ಬೆಂಗಳೂರು: ಕಳೆದ ಅನೇಕ ದಿನಗಳಿಂದ ಸುರಿಯುತ್ತಿರುವ ಮಳೆಗೆ ಮುಳುಗಡೆಯಾಗಿದ್ದ ಪ್ರದೇಶಗಳಿಗೆ ಮಾಜಿ ಸಿಎಂ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಳ್ಳಂದೂರು ರಿಂಗ್ ರಸ್ತೆಯ ಇಕೊ ಸ್ಪೇಸ್ ಪ್ರದೇಶಕ್ಕೆ ಬೋಟ್‌ನಲ್ಲಿ ತೆರಳಿ ವೀಕ್ಷಣೆ ಮಾಡಿದರು. ಒತ್ತುವರಿ ಮಾಡಿಕೊಳ್ಳುವಲ್ಲಿ ಅನೇಕರು ಕೈವಾಡವೂ ಇದ್ದು, ಜನರ ಸಮಸ್ಯೆ ಬಗೆಹರಿಸಲು ಸರ್ಕಾರದ ವೈಫಲ್ಯವನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಸಿದ್ದರಾಮಯ್ಯ ಹೇಳಿದರು.
ರಾಜ್ಯ ವಿಕೋಪ ನಿರ್ವಹಣಾ ಪಡೆಯ ಸಿಬ್ಬಂದಿ ಬೋಟ್‌ನಲ್ಲಿ ವಿವಿಧೆಡೆಗೆ ಕರೆದೊಯ್ದು ಪರಿಸ್ಥಿತಿಯನ್ನು ತೋರಿಸಿದರು. ಸಿದ್ದರಾಮಯ್ಯ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಸಾಥ್ ನೀಡಿದರು.
ಹೆಚ್ಚು ಹಾನಿಗೊಳಗಾಗಿದ್ದ ರೈನ್‌ಬೋ ಡ್ರೈವ್ ಲೇಔಟ್‌ನ 500 ಮನೆಗಳಲ್ಲಿ ಸುಮಾರು 250ಕ್ಕೆ ನೀರು ನುಗ್ಗಿತ್ತು. ಸ್ಥಳೀಯರು ಆಗಮಿಸಿ ತಮಗಾಗಿರುವ ತೊಂದರೆಯನ್ನು ಮಾಜಿ ಸಿಎಂ ಎದುರು ತೋಡಿಕೊಂಡರು.
ಅಲ್ಲಿನ ರಾಜಕಾಲುವೆ ಪ್ರದೇಶಕ್ಕೂ ಭೇಟಿ ನೀಡಿದ ಸಿದ್ದರಾಮಯ್ಯ, ಒತ್ತುವರಿ ಆಗಿರುವ ಪ್ರದೇಶಗಳ ಮಾಹಿತಿ ಪಡೆದರು.
ಬಿಜೆಪಿ ಸರ್ಕಾರ ಹೊಣಗೇಡಿ ಎಂದ ಸಿದ್ದರಾಮಯ್ಯ
ರಾಜಕಾಲುವೆ ಮತ್ತು ಕೆರೆಗಳ ಹೂಳು ತೆಗೆಯಿಸದೆ, ಒತ್ತುವರಿ ತೆರವುಗೊಳಿಸದೆ ಕಳೆದ ಮೂರು ವರ್ಷಗಳಿಂದ ಬಿಬಿಎಂಪಿ ಮತ್ತು ಸರ್ಕಾರ ಹೊಣೆಗೇಡಿಯಾಗಿದ್ದರಿಂದಲೇ ಸಿಲಿಕಾನ್ ಸಿಟಿಯ ನಿವಾಸಿಗಳು ಈ ಮಳೆಯಲ್ಲಿ ಹೈರಾಣಾಗಿದ್ದಾರೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.
ಪ್ರದೇಶಗಳ ವೀಕ್ಷಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಈ ಸರ್ಕಾರ ತನ್ನ ಅವಧಿಯಲ್ಲಿ ಆಗುತ್ತಿರುವ ಅನಾಹುತಗಳಿಗೆಲ್ಲಾ ಹಿಂದಿನ ಸರ್ಕಾರ ಕಾರಣ ಎನ್ನುವ ನೆಪ ಹೇಳುತ್ತಿದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರು ಉಂಡಾಡಿ ಗುಂಡನಂತೆ ಮೈಗಳ್ಳರಾಗಿದ್ದಾರೆ ಎಂದರು.
ನಮ್ಮ ಸರ್ಕಾರದ ಅವಧಿಯಲ್ಲಿ 1953 ಒತ್ತುವರಿ ಪ್ರಕರಣಗಳನ್ನು ಪತ್ತೆ ಹಚ್ಚಿ 1300 ಒತ್ತುವರಿಗಳನ್ನು ತೆರೆವುಗೊಳಿಸಿದ್ದೆವು. ಈ ದಾಖಲೆಗಳು ಸರ್ಕಾರದ ಬಳಿಯಲ್ಲೇ ಇವೆ. ಮುಖ್ಯಮಂತ್ರಿ ಮತ್ತು ಮಂತ್ರಿಗಳು ಮೈಗಳ್ಳತನ ಬಿಟ್ಟು ಗಮನಿಸಲಿ. ನಮ್ಮ ಸರ್ಕಾರದ ಅವಧಿಯಲ್ಲಿ ಒತ್ತುವರಿ ತೆರವುಗೊಳಿಸಿದ್ದು ಮಾತ್ರವಲ್ಲದೆ ಕೆ.ಸಿ.ವ್ಯಾಲಿ ಮತ್ತು ಹೆಚ್.ಎನ್.ವ್ಯಾಲಿ ಯೋಜನೆಗಳನ್ನು ಮಾಡಿದ್ದರಿಂದ ಚಿಕ್ಕಬಳ್ಳಾಪುರ, ಕೋಲಾರ, ಆನೇಕಲ್‍ನ ಕೆರೆಗಳಿಗೆ ಜೀವ ಬಂದಿದೆ. ಮೊದಲು 2000 ಅಡಿಗಳಿಗೆ ಬೋರ್ ಕೊರೆಸಿದರೂ ನೀರು ಸಿಗುತ್ತಿರಲಿಲ್ಲ. ಈಗ 200-300 ಅಡಿಗಳಿಗೆಲ್ಲಾ ಬೋರ್ ನೀರು ದೊರಕುತ್ತಿದೆ.
ಈ ಭಾಗದ ಜನರನ್ನು ಕೇಳಿದರೆ ನಮ್ಮ ಸರ್ಕಾರದ ಅವಧಿಯಲ್ಲಾದ ಕೆಲಸಗಳನ್ನು ಅವರೇ ಸರ್ಕಾರಕ್ಕೆ ತೋರಿಸುತ್ತಾರೆ. ಈ ಎರಡು ವ್ಯಾಲಿ ಯೋಜನೆಗಳು ಆಗದೇ ಇದ್ದಿದ್ದರೆ ಈ ಮಳೆಗೆ ಬೆಂಗಳೂರಿನ ಪ್ರವಾಹ ಪರಿಸ್ಥಿತಿ, ಅನಾಹುತಗಳ ಪ್ರಮಾಣ ಇನ್ನೂ ವಿಪರೀತ ಆಗಿರುತ್ತಿತ್ತು.
ಅನಾಹುತಗಳಿಗೆಲ್ಲಾ ಹಿಂದಿನ ಸರ್ಕಾರದ ಮೇಲೆ ಹೇಳುವ ಮುಖ್ಯಮಂತ್ರಿ ಬೊಮ್ಮಾಯಿ ಅವರು, ರಾಜಕಾಲುವೆ ಹೂಳೆತ್ತಲು ಸಾವಿರಾರು ಕೋಟಿ ಕೊಟ್ಟಿದ್ದೇವೆ ಎನ್ನುತ್ತಾರೆ. ಇಲ್ಲಿ ಕೆಲಸಗಳೇ ಆಗಿಲ್ಲ. ಹಾಗಾದರೆ ನೀವು ಕೊಟ್ಟ ದುಡ್ಡು ಯಾರ ಜೇಬು ಸೇರಿತು. ಕೆಲಸ ಆಗಿದ್ದರೆ ಇಷ್ಟೊಂದು ಅನಾಹುತ ಆಗಲು ಹೇಗೆ ಸಾಧ್ಯ? ರಾಜಕಾಲುವೆ ಮೇಲೆ ರಸ್ತೆ ನಿರ್ಮಿಸಿರುವುದನ್ನು ನಾನು ಕಣ್ಣಾರೆ ನೋಡಿದೆ. ಶ್ರೀಮಂತರಿಗೆ ಅನುಕೂಲ ಮಾಡಿಕೊಡಲು ಖಾಸಗಿ ವ್ಯಕ್ತಿ ರಾಜಕಾಲುವೆ ಮೇಲೆ ರಸ್ತೆ ಮಾಡಿದ್ದಾನೆ. ಸುಮ್ಮನೆ ಮಾಡಿಬಿಡುತ್ತಾನ? ಇದರಿಂದ ಮಂತ್ರಿಗಳಿಗೆ, ಶಾಸಕರಿಗೆ ಎಷ್ಟು ಸಿಕ್ಕಿದೆ ಎನ್ನುವುದನ್ನು ಬಹಿರಂಗಗೊಳಿಸಲಿ.
ಐಟಿ ಕಂಪನಿಗಳು ಬೆಂಗಳೂರಿನ ಈ ಹೊತ್ತಿನ ದುಸ್ಥಿತಿಯಿಂದ ಬೇಸತ್ತು ಡಬ್ಬಲ್ ಎಂಜಿನ್ ಸರ್ಕಾರಕ್ಕೆ ಪತ್ರ ಬರೆದು ಎಚ್ಚರಿಸಿದ್ದಾರೆ. ಇವೆಲ್ಲವನ್ನೂ ನಾನು ಅಧಿವೇಶನದಲ್ಲಿ ಪ್ರಶ್ನಿಸುತ್ತೇನೆ. ಸರ್ಕಾರ ಉತ್ತರ ನೀಡಲಿ. ನಮ್ಮ ಸರ್ಕಾರದ ಅವಧಿಯಲ್ಲಿ ಆಗಿರುವ ಕೆಲಸಗಳನ್ನು ಮತ್ತು ಕಳೆದ ಮೂರು ವರ್ಷಗಳಲ್ಲಿ ಈ ಸರ್ಕಾರ ಮಾಡಿರುವ ಕೆಲಸಗಳನ್ನೂ ಜನರ ಮುಂದಿಡಲಿ ಎಂದರು.
ಇದನ್ನೂ ಓದಿ | Bengaluru Rain | ಮಳೆ ನಿಂತರೂ ನಿಲ್ಲದ ರಗಳೆ; ಲಗೇಜ್ ಹಿಡಿದು ವಾಪಸ್ ಆದವರಿಗೆ ನಿರಾಸೆ