ಬೆಂಗಳೂರು: ಅಕ್ರಮವಾಗಿ ಮತದಾರರ ದತ್ತಾಂಶವನ್ನು (Voter Data) ಸಂಗ್ರಹ ಮಾಡುತ್ತಿದ್ದ ಚಿಲುಮೆ ಸಂಸ್ಥೆಗೆ ಸಹಕಾರ ನೀಡಿದ ಆರೋಪದಲ್ಲಿ ಮೂವರು ಕ್ಷೇತ್ರ ಚುನಾವಣಾಧಿಕಾರಿಗಳನ್ನು (ಆರ್‌ಒ) ಬಿಬಿಎಂಪಿ ಅಮಾನತುಗೊಳಿಸಿದೆ.
ಅಕ್ರಮದ ಕುರಿತು ದೂರು ದಾಖಲಾದ ನಂತರ ವಿವಿಧೆಡೆಯಿಂದ ಮಾಹಿತಿಯನ್ನು ಪಡೆದಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಈ ಆದೇಶ ಹೊರಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ತುಷಾರ್ ಗಿರಿನಾಥ್, ಅಕ್ರಮ ಆರೋಪದ ಕುರಿತಂತೆ ಬೆಂಗಳೂರಿನ ನಾಲ್ಕು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ ಅಪರ ಜಿಲ್ಲಾಧಿಕಾರಿಗಳಿಂದ ಈ ಕುರಿತು ವರದಿಯನ್ನು ಕೇಳಲಾಗಿತ್ತು.
ನವೆಂಬರ್ 19ರಂದು ಈ ವರದಿ ಕೈಸೇರಿದೆ. ಅದರ ಆಧಾರದಲ್ಲಿ ಮಹದೇವಪುರ, ಶಿವಾಜಿನಗರ ಹಾಗೂ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳನ್ನು (ಆರ್‌ಒ) ಅಮಾನತು ಮಾಡಿ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಮಾನತಾದ ಅಧಿಕಾರಿಗಳು ಮಹದೇವಪುರ ಆರ್‌ಒ ಚಂದ್ರಶೇಖರ್, ಚಿಕ್ಕಪೇಟೆ ಆರ್‌ಒ ಭೀಮಾಶಂಕರ ಹಾಗೂ ಶಿವಾಜಿನಗರ ಆರ್‌ಒ ಸುಹೇಲ್ ಅಹ್ಮದ್ ಎಂದು ಹೇಳಲಾಗುತ್ತಿದೆ.
28 ಆರ್‌ಒಗಳಿಗೆ ಪೊಲೀಸ್ ನೋಟಿಸ್
ಬೆಂಗಳೂರಿನ ಇತರೆ ಕ್ಷೇತ್ರಗಳಲ್ಲೂ ಮತದಾರರ ದತ್ತಾಂಶ (Voter Data) ಸಂಗ್ರಹಿಸಲು ಚಿಲುಮೆ ಸಂಸ್ಥೆಗೆ ಕ್ಷೇತ್ರ ಚುನಾವಣಾ ಅಧಿಕಾರಿಗಳೇ ಸಾಥ್ ನೀಡಿದ್ದಾರೆ ಎಂಬ ಅನುಮಾನಗಳು ರವಿಕುಮಾರ್ ವಿಚಾರಣೆ ಬಳಿಕ ಪೊಲೀಸರಿಗೆ ಲಭಿಸಿದೆ. ಕೇಂದ್ರ ಚುನಾವಣಾ ಆಯೋಗದ ಐಡಿ ಕಾರ್ಡ್ ಕೊಟ್ಟಿದ್ದು ಓರ್ವ ಆರ್‌ಒ. ಐಡಿ ಕಾರ್ಡ್ ಕೊಟ್ಟ ಆರ್‌ಒ ಹೆಸರು ಕೂಡ ಐಡಿಯಲ್ಲಿ ನಮೂದಾಗಿದೆ. ಈಗಾಗಲೇ ಐಡಿ ಕಾರ್ಡ್ ನೀಡಿದ ಆರ್‌ಒ ಸೇರಿ 28 ಆರ್‌ಒಗಳಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.
ಆರ್‌ಒ ಸಹಕಾರ ಇಲ್ಲದೆ ಮತದಾರರ ಮಾಹಿತಿ ಸಂಗ್ರಹಣೆ ಸಾಧ್ಯವೇ ಇಲ್ಲ. ಚಿಲುಮೆ ಸಂಸ್ಥೆ ಸರ್ವೆ ಬಗ್ಗೆ ತಿಳಿದಿದ್ದರೂ ಆರ್‌ಒಗಳು ಬಾಯಿಮುಚ್ಚಿ ಕುಳಿತಿದ್ದರು. ದಿನಕ್ಕೆ ಐವರು ಆರ್‌ಒಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.
ಇದನ್ನೂ ಓದಿ | Voter Data | ಗುಜರಾತ್ ಚುನಾವಣೆಗೂ ತಟ್ಟಲಿದೆಯೇ ʼಚಿಲುಮೆʼ ಅಕ್ರಮ ಬಿಸಿ?: ನವದೆಹಲಿಯತ್ತ ಹೊರಟ ಕಾಂಗ್ರೆಸ್