ಬೆಂಗಳೂರು: ಮತದಾರರ ಸಮೀಕ್ಷೆ ನಡೆಸುವ ಸೋಗಿನಲ್ಲಿ ದತ್ತಾಂಶ ಸಂಗ್ರಹ (Voter Data) ಮಾಡಲಾಗುತ್ತಿತ್ತು ಎಂಬ ಆರೋಪದ ಕುರಿತು ಕಾಂಗ್ರೆಸ್ ಆರೋಪ ಮಾಡುವ ಮುನ್ನವೇ ಚಿಲುಮೆ ಸಂಸ್ಥೆಗೆ ನೀಡಿರುವ ಅನುಮತಿಯನ್ನು ಬಿಬಿಎಂಪಿ ಬುಧವಾರವೇ ಹಿಂಪಡೆದಿದೆ. ಈ ಕುರಿತು ಆದೇಶವನ್ನು ಗುರುವಾರ ಬಹಿರಂಗಪಡಿಸಿದೆ.
ಐಟಿಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಶಾಸಕರಾಗಿರುವ ಕ್ಷೇತ್ರದಲ್ಲಿ ಕಚೇರಿ ಹೊಂದಿರುವ ಚಿಲುಮೆ ಶೈಕ್ಷಣಿಕ ಮತ್ತು ಸಾಮಾಜಿಕ ಸಂಸ್ಥೆ ಎಂಬ ಎನ್‌ಜಿಒಗೆ ಮತದಾನದ ಜಾಗೃತಿ ಅನುಮತಿ ನೀಡಲಾಗಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ವಿಶೇಷ ಆಯುಕ್ತ ಎಸ್. ರಂಗಪ್ಪ, ಈ ಸಂಸ್ಥೆಯು ದತ್ತಾಂಶ ಸಂಗ್ರಹ ಮಾಡುತ್ತಿದೆ ಎಂಬ ಆರೋಪದ ಮೇಲೆ ನವೆಂಬರ್ 2ರಂದೇ, ಮತದಾನದ ಜಾಗೃತಿಗೆ ನೀಡಿದ್ದ ಅನುಮತಿಯನ್ನು ರದ್ದುಪಡಿಸಲಾಗಿದೆ ಎಂದಿದ್ದಾರೆ.
ಮತದಾರರ ಜಾಗೃತಿಗೆ ನೀಡಿರುವ ಅನುಮತಿಯನ್ನು ರದ್ದುಪಡಿಸಿದರೂ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮೊದಲಿಗೆ ಕಾರ್ಯನಿರ್ವಹಿಸುತ್ತಿದ್ದ ಕೆ.ಎಂ. ಲೋಕೇಶ್ ಎಂಬ ವ್ಯಕ್ತಿಯು ಬೂತ್ ಮ್ಟದ ಅಧಿಕಾರಿಯಾಗಿ ಗುರುತಿನ ಚೀಟಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ದೂರು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಬಿಬಿಎಂಪಿ ವತಿಯಿಂದ ಎಫ್‌ಐಆರ್ ದಾಖಲಿಸಲಾಗಿದೆ.
ಇದೀಗ ವಿವಾದವನ್ನು ಬಹಿರಂಗಪಡಿಸುತ್ತಿದ್ದಂತೆಯೇ ಎಚ್ಚೆತ್ತ ಬಿಬಿಎಂಪಿ, ಈ ಹಿಂದೆ ಮಾಡಿದ್ದ ಆದೇಶವನ್ನು ಬಹಿರಂಗಗೊಳಿಸಿದೆ.
ಮಾಹಿತಿ ಹಂಚಿಕೊಳ್ಳದಂತೆ ಮನವಿ
ಮತದಾರರ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ತಿಳಿದು, ಸಂಸ್ಥೆಗೆ ನೀಡಿದ್ದ ಅನುಮತಿಯನ್ನು ರದ್ದುಪಡಿಸಿದರೂ ಇದ್ಯಾವುದನ್ನೂ ಬಹಿರಂಗಗೊಳಿಸದೇ ಬಿಬಿಎಂಪಿ ಮೌನ ವಹಿಸಿತ್ತು.
ಇದೀಗ ಸುದ್ದಿ ಮಾಧ್ಯಮಗಳಲ್ಲಿ ವರದಿ ಬಂದ ನಂತರ ಹಾಗೂ ಕಾಂಗ್ರೆಸ್ ಸುದ್ದಿಗೋಷ್ಠಿ ನಡೆಸಿ ಆರೋಪಿಸಿದ ನಂತರ ಸಾರ್ವಜನಿಕರಿಗೆ ಮಾಹಿತಿ ನೀಡಲು ಮುಂದಾಗಿದೆ. ಈ ಕುರಿತು ಬಿಬಿಎಂಪಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಸಾರ್ವಜನಿಕರಲ್ಲಿ ಅರಿವು ಮೂಡಿಸಲು ನೀಡಿದ್ದ ಅನುಮತಿಯ ನಿಬಂಧನೆಗಳನ್ನು ಉಲ್ಲಂಘಿಸಿದ ಚಿಲುಮೆ ಸಂಸ್ಥೆಯ ಅನುಮತಿಯನ್ನು ರದ್ದುಗೊಳಿಸಲಾಗಿದೆ. ಈ ಸಂಸ್ಥೆಯ ಪ್ರತಿನಿಧಿಗಳಿಗೆ ಸಾರ್ವಜನಿಕರು ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಬಾರದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಅನುಮತಿಯನ್ನು ರದ್ದುಪಡಿಸಿದ್ದರೂ ಆಗಲೇ ಸಾರ್ವಜನಿಕರಿಗೆ ಮಾಹಿತಿ ನೀಡುವ ಬದಲಿಗೆ ಬಿಬಿಎಂಪಿ ಅಧಿಕಾರಿಗಳು ಮೌನ ವಹಿಸಿದ್ದೇಕೆ ಎಂಭ ಪ್ರಶ್ನೆಗಳೆದ್ದಿವೆ.
ಚುನಾವಣಾ ಆಯುಕ್ತರಿಂದ ಸ್ಪಷ್ಟನೆ
ಮತದಾರರ ಮಾಹಿತಿ ಸಂಗ್ರಹಕ್ಕೆ ಖಾಸಗಿ ಸಂಸ್ಥೆಗೆ ಅನುಮತಿ ನೀಡಲಾಗಿದೆ ಎಂಬ ಕುರಿತು ಸ್ಪಷ್ಟನೆ ನೀಡಿರುವ ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಮನೋಜ್ ಕುಮಾರ್ ಮೀನಾ, ಸಮೀಕ್ಷೆ ನಡೆಸಲು ಯಾವುದೇ ಸಂಸ್ಥೆಗೆ ಬಿಬಿಎಂಪಿ ಚುನಾವಣಾಧಿಕಾರಿ ಅನುಮತಿ ನೀಡಿಲ್ಲ. ಚಿಲುಮೆ ಸಂಸ್ಥೆಯ ಕುರಿತು ದೂರು ಬಂದ ಕೂಡಲೆ ಅನುಮತಿಯನ್ನು ರದ್ದುಪಡಿಸಲಾಗಿದೆ. ಈ ಕುರಿತು ಎಫ್‌ಐಆರ್ ಸಹ ದಾಖಲಾಗಿದೆ. ಈ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿಗೆ ಸೂಚಿಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ | Voter Data | ಕಾಂಗ್ರೆಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಬೇಕು; ಆದ್ರೆ ಪುರುಸೊತ್ತಿಲ್ಲ: ಅಶ್ವತ್ಥನಾರಾಯಣ