ಮೈಸೂರು: ಸಾಯಂಗಿದ್ರೆ ಬಸ್ಸಿಗೆ ಸಿಕ್ಕಿ ಸಾಯಬೇಕಿತ್ತು. ಸಾಯೋಕೆ ನನ್ ಕಾರೇ ಬೇಕಿತ್ತಾ? ಅವನು ಸತ್ತೋಗ್ತಾನೆ ಅಂತ ಅವನ ಬಗ್ಗೆ ಯಾಕೆ ಯೋಚನೆ ಮಾಡ್ತೀಯಾ? ಒಂದೂವರೆ ಕೋಟಿ ರೂಪಾಯಿ ಕಾರು ಬಗ್ಗೆ ಯೋಚನೆ ಮಾಡು: ಬೈಕೊಂದು ತಮ್ಮ ಕಾರಿಗೆ ಡಿಕ್ಕಿ ಹೊಡೆದ (Bike hits Car) ಸಂದರ್ಭದಲ್ಲಿ ಹಿರಿಯ ಜೆಡಿಎಸ್ ನಾಯಕಿ ಭವಾನಿ ರೇವಣ್ಣ (Bhavani Revanna) ಅವರು ಆಡಿದ ಮಾತುಗಳಿವು. ದೇವೇಗೌಡರ ಮನೆ ಸೊಸೆಯಾಗಿ (Daughter in law of HD Devegowda), ಸದಾ ಜನರೇ ನನ್ನ ದೇವರು ಎನ್ನುವ ಎಚ್.ಡಿ ರೇವಣ್ಣ (HD Revanna) ಅವರ ಪತ್ನಿಯಾಗಿ ಜನರ ಬಗ್ಗೆ ಕರುಣೆ ಹೊಂದಿರಬೇಕಾದ ಹೆಣ್ಮಗಳು ನಡು ರಸ್ತೆಯಲ್ಲಿ ಈ ರೀತಿ ದರ್ಪದ ಮಾತು ಆಡಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಜತೆಗೆ ಆಕ್ರೋಶವೂ ವ್ಯಕ್ತವಾಗಿದೆ.
ಈ ಘಟನೆ ನಡೆದಿರುವುದು ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮದ ಹೊರವಲಯದಲ್ಲಿ. ಹಾಸನ – ಕೆ.ಆರ್.ನಗರ ರಸ್ತೆಯಲ್ಲಿ ಬರುತ್ತಿದ್ದಾಗ ಭವಾನಿ ರೇವಣ್ಣ ಕಾರಿಗೆ ಬೈಕ್ ಸವಾರರೊಬ್ಬರು ಡಿಕ್ಕಿ ಹೊಡೆದಿದ್ದಾರೆ. ಇಬ್ಬರು ಸವಾರರಿದ್ದ ಬೈಕ್ ತಪ್ಪಾಗಿ ರಾಂಗ್ ಸೈಡಿನಲ್ಲಿ ಬಂದು ಕಾರಿಗೆ ಡಿಕ್ಕಿ ಹೊಡೆದಿದೆ. ಕಾರಿನ ಬಲಭಾಗಕ್ಕೆ ಸಣ್ಣ ಡೆಂಟ್ ಆಗಿದೆ. ಇದನ್ನು ಗಮನಿಸಿದ ಭವಾನಿ ರೇವಣ್ಣ ಅವರು ರೌದ್ರಾವತಾರ ತಾಳಿದ್ದಾರೆ. ಅಪಘಾತ ಸಣ್ಣ ಮಟ್ಟಕ್ಕೆ ಆಗಿ ಮುಗಿಯಿತಲ್ಲ ಎಂದು ಸಮಾಧಾನಪಟ್ಟುಕೊಳ್ಳದೆ ಬೈಕ್ ಸವಾರನನ್ನು ಸಂತೈಸುವುದು ಬಿಟ್ಟು ಹಿಗ್ಗಾಮುಗ್ಗಾ ಬೈದಿದ್ದಾರೆ. ಬೈಕ್ ಸುಟ್ಟು ಹಾಕಿ, ಅವನನ್ನು ಅರೆಸ್ಟ್ ಮಾಡಿ ಎಂದೆಲ್ಲ ಬೊಬ್ಬಿರಿದ ದೃಶ್ಯಗಳು ವೈರಲ್ ಆಗಿವೆ.
ಈ ನಡುವೆ ಯಾರೋ ಅಕ್ಕಾ ಕಾರು ಸೈಡಿಗೆ ಹಾಕಿ ಅಂದಿದ್ದಕ್ಕೆ ಸಿಟ್ಟಿಗೆದ್ದ ಭವಾನಿ ರೇವಣ್ಣ, ನನ್ನ ಕಾರಿಗೆ ಡ್ಯಾಮೇಜ್ ಆಗಿದೆ. ರಿಪೇರಿ ಮಾಡಿಸೋಕೆ 50 ಲಕ್ಷ ರೂ. ಹಣ ಬೇಕು. ಯಾರಾದರೂ ನ್ಯಾಯ ಮಾತನಾಡುವವರು ಐವತ್ತು ಲಕ್ಷ ಹಣ ಕೊಟ್ಟು ಮಾತನಾಡಿ. ಒಂದೂವರೆ ಕೋಟಿ ರೂಪಾಯಿ ಗಾಡಿ ಇದು ಎಂದು ದರ್ಪ ತೋರಿದ್ದಾರೆ.
ಸಾಲಿಗ್ರಾಮ ಠಾಣೆಯ ಇನ್ಸ್‌ಪೆಕ್ಟರ್‌ನ ಕರೀರಿ, ತಗೊಂಡು ಹೋಗಿ ಇವನನ್ನು ಒಳಗೆ ಹಾಕಲಿ, ಸಾಯಂಗಿದ್ರೆ ಬಸ್ಸಿಗೆ ಸಿಕ್ಕಿ ಸಾಯಬೇಕಿತ್ತು. ಸಾಯೋಕೆ ನನ್ ಕಾರೇ ಬೇಕಿತ್ತಾ? ಅವನು ಸತ್ತೋಗ್ತಾನೆ ಅಂತ ಅವನ ಬಗ್ಗೆ ಯಾಕೆ ಯೋಚನೆ ಮಾಡ್ತೀಯಾ? ಒಂದೂವರೆ ಕೋಟಿ ರೂಪಾಯಿ ಕಾರು ಬಗ್ಗೆ ಯೋಚನೆ ಮಾಡು ಎಂದಿರುವ ಭವಾನಿ ರೇವಣ್ಣ, ಬೈಕ್ ಸವಾರನನ್ನು ನಿಲ್ಲಿಸಿ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.
ಇದನ್ನೂ ಓದಿ | ಚಿಕ್ಕಮಗಳೂರು ಪೊಲೀಸ್-ವಕೀಲರ ಸಂಘರ್ಷ; ಪ್ರಕರಣದ ತನಿಖೆ ಸಿಐಡಿ ಹೆಗಲಿಗೆ
ಅಪಘಾತದಲ್ಲಿ ಗಾಯಗೊಂಡವನನ್ನು ಸಂತೈಸುವುದು ಬಿಟ್ಟು ಹಿಗ್ಗಾಮುಗ್ಗಾ ಬೈಯುವ ಮೂಲಕ ಭವಾನಿ ರೇವಣ್ಣ ಮಾನವೀಯತೆ ಮರೆತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಕಾರಿಗೆ ನಂಬರ್ ಪ್ಲೇಟೇ ಇಲ್ವಾ?
ಈ ನಡುವೆ ಭವಾನಿ ರೇವಣ್ಣ ಅವರ ಕಾರಿಗೆ ನಂಬರ್ ಪ್ಲೇಟೇ ಇರಲಿಲ್ಲ ಎಂದು ಹೇಳಲಾಗುತ್ತಿದೆ. ಚಿತ್ರದಲ್ಲಿ ಮತ್ತು ವಿಡಿಯೊದಲ್ಲಿ ಕಂಡುಬರುವ ದೃಶ್ಯಗಳಲ್ಲಿ ಕಾರಿನ ನಂಬರ್ ಪ್ಲೇಟ್ ತಾತ್ಕಾಲಿಕ ನಂಬರ್ ನಂತೆ ಕಾಣಿಸುತ್ತಿದೆ. ಮೊದಲು ಸರಿಯಾಗಿ ನಂಬರ್ ಪ್ಲೇಟ್ ಹಾಕಿ ಎಂದೂ ನೆಟ್ಟಿಗರು ಹೇಳಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ