ಬೆಂಗಳೂರು: ತಾಲೀಬ್ ಹುಸೇನ್ (38) ಎಂಬ ಉಗ್ರನನ್ನು ಜಮ್ಮು – ಕಾಶ್ಮೀರ ಪೊಲೀಸರು ಬೆಂಗಳೂರಿನಲ್ಲಿ ಸೋಮವಾರ ರಾತ್ರಿ ಬಂಧಿಸಿದ್ದಾರೆ. ಈತ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಎನ್ನಲಾಗಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಹಾಗೂ 17ನೇ ರಾಷ್ಟ್ರೀಯ ರೈಫಲ್ಸ್ ಪಡೆಯ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಈತನನ್ನು ಸೆರೆ ಹಿಡಿದ್ದಾರೆ.
ಆದರೆ ಬೆಂಗಳೂರು ನಗರ ಪೊಲೀಸರಿಗೆ ಮಾತ್ರ ಈತನನ್ನು ಯಾವ ಕಾರಣಕ್ಕೆ ಬಂಧಿಸಿದ್ದಾರೆ ಎಂಬುದರ ಬಗ್ಗೆ ಮಾಹಿತಿಯೇ ಇರಲಿಲ್ಲ! ಕಾಶ್ಮೀರ ಪೊಲೀಸರು ಅತ್ಯಂತ ರಹಸ್ಯವಾಗಿ ಈ ಕಾರ್ಯಾಚರಣೆ ನಡೆಸಿದ್ದಾರೆ. ಬೆಂಗಳೂರಿನ ಪೊಲೀಸರಿಗೆ ಯಾವುದೇ ಮಾಹಿತಿ ನೀಡದೆ ಈ ಕಾರ್ಯಾಚರಣೆ ನಡೆಸಲಾಗಿತ್ತು ಎನ್ನಲಾಗಿದೆ.
ಆದರೆ ಮತ್ತೊಂದು ಮೂಲಗಳ ಪ್ರಕಾರ: ಉಗ್ರನನ್ನು ಪತ್ತೆ ಮಾಡಿ ಬಂಧಿಸಿ ಕರೆದೊಯ್ಯುವಾಗ ಬೆಂಗಳೂರು ನಗರ ಪೊಲೀಸರ ಸಹಕಾರ ಪಡೆಯಲಾಗಿತ್ತು. ಆದರೆ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧನದ ಬಳಿಕ ಬಹಿರಂಗಪಡಿಸಿದ್ದಾರೆ. ಅಲ್ಲಿಯವರೆಗೆ ಇದೊಂದು ರಹಸ್ಯ ಕಾರ್ಯಾಚರಣೆಯಾಗಿತ್ತು.
ಬೆಂಗಳೂರಿನಲ್ಲಿ ಸ್ಲೀಪರ್ ಸೆಲ್‌ಗಳು?
ಬೆಂಗಳೂರು ನಗರ ಉಗ್ರರ ಸ್ಲೀಪರ್ ಸೆಲ್‌ನ ಕೇಂದ್ರ ಆಗಿ ಬಿಟ್ಟಿದೆಯಾ ಎಂಬ ಶಂಕೆಗೆ ಈ ಪ್ರಕರಣ ಮತ್ತಷ್ಟು ಸಾಕ್ಷ್ಯ ಒದಗಿಸಿದೆ. ಶ್ರೀರಾಂಪುರದಲ್ಲಿ ಜನ ಸಾಮಾನ್ಯರಂತೆ ವಾಸ ಮಾಡುತ್ತಿದ್ದ ತಾಲೀಬ್ ಹುಸೇನ್ ಕಾಶ್ಮೀರದ ಉಗ್ರಗಾಮಿ ಸಂಘಟನೆಯ ಕುಖ್ಯಾತ ಕಮಾಂಡರ್ ಎಂಬ ಸಂಗತಿ ರಾಜ್ಯ ರಾಜಧಾನಿಯ ನಾಗರಿಕರನ್ನು ಬೆಚ್ಚಿ ಬೀಳಿಸಿದೆ.
ಬೆಂಗಳೂರಿನ ಶ್ರೀರಾಮಪುರದಲ್ಲಿ ಈತ ತಾಲಿಕ್ ಎಂಬ ಹೆಸರಿನಲ್ಲಿ ಬಾಡಿಗೆಗೆ ಮನೆ ಪಡೆದಿದ್ದ. ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ವಾಸಿಸುತ್ತಿದ್ದ. ಕಳೆದ ಎಂಟು ತಿಂಗಳಿನಿಂದ ಈತ ಮನೆ ಬಾಡಿಗೆ ನೀಡುತ್ತಿರಲಿಲ್ಲ ಎನ್ನಲಾಗಿದೆ. ಈತ ಬೆಂಗಳೂರಿನಲ್ಲಿ ಬಿಎನ್ಎಲ್ ಏರ್ ಸರ್ವಿಸ್‌ನಲ್ಲಿ ಅನ್ ಲೋಡಿಂಗ್ ಕೆಲಸ ಮಾಡಿಕೊಂಡಿದ್ದ. ಜತೆಗೆ ಮಸೀದಿಯಲ್ಲಿ ಪಾಠ-ಪ್ರವಚನ ಮಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಈ ದುಷ್ಕರ್ಮಿಗೆ ಓಕಳಿಪುರಂ ಮಸೀದಿ ಮುಖ್ಯಸ್ಥ ಅನ್ವರ್ ಪಾಷ ಆಶ್ರಯ ನೀಡಿದ್ದ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಈತ ಬೆಂಗಳೂರಿನಿಂದಲೇ ಉಗ್ರ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದ. ಯುವಕರನ್ನು ಟಾರ್ಗೆಟ್ ಮಾಡಿ ಅವರ ಮನಪರಿವರ್ತಿಸಿ ಉಗ್ರ ಸಂಘಟನೆಗೆ ಸೇರ್ಪಡೆ ಮಾಡುತ್ತಿದ್ದ ಎನ್ನಲಾಗಿದೆ.
ಈತ ಹಿಜ್ಬುಲ್ ಮಾಸ್ಟರ್ ಮೈಂಡ್
ತಾಲೀಬ್ ಹುಸೇನ್ 2016ರಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯನ್ನು ಸೇರಿದ್ದ. ಈಗ ತಾಲಿಬ್ ಹಿಜ್ಬುಲ್ ಮುಜಾಹಿದ್ದೀನ್‌ನ ಪ್ರಮುಖ ಮಾಸ್ಟರ್‌ಮೈಂಡ್! ಈತನ ಬಂಧನಕ್ಕಾಗಿ ಜಮ್ಮು ಕಾಶ್ಮೀರದ ಕಿಶ್ತ್‌ವಾರ್ ಪೊಲೀಸರು ಬಲೆ ಬೀಸಿದ್ದರು. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬೆಂಗಳೂರಿಗೆ ಬಂದು ಮೊದಲು ತಾಲೀಬ್‌ನ ಪತ್ನಿ ಸಲೀಮಾ(35)ಳನ್ನು ವಶಕ್ಕೆ ಪಡೆದರು. ಬಳಿಕ ಉಗ್ರನನ್ನು ಬಲೆಗೆ ಕೆಡವಿದರು ಎನ್ನಲಾಗಿದೆ. ʼʼಉಗ್ರಗಾಮಿಯನ್ನು ಬಂಧನ ಮಾಡಿರುವ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ. ಆದರೆ ಯಾವ ಕಾರಣಕ್ಕೆ ಬಂಧಿಸಲಾಗಿದೆ ಎಂಬ ಬಗ್ಗೆ ನಮಗೆ ಮಾಹಿತಿ ನೀಡಿರಲಿಲ್ಲʼʼ ಎಂದು ನಗರ ಪೊಲೀಸ್ ಕಮೀಷನರ್ ಪ್ರತಾಪ್ ರೆಡ್ಡಿ ಹೇಳಿದ್ದಾರೆ.
ಸಿಎಂ ಬೊಮ್ಮಾಯಿ ಹೇಳಿದ್ದೇನು?
ಈ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ ʼʼಉಗ್ರರ ಚಟುವಟಿಕೆಗಳನ್ನು ಮಟ್ಟ ಹಾಕಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಹಿಂದೆಯೂ ಭಟ್ಕಳ, ಶಿರಸಿಯಲ್ಲಿ ಇಂಥವರನ್ನು ಬಂಧಿಸಲಾಗಿತ್ತು. ಈ ಪ್ರಕರಣವನ್ನು ಜಮ್ಮು – ಕಾಶ್ಮೀರ ಪೊಲೀಸರು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ. ರಾಜ್ಯ ಪೊಲೀಸರೂ ಅವರಿಗೆ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆʼʼ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಜಮ್ಮು ಕಾಶ್ಮೀರದ ಕುಪ್ವಾರಾದಲ್ಲಿ ಇಬ್ಬರು ಲಷ್ಕರೆ ಉಗ್ರರ ಹತ್ಯೆ, ಮುಂದುವರಿದ ಎನ್‌ಕೌಂಟರ್