ಹಾಸನ: ವೋಟ್ ಸಿಗುತ್ತೆ ಅಂದ್ರೆ ಸಿದ್ದರಾಮಯ್ಯ ಸುನ್ನತ್ತಿಗೂ ತಯಾರಾಗಿರುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ.
ಆರ್‌ಎಸ್‌ಎಸ್ ಅನ್ನು ಕೂಡ ನಿಷೇಧಿಸಬೇಕು ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದ್ದಾರೆ. ಹಾಸನದ ಬೇಲೂರಿನಲ್ಲಿ ರಂಭಾಪುರಿ ಶ್ರೀಗಳ ನೇತೃತ್ವದಲ್ಲಿ ನಡೆದ ಶರನ್ನವರಾತ್ರಿ ದಸರಾ ಧರ್ಮಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗಹಿಸಿದ ಬಳಿಕ ಅವರು ಈ ಹೇಳಿಕೆ ನೀಡಿದರು.
ದೇಶಭಕ್ತ ಮತ್ತು ದೇಶದ್ರೋಹಿಗೆ ವ್ಯತ್ಯಾಸ ಗೊತ್ತಿಲ್ಲದೇ ಇರುವವರು ಮಾತ್ರ ಹೀಗೆ ಮಾತಾಡಲು ಸಾಧ್ಯ. ದೇಶಭಕ್ತರ ಜೊತೆ ದೇಶದ್ರೋಹಿಯನ್ನು ಹೋಲಿಸುವುದು ಅಕ್ಷಮ್ಯ ಅಪರಾಧ. ಆರ್‌ಎಸ್‌ಎಸ್ ದೇಶಭಕ್ತ ಸಂಘಟನೆ. ಭಾರತ ಜಗದ್ಗುರು ಆಗಬೇಕು ಅಂತ ಬಯಸುತ್ತಿದೆ ಆರ್‌ಎಸ್‌ಎಸ್. ಭಾರತವನ್ನು ಮೊಘಲ್ ಸ್ಥಾನ್ ಮಾಡಿ, ಹಿಂದೂಗಳನ್ನೆಲ್ಲಾ ಮತಾಂತರ ಮಾಡಬೇಕು ಅಂತ ಪಿಎಫ್‌ಐ ಬಯಸುತ್ತಿದೆ. ಎರಡನ್ನೂ ಹೋಲಿಕೆ ಮಾಡುವವರಿಗೆ ಏನು ಹೇಳಬೇಕು? ತಲೆ ಸರಿಯಿರುವವರು ಹಾಗೆ ಹೋಲಿಕೆ ಮಾಡುತ್ತಾರಾ? ಅವರಿಗೆ ಆರ್‌ಎಸ್‌ಎಸ್‌ನ ಬೈದರೆ ವೋಟ್ ಸಿಗುತ್ತದೆ ಅನ್ನುವ ದುರಾಸೆ ಎಂದು ಟೀಕಿಸಿದರು.
ಇವರಿಗೂ ಪಿಎಫ್‌ಐಗೂ ವ್ಯತ್ಯಾಸ ಇಲ್ಲ. ಪಿಎಫ್‌ಐಯಂತೆಯೇ ಕಾಂಗ್ರೆಸ್‌ನವರೂ ಆರ್‌ಎಸ್‌ಎಸ್‌ನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಇವರಿಬ್ಬರ ನಡುವೆ ಒಳ ಹೊಂದಾಣಿಕೆ ನಡೆದಿರುವ ಸಾಧ್ಯತೆ ಇದೆ. ಹಿಂದೆ ಅಧಿಕಾರದ ದುರಾಸೆಗೆ ಭಾರತವನ್ನು ವಿಭಜನೆ ಮಾಡಿದರು. ಇವತ್ತಿನ ಕಾಂಗ್ರೆಸ್, ಪಿಎಫ್‌ಐ ಬೆದರಿಕೆಗೆ ಅವರ ಜೊತೆಗೆ ಕೈ ಜೋಡಿಸಿದ್ದಾರೆ ಎಂದು ನನಗೆ ಅನುಮಾನ ಎಂದರು.
ಇದನ್ನೂ ಓದಿ | PFI Banned | ಮಾಜಿ ಸಿಎಂ ಸಿದ್ದರಾಮಯ್ಯ ತಲೆತಿರುಕ ಮಾತನಾಡೋದು ಸ್ವಾಭಾವಿಕ: ಬಿ.ಎಸ್.ಯಡಿಯೂರಪ್ಪ
ಆರ್‌ಎಸ್‌ಎಸ್‌ನವರ ಬಗ್ಗೆ ಬಹಳ ಮಾತಾಡುತ್ತಿದ್ದ ಪಿಎಫ್‌ಐಯವರ ಬಾಲ ಮಾತ್ರವಲ್ಲ, ತಲೆಯೇ ಕಟ್ ಆಗಲಿದೆ. ಹತ್ತು ಸೆಕೆಂಡ್ ಸಿಕ್ಕಿದರೆ ಸಾಕು ಆರ್‌ಎಸ್‌ಎಸ್‌ನವರನ್ನು ಮುಗಿಸುತ್ತೇವೆ ಎಂದಿದ್ದರು. ಆರ್‌ಎಸ್‌ಎಸ್ ಮುಗಿಸಿದರೆ ಹಿಂದೂಸ್ತಾನವನ್ನು ಮೊಘಲ್‌ಸ್ಥಾನ ಮಾಡುವುದು ಅವರಿಗೆ ಬಹಳ ಸುಲಭ. ಅವರ ಮತ್ತೊಂದು ವಿಭಜನೆಗೆ ತಡೆಗೋಡೆಯಾಗಿರುವುದು ಆರ್‌ಎಸ್‌ಎಸ್. ಅವರನ್ನು ತುಷ್ಟೀಕರಿಸುತ್ತಿರುವ ಸಿದ್ದರಾಮಯ್ಯನವರು ವೋಟ್ ಸಿಗುತ್ತದೆ ಅಂದ್ರೆ ಸುನ್ನತ್‌ಗೂ ತಯಾರಿರಬಹುದು. ಆದರೆ ನಾವಂತೂ ತಯಾರಿಲ್ಲ ಎಂದು ರವಿ ಹೇಳಿದ್ದಾರೆ.
ಇದು ದಸರೆ, ಆ ತಾಯಿ ವರ ಪ್ರದಾಯಿನಿಯೂ ಹೌದು, ದುಷ್ಟರನ್ನು ನಿಗ್ರಹಿಸುವ ದುರ್ಗಿಯೂ ಹೌದು. ಆಕೆಯ ಬಳಿ ಶಸ್ತ್ರವೂ ಇದೆ, ಶಾಸ್ತ್ರವೂ ಇದೆ. ಯಾರು ಸಂವಾದಕ್ಕೆ ಬರುತ್ತಾರೋ ಅವರಿಗೆ ಶಾಸ್ತ್ರದ ಮೂಲಕ, ಶಸ್ತ್ರ ಎತ್ತಿಕೊಂಡು ಬರುವವರಿಗೆ ಶಸ್ತ್ರದ ಮೂಲಕ ಉತ್ರ ಕೊಡುತ್ತೇವೆ. ಶಿಷ್ಟರನ್ನು ರಕ್ಷಣೆ ಮಾಡವುದನ್ನೇ ಆ ತಾಯಿ ನಮಗೆ ಹೇಳಿಕೊಟ್ಟಿದ್ದಾಳೆ. ದೇಹಿ ಅಂತ ಬಂದರೆ ಆಶ್ರಯ ಕೊಡುತ್ತೇವೆ. ಒಂದು ಕೆನ್ನೆ ತೋರಿಸಿದರೆ, ಇನ್ನೊಂದು ಕೆನ್ನೆ ಕೊಡುವ ಕಾಲ ಹೋಯಿತು. ಅದು ಗಾಂಧಿ ಕಾಲ, ಈಗ ಏನಿದ್ದರೂ ಮೋದಿ ಕಾಲ. ಕೆನ್ನೆಗೆ ಹೊಡೆಯಬೇಕು ಅಂತ ಕೈ ಎತ್ತಿದ್ರೆ ಕೈಯೇ ಇರುವುದಿಲ್ಲ. ಇದು ಬಿರಿಯಾನಿ ಕೊಡೋ ಭಾರತ ಅಲ್ಲ, ಈಗ ನಿಮ್ಮ ಮನೆಗೆ ನುಗ್ಗಿ ಸದೆ ಬಡಿಯುತ್ತೇವೆ ಅನ್ನುವ ಸಂದೇಶ ಕೊಟ್ಟಿದ್ದೇವೆ ಎಂದರು.
ಇದನ್ನೂ ಓದಿ | ಸಿದ್ದರಾಮಯ್ಯ ಮಜಾವಾದಿ, ಆರ್‌ಎಸ್‌ಎಸ್ ಎಂದರೆ ಅರ್ಥವಾಗಲ್ಲ: ಸಿ ಟಿ ರವಿ