Site icon Vistara News

ಹಡಬಿಟ್ಟಿ, ಲಂಚ ಹೊಡೆದ ಹಣದಲ್ಲಿ ಬಿಜೆಪಿಯಿಂದ ಜನಸ್ಪಂದನ ಕಾರ್ಯಕ್ರಮ; ಸಿದ್ದರಾಮಯ್ಯ ಕಿಡಿ

ಸಿದ್ದರಾಮಯ್ಯ

ಹುಬ್ಬಳ್ಳಿ: ಬಿಜೆಪಿಯವರು ಹಡಬಿಟ್ಟಿ ಹಣದಲ್ಲಿ ಮತ್ತು ಲಂಚ ಹೊಡೆದ ಹಣದಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ. ರಾಜ್ಯದಲ್ಲಿ ಮಳೆ ಬಂದು ಸಾಕಷ್ಟು ಸಮಸ್ಯೆ ಆಗಿದ್ದಲ್ಲದೆ, ಸುಮಾರು 7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಬೆಂಗಳೂರಿನಲ್ಲೂ ಮಳೆಯಿಂದಾಗಿ ಸಮಸ್ಯೆಯಾಗಿದೆ. ಆದರೆ, ಇವರು ಕಂಡವರ ದುಡ್ಡಲ್ಲಿ ಸಮಾವೇಶ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಪ್ರವಾಹದಿಂದ ಹಾನಿಯುಂಟಾದ ಪ್ರದೇಶಗಳಿಗೆ ಭೇಟಿ ನೀಡುವ ಸಂಬಂಧ ನಾನು ಭೇಟಿ ನೀಡುತ್ತಿದ್ದೇನೆ. ಆದರೆ, ಈ ಸರ್ಕಾರದವರು ಸಂಕಷ್ಟದಲ್ಲಿರುವ ಜನರಿಗೆ ಸ್ಪಂದನೆ ಮಾಡುವುದನ್ನು ಬಿಟ್ಟು ಡ್ಯಾನ್ಸ್ ಮಾಡುತ್ತಿದ್ದಾರೆ ಎಂದು ಇಲ್ಲಿ ಸುದ್ದಿಗಾರರೊಂದಿಗೆ ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಡ್ಯಾನ್ಸ್‌ಗೆ ವ್ಯಂಗ್ಯ

ಉಮೇಶ ಕತ್ತಿಯವರು ಉತ್ತರ ಕರ್ನಾಟಕದ ಪ್ರಭಾವಿ ರಾಜಕಾರಣಿಯಾಗಿದ್ದು, ಅವರದ್ದೇ ಪಕ್ಷದ ಸಚಿವರಾಗಿದ್ದವರು. ಅವರ ನಿಧನದ ಹಿನ್ನೆಲೆಯಲ್ಲಿ ಒಂದು ಕಡೆ ಶೋಕಾಚರಣೆ ಮಾಡುತ್ತೇವೆ ಎಂದು ಹೇಳುತ್ತಾರೆ. ಮತ್ತೊಂದೆಡೆ ಡ್ಯಾನ್ಸ್ ಮಾಡುತ್ತಾರೆ. ಬಿಜೆಪಿಯವರಿಗೆ ಜನರ ಬಗ್ಗೆ ಕಾಳಜಿ ಇಲ್ಲ ದುಡ್ಡು ಹೊಡೆಯುವುದರಲ್ಲಿ ಮಾತ್ರ ಕಾಳಜಿ ಇದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಇದನ್ನೂ ಓದಿ | ಕಾಂಗ್ರೆಸ್‌ ಕಾಲದಲ್ಲಿ ರೈತರ ಪಂಪ್‌ ಸೆಟ್‌ಗೆ ಮೀಟರ್‌ ಅಳವಡಿಸಲು ಮುಂದಾಗಿದ್ದೆವು ಎಂಬ ಮಾಹಿತಿ ಸುಳ್ಳು: ಸಿದ್ದರಾಮಯ್ಯ

ದುಡ್ಡು ಕೊಟ್ಟು ಜನ ಕರೆಸಿದ್ದಾರೆ

ದಾವಣಗೆರೆಯಲ್ಲಿ ನಡೆದ ನನ್ನ ಜನ್ಮದಿನಾಚರಣೆಗೆ ಪ್ರತ್ಯುತ್ತರವಾಗಿ ಬಿಜೆಪಿಯವರು ಜನಸ್ಪಂದನ ಕಾರ್ಯಕ್ರಮ ಮಾಡುತ್ತಿದ್ದಾರೆ. ನನ್ನ ಜನ್ಮದಿನಾಚರಣೆಗೆ ಜನ ತಾವಾಗೇ ಬಂದರು. ಆದರೆ ಬಿಜೆಪಿ ಜನಸ್ಪಂದನಕ್ಕೆ ದುಡ್ಡು ಕೊಟ್ಟು ಕರೆಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಬಿಜೆಪಿಯದ್ದು ಸೇಡಿನ ರಾಜಕಾರಣ

ಪಿಎಸ್‌ಐ ಹಗರಣದಲ್ಲಿ ಶಾಸಕ ಬಸವರಾಜ ದಡೇಸಗೂರು ಆಡಿಯೊ ತಮ್ಮದೇ ಎಂದು ಒಪ್ಪಿಕೊಂಡಿದ್ದಾರೆ. ಈ ಮೂಲಕ ಹಣ ಪಡೆದ ಬಗ್ಗೆ ತಾವೇ ಒಪ್ಪಿಕೊಂಡಂತಾಗಿದೆ. ಅವರ ವಿರುದ್ಧ ಎಫ್‌ಐಆರ್ ದಾಖಲು ಮಾಡಿ ತನಿಖೆ ನಡೆಸಬೇಕು. ಆದರೆ, ಅದನ್ನು ಮಾಡಿಯೇ ಇಲ್ಲ. ಇನ್ನು ನಮ್ಮ ಪಕ್ಷದ ಮುಖಂಡರಾದ ಪ್ರಿಯಾಂಕ್ ಖರ್ಗೆ ಮಾತನಾಡಿದರೆ ನೋಟಿಸ್ ಕೊಡುತ್ತಾರೆ. ಬಿಜೆಪಿಯವರು ಪ್ರತಿಯೊಂದು ವಿಷಯದಲ್ಲೂ ಸೇಡಿನ ರಾಜಕೀಯ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಇದನ್ನೂ ಓದಿ | Bengaluru Rain | ಒತ್ತುವರಿಯಿಂದ ಮಂತ್ರಿಗಳಿಗೆ ಎಷ್ಟು ಸಿಕ್ಕಿದೆ?: ಅಧಿವೇಶನಕ್ಕೆ ವಿಷಯ ಫಿಕ್ಸ್‌ ಎಂದ ಸಿದ್ದರಾಮಯ್ಯ

Exit mobile version