ಬೆಂಗಳೂರು: ಬಿಜೆಪಿ ಸರಕಾರದ ಮೂರು ವರ್ಷಗಳ ಸಾಧನೆ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ಸ್ವೀಕರಿಸಿ ಒಂದು ವರ್ಷವಾಗಿರುವ ಸಂದರ್ಭದಲ್ಲಿ ಆಯೋಜಿಸಲಾಗಿರುವ ಜನೋತ್ಸವ ಕಾರ್ಯಕ್ರಮ ಬುಧವಾರ ನಡೆಯುವುದೇ ಇಲ್ಲವೇ ಎನ್ನುವ ಬಗ್ಗೆ ಚರ್ಚೆ ಜೋರಾಗಿದೆ. ಸಿಎಂ ಬೊಮ್ಮಾಯಿ ಸೇರಿದಂತೆ ಹಲವು ಬಿಜೆಪಿ ಪ್ರಮುಖರು ಜನೋತ್ಸವ ನಡೆಸೋಣ ಎಂಬ ಅಭಿಪ್ರಾಯ ಹೊಂದಿದ್ದರೆ, ಬಿಜೆಪಿ ಶಾಸಕರಿಂದ ಇದಕ್ಕೆ ಆಕ್ಷೇಪ ಹೊಂದಿದ್ದಾರೆ ಎನ್ನಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಸೆಪ್ಟೆಂಬರ್ ೮ರಂದು ಈ ಕಾರ್ಯಕ್ರಮ ಆಯೋಜನೆಯಾಗಿದೆ. ಅರಣ್ಯ, ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವರಾಗಿದ್ದ ಉಮೇಶ್ ಕತ್ತಿ ಅವರ ನಿಧನದ ಹಿನ್ನೆಲೆಯಲ್ಲಿ ಜನೋತ್ಸವವನ್ನು ಮುಂದೂಡಲಾಗುತ್ತದೆ ಎಂಬ ಮಾತು ಕೇಳಿಬರುತ್ತಿರುವ ನಡುವೆಯೇ ಉನ್ನತ ಮೂಲಗಳು ಈ ಸಾಧ್ಯತೆಯನ್ನು ಅಲ್ಲಗಳೆದಿವೆ.
ಮೂಲತಃ ಜುಲೈ ೨೮ಕ್ಕೆ ನಿಗದಿಯಾಗಿದ್ದ ಜನೋತ್ಸವ ಈಗಾಗಲೇ ಎರಡು ಬಾರಿ ಮುಂದೂಡಿಕೆಯಾಗಿದೆ. ಜುಲೈ ೨೬ರಂದು ಯುವ ಮೋರ್ಚಾ ಪದಾಧಿಕಾರಿ ಪ್ರವೀಣ್ ನೆಟ್ಟಾರು ಅವರ ಕೊಲೆ ನಡೆದ ಬೆನ್ನಲ್ಲೇ ರಾಜ್ಯಾದ್ಯಂತ ಬಿಜೆಪಿ ಸರಕಾರ ಮತ್ತು ನಾಯಕರ ವಿರುದ್ಧ ಕಾರ್ಯಕರ್ತರೇ ತಿರುಗಿಬಿದ್ದಿದ್ದರು. ಇದರಿಂದ ಎಚ್ಚೆತ್ತುಕೊಂಡ ಸಿಎಂ ಬಸವರಾಜ ಬೊಮ್ಮಾಯಿ ಅವರು ಜುಲೈ ೨೭ರ ಮಧ್ಯರಾತ್ರಿ ಪತ್ರಿಕಾಗೋಷ್ಠಿ ನಡೆಸಿ ಸಮಾವೇಶ ಮುಂದೂಡಿದ್ದಾಗಿ ಘೋಷಿಸಿದ್ದರು. ಮುಂದೆ ಆಗಸ್ಟ್ ೨೮ರಂದು ಜನೋತ್ಸವಕ್ಕೆ ಸಿದ್ಧತೆ ನಡೆಸಲಾಗಿತ್ತು. ಆದರೆ, ಅದು ಗಣೇಶ ಚೌತಿಯ ಆಸುಪಾಸಾಗಿರುವುದರಿಂದ ಮತ್ತು ಜನೋತ್ಸವದಲ್ಲಿ ಭಾಗವಹಿಸಬೇಕಾಗಿರುವ ನಾಯಕರಿಗೆ ಬೇರೆ ಕಾರ್ಯಕ್ರಮಗಳು ನಿಗದಿಯಾಗಿದೆ ಎಂಬ ಕಾರಣಕ್ಕೆ ಜನೋತ್ಸವವನ್ನು ಎರಡನೇ ಬಾರಿ ಮುಂದೂಡಲಾಗಿತ್ತು. ಮೂರನೇ ಬಾರಿ ನಿಗದಿಯಾಗಿದ್ದು ಸೆಪ್ಟೆಂಬರ್ ೮ಕ್ಕೆ. ಜನೋತ್ಸವ ಆಯೋಜನೆಗೊಂಡಿರುವ ದೊಡ್ಡಬಳ್ಳಾಪುರ ಭಾಗದಲ್ಲಿ ಜೋರಾಗಿ ಮಳೆ ಸುರಿಯುತ್ತಿರುವುದರಿಂದ ಮತ್ತು ಇಡೀ ರಾಜ್ಯ ಮಳೆ ಸಂಕಷ್ಟಕ್ಕೆ ಸಿಲುಕಿರುವುದರಿಂದ ಜನೋತ್ಸವ ಮುಂದೂಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ಇದಾದ ನಂತರ ಮಂಗಳವಾರ ರಾತ್ರಿ ಸಚಿವ ಉಮೇಶ್ ಕತ್ತಿ ನಿಧನರಾದ ಹಿನ್ನೆಲೆಯಲ್ಲಿ ಮುಂದೂಡಿಕೆ ಪಕ್ಕಾ ಎಂದೇ ಹೇಳಲಾಗಿತ್ತು. ಯಾಕೆಂದರೆ ಸಚಿವರೊಬ್ಬರು ತೀರಿಕೊಂಡರೆ ಮೂರು ದಿನ ಶೋಕಾಚರಣೆ ಇರುತ್ತದೆ ಎಂಬ ನೆಲೆಯಲ್ಲಿ ಹೊರಗಡೆಯೂ ಇದೇ ಅಭಿಪ್ರಾಯ ಇತ್ತು. ಆದರೆ, ಈಗ ಬರುತ್ತಿರುವ ಮಾಹಿತಿ ಪ್ರಕಾರ ಜನೋತ್ಸವ ಮುಂದೂಡಿಕೆ ಸಾಧ್ಯತೆ ಕಡಿಮೆ.
ಮುಂದೂಡಿಕೆ ಬೇಡ ಎಂಬ ಅಭಿಪ್ರಾಯ
ಜನೋತ್ಸವವನ್ನು ಈಗಾಗಲೇ ಎರಡು ಬಾರಿ ಮುಂದೂಡಲಾಗಿದೆ. ಮತ್ತೆ ಮುಂದೂಡುವುದು ಬೇಡ ಎಂಬ ಅಭಿಪ್ರಾಯ ಬಿಜೆಪಿ ವಲಯದಲ್ಲಿದೆ. ಅದಲ್ಲದೆ ಈ ಬಾರಿ ಸುಮಾರು ಮೂರು ಲಕ್ಷ ಮಂದಿ ಕಾರ್ಯಕರ್ತರಿಗಾಗಿ ಎಲ್ಲ ರೀತಿಯ ಸಿದ್ಧತೆಗಳನ್ನು ನಡೆಸಲಾಗಿದೆ. ಹೀಗಾಗಿ ಮುಂದೂಡುವುದು ಬೇಡ ಎಂಬ ಅಭಿಪ್ರಾಯವಿದೆ.
ಒಂದೇ ದಿನ ಶೋಕಾಚರಣೆ
ಸಾಮಾನ್ಯವಾಗಿ ಮಂತ್ರಿಯಾಗಿದ್ದವರು ಮೃತಪಟ್ಟಾಗ ಮೂರು ದಿನದ ಶೋಕಾಚರಣೆ ಮಾಡಲಾಗುತ್ತದೆ. ಆದರೆ, ಉಮೇಶ್ ಕತ್ತಿ ಅವರ ಸಾವಿನ ನಂತರ ಒಂದೇ ದಿನ ಶೋಕಾಚರಣೆಗೆ ಆದೇಶ ಹೊರಡಿಸಲಾಗಿದೆ. ಅಂದರೆ ಬುಧವಾರ ಮಾತ್ರ ಯಾವುದೇ ಸರಕಾರಿ ಇಲ್ಲವೇ ದೊಡ್ಡ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವುದಿಲ್ಲ. ಜನೋತ್ಸವವನ್ನೇ ದೃಷ್ಟಿಯಲ್ಲಿ ಇಟ್ಟುಕೊಂಡು ಈ ರೀತಿ ಮಾಡಲಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ, ಶಾಸಕರ ವಲಯದಲ್ಲಿ ಉಮೇಶ್ ಕತ್ತಿ ಅವರ ಸಾವನ್ನು ಮುಂದಿಟ್ಟುಕೊಂಡು ಸಂಭ್ರಮಪಡುವುದು ಬೇಡ ಎಂಬ ಅಭಿಪ್ರಾಯವಿದೆ. ಜತೆಗೆ ಜನರು ಮಳೆಯ ಸಂಕಷ್ಟದಲ್ಲಿರುವಾಗ ಉತ್ಸವ ಆಚರಣೆ ಮಾಡುವುದು ಸರಿಯೇ ಎನ್ನುವ ಚರ್ಚೆಯೂ ಜೋರಾಗಿದೆ.
ಈ ಎಲ್ಲ ಗೊಂದಲಗಳು ಸಂಜೆವರೆಗೂ ಮುಂದುವರಿಯುವ ಸಾಧ್ಯತೆ ಇದ್ದು, ಮುಖ್ಯಮಂತ್ರಿಗಳು ಬಳಿಕ ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆ ಇದೆ.
ಇದನ್ನೂ ಓದಿ| ಜನೋತ್ಸವ ಮತ್ತೆ ಮುಂದೂಡಿಕೆ, ಗಣೇಶೋತ್ಸವದ ಬಳಿಕ ಮಾಡ್ತೀವಿ ಎಂದ ಸಿಎಂ, ಕಾಲೆಳೆದ ಕಾಂಗ್ರೆಸ್!