Site icon Vistara News

ಸಿನಿಮಾ ಸೇರುವ ಆಸೆಯಿಂದ ಬಂದವನು ಪಿಜಿ ಅವ್ಯವಸ್ಥೆಯಿಂದ ಹೆಣವಾದ! ಸತ್ತು 2 ದಿನವಾದರೂ ಗೊತ್ತೇ ಆಗಲಿಲ್ಲ

pg death

ಬೆಂಗಳೂರು: ಬೆಂಗಳೂರಿನ ದಾಸರಹಳ್ಳಿಯ ಪಿಜಿಯೊಂದರಲ್ಲಿ ಯುವಕನೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಸತ್ತು ಎರಡು ದಿನಗಳಾದ ಮೇಲೆ ಗೊತ್ತಾಗಿದೆ. 22 ಯುವಕರಿರುವ ಪಿಜಿಯಲ್ಲಿ ಸಾವು ಸಂಭವಿಸಿ ಎರಡು ದಿನಗಳಾಗಿದ್ದರೂ ಗೊತ್ತಾಗದಿರುವ ಸಂಗತಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ದಾಸರಹಳ್ಳಿಯ ವಿನಾಯಕ ಪಿಜಿಯಲ್ಲಿ ಘಟನೆ ನಡೆದಿದ್ದು, ಅನಿಲ್ ಕುಮಾರ್ ಮೃತ ದುರ್ದೈವಿ. ಈತ ಸಿನಿಮಾ ರಂಗದಲ್ಲಿ ಹೆಸರು ಮಾಡಬೇಕು ಎಂದು ಶಿವಮೊಗ್ಗದಿಂದ ಬೆಂಗಳೂರಿಗೆ ಬಂದಿದ್ದ. ವಿನಾಯಕ ಪಿಜಿಯಲ್ಲಿ ಕಳೆದ 20 ದಿನಗಳಿಂದ ವಾಸವಾಗಿದ್ದ. ಕಳೆದ ಗುರುವಾರ ತನ್ನ ತಾಯಿಗೆ ಕರೆ ಮಾಡಿ ಫುಡ್ ಪಾಯಿಸನ್ ಆಗಿದೆ, ಹಾಸ್ಪಿಟಲ್‌ಗೆ ಹೋಗಿ ಬಂದು ಕರೆ ಮಾಡುತ್ತೇನೆ ಎಂದು ಹೇಳಿದ್ದ. ಸೋಮವಾರ ಬೆಳಗ್ಗೆ ಹೌಸ್‌ಕೀಪಿಂಗ್‌ನವರು ಬಂದು ನೋಡಿದಾಗ ಬಾತ್‌ರೂಮ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಶುಕ್ರವಾರ ಸಂಜೆ ಬಾತ್‌ರೂಮಿಗೆ ಹೋಗಿರಬಹುದು ಎನ್ನಲಾಗಿದೆ. ಈ ಬಾತ್‌ರೂಮಿನ ಮುಂದಿನ ಕಾರ್‌ಡಾರ್‌ನಲ್ಲಿ ಪ್ರತಿದಿನ 25ಕ್ಕೂ ಅಧಿಕ ಮಂದಿ ಅತ್ತಿತ್ತ ಓಡಾಡುತ್ತಿದ್ದರೂ ಗೊತ್ತಾಗಿಲ್ಲ

ಪಿಜಿಯಲ್ಲಿ ಸುಮಾರು 25 ಯುವಕರು ಇದ್ದರೂ 2 ದಿನಗಳಿಂದ ಅನಿಲ ಶವವಾಗಿರುವುದು ಯಾರ ಗಮನಕ್ಕೂ ಬಂದಿಲ್ಲ. ಇದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಪಿಜಿಯಲ್ಲಿ ಯಾವುದೇ ರೀತಿಯ ಸುರಕ್ಷತಾ ಕ್ರಮಗಳಿಲ್ಲದಿರುವುದು ಕಂಡುಬಂದಿದೆ. ಪಿಜಿ ಮಾಲೀಕರ ನಿರ್ಲಕ್ಷ್ಯವೇ ಈ ಸಾವಿಗೆ ನೇರ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪಿಜಿಯವರೇ ನನ್ನ ಮಗನ ಸಾವಿಗೆ ನೇರ ಕಾರಣ, ಇದು ಸಹಜ ಸಾವು ಅಲ್ಲ ಎಂದು ಮೃತನ ತಂದೆ ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಹಜ ಸಾವು ವರದಿಗೆ ಸಹಿ ಮಾಡಲು ಗೋವಿಂದರಾಜನಗರ ಪೊಲೀಸರು ಒತ್ತಾಯಿಸಿದ್ದಾರೆ ಎಂದು ಕೂಡ ಅನಿಲ್ ತಂದೆ ದೂರಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಇದು ಸಹಜ ಸಾವು ಎಂದು ವರದಿ ಬಂದಿದ್ದು, ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಕಾಯಲಾಗುತ್ತಿದೆ.

ಇದನ್ನೂ ಓದಿ | Hubballi News | ಪುಷ್ಪಾ ಮೃತದೇಹಕ್ಕೆ ಎರಡೂ ಕುಟುಂಬಸ್ಥರ ಪಟ್ಟು; ಶವಾಗಾರದ ಎದುರು ಪೊಲೀಸ್‌ ಬಂದೋಬಸ್ತ್‌

Exit mobile version