Site icon Vistara News

Theft case : ನೋಡನೋಡುತ್ತಿದ್ದಂತೆ ಗೊಂಬೆಗೆ ಹಾಕಿದ್ದ ಪ್ಯಾಂಟ್‌ ಬಿಚ್ಚಿ ಕದ್ದು ಹೋದ ಕಳ್ಳ!

Theft Case

ಬೆಂಗಳೂರು: ಕಳ್ಳನೊಬ್ಬ ಬಟ್ಟೆ ಅಂಗಡಿ ಮುಂದೆ ಶೋಗಾಗಿ ನಿಲ್ಲಿಸಿದ್ದ ಗೊಂಬೆಗೆ ಹಾಕಿದ್ದ ಪ್ಯಾಂಟ್ (Theft Case) ಕದ್ದಿದ್ದಾನೆ. ಗೊಂಬೆಯ ಸುತ್ತಲೂ ಸುತ್ತಿ ನಂತರ ಗೊಂಬೆಗೆ ಹಾಕಿದ್ದ ಪ್ಯಾಂಟ್ ಕದ್ದು ಪರಾರಿ ಆಗಿದ್ದಾನೆ. ಯಲಹಂಕದ ತಿರುಮೆನಹಳ್ಳಿಯಲ್ಲಿ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ಪ್ಯಾಂಟ್ ಕದ್ದ ದೃಶ್ಯ ಸೆರೆಯಾಗಿದೆ.

ಮೊಬೈಲ್‌ ಕದಿಯುತ್ತಿದ್ದ ಸಹೋದರರ ಬಂಧನ

ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ, ಮೊಬೈಲ್ ಕಳುವು ಮಾಡುತ್ತಿದ್ದ ಸಹೋದರರ ಬಂಧನವಾಗಿದೆ. ಆನಂದ್, ಕಿರಣ್ ಬಂಧಿತ ಆರೋಪಿಗಳಾಗಿದ್ದಾರೆ. ರಸ್ತೆಯಲ್ಲಿ ಓಡಾಡುವವರನ್ನೇ ಟಾರ್ಗೆಟ್ ಮಾಡುತ್ತಿದ್ದ ಕಿಲಾಡಿಗಳು, ಬೈಕ್‌ನಲ್ಲಿ ಬಂದು ಮೊಬೈಲ್ ಕಸಿದುಕೊಂಡು ಪರಾರಿಯಾಗುತ್ತಿದ್ದರು. ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇದೇ ರೀತಿ ವ್ಯಕ್ತಿಯೊಬ್ಬರ ಮೊಬೈಲ್ ಎಗರಿಸಿದ್ದರು. ಕಡಿಮೆ ಬೆಲೆಗೆ ಮೊಬೈಲ್ ಮಾರಾಟ ಮಾಡಿ ಮೋಜು-ಮಸ್ತಿ ಮಾಡುತ್ತಿದ್ದರು. ಬಂಧಿತರಿಂದ ವಿವಿಧ ಕಂಪನಿಗಳ 3 ಲಕ್ಷ ಮೌಲ್ಯದ 20 ಮೊಬೈಲ್‌ಗಳನ್ನು ಸೀಜ್ ಮಾಡಲಾಗಿದೆ. ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೊಬೈಲ್‌ ರಾಬರಿ ಮಾಡುತ್ತಿದ್ದ ಖದೀಮರ ಬಂಧನ

ಒಂದೇ ದಿನ ಮೂರು ಕಡೆ ಮೊಬೈಲ್‌ ರಾಬರಿ ಮಾಡಿದ್ದ ಖತರ್ನಾಕ್ ಖದೀಮರ ಬಂಧನವಾಗಿದೆ. ರಾಕೇಶ್, ಸಂತೋಷ, ತೇಜಸ್ ಬಂಧಿತ ಆರೋಪಿಗಳು. ಬೆಂಗಳೂರಿನ ವಿಧಾನಸೌಧ, ಮಾಗಡಿ ರಸ್ತೆ, ಹನುಮಂತ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಬರಿ ನಡೆಸಿದ್ದರು. ಆಟೋದಲ್ಲಿ ಬಂದು ಮಚ್ಚು ತೋರಿಸಿ ಮೊಬೈಲ್ ರಾಬರಿ ಮಾಡುತ್ತಿದ್ದರು. ರಸ್ತೆಯಲ್ಲಿ ಹೋಗುತ್ತಿದ್ದವರನ್ನು ಅಡ್ಡಗಟ್ಟಿ ಬೆದರಿಸಿ ಮೊಬೈಲ್ ಕಸಿದು ಪರಾರಿಯಾಗಿದ್ದರು.

ವಿಧಾನಸೌಧ, ಮಾಗಡಿ ರಸ್ತೆ, ಹನುಮಂತ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಬರಿ ನಡೆದಿದೆ. ಆಟೋ ನಂಬರ್ ಮೂಲಕ ಆರೋಪಿಗಳನ್ನು ಟ್ರೇಸ್ ಮಾಡಿದ ಪೊಲೀಸರು, ಆರೋಪಿಗಳನ್ನು 48 ಗಂಟೆಯೊಳಗೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 60 ಸಾವಿರ ಮೌಲ್ಯದ ಮೊಬೈಲ್, ಕೃತ್ಯಕ್ಕೆ ಬಳಸಿದ್ದ ಒಂದು ಮಚ್ಚು, ಆಟೋ ಸೀಜ್ ಮಾಡಲಾಗಿದೆ. ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟೊಮ್ಯಾಟೊ ಬೆಳೆ ಲಾಸ್‌ ಆಗಿದ್ದಕ್ಕೆ ಲ್ಯಾಪ್‌ಟ್ಯಾಪ್‌ ಕಳವು ಮಾಡಿದ ಟೆಕ್ಕಿ

ವೈಟ್ ಫೀಲ್ಡ್ ಪೊಲೀಸರು ಕಾರ್ಯಾಚರಣೆ ನಡೆಸಿ ಟೆಕ್ಕಿಯನ್ನು ಬಂಧಿಸಿದ್ದಾರೆ. ಟೊಮ್ಯಾಟೋ ಬೆಳೆ ನಷ್ಟವಾಗಿದ್ದಕ್ಕೆ ಲ್ಯಾಪ್ ಟ್ಯಾಪ್ ಕಳ್ಳತನ ಮಾಡಿದ್ದ ಟೆಕ್ಕಿ ಸಿಸ್ಟಮ್ ಆಡ್ಮಿನ್ ಮುರುಗೇಶನನ್ನು ಬಂಧಿಸಲಾಗಿದೆ. ಹೊಸೂರಿನಲ್ಲಿ ಸಾಲ ಮಾಡಿ ಆರು ಎಕರೆಯಲ್ಲಿ ಟೊಮ್ಯಾಟೋ ಬೆಳೆದಿದ್ದ. ಆದರೆ ಬೆಳೆ ಕೈಕೊಟ್ಟ ಹಿನ್ನೆಲೆ ಸಾಕಷ್ಟು ನಷ್ಟವಾಗಿತ್ತು. ಸಾಲ ತೀರಿಸಲು ತಾನು ಕೆಲಸ ಮಾಡುತ್ತಿದ್ದ ಐಟಿಪಿಎಲ್ ಕಂಪನಿಯಲ್ಲಿ ಲ್ಯಾಪ್ ಟ್ಯಾಪ್ ಕಳ್ಳತನ ಮಾಡಿದ್ದ.

ಕಳೆದ ಆರು ತಿಂಗಳಿನಿಂದ ಕೆಲಸ ಮಾಡಿಕೊಂಡಿದ್ದ ಆರೋಪಿ ಲ್ಯಾಪ್ ಟಾಪ್ ಸರ್ವಿಸ್, ರಿಪೇರಿ ಮಾಡುವ ನೆಪದಲ್ಲಿ ಸಾಕಷ್ಟು ಲ್ಯಾಪ್ ಟ್ಯಾಪ್ ಕದ್ದಿದ್ದ. ಈ ಬಗ್ಗೆ ಕಂಪನಿಯವರು ಪ್ರಶ್ನೆ ಮಾಡಿದಾಗ ರಜೆ ಹಾಕಿ ಎಸ್ಕೇಪ್ ಆಗಿದ್ದ. ಕದ್ದ ಲ್ಯಾಪ್ ಟ್ಯಾಪ್ ಗಳನ್ನು ಹೊಸೂರಿನಲ್ಲಿ ಮಾರಾಟ ಮಾಡಿದ್ದ. ಬಂಧಿತನಿಂದ 22 ಲಕ್ಷ ಮೌಲ್ಯದ 50 ಲ್ಯಾಪ್ ಟ್ಯಾಪ್ ಸೀಜ್ ಮಾಡಲಾಗಿದೆ. ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‌ ಕಳ್ಳರನ್ನು ಹಿಡಿದ ಬ್ಯಾಡರಹಳ್ಳಿ ಪೊಲೀಸರು

ಬ್ಯಾಡರಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೊಹ್ಮದ್, ವಿಶ್ವನಾಥ್ ಬಂಧಿತರು.
ಬಂಧಿತರಿಂದ 9 ದ್ವಿಚಕ್ರ ವಾಹನಗಳು ಹಾಗೂ ಒಂದು ಆಟೋವನ್ನು ವಶಕ್ಕೆ ಪಡೆಯಲಾಗಿದೆ. ಬ್ಯಾಡರಹಳ್ಳಿ, ಜ್ಞಾನ ಭಾರತಿ, ಚಂದ್ರಾ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ಎಸಗಿದ್ದರು. ಬಂಧಿತರಿಂದ ಏಳು ಲಕ್ಷ ಮೌಲ್ಯದ ಹತ್ತು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version