ಮಂಡ್ಯ: ವಿಧಾನಸಭಾ ಚುನಾವಣಾ (Karnataka Election 2023) ಕಣ ದಿನೇ ದಿನೇ ರಂಗು ಪಡೆದುಕೊಳ್ಳುತ್ತಿದೆ. ರಾಜಕೀಯ ಪಕ್ಷಗಳು ತಂತ್ರಗಳನ್ನು ಹೆಣೆಯುವುದು, ಸಭೆ, ಸಮಾರಂಭಗಳನ್ನು ನಡೆಸುವುದು ಸೇರಿದಂತೆ ಹಲವು ರೀತಿಯ ಕಸರತ್ತುಗಳನ್ನು ಮಾಡುತ್ತಿವೆ. ಇದೇ ವೇಳೆ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದ್ದರಿಂದ ಆಯ್ಕೆ ಕಗ್ಗಂಟಾಗಿ ಉಳಿದುಕೊಂಡಿದೆ. ಇನ್ನು ಕೆಲವು ಕಡೆ ಪಕ್ಷಾಂತರ ಪರ್ವ ಪ್ರಾರಂಭವಾಗಿದೆ. ಈಗ ಮಂಡ್ಯದ ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ಗೊಂದಲ ಈಗ ತಾರಕಕ್ಕೇರಿದೆ. ಜೆಡಿಎಸ್ ಹಿರಿಯ ಮುಖಂಡರಾದ ಬಿ.ಎಲ್. ದೇವರಾಜು, ಬಸ್ ಕೃಷ್ಣೇಗೌಡ ಕಾಂಗ್ರೆಸ್ ಸೇರ್ಪಡೆಗೊಳ್ಳುವ ಮೂಲಕ ಪಕ್ಷಕ್ಕೆ ದೊಡ್ಡ ಶಾಕ್ ನೀಡಿದ್ದಾರೆ.
ಜೆಡಿಎಸ್ ಪಕ್ಷ ತೊರೆದ ಕೆ.ಆರ್.ಪೇಟೆ ತಾಲೂಕಿನ ಜೆಡಿಎಸ್‌ನ ಈ ಹಿರಿಯ ಮುಖಂಡರು ಪಕ್ಷಕ್ಕೆ ದೊಡ್ಡ ಆಘಾತವನ್ನೇ ನೀಡಿದ್ದಾರೆ. ಬಿ.ಎಲ್. ದೇವರಾಜು, ಬಸ್ ಕೃಷ್ಣೇಗೌಡ ಅವರು ಜೆಡಿಎಸ್‌ನಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಣೆ ಮಾಡುತ್ತಾ ಬಂದಿದ್ದರು. ಪಕ್ಷ ಸಂಘಟನೆಯಲ್ಲಿ ಇವರು ಪ್ರಮುಖ ಪಾತ್ರವನ್ನು ವಹಿಸಿದ್ದರು.
ಇದನ್ನೂ ಓದಿ: Rahul Gandhi: ಲೋಕಸಭೆಯಿಂದ ರಾಹುಲ್ ಗಾಂಧಿ ಅನರ್ಹ ನಿಶ್ಚಿತ? ಏನು ಹೇಳುತ್ತದೆ ಕಾನೂನು?
ಆದರೆ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಇವರಿಗೆ ತೀವ್ರ ನಿರಾಸೆಯಾಗಿದೆ. ಎಚ್.ಟಿ. ಮಂಜು ಅವರನ್ನು ಅಭ್ಯರ್ಥಿ ಎಂದು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದರು. ಈ ನಿಟ್ಟಿನಲ್ಲಿ ಮಂಜು ಪ್ರಚಾರ ಕಾರ್ಯವನ್ನೂ ಪ್ರಾರಂಭಿಸಿ ಮತಯಾಚನೆ ಮಾಡುತ್ತಿದ್ದರು.
ಈ ನಡುವೆ ಇದಕ್ಕೆ ತೀವ್ರ ಪ್ರತಿರೋಧ ಒಡ್ಡಿದ್ದ ಬಿ.ಎಲ್. ದೇವರಾಜು, ಬಸ್ ಕೃಷ್ಣೇಗೌಡ ಅವರು, ಈ ನಿರ್ಧಾರವನ್ನು ಮರು ಪರಿಶೀಲನೆ ನಡೆಸುವಂತೆ ಕೋರಿಕೆಯನ್ನು ಸಲ್ಲಿಸಿದ್ದರು. ಆದರೆ, ಈ ಬಗ್ಗೆ ಜೆಡಿಎಸ್ ವರಿಷ್ಠರು ಯಾವುದೇ ಸೊಪ್ಪು ಹಾಕಲಿಲ್ಲ. ಇದರ ಭಾಗವಾಗಿ ದೇವರಾಜು ಮತ್ತು ಕೃಷ್ಣೇಗೌಡ ಅವರು ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಪುತ್ರ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರನ್ನು ಕ್ಷೇತ್ರಕ್ಕೆ ಕರೆಸಿ ಅವರ ಹುಟ್ಟುಹಬ್ಬ ಆಚರಿಸುವ ಮೂಲಕ ಶಕ್ತಿ ಪ್ರದರ್ಶನವನ್ನೂ ಮಾಡಿದ್ದರು.
ಇಷ್ಟೆಲ್ಲ ಬೆಳವಣಿಗೆಗಳ ಮಧ್ಯೆ ಉಭಯ ನಾಯಕರು ಸಹ ಕ್ಷೇತ್ರದಲ್ಲಿ ಪ್ರಚಾರದಲ್ಲಿ ನಿರತರಾಗಿದ್ದರು. ತಮಗೇ ಮತ ಕೊಡಿ ಎಂದು ಜನತೆಯ ಮನೆ ಬಾಗಿಲನ್ನು ತಟ್ಟಿದ್ದರು. ಯಾವುದಾದರೂ ಪವಾಡದ ರೂಪದಲ್ಲಿ ತಮಗೆ ಟಿಕೆಟ್ ಸಿಗಬಹುದು ಎಂದು ಕಾಯುತ್ತಿದ್ದರು. ಆದರೆ, ಈ ಬಗ್ಗೆ ವರಿಷ್ಠರಿಂದ ಯಾವುದೇ ಸಂದೇಶ ಹಾಗೂ ನಿರ್ಧಾರ ಬಾರದೇ ಇರುವುದರಿಂದ ಈ ಇಬ್ಬರು ನಾಯಕರು ತಮ್ಮ ಬೆಂಬಲಿಗರ ಜತೆ ಸಭೆ ನಡೆಸಿ ಕಾಂಗ್ರೆಸ್ ಸೇರುವ ತೀರ್ಮಾನವನ್ನು ಪ್ರಕಟಿಸಿದರು.
ಇದನ್ನೂ ಓದಿ” Amit shah visit : ಅಭಿವೃದ್ಧಿಯ ಬಿಜೆಪಿ ಬೇಕಾ? ಭ್ರಷ್ಟಾಚಾರಿ ಕಾಂಗ್ರೆಸ್ ಬೇಕಾ?; ಅಮಿತ್ ಶಾ ಪ್ರಶ್ನೆ
ಈ ಸಂಬಂಧ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬೆಂಬಲಿಗರ ಸಭೆ ನಡೆಸಿದ್ದು, ಜೆಡಿಎಸ್ ವರಿಷ್ಠರ ನಿರ್ಧಾರಕ್ಕೆ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದರು. ಕಳೆದ ಏಳೆಂಟು ತಿಂಗಳ ಹಿಂದೆ ಟಿಕೆಟ್ ಬಗ್ಗೆ ಚರ್ಚೆಯನ್ನು ನಡೆಸಲಾಗಿತ್ತು. ಆಗ ನಾನೂ ಸಹಿತ ಬಸ್ ಕೃಷ್ಣೇಗೌಡರು ಮತ್ತಿತರ ಆಕಾಂಕ್ಷಿಗಳು ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದೆವು. ಆಗ ಏನೂ ಮಾತನಾಡದೆ, ಬಳಿಕ ನಮ್ಮ ಅಭಿಪ್ರಾಯವನ್ನೂ ಕೇಳದೆ ವರಿಷ್ಠರು ಮಂಜು ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದರು. ಆದರೂ ಈ ನಿರ್ಧಾರವನ್ನು ಮರು ಪರಿಶೀಲನೆ ಮಾಡುವಂತೆ ಕೋರಿದೆವು. ಅದಕ್ಕೆ ಯಾವುದೇ ಪ್ರತಿಕ್ರಿಯೆಯನ್ನು ಸಹ ಕೊಡದೇ ಇರುವುದರಿಂದ ಪಕ್ಷ ಬಿಡುವುದು ತಮಗೆ ಅನಿವಾರ್ಯವಾಗಿದೆ ಎಂದು ದೇವರಾಜ್ ವಿಷಯ ಪ್ರಸ್ತಾಪ ಮಾಡಿದರು. ಇದಕ್ಕೆ ಬೆಂಬಲಿಗರು ಸಹಮತ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಸೇರ್ಪಡೆ ವಿಚಾರವನ್ನು ಈ ವೇಳೆ ಪ್ರಕಟಿಸಲಾಯಿತು.