ಮೈಸೂರು: ಸ್ವಾತಂತ್ರ್ಯ ಲಭಿಸಿ 50 ವರ್ಷ ಕಳೆದರೂ ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್‌ಎಸ್‌ಎಸ್) ಕಚೇರಿಯಲ್ಲಿ ತ್ರಿವರ್ಣ ಧ್ವಜ ಹಾರಿಸಿರಲಿಲ್ಲ, ಇದೀಗ ತಿರಂಗಾ ಯಾತ್ರೆ ಎನ್ನುವುದೆಲ್ಲ ನಾಟಕ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ರಾಜ್ಯ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿರುವ ಪಾದಯಾತ್ರೆಯ ಸಲುವಾಗಿ ವರುಣ ಕ್ಷೇತ್ರದಲ್ಲಿ ಭಾಗವಹಿಸಲು ತೆರಳುವ ಮುನ್ನ ಮೈಸೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗೆ ಹಾಗೂ ನಂತರ ವರುಣ ಕ್ಷೇತ್ರದಲ್ಲಿ ನಾಗರಿಕರನ್ನುದ್ದೇಶಿಸಿ ಮಾತನಾಡಿದ್ದಾರೆ.
ಆರ್‌ಎಸ್‌ಎಸ್ ಅಧ್ಯಕ್ಷರಾಗಿದ್ದ ಗೋಳ್ವಲ್ಕರ್, ಹಿಂದೂ ಮಹಾಸಭಾದ ಸಾರ್ವಕರ್, ರಾಷ್ಟ್ರಧ್ವಜವನ್ನು ವಿರೋಧಿಸಿದ್ದರು. ಬಿಜೆಪಿ ಮುಖವಾಣಿ ಆರ್ಗನೈಸರ್ ಎಂಬ ಪತ್ರಿಕೆ ವಿರೋಧ ಮಾಡಿತ್ತು. ನಾಗಪುರದ ಆರ್‌ಎಸ್‌ಎಸ್ ಕೇಂದ್ರ ಕಚೇರಿಯಲ್ಲಿ 50 ವರ್ಷ ರಾಷ್ಟ್ರಧ್ವಜವನ್ನೇ ಹಾರಿಸಿರಲಿಲ್ಲ. ಅಲ್ಲಿಯವರೆಗೆ ಕೇವಲ ಭಗವಾಧ್ವಜ ಹಾರಿಸುತ್ತಿದ್ದರು. ಈಗ ಹರ್ ಘರ್ ತಿರಂಗ ಎಂದು ನಾಟಕ ಮಾಡುತ್ತಿದ್ದಾರೆ. ಅವರಿಗೆ ನಾಚಿಕೆ ಆಗಲ್ವ?
ನಿಮಗೆ ಕೈಮುಗಿದು ಮನವಿ ಮಾಡುತ್ತೇನೆ, ಯಾವುದೇ ಕಾರಣಕ್ಕೂ ಬಿಜೆಪಿಗೆ ಮತ ಹಾಕಬೇಡಿ. ನೀವು ಹುಷಾರಾಗಿರಿ.
ಈ ಜೆಡಿಎಸ್ ಗಿರಾಕಿಗಳ ಬಗ್ಗೆ ಮಾತನಾಡಲ್ಲ ಎಂದ ಸಿದ್ದರಾಮಯ್ಯ, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಘೋಷಣೆಯನ್ನು ಅಣಕಿಸಿದರು. ಇದು ಸಬ್ ಕ ವಿಕಾಸ್ ನಹೀ, ಸಬ್ ಕ ಸರ್ವನಾಶ್. ನಾನು ಸ್ವಾತಂತ್ರ್ಯ ಬರುವುದಕ್ಕೂ 12 ದಿನ ಮುಂಚೆ ಹುಟ್ಟಿದ್ದೆ. ಈ ನರೇಂದ್ರ ಮೋದಿ ಸ್ವಾತಂತ್ರ್ಯ ಬಂದ ಮೇಲೆ ಹುಟ್ಟಿದ ಗಿರಾಕಿ.
17 ವರ್ಷ ನೆಹರೂ ಪ್ರಧಾನಿ ಆಗಿದ್ದರು. ಆಗ ಆಣೆಕಟ್ಟೆ, ಸೈನ್ಯ, ಆಹಾರ ಉತ್ಪಾದನೆ, ಸಾಕ್ಷರತೆ ಇರಲಿಲ್ಲ. ಈಗ ಸಾಕ್ಷರತೆ ಪ್ರಮಾಣ ಶೇ. 78 ಇದೆ. ಆಗ ಅಮೆರಿಕದ ಮುಂದೆ ಊಟಕ್ಕೆ ಕೈಚಾಚುವ ಪರಿಸ್ಥಿತಿ ಇತ್ತು. ಎರಡು ಹೊತ್ತು ಊಟ ಮಾಡುವ ಶಕ್ತಿ ಬಂದಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣ. ಇಂದಿರಾಗಾಂಧಿ, ಬಾಬೂ ಜಗಜೀವನ ರಾಮ್ ಆಹಾರ ಕ್ರಾಂತಿ ಮಾಡಿದರು. ಆಗೆಲ್ಲ ಈ ಬಿಜೆಪಿಯವರು ಎಲ್ಲಿದ್ದರು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಇದನ್ನೂ ಓದಿ | ಸಿದ್ದರಾಮೋತ್ಸವಕ್ಕೆ ರಾಹುಲ್ ಬಂದಿದ್ರು; ಆಗಸ್ಟ್ 15ಕ್ಕೆ ಪ್ರಿಯಾಂಕಾ ಗಾಂಧಿ ಬರ್ತಾರ?