ಚಾಮರಾಜನಗರ: ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯ ಎರಡನೇ ದಿನವಾದ ಶನಿವಾರವೂ ಭರ್ಜರಿಯಾಗಿ ಸಾಗುತ್ತಿದೆ. ಶುಕ್ರವಾರ ಗುಂಡ್ಲುಪೇಟೆಯಲ್ಲಿ ಸಮಾವೇಶ ನಡೆದ ಬಳಿಕ ಸಂಜೆ ಬೇಗೂರಿನಲ್ಲಿ ವಿಶ್ರಾಂತಿ ಪಡೆದಿದ್ದ ರಾಹುಲ್ ಗಾಂಧಿ ಅವರು ಶನಿವಾರ ಬೆಳಗ್ಗೆ ೬.೩೦ಕ್ಕೆ ನಡಿಗೆ ಆರಂಭಿಸಬೇಕಾಗಿತ್ತು. ಆದರೆ, ಮಳೆ ಹಿನ್ನೆಲೆಯಲ್ಲಿ ೭.೪೫ಕ್ಕೆ ನಡಿಗೆ ಆರಂಭಗೊಂಡಿತು.
ತಣ್ಣಗಿನ ವಾತಾವರಣವಿದ್ದರೂ ಭಾರಿ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಎಂ.ಬಿ. ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬೆಳಗ್ಗೆಯೇ ಉತ್ಸಾಹದ ಹೆಜ್ಜೆ ಹಾಕಿದರು.
ರಾಹುಲ್ ಗಾಂಧಿ ಅವರಿಗೆ ಬಿಗಿ ಭದ್ರತೆ
ಸಾವಿರಾರು ಕಾರ್ಯಕರ್ತರ ನಡುವೆ ಸಾಗುತ್ತಿರುವ ರಾಹುಲ್ ಗಾಂಧಿ ಅವರು ಭದ್ರತಾ ಸಿಬ್ಬಂದಿ ಬಿಗಿ ಭದ್ರತೆಯನ್ನು ಒದಗಿಸಿದ್ದಾರೆ. ಝಡ್ ಪ್ಲಸ್ ಸೆಕ್ಯುರಿಟಿ ಇರುವ ಹಿನ್ನೆಲೆಯಲ್ಲಿ ಅವರಿಗೆ ಭದ್ರತೆಯ ಕೋಟೆಯನ್ನೇ ನಿರ್ಮಿಸಲಾಗಿದೆ. ರಾಹುಲ್ ಅವರ ಜತೆಗೆ ಹಿರಿಯ ನಾಯಕರಿಗೆ ಮಾತ್ರ ನಡೆಯಲು ಅವಕಾಶವಿದೆ. ಉಳಿದಂತೆ ಕಾರ್ಯಕರ್ತರು ಹತ್ತಿರ ಸುಳಿಯುವಂತಿಲ್ಲ. ಉಳಿದವರು ಏನಿದ್ದರೂ ರಾಹುಲ್ ಅವರಿಂದ ಸುಮಾರು ನೂರು ಮೀಟರ್ ದೂರದಲ್ಲೇ ಸಾಗಬೇಕಾಗಿದೆ. ಹೀಗಾಗಿ ಕೆಲವು ಕಾರ್ಯಕರ್ತರಿಗೆ ನಿರಾಸೆಯಾಗಿದೆ.
ಬೇಗೂರಿನಿಂದ ತಾಂಡವಪುರಕ್ಕೆ ಹೋಗುವ ದಾರಿಯಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ಮಾಡಲಾಗಿದೆ. ಮೂರು ಕಡೆ ಬ್ಯಾರಿಕೇಡ್‌ಗಳನ್ನು ಹಾಕಿರುವ ಪೊಲೀಸರು ಪ್ರತಿಯೊಂದು ವಾಹನವನ್ನು ಪರಿಶೀಲಿಸಿಯೇ ಬಿಡುತ್ತಿದ್ದಾರೆ. ಕೆಲವು ತುರ್ತು ವಾಹನಗಳಿಗೆ ಮತ್ತೊಂದು ರಸ್ತೆಯಲ್ಲಿ ಹಾದು ಹೋಗಲು ಅವಕಾಶ ಮಾಡಿಕೊಡಲಾಗುತ್ತಿದೆ.
ಸಿದ್ದರಾಮಯ್ಯ ಆರು ಕಿ.ಮೀ. ನಡಿಗೆ, ಸೆಲ್ಫಿಗಾಗಿ ಮುತ್ತಿಗೆ
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಮೊದಲ ಒಂದುವರೆ ಗಂಟೆ ಕಾಲ ಅಂದರೆ ಸುಮಾರು ೬ ಕಿ.ಮೀ. ನಡೆದು ಪಾದಯಾತ್ರೆ ಮುಗಿಸಿದರು. ವಯಸ್ಸಿನ ಹಿನ್ನೆಲೆಯಲ್ಲಿ ಇಷ್ಟಕ್ಕೇ ಮುಕ್ತಾಯ ಮಾಡುವುದಾಗಿ ಅವರು ರಾಹುಲ್ ಗಾಂಧಿಗೆ ತಿಳಿಸಿದರು. ಬಳಿಕ ಕಾರಿನಲ್ಲಿ ಪ್ರಯಾಣ ಮುಂದುವರಿಸಿದರು.
ಈ ನಡುವೆ, ಸಿದ್ದರಾಮಯ್ಯ ಕಾರಿನಲ್ಲಿ ಸಾಗುತ್ತಿದ್ದಂತೆಯೇ ಕಾರ್ಯಕರ್ತರು ಸೆಲ್ಫಿಗಾಗಿ ಮುಗಿಬಿದ್ದರು. ತಾನು ದಿನಕ್ಕೆ ಎರಡು ಗಂಟೆಯಷ್ಟೇ ನಡೆಯುವುದಾಗಿ ಸಿದ್ದರಾಮಯ್ಯ ಅವರು ಮೊದಲೇ ತಿಳಿಸಿದ್ದಾರೆ ಎನ್ನಲಾಗಿದೆ.
ಯಾರೆಲ್ಲ ಭಾಗವಹಿಸಿದ್ದರು?
ಬೇಗೂರಿನ ತೊಂಡವಾಡಿ ಗೇಟ್ ನಿಂದ ಪ್ರಾರಂಭವಾದ ಯಾತ್ರೆ ೧೧ ಗಂಟೆಗೆ ಕಳಲೆ ಗೇಟ್ ತಲುಪಿ ವಿರಾಮ ಪಡೆದಿದೆ. ಇಲ್ಲಿ ಕೋಲೆ ಬಸವ ಸಮುದಾಯದ ಜತೆ ಸಂವಾದದ ಬಳಿಕ, ಸಾಹಿತಿ ಮತ್ತು ಕಲಾವಿದರ ಜತೆ, ದ್ವೇಷ ರಾಜಕಾರಣ ವಿರೋಧಿಸುವ ಸಮಾನ ಮನಸ್ಕರ ಜತೆ ರಾಹುಲ್ ಗಾಂಧಿ ಅವರು ಸಂವಾದ ನಡೆಸಿದರು.
ಸಂಜೆ 4 ಗಂಟೆ ಸುಮಾರಿಗೆ ಕಳಲೆ ಗೇಟ್ ನಿಂದ ಯಾತ್ರೆ ಪುನಾರಂಭವಾಗಲಿದ್ದು, ಏಳು ಗಂಟೆ ಹೊತ್ತಿಗೆ ಚಿಕ್ಕಯ್ಯನ ಛತ್ರದ ಗೇಟ್ ಬಳಿ ಎರಡನೇ ದಿನದ ಯಾತ್ರೆ ಮುಕ್ತಾಯವಾಗಲಿದೆ. ತಾಂಡವಪುರ ಎಂಐಟಿ ಕಾಲೇಜ್ ಗೇಟ್ ಬಳಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.
ಎರಡನೇ ದಿನದ ಪಾದಯಾತ್ರೆಯಲ್ಲಿ 10 ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದಾರೆ. ಹೆಗ್ಗಡದೇವನಕೋಟೆ, ಬೆಳ್ತಂಗಡಿ, ಬಂಟ್ವಾಳ, ಮಡಿಕೇರಿ, ವಿರಾಜಪೇಟೆ, ನಂಜನಗೂಡು, ಹುಣಸೂರು, ರಾಮನಗರ, ಕನಕಪುರ, ಚನ್ನಪಟ್ಟಣದ ಕಾರ್ಯಕರ್ತರು ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.
ಸೇಬಿಗಾಗಿ ಮುಗಿಬಿದ್ದ ಜನರು
ಭಾರತ್ ಜೋಡೋ ಯಾತ್ರೆಯಲ್ಲಿ ಸಾಗುವ ಕಾರ್ಯಕರ್ತರಿಗಾಗಿ ರಸ್ತೆಯುದ್ದಕ್ಕೂ ಹಣ್ಣು ಹಂಪಲು ವ್ಯವಸ್ಥೆ ಮಾಡಲಾಗಿದೆ. ಈ ನಡುವೆ ಜನರು ಸೇಬು ಹಣ್ಣು ತಿನ್ನಲು ಮುಗಿಬಿದ್ದರು. ಕೆಲವರು ಹಣ್ಣು ತಂದಿರುವ ಲಾರಿಯನ್ನೇ ಹತ್ತಿ ಕಿತ್ತುಕೊಳ್ಳಲು ಮುಂದಾಗಿದ್ದು ಕಂಡುಬಂತು.
ಮೈಸೂರು ಜಿಲ್ಲೆ ಪ್ರವೇಶ, ವಿಶ್ರಾಂತಿ
ಬೇಗೂರಿನಿಂದ ಆರಂಭವಾದ ಯಾತ್ರೆ ಬೆಳಗ್ಗೆ ೯ ಗಂಟೆ ಹೊತ್ತಿಗೆ ನಂಜನಗೂಡು ಮೂಲಕ ಮೈಸೂರು ಜಿಲ್ಲೆಯ ಪ್ರವೇಶ ಮಾಡಿದೆ. ಇಲ್ಲಿ ಅದ್ದೂರಿ ಸ್ವಾಗತವನ್ನು ಕೋರಲಾಯಿತು. ನಂಜನಗೂಡಿನಲ್ಲಿ ರೈತರು ಹಸಿರು ಶಾಲು ಬೀಸಿ ಸ್ವಾಗತಿಸಿದರು. ಬಳಿಕ ಕಳಲೆ ಗೇಟ್‌ನಲ್ಲಿ ದಿನದ ಮೊದಲ ವಿಶ್ರಾಂತಿಗೆ ಅವಕಾಶ ನೀಡಲಾಗಿದೆ. ಇಲ್ಲಿ ವಿಶ್ರಾಂತಿ ಪಡೆದ ಬಳಿಕ ರಾಹುಲ್ ಗಾಂಧಿ ಅವರು ಸಂವಾದದಲ್ಲಿ ಪಾಲ್ಗೊಳ್ಳುವರು.
ಇದನ್ನೂ ಓದಿ | Bharat jodo | ಯಾತ್ರೆ ವೇಳೆ Pay CM ಟಿ-ಶರ್ಟ್ ಧರಿಸಿದ್ದ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಎಫ್‌ಐಆರ್