Site icon Vistara News

BJP JDS alliance : ವಿಜಯದಶಮಿ ನಂತರ ಜೆಡಿಎಸ್‌ ಸೀಟು ಹಂಚಿಕೆ ಅಂತಿಮ ಮಾತುಕತೆ!

HD DeveGowda HD Kumaraswamy and PM Narendra Modi on BJP JDS alliance

ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆ (Lok Sabha Election 2024) ಸಂಬಂಧ ಬಿಜೆಪಿ ಜತೆ ಕೈಜೋಡಿಸಿರುವ ಜೆಡಿಎಸ್‌ ರಾಜ್ಯದಲ್ಲಿ ಹಲವಾರು ರಾಜಕೀಯ ತಂತ್ರಗಳನ್ನು (Political Strategy) ಹೆಣೆಯುತ್ತಿದೆ. ಈ ಸಂಬಂಧ ಮಾಜಿ ಪ್ರಧಾನಿ‌, ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ (Former Prime Minister and JDS supremo HD DeveGowda) ಅವರು ಬುಧವಾರ (ಸೆಪ್ಟೆಂಬರ್‌ 27) ಸುದ್ದಿಗೋಷ್ಠಿ ನಡೆಸಿ ತಾವು ಗೃಹ ಸಚಿವ ಅಮಿತ್‌ ಶಾ (Home Minister Amit Shah) ಅವರ ಜತೆ ಮೈತ್ರಿ (BJP JDS alliance) ಕುರಿತಾಗಿ ಮೊದಲು ಚರ್ಚೆ ನಡೆಸಿದ್ದಾಗಿ ಹೇಳಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಬಳಿ ಈ ಬಗ್ಗೆ ಮಾತನಾಡಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಸೀಟು ಹಂಚಿಕೆ ಬಗ್ಗೆ ಪ್ರಶ್ನೆ ಕೇಳಿದಾಗ ವಿಜಯದಶಮಿ ಹಬ್ಬದ (Vijayadashami Festival) ಬಳಿಕ ಬಿಜೆಪಿಯೊಂದಿಗೆ ಈ ಬಗ್ಗೆ ಮಾತುಕತೆ ನಡೆಸಲಾಗುವುದು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಸ್ಪಷ್ಟಪಡಿಸಿದ್ದಾರೆ. ಇದರ ಜತೆಗೆ ಆ ಸನ್ನಿವೇಶ ಬಂದಾಗ ಚರ್ಚೆ ಮಾಡುತ್ತೇವೆ ಎಂದು ದೇವೇಗೌಡರು ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ ಅವರು, ಮೈತ್ರಿ ಸೀಟು ಹಂಚಿಕೆ ಸಂಬಂಧ ವಿಜಯದಶಮಿ ಮುಗಿದ ಬಳಿಕ ಬಿಜೆಪಿ ವರಿಷ್ಠರ ಜತೆ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ. ಅದಕ್ಕೆ ಜೆಡಿಎಸ್‌ ವರಿಷ್ಠ ಎಚ್.ಡಿ ದೇವೇಗೌಡ ಸಹ ಧನಿಗೂಡಿಸಿದ್ದು, ಆ ಸನ್ನಿವೇಶ ಬರಲಿ, ಆಗ ಚರ್ಚೆ ಮಾಡುತ್ತೇವೆ ಎಂದು ಸೂಚ್ಯವಾಗಿ ಉತ್ತರಿಸಿದ್ದಾರೆ.

ಮೈತ್ರಿಕೂಟ ಸೇರಿದ್ದಷ್ಟೇ

ಈಚೆಗೆ ನವದೆಹಲಿಗೆ ಎಚ್.ಡಿ. ಕುಮಾರಸ್ವಾಮಿ ಅವರು ಭೇಟಿ ನೀಡಿದ್ದಾಗ ಗೃಹ ಸಚಿವ ಅಮಿತ್‌ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಜತೆ ಪ್ರಾಥಮಿಕ ಹಂತದ ಮಾತುಕತೆಯನ್ನು ನಡೆಸಿದ್ದರು. ಇದರ ಭಾಗವಾಗಿ ಅಂದೇ ಬಿಜೆಪಿ – ಜೆಡಿಎಸ್‌ ಮೈತ್ರಿ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಾಗಿತ್ತು. ಎನ್‌ಡಿಎ ಮೈತ್ರಿಕೂಟವನ್ನು ಜೆಡಿಎಸ್‌ ಸೇರಿದೆ ಎಂದು ಅಧಿಕೃತವಾಗಿ ಪ್ರಕಟಿಸಲಾಗಿತ್ತು. ಆದರೆ, ಇದರ ನಂತರ ಸೀಟು ಹಂಚಿಕೆ ಸಂಬಂಧ ಯಾವುದೇ ರೀತಿಯ ಅಂತಿಮ ಹಂತದ ಚರ್ಚೆ ಆಗಿಲ್ಲ ಎಂದು ಹೇಳಲಾಗಿದೆ.

ಐದು ಕ್ಷೇತ್ರ ಕೇಳಿರುವ ಜೆಡಿಎಸ್‌

ಮೂಲಗಳ ಪ್ರಕಾರ ಜೆಡಿಎಸ್‌ ಒಟ್ಟು ಐದು ಲೋಕಸಭಾ ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ರಾಯಚೂರು ಸೇರಿದಂತೆ ಇತ್ತ ಮಂಡ್ಯ, ಹಾಸನ, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಕೇಳಿತ್ತು. ಆದರೆ, ಈ ಸಂಬಂಧ ಬಿಜೆಪಿ ನಾಯಕರಲ್ಲಿ ಒಮ್ಮತ ಮೂಡಿಲ್ಲ.

ಇದನ್ನೂ ಓದಿ: BJP JDS alliance : ಜೆಡಿಎಸ್‌ಗೆ ಕಾಂಗ್ರೆಸ್‌ ಮಾಡಿದ ಮೋಸದ ಬಗ್ಗೆ 100 ಕಾರಣ ಹೇಳುವೆ: ಗುಡುಗಿದ ದೇವೇಗೌಡ

ಬಿಜೆಪಿ ನಾಯಕರ ವಿರೋಧ

ಜೆಡಿಎಸ್‌ಗೆ ಯಾವುದೇ ಕಾರಣಕ್ಕೂ ಐದು ಸೀಟನ್ನು ಬಿಟ್ಟುಕೊಡುವುದು ಬೇಡ. ಮೂರು ಕ್ಷೇತ್ರವನ್ನು ಬಿಟ್ಟುಕೊಟ್ಟರೆ ಸಾಕು. ಉಳಿದ ಕಡೆ ಅವರಿಗೆ ಕೊಟ್ಟರೆ ಸೋಲು ನಿಶ್ಚಿತ. ಇದು ಬಿಜೆಪಿಗೆ ನಷ್ಟವನ್ನುಂಟು ಮಾಡುತ್ತದೆ ಎಂದು ರಾಜ್ಯದ ಕೆಲವು ನಾಯಕರು ಈಗಾಗಲೇ ವರದಿ ಒಪ್ಪಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ವಿಜಯ ದಶಮಿ ನಂತರ ನಡೆಯುವ ಮಾತುಕತೆ ಕುತೂಹಲ ಮೂಡಿಸಿದೆ.

Exit mobile version