ಮೈಸೂರು: ಮ್ಯಾಟ್ರಿಮೊನಿಯಲ್ಲಿ (Matrimony Sites) ವರನನ್ನು ಹುಡುಕುತ್ತಿದ್ದರೆ ಈ ಬಗ್ಗೆ ಎಚ್ಚರ ವಹಿಸಿ, ನೀವು ಹುಡುಕುವ ಸ್ಪುರದ್ರೂಪಿ, ಅನುಕೂಲಸ್ಥ, ಬುದ್ಧಿವಂತ, ಉದ್ಯೋಗವಂತ, ಸಿರಿವಂತ ವರನಿಗೆ ಈಗಾಗಲೇ ಡಜನ್ ಮದುವೆ (Dozen Marriage) ಆಗಿರಬಹುದು! ಇಲ್ಲವೇ ಆ ಸಾಲಿನಲ್ಲಿ ಆತ ಇರಲೂಬಹುದು. ಇನ್ನು ಅರ್ಧ ಡಜನ್ ಮಕ್ಕಳೂ ಇರಬಹುದು. ಹಾಗಾಗಿ ಆತುರ ಪಡಬೇಡಿ, ಪೂರ್ವಾಪರ ವಿಚಾರಿಸಿಯೇ ಮದುವೆ ಮಾಡಿಕೊಡಿ! ಇಂಥದ್ದೊಂದು ಮನವಿಯನ್ನು ಈಗ ಮೈಸೂರು ಪೊಲೀಸರು (Mysore Police) ಮಾಡಿದ್ದಾರೆ.
ಮೈಸೂರು ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಮುತ್ತುರಾಜ್ (Mysuru DCP Law and Order Muthuraj) ಬುಧವಾರ (ಜುಲೈ 12) ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಆನ್‌ಲೈನ್‌ನಲ್ಲಿ ಮದುವೆ ಪ್ರಸ್ತಾಪ ಬಂದಾಗ ಪೂರ್ವಾಪರ ವಿಚಾರಿಸಬೇಕು. ಆಕರ್ಷಣೆಗೆ ಒಳಗಾಗಿ ಮದುವೆಗೆ ಆತುರ ಮಾಡಬಾರದು. ಈ ಬಗ್ಗೆ ಯುವತಿಯ ಕುಟುಂಬಸ್ಥರು ಜಾಗೃತಿ ವಹಿಸಬೇಕು. ಮಹಿಳೆಯ ದೌರ್ಬಲ್ಯವನ್ನೇ ಬಂಡವಾಳ ಮಾಡಿಕೊಂಡು ಈ ಮಹೇಶ್ ಈಗ 12 ಮಹಿಳೆಯರಿಗೆ ಮೋಸ (Fraud Case) ಮಾಡಿದ್ದಾನೆ. ಇಂಥ ಹತ್ತಾರು “ಮಹೇಶ್” ಮ್ಯಾಟ್ರಿಮೊನಿ ಸೈಟ್‌ಗಳಲ್ಲಿ ಇರಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: Snake Cancer : ಕ್ಯಾನ್ಸರ್ ಪೀಡಿತ ನಾಗರ ಹಾವು ಸಾವು; ಯುವಕನಿಂದ ಅಂತ್ಯಸಂಸ್ಕಾರ
ಬೆಂಗಳೂರಿನ ಬನಶಂಕರಿ ಬಡಾವಣೆಯ ಮಹೇಶ್ (35) ಕಾಲಕಾಲಕ್ಕೆ ಡಾಕ್ಟರ್, ಎಂಜಿನಿಯರ್, ಗುತ್ತಿಗೆದಾರ, ಉದ್ಯಮಿಯ ವೇಷ ಧರಿಸಿ ಬರೋಬ್ಬರಿ 12 ಮದುವೆಯಾಗಿ ಮಕ್ಕಳು ಮಾಡಿದ್ದಲ್ಲದೆ, ಲಕ್ಷಾಂತರ ರೂಪಾಯಿ ಪಡೆದು ನಾಪತ್ತೆಯಾಗುತ್ತಿದ್ದ. ಆದರೂ, ಈತನ ಬಗ್ಗೆ ಕಂಪ್ಲೇಂಟ್ ಕೊಡಲು ಈತನಿಂದ ಮೋಸ ಹೋದ ಮಹಿಳೆಯರು ಹಿಂದೇಟು ಹಾಕುತ್ತಿದ್ದಾರೆ ಎಂದು ಮುತ್ತುರಾಜ್ ತಿಳಿಸಿದ್ದಾರೆ.
ಮಹೇಶ್ ಒಟ್ಟು 12 ಮದುವೆ ಆಗಿದ್ದಾನೆ. ಇವರ ಪೈಕಿ 6 ಮಹಿಳೆಯರಿಗೆ ಮಕ್ಕಳಿದ್ದಾರೆ. ಸುಲಭವಾಗಿ ಹಣ ಗಳಿಸಬಹುದು ಎನ್ನುವ ಕಾರಣಕ್ಕೆ ಮದುವೆ ಮಾಡಿಕೊಳ್ಳುವ ಪ್ರಸ್ತಾಪ ಇಡುತ್ತಿದ್ದ. ಮನೆಯವರೂ ಸಹ ಹಿಂದು ಮುಂದು ನೋಡದೆ ಈತನಿಗೆ ಮದುವೆ ಮಾಡಿ ಕೊಟ್ಟು ಮೋಸ ಹೋಗುತ್ತಿದ್ದರು. ಈತ ವರ್ಷಕ್ಕೆ ಸರಾಸರಿ 20 ಲಕ್ಷ ಹಣವನ್ನು ಇದರಿಂದಲೇ ಸಂಪಾದಿಸುತ್ತಿದ್ದ. ಆದರೆ, ಆಸ್ತಿಯನ್ನೂ ಮಾಡಿಲ್ಲ. ಶೋಕಿಗಾಗಿ ದುಂದು ವೆಚ್ಚ ಮಾಡಿ ಈಗ ಜೈಲು ಸೇರಿದ್ದಾನೆ ಎಂದು ಅವರು ವಿವರಿಸಿದ್ದಾರೆ.
ಈತನ ಟಾರ್ಗೆಟ್ ಯಾರು?
ಈತ ಮ್ಯಾಟ್ರಿಮೊನಿ ಸೈಟ್‌ಗಳಲ್ಲಿ ತನ್ನ ಪ್ರೊಫೈಲ್‌ಗಳನ್ನು ಕ್ರಿಯೇಟ್ ಮಾಡಿ ಡಾಕ್ಟರ್, ಎಂಜಿನಿಯರ್, ಉದ್ಯಮಿ ಎಂದೆಲ್ಲ ಹಾಕಿಕೊಳ್ಳುತ್ತಿದ್ದ. ಕೊನೆಗೆ ಅಲ್ಲಿರುವ ಪ್ರೊಫೈಲ್‌ಗಳನ್ನು (Matrimony Profile) ಸರ್ಚ್ ಮಾಡಿ, ಜೀವನದಲ್ಲಿ ಸೆಟಲ್ ಆಗಿರುವವರು, ತುಂಬಾ ದುಡ್ಡು ಇರುವವರನ್ನು ಟಾರ್ಗೆಟ್ ಮಾಡಿಕೊಳ್ಳುತ್ತಿದ್ದ. ಬಳಿಕ ಅವರಿಗೆ ರಿಕ್ವೆಸ್ಟ್ ಕಳಿಸಿ, ಪುಸಲಾಯಿಸುತ್ತಿದ್ದ. ಇದನ್ನು ಕಂಡೊಡನೆ ವಧು ಅಥವಾ ಅವರ ಮನೆಯವರು ಬೇಸ್ತು ಬೀಳುತ್ತಿದ್ದರು ಎಂದು ಮಹೇಶನ ವಂಚನೆ ವೃತ್ತಾಂತವನ್ನು ಮುತ್ತುರಾಜ್ ವಿವರಿಸಿದ್ದಾರೆ.
ಮಾತುಕತೆಗೆ ಬಾಡಿಗೆ ತಂದೆ- ತಾಯಿ!
ಈತ ನೋಡಲು ಚೆನ್ನಾಗಿದ್ದಾನೆ. ಒಳ್ಳೆಯ ಡ್ರೆಸ್ ಹಾಕುತ್ತಾನೆ ಎಂಬುದನ್ನು ನೋಡಿ ಜನರು ನಂಬುತ್ತಿದ್ದರು. ಅಲ್ಲದೆ, ಮಹೇಶ್, ತಾನು ಡಾಕ್ಟರ್ ಆಗಿದ್ದು, ದೇಶದ ತುಂಬೆಲ್ಲ ಓಡಾಡುತ್ತಿರುತ್ತೇನೆ, ಅಂತೆಲ್ಲ ನಂಬಿಸುತ್ತಿದ್ದ. ಇಂತಹ ಗಂಡು ಸಿಕ್ಕಿದ್ದೇ ಪುಣ್ಯ ಅಂತ ನಂಬಿ ಮದುವೆ ಮಾಡಿಕೊಂಡು ಬಿಡುತ್ತಿದ್ದರು. ಅಲ್ಲದೆ, ಮದುವೆ ಮಾತುಕತೆಗೆ ಬಾಡಿಗೆ ತಂದೆ- ತಾಯಿಯನ್ನು (Fake parents) ಕರೆದುಕೊಂಡು ಹೋಗುತ್ತಿದ್ದ. ದುಡ್ಡು ಕೊಟ್ಟು ಕೂಲಿ ಕೆಲಸದವರನ್ನು ತಂದೆ- ತಾಯಿ ರೀತಿ ನಟಿಸಲು ಕರೆದೊಯ್ಯುತ್ತಿದ್ದ. ಕೆಲ ಪ್ರಕರಣಗಳಲ್ಲಿ ನಾನು ಅನಾಥ (Orphan Drama) ಎಂದು ಹೇಳಿಕೊಳ್ಳುತ್ತಿದ್ದ. ನೀವು ಸಹಕಾರ ಕೊಟ್ಟರೆ ಮದುವೆ ಆಗುತ್ತೇನೆ ಎಂದು ನಂಬಿಸುತ್ತಿದ್ದ. ಕೆಲವು ಕಡೆ ಮದುವೆಯಾದ ಒಂದು ವಾರದಲ್ಲೇ ಬಿಟ್ಟು ಹಣ, ಚಿನ್ನಾಭರಣ ಕದ್ದು (Theft of cash, jewellery) ಪರಾರಿ ಆಗಿದ್ದಾನೆ. ಆದರೂ ಮೋಸ ಹೋದವರು ದೂರು ಕೊಡಲು ಮುಂದೆ ಬರುತ್ತಿಲ್ಲ ಎಂದು ಮುತ್ತುರಾಜ್ ತಿಳಿಸಿದ್ದಾರೆ.
ಮದುವೆಯಾದ ಮಹಿಳೆಯರು ಒಬ್ಬರಿಗೊಬ್ಬರು ಸಂಪರ್ಕ ಮಾಡದಂತೆ ಪ್ಲ್ಯಾನ್ ಮಾಡಿದ್ದಾನೆ. ಮೊಬೈಲ್ ಸಿಮ್ ಕಾರ್ಡ್ (Mobile Sim Card) ಬದಲಿಸಿ ನಾಪತ್ತೆ ಆಗುತ್ತಿದ್ದ. ಈ ಕಾರಣಕ್ಕೆ ಬಹುತೇಕರು ಈತನನ್ನು ಹುಡುಕುವ ಗೋಜಿಗೆ ಹೋಗಿಲ್ಲ ಎಂದು ಡಿಸಿಪಿ ಮುತ್ತುರಾಜ್ ವಿವರಿಸಿದ್ದಾರೆ.
ಸಿಕ್ಕಿಬಿದ್ದಿದ್ದು ಹೇಗೆ?
ಶಾದಿ ಡಾಟ್ ಕಾಂನಲ್ಲಿ ಹೇಮಲತಾ ಎಂಬುವವರ ಸಂಪರ್ಕಕ್ಕೆ ಬಂದಿದ್ದ ಮಹೇಶ್ ತಾನು ಡಾಕ್ಟರ್ ಎಂದು ಹೇಳಿಕೊಂಡಿದ್ದ. ಹೇಮಲತಾ ಸಹಜವಾಗಿಯೇ ಅವನನ್ನು ನಂಬಿದ್ದರು. ಇವರಿಬ್ಬರ ಮಧ್ಯೆ ಪರಿಚಯ ಬೆಳೆದು, ಮದುವೆಯ ತೀರ್ಮಾನವಾಯಿತು. ಹೇಮಲತಾ ಮತ್ತು ಮಹೇಶ್ ಇಬ್ಬರೂ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಇದೇ ವರ್ಷ ಜನವರಿ 1ರಂದು ಮದುವೆಯಾಗಿದ್ದರು. ಅದಾದ ಮೇಲೆ ಮಹೇಶ್ ಅಸಲಿ ರೂಪ ಬಯಲಿಗೆ ಬಂತು.
ಇದನ್ನೂ ಓದಿ: Tomato price : ದಾವಣಗೆರೆಯಲ್ಲಿ ಟೊಮ್ಯಾಟೊಗೆ Z + ಸೆಕ್ಯುರಿಟಿ; ಶ್ವಾನದಳ ನೇಮಕ!
ಒಡವೆ ಕದ್ದು ಸಿಕ್ಕಿಬಿದ್ದ
ಮೊದಲು ಅವನು ಹೇಮಲತಾ ಬಳಿ 70 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟ. ಕ್ಲಿನಿಕ್ ತೆರೆಯಬೇಕು ಹಣ ಕೊಡು ಎಂದು ಹೇಳಿದ. ಆದರೆ ಹೇಮಲತಾ ಅದಕ್ಕೆ ಒಪ್ಪಲಿಲ್ಲ. ಕೇಳಿದರೂ ಹೇಮಲತಾ ಹಣ ಕೊಡದೆ ಇದ್ದಾಗ ಸಿಟ್ಟಾದ ಮಹೇಶ್, ಆಕೆಯ ಹಣ, ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದ. ಬಳಿಕ ಹೇಮಲತಾ ಕುವೆಂಪುನಗರ ಠಾಣೆಯಲ್ಲಿ ದೂರು ದಾಖಲು (complaint lodged) ಮಾಡಿದ್ದರು. ಇವನನ್ನು ಬಂಧಿಸಿ ವಿಚಾರಣೆ ಮಾಡಿದಾಗ ಅಷ್ಟೂ ಕೇಸ್ಗಳ ಬಗ್ಗೆಯೂ ಮಾಹಿತಿ ಲಭ್ಯವಾಗಿತ್ತು. ಮಹೇಶ್ ವಿರುದ್ಧ ಬೆಂಗಳೂರಲ್ಲಿ ದಿವ್ಯಾ ಎಂಬುವರೂ ದೂರು ದಾಖಲಿಸಿದ್ದು ಗೊತ್ತಾಗಿತ್ತು. ಈಗ ವಿಚಾರಣೆ ವೇಳೆ ತಾನು ಈ ರೀತಿ 12 ಮದುವೆ ಆಗಿದ್ದಾಗಿ ಬಾಯಿ ಬಿಟ್ಟಿದ್ದಾನೆ.