ಚಿಕ್ಕೋಡಿ: ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯ ದಿ. ಸಚಿವ ಉಮೇಶ್ ಕತ್ತಿ (Umesh Katti) ಅವರ ನಿವಾಸಕ್ಕೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಚಿವರಾದ ಮುನಿರತ್ನ, ಎಂಟಿಬಿ ನಾಗರಾಜ್, ಭೈರತಿ ಬಸವರಾಜ್, ಜೆ.ಸಿ.ಮಾಧುಸ್ವಾಮಿ ಗುರುವಾರ ಭೇಟಿ ನೀಡಿ ಸಾಂತ್ವನ ಹೇಳಿದರು.
ಉಮೇಶ್ ಕತ್ತಿ ಪತ್ನಿ ಶೀಲಾ, ಸಹೋದರ ರಮೇಶ್ ಕತ್ತಿ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಮುಖಂಡರು, ಕತ್ತಿ ಅವರೊಂದಿಗೆ ಕಳೆದ ಕ್ಷಣಗಳನ್ನು ಮೆಲುಕು ಹಾಕಿದರು.
ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮಾತನಾಡಿ, ಉಮೇಶ್ ಕತ್ತಿ ನನ್ನ ಆತ್ಮೀಯ ಮಿತ್ರ. ಬೆಳಗಾವಿ, ಬೆಂಗಳೂರು, ದೆಹಲಿಯಲ್ಲಿ ಭೇಟಿಯಾದಾಗ ರಾಜ್ಯದ ಅಭಿವೃದ್ಧಿ, ಪಕ್ಷ ಸಂಘಟನೆ ಬಗ್ಗೆ ಹಲವು ಸಲಹೆ ನೀಡುತ್ತಿದ್ದರು. ಉಮೇಶ್ ಕತ್ತಿ ಬಿಂದಾಸ್ ವ್ಯಕ್ತಿಯಾಗಿದ್ದರು. ಅವರ ಅಗಲಿಕೆಯಿಂದ ಪಕ್ಷ, ರಾಜ್ಯಕ್ಕೆ ಅಪಾರ ನಷ್ಟವಾಗಿದೆ ಎಂದರು.
ಇದನ್ನೂ ಓದಿ | Rain News | ವಿಜಯನಗರ ಜಿಲ್ಲೆಯಲ್ಲಿ ವಿವಿಧೆಡೆ ಮನೆಗಳಿಗೆ ಹಾನಿ, ಅಪಾರ ಪ್ರಮಾಣದ ಬೆಳೆ ನಷ್ಟ
ಒಬ್ಬ ರಾಜಕೀಯ ನಾಯಕ 40 ವರ್ಷಗಳ ಶಾಸಕನಾಗಿ ಮಾಡಿದ ಕೆಲಸ, ದೂರದೃಷ್ಟಿ, ಆಲೋಚನೆಗಳು ಎಲ್ಲರಿಗೂ ಗೊತ್ತಾಗಬೇಕಿದೆ. ಕತ್ತಿ ಅವರ ರಾಜಕೀಯ ಜೀವನವು ಪುಸ್ತಕದ ರೂಪದಲ್ಲಿ ಹೊರ ಬರಬೇಕು ಎಂದರು.
ಆರೋಗ್ಯ ಸಚಿವ ಕೆ.ಸುಧಾಕರ್ ಮಾತನಾಡಿ, ಉಮೇಶ್ ಕತ್ತಿ ಅಕಾಲಿಕ ನಿಧನದಿಂದ ರಾಜ್ಯಕ್ಕೆ ನಷ್ಟವಾಗಿದೆ. ಕತ್ತಿ ಆಸ್ಪತ್ರೆಗೆ ದಾಖಲಾದಾಗ ನನಗೆ ಗೊತ್ತಾಯಿತು. ವೈದ್ಯರನ್ನು ಕರೆಸಿ ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಯಿತು. ಆದರೆ ವಿಧಿ ಆಟದ ಮುಂದೆ ನಮ್ಮ ಪ್ರಯತ್ನ ಫಲಿಸಲಿಲ್ಲ ಎಂದರು.
ಅದೇ ರೀತಿ ಬೆಲ್ಲದ ಬಾಗೇವಾಡಿಯ ಉಮೇಶ್ ಕತ್ತಿ ನಿವಾಸಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೂಡ ಭೇಟಿ ನೀಡಿ ಕತ್ತಿ ಪತ್ನಿ, ಮಕ್ಕಳಿಗೆ ಸಾಂತ್ವನ ಹೇಳಿದರು. ಈ ವೇಳೆ ಮಾತನಾಡಿದ ಪ್ರಲ್ಹಾದ್ ಜೋಶಿ, ಉಮೇಶ್ ಕತ್ತಿ ಕಳೆದ ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ಭೇಟಿಯಾಗಿದ್ದರು. ಅವರ ಅಕಾಲಿಕ ಸಾವು ನೋವು ತಂದಿದೆ ಎಂದರು.
ಬಾಲಚಂದ್ರ ಜಾರಕಿಹೊಳಿ ಭೇಟಿ
ಅರಭಾವಿ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕೂಡ ಉಮೇಶ್ ಕತ್ತಿ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಬಾಲಚಂದ್ರ ಜಾರಕಿಹೊಳಿ ಜತೆ ಅಣ್ಣನ ಇತ್ತೀಚಿನ ಸ್ವಾರಸ್ಯಕರ ಸಂಗತಿಗಳ ಬಗ್ಗೆ ರಮೇಶ್ ಕತ್ತಿ ಮಾಹಿತಿ ಹಂಚಿಕೊಂಡರು.
“ಒಂದು ತಿಂಗಳ ಅವಧಿಯಲ್ಲಿ ಕ್ಷೇತ್ರದ ಎಲ್ಲ ಹಳ್ಳಿಗಳಿಗೆ ಅಣ್ಣ ಉಮೇಶ್ ಕತ್ತಿ ಸಂಚಾರ ಮಾಡಿದ್ದಾರೆ. ಅಲ್ಲಿ ಸಾರ್ವಜನಿಕರೊಂದಿಗೆ ಅಹವಾಲು ಆಲಿಸಿ, ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಪ್ರತಿ ಹಳ್ಳಿ ಸುತ್ತಿ ಕುಡಿಯುವ ನೀರು, ಕೃಷಿಗೆ ನೀರಾವರಿ, ಸಮುದಾಯ ಭವನ ಸೌಲಭ್ಯವನ್ನು ಕಲ್ಪಿಸಿರುವೆ. ಇನ್ನೂ ಏನಾದರೂ ಕಡಿಮೆ ಆಗಿದ್ದರೆ ಹೇಳಿ” ಎಂದು ಜನರ ಬಳಿಯೇ ಕೇಳುತ್ತಿದ್ದರು ಎಂದು ರಮೇಶ್ ಕತ್ತಿ ಸ್ಮರಿಸಿದ್ದಾರೆ.
ಬಳಿಕ ತೇರದಾಳ ಶಾಸಕ ಸಿದ್ದು ಸವದಿ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಕೂಡ ಆಗಮಿಸಿ ಉಮೇಶ್ ಕತ್ತಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಕತ್ತಿ ನಿವಾಸದತ್ತ ಅಭಿಮಾನಿಗಳ ದಂಡು
ಉಮೇಶ್ ಕತ್ತಿ ಕುಟುಂಬವರಿಗೆ ಸಾಂತ್ವನ ಹೇಳಲು ಬೆಲ್ಲದ ಬಾಗೇವಾಡಿಯತ್ತ ಸಾವಿರಾರು ಅಭಿಮಾನಿಗಳು, ಕಾರ್ಯಕರ್ತರು ಧಾವಿಸಿದ್ದು, ಕತ್ತಿ ಕುಟಂಬದ ನೋವಿನಲ್ಲಿ ಭಾಗಿಯಾಗಿದ್ದಾರೆ. ಅಣ್ಣ ಅಗಲಿದ ನೋವಲ್ಲಿ ಕಣ್ಣೀರು ಹಾಕುತ್ತಿರುವ ರಮೇಶ್ ಕತ್ತಿಯನ್ನು ಅಭಿಮಾನಿಗಳು ತಬ್ಬಿಕೊಂಡು ಸಮಾಧಾನ ಪಡಿಸಿದ್ದಾರೆ.
ಇದನ್ನೂ ಓದಿ | Bharath jodo| ಭಾರತ್ ಜೋಡೋ ಒಳ್ಳೆಯ ಕಾರ್ಯಕ್ರಮ: ಪಾಕಿಸ್ತಾನ, ಬಾಂಗ್ಲಾವನ್ನೂ ಜೋಡಿಸಲಿ ಎಂದ ಈಶ್ವರಪ್ಪ