ಗುಂಡ್ಲುಪೇಟೆ: ಈ ದೇಶದಲ್ಲಿ ಸಂವಿಧಾನದ ಉಳಿವಿಗಾಗಿ ಭಾರತ್ ಜೋಡೊ ಯಾತ್ರೆ ನಡೆಸುತ್ತಿದ್ದೇವೆ. ಬಿಜೆಪಿ ಮತ್ತು ಆರೆಸ್ಸಸೆಸ್ ಸಾರುತ್ತಿರುವ ದ್ವೇಷದ ಸಿದ್ದಾಂತದ ವಿರುದ್ಧ ಈ ಯಾತ್ರೆ ನಡೆಯುತ್ತಿದೆ. ಜನರ ನೋವು ಕೇಳುವುದಕ್ಕಾಗಿ ಈ ಯಾತ್ರೆ ನಡೆಯುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಂಗ್ರೆಸ್ ಆಯೋಜಿಸಿರುವ ಭಾರತ್ ಜೋಡೊ ಯಾತ್ರೆ ಶುಕ್ರವಾರ ಕರ್ನಾಟಕ ಪ್ರವೇಶಿಸಿದ ಸಂದರ್ಭದಲ್ಲಿ ಚಾಮರಾಜ ನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗುಂಡ್ಲುಪೇಟೆಯ ಅಂಬೇಡ್ಕರ್ ಭವನದ ಎದುರು ಸಮಾವೇಶ ನಡೆದಿದ್ದು, ಇದರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಪ್ರಮುಖ ನಾಯಕರು ಭಾಗವಹಿಸಿದ್ದರು.
ಸಂವಿಧಾನವಿಲ್ಲದೆ ತಿರಂಗಾಕ್ಕೂ ಬೆಲೆ ಇಲ್ಲ
ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಸಂವಿಧಾನದ ಉಳಿವಿಗಾಗಿ ಯಾತ್ರೆ ನಡೆಯುತ್ತಿದ್ದು, ಸಂವಿಧಾನ ಇಲ್ಲ ಅಂದರೆ ತಿರಂಗಾಕ್ಕೂ ಬೆಲೆ ಇಲ್ಲ ಎಂದರು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯುವ ಈ ಯಾತ್ರೆಯಲ್ಲಿ ನಾವು ಬೆಳಗ್ಗಿನಿಂದ ಸಂಜೆವರೆಗೆ ನಡೆಯುತ್ತೇವೆ. ಮಳೆ, ಬಿಸಿಲು ನೋಡದೆ ನಡೆಯುತ್ತೇವೆ. ನಾನೊಬ್ಬನೇ ಅಲ್ಲ, ಲಕ್ಷಾಂತರ ಜನ ಹೆಜ್ಜೆ ಹಾಕಿದ್ದಾರೆ. ಎಲ್ಲ ಧರ್ಮದವರು ನಡೆಯುತ್ತಿದ್ದಾರೆ ಎಂದರು.
ಈ ಯಾತ್ರೆಯಲ್ಲಿ ದ್ವೇಷ ಇಲ್ಲ. ಕಾಲ ಜಾರಿ ಬಿದ್ದರೆ ಕೈ ಹಿಡಿದು ನಡೆಸಿಕೊಂಡು ಬರ್ತಾರೆ. ಕೆಳಗೆ ಬಿದ್ದವರನ್ನು ಯಾವ ಜಾತಿ, ಧರ್ಮ ಎಂದು ಕೇಳುವುದಿಲ್ಲ ಎಂದು ಹೇಳಿದ ರಾಹುಲ್ ಗಾಂಧಿ, ನಾವು ದಿನಕ್ಕೆ ಆರೇಳು ಗಂಟೆಗಳ ಕಾಲ ನಡೆಯುತ್ತೇವೆ. ದಾರಿಯುದ್ದಕ್ಕೂ ಜನ ಸಾಮಾನ್ಯರು ಭೇಟಿ ಮಾಡುತ್ತಿದ್ದಾರೆ. ಅವರ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ನಿರುದ್ಯೋಗ, ರೈತರ ದೌರ್ಜನ್ಯ ಸೇರಿದಂತೆ ಹಲವರು ತಮ್ಮ ತಮ್ಮ ದುಃಖ ಹೇಳಿಕೊಂಡಿದ್ದಾರೆ, ಇದು ಭಾಷಣಕ್ಕೆ ಯಾತ್ರೆಯಲ್ಲ, ನಿಮ್ಮ ಸಮಸ್ಯೆಗಳ ಕೇಳಲು ಯಾತ್ರೆ ಎಂದರು ರಾಹುಲ್ ಗಾಂಧಿ.
ಮಾತನಾಡಲು ಬಿಡಲ್ಲ, ಅದಕ್ಕಾಗಿ ಬಂದಿದ್ದೇವೆ
ಈ ದೇಶದಲ್ಲಿ ಸಂಸತ್ತು, ಮಾಧ್ಯಮಗಳು ಸರ್ಕಾರ ಹಿಡಿತದಲ್ಲಿವೆ. ಸಂಸತ್ತಿನಲ್ಲಿ ಮಾತನಾಡುವಾಗ ನಮ್ಮ ಮೈಕ್ ಬಂದ್ ಮಾಡುತ್ತಾರೆ. ಮಾಧ್ಯಮಗಳಲ್ಲಿ ನಮ್ಮ ಸುದ್ದಿಗಳನ್ನು ಪ್ರಕಟವಾಗಲು ಬಿಡುವುದಿಲ್ಲ. ವಿಪಕ್ಷದವರನ್ನು ಬಂಧಿಸಲಾಗುತ್ತಿದೆ. ಹಾಗಾಗಿ ಜನರ ಜೊತೆ ನಡೆಯಲು ಈ ಯಾತ್ರೆ ನಡೆಯುತ್ತಿದೆ. ಜನರ ಜತೆಗಿನ ಈ ಯಾತ್ರೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಭಾರತದ ದೇಶದ ಧ್ವನಿಯನ್ನು ದಮನ ಮಾಡಲು ಯಾರಿಂದಲೂ ಆಗುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.
೨೧ ದಿನಗಳ ಕಾಲ ಜತೆಯಾಗಿ ನಡೆಯೋಣ
ʻʻಇನ್ನು 21 ದಿನಗಳ ಕಾಲ ನನ್ನ ಜೊತೆ ಹೆಜ್ಜೆ ಹಾಕಿ. ಕರ್ನಾಟಕದ ಜನರ ನೋವು ಕೇಳಲು ನಾವಿದ್ದೇವೆ. ಈ ರಾಜ್ಯದ ಸರಕಾರ ಭ್ರಷ್ಟಾಚಾರದ ಬಗ್ಗೆ ನಾವು ಮಾತನಾಡುತ್ತೇವೆ. ಈ ಬಗ್ಗೆ ತಾವೂ ಪ್ರಶ್ನಿಸಬಹುದುʼʼ ಎಂದು ಹೇಳಿದರು ರಾಹುಲ್ ಗಾಂಧಿ.
ದೇಶಕ್ಕಾಗಿ ಹೆಜ್ಜೆ ಹಾಕುತ್ತಿರುವ ರಾಹುಲ್: ಡಿಕೆಶಿ
ಸಮಾವೇಶದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ರಾಹುಲ್ ಗಾಂಧಿ ಅವರು ದೇಶಕ್ಕಾಗಿ ಹೆಜ್ಜೆ ಹಾಕುತ್ತಿದ್ದಾರೆ. ಇದೊಂದು ರಾಷ್ಟ್ರದ ಶಕ್ತಿ, ನಿಜವಾದ ರಾಷ್ಟ್ರ ಭಕ್ತಿʼʼ ಎಂದರು.
ʻʻದೇಶದಲ್ಲಿ ಶಾಂತಿ ರಕ್ಷಣೆಯಾಗಬೇಕು, ನಿರುದ್ಯೋಗ ನಿವಾರಣೆ ಆಗಬೇಕು, ಬೆಲೆ ಏರಿಕೆ ನಿಯಂತ್ರಣ ಮಾಡಬೇಕು, ದೇಶದ ಜನ ನೆಮ್ಮದಿಯಿಂದ ಬದುಕಬೇಕು ಎನ್ನುವ ಉದ್ದೇಶಗಳನ್ನು ಇಟ್ಟುಕೊಂಡು ನಾವು ಯಾತ್ರೆ ಮಾಡುತ್ತಿದ್ದೇವೆʼʼ ಎಂದು ಹೇಳಿದರು ಡಿ.ಕೆ. ಶಿವಕುಮಾರ್.
ʻʻಕಾಂಗ್ರೆಸ್ ಪಕ್ಷ ಯಾವತ್ತೂ ದೇಶದ ಜನರ ಬದುಕಿನ ಬಗ್ಗೆ ಯೋಚಿಸುತ್ತದೆ. ಸೋನಿಯಾ ಗಾಂಧಿ ಮೂರು ಭಾರಿ ಪ್ರಧಾನಿಯಾಗಬಹುದಿತ್ತು. ಆದರೆ, ಪ್ರಧಾನಿ ಹುದ್ದೆಯನ್ನೇ ತ್ಯಾಗ ಮಾಡಿದರು. ರಾಹುಲ್ ಗಾಂಧಿ ಅವರು ಒಬ್ಬ ಜನ ಸಾಮಾನ್ಯನಂತೆ ಹೆಜ್ಜೆ ಹಾಕುತ್ತಿದ್ದಾರೆʼʼ ಎಂದು ಹೇಳಿದ ಡಿ.ಕೆ ಶಿವಕುಮಾರ್, ʻʻಬಿಜೆಪಿ ಸೃಷ್ಟಿಸಿರುವ ದ್ವೇಷ, ಅಸೂಯೆಯನ್ನು ತೊಲಗಿಸಬೇಕಾಗಿದೆ. ಅವರು ನಮ್ಮನ್ನು ಹತ್ತಿಕ್ಕಲು ಅನೇಕ ತಂತ್ರಗಳನ್ನು ಮಾಡುತ್ತಿದ್ದಾರೆ. ಆದರೆ, ನಾವು ಯಾವುದಕ್ಕೂ ಬಗ್ಗುವುದಿಲ್ಲ. ನಮಗೆ ಜನರ ಬದುಕು ಮತ್ತು ಭವಿಷ್ಯ ಮುಖ್ಯʼʼ ಎಂದರು.
ಇತಿಹಾಸದಲ್ಲೇ ದೊಡ್ಡ ಪಾದಯಾತ್ರೆ: ಸಿದ್ದರಾಮಯ್ಯ
ಭಾರತ್ ಜೋಡೊ ಯಾತ್ರೆಯಷ್ಟು ದೊಡ್ಡ ಪಾದಯಾತ್ರೆಯನ್ನು ಸ್ವಾತಂತ್ರ್ಯದ ನಂತರ ಇದುವರೆಗೂ ಯಾರೂ ಮಾಡಿಲ್ಲ. ಯಾವ ಪಕ್ಷದವರೂ ಮಾಡಿಲ್ಲ. ಯಾವ ನಾಯಕರೂ ಮಾಡಿಲ್ಲ. ಇದೊಂದು ಹೊಸ ದಾಖಲೆ ಎಂದರು ಮಾಜಿ ಸಿಎಂ ಸಿದ್ದರಾಮಯ್ಯ.
ʻʻರಾಹುಲ್ ಗಾಂಧಿ ಅವರು ಕೋಮುವಾದಿ ರಾಜಕಾರಣದಿಂದ ಬೇಸತ್ತು ಈ ಯಾತ್ರೆ ಆರಂಭಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮಾಡುತ್ತಿರುವ ಧರ್ಮ ರಾಜಕಾರಣ, ಕೋಮುವಾದಿ ರಾಜಕಾರಣದಿಂದಾಗಿ ದೇಶ ಆತಂಕದಲ್ಲಿದೆ. ದಲಿತರು, ಅದಿವಾಸಿಗಳು ಆತಂಕದಲ್ಲಿದ್ದಾರೆʼʼ ಎಂದು ಹೇಳಿದ ಸಿದ್ದರಾಮಯ್ಯ, ʻʻಬಿಜೆಪಿ ಪಕ್ಷ ಸಂವಿಧಾನದ ಮೇಲೆ ನಂಬಿಕೆ ಇಟ್ಟುಕೊಂಡಿಲ್ಲ. ಒಬ್ಬ ನಾಯಕ, ಒಂದು ಪಕ್ಷದ ಮೇಲೆ ನಂಬಿಕೆ ಇಟ್ಟುಕೊಂಡಿದೆ. ಈ ಸಂವಿಧಾನದ ಬೇಡ, ಬೇರೆ ಸಂವಿಧಾನದ ತರುತ್ತೇವೆ ಎಂದು ಬಿಜೆಪಿ ನಾಯಕರೇ ಹೇಳಿದ್ದಾರೆ. ವಾಜಪೇಯಿ ಪ್ರಧಾನಿ ಆಗಿದ್ದಾಗಲೇ ಸಂವಿಧಾನವನ್ನು ಮರುಬರೆಯುವ ಪ್ರಯತ್ನ ನಡೆದಿತ್ತು. ಆಗ ರಾಷ್ಟ್ರಪತಿ ಆಗಿದ್ದ ಕೆ.ಆರ್. ನಾರಾಯಣನ್ ಅವರು ಈ ಪ್ರಯತ್ನವನ್ನು ತಡೆದರು. ಇಲ್ಲದಿದ್ದರೆ ಅಂದೇ ಮಾಡಿಬಿಡುತ್ತಿದ್ದರುʼʼ ಎಂದು ಹೇಳಿದರು.
ʻʻದೇಶದಲ್ಲಿ ಶಾಂತಿ ಕದಡಿ ರಾಜಕೀಯ ಲಾಭ ಮಾಡುವ ಉದ್ದೇಶವನ್ನು ಮೋದಿ ಹೊಂದಿದ್ದಾರೆ. ಆದರೆ, ನಾವು ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟುಕೊಂಡಿದ್ದೇವೆ. ಅನೇಕ ಹೋರಾಟಗಾರರು, ಸಿಪಿಐ, ಸಿಪಿಐಎಂ ಸೇರಿದಂತೆ ಅನೇಕ ರಾಜಕೀಯ ಪಕ್ಷಗಳು ಕೂಡಾ ದೇಶ ಉಳಿಸಲು ಟೊಂಕ್ ಕಟ್ಟಿ ನಿಂತಿವೆʼʼ ಎಂದು ಹೇಳಿದರು ಸಿದ್ದರಾಮಯ್ಯ.
ʻʻದೇಶದಲ್ಲಿ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಇದೆ. ಮಹಿಳೆಯರು ಸಮಸ್ಯೆ ಎದುರಿಸುತ್ತಿದ್ದಾರೆ. ಭ್ರಷ್ಟಾಚಾರ ತಾಂಡವ ಆಡುತ್ತಿದೆ. ರಾಜ್ಯದಲ್ಲಿ 40% ಕಮಿಷನ್ ಜನಜನೀತವಾಗಿದೆ. ಇಂಥ ಹೊತ್ತಿನಲ್ಲಿ ರಾಹುಲ್ ಗಾಂಧಿ ನಾಯಕತ್ವ ವಹಿಸಿಕೊಂಡಿದ್ದಾರೆ. ಅದಕ್ಕಾಗಿ ನಾವು ಅವರಿಗೆ ಧನ್ಯವಾದ ಹೇಳಬೇಕುʼʼ ಎಂದು ಸಿದ್ದರಾಮಯ್ಯ ಹೇಳಿದರು.
ʻʻಕಾಂಗ್ರೆಸ್‌ನ ಜನಪ್ರಿಯತೆಯನ್ನು ಸಹಿಸಲಾಗದೆ, ಭಾರತ್ ಜೋಡೊ ಯಾತ್ರೆಯ ಯಶಸ್ಸನ್ನು ಅರಗಿಸಿಕೊಳ್ಳಲಾಗದೆ ಬಿಜೆಪಿಯವರು ಬ್ಯಾನರ್‌ಗಳನ್ನು ಹರಿದು ಹಾಕಿದ್ದಾರೆ. ಪೊಲೀಸರು ಅವರ ಜತೆ ಶಾಮೀಲಾದರೆ ಅವರಿಗೂ ಮುಂದೆ ಅಧಿಕಾರಕ್ಕೆ ಬಂದಾಗ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದೇವೆʼʼ ಎಂದು ಹೇಳಿದರು.
ಇದನ್ನೂ ಓದಿ | ಭಾರತ್ ಜೋಡೊ | ಗುಡಲೂರು ಮೂಲಕ ರಾಜ್ಯ ಪ್ರವೇಶಿಸಿದ ರಾಹುಲ್, ಸಿದ್ದು-ಡಿಕೆಶಿ ಯಾರೂ ಇಲ್ಲದೆ ಏಕಾಂಗಿ ಎಂಟ್ರಿ!