ವರಂನಲ್ಲಿರುವ ಮಂತ್ರಿ ಮಾಲ್ ಬಳಿಯ ನಟರಾಜ ಥಿಯೇಟರ್ ಮುಂದೆ ಘಟನೆ ನಡೆದಿದೆ. ಗಣೇಶ ಹೋಂಡಾ ಆಕ್ಟೀವಾದಲ್ಲಿ ಬರುತ್ತಿದ್ದ ವೇಳೆ ಆಟೋದಲ್ಲಿ ಬಂದು ಅಡ್ಡ ಹಾಕಿದ ನಾಲ್ಕು ಜನ, ಮಚ್ಚು ಲಾಂಗ್‌ಗಳನ್ನು ಮನಸೋ ಇಚ್ಛೆ ಬೀಸಿ ಪರಾರಿಯಾಗಿದ್ದಾರೆ. ಗಣೇಶ ಗಂಭೀರ ಸ್ಥಿತಿಯಲ್ಲಿದ್ದು, ಸಾವು ಬದುಕಿನ ನಡುವೆ ಹೊಯ್ದಾಡುತ್ತಿದ್ದಾನೆ.

ಇದು ಹಳೇ ದ್ವೇಷದಿಂದ ನಡೆದ ಕೊಲೆ ಯತ್ನ ಎಂದು ಶಂಕಿಸಲಾಗಿದೆ. 2020ರಲ್ಲಿ ಕಿನೋ ಥಿಯೇಟರ್ ಬಳಿ ಇದೇ ಗಣೇಶನ ಟೀಮ್‌ ಯುವಕನೊಬ್ಬನನ್ನು ಕ್ಷುಲ್ಲಕ ವಿಚಾರಕ್ಕೆ ಕೊಚ್ಚಿತ್ತು. ಅದೇ ದ್ವೇಷದ ಹಿನ್ನೆಲೆಯಲ್ಲಿ ಗಣೇಶನಿಗೆ ಸ್ಕೆಚ್ ಹಾಕಿದ್ದ ಎದುರಾಳಿ ಟೀಮಿನವರು ಈ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಗಣೇಶ ಫ್ರೀಡಂ ಪಾರ್ಕ್ ಬಳಿ ಸ್ಕ್ರ್ಯಾಪ್ ಅಂಗಡಿ ಇಟ್ಟುಕೊಂಡಿದ್ದಾನೆ. ಗಾಯಗೊಂಡಿರುವ ಗಣೇಶನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Bangalore gang war | ಬಾರ್‌ನಲ್ಲಿ ಲಾಂಗ್‌ ಬೀಸಿ ಪುಡಿ ರೌಡಿಗಳ ಅಟ್ಟಹಾಸ, ಇನ್ನೂ ಹಿಡಿಯದ ಪೊಲೀಸರು

Exit mobile version