Site icon Vistara News

BKS Varma Death: ವರ್ಮಾ ಅವರದೇ ಒಂದು ವಿಶಿಷ್ಟ ಲೋಕ: ಸಹ ಕಲಾವಿದ ಪ.ಸ. ಕುಮಾರ್‌ ಮನದಾಳದ ಮಾತು

BKS Varma Death

ಬೆಂಗಳೂರು: ಬಿಕೆಎಸ್‌ ವರ್ಮಾ ಅವರ ಶೈಲಿಯಲ್ಲಿ ಚಿತ್ರಿಸುತ್ತಿದ್ದ ಕಲಾವಿದ ದೇಶದಲ್ಲಿ ಇನ್ಯಾರೂ ಇಲ್ಲ. ಅವರು ದೇವಾನುದೇವತೆಗಳ ಚಿತ್ರಗಳನ್ನು, ಪ್ರಕೃತಿಯ ಚಿತ್ರಗಳನ್ನು ತಮ್ಮದೇ ಅದ ರೀತಿಯಲ್ಲಿ ಚಿತ್ರಿಸುತ್ತಿದ್ದರು. ಅಲ್ಲಿ ದೇವತೆಗಳು, ಯಕ್ಷ ಯಕ್ಷಿಯರು, ಪ್ರಕೃತಿಯ ಚಿತ್ರಗಳು- ಹೀಗೆ ಆಕಾಶದ ಸಂಗತಿಗಳು ಹೆಚ್ಚಾಗಿ ಚಿತ್ರಿತವಾಗುತ್ತಿದ್ದವು. ಅವರು ತಮ್ಮದೇ ಆದ ಒಂದು ಭಾವಲೋಕ, ಪುರಾಣಲೋಕ, ನಿಸರ್ಗಲೋಕವನ್ನು ಸೃಷ್ಟಿಸಿದ್ದರು. ಕನ್ನಡದಲ್ಲಿ ಅವರಷ್ಟು ಜನಪ್ರಿಯತೆ ಪಡೆದ ಕಲಾವಿದ ಇನ್ಯಾರೂ ಇಲ್ಲ ಎಂದು ಹಿರಿಯ ಕಲಾವಿದ ಪ.ಸ. ಕುಮಾರ್‌ ಹೇಳಿದ್ದಾರೆ.

ಕಲಾವಿದ ಪ. ಸ ಕುಮಾರ್

ಸೋಮವಾರ ಅಗಲಿದ ಸಹಕಲಾವಿದ ಬಿಕೆಎಸ್‌ ವರ್ಮಾ ಅವರ ಒಡನಾಟದ ನೆನಪುಗಳನ್ನು ಅವರು ʼವಿಸ್ತಾರ ನ್ಯೂಸ್‌ʼ ಜತೆಗೆ ಹಂಚಿಕೊಂಡಿದ್ದಾರೆ. ಅವರ ನೆನಪಿನ ಭಾಗಗಳು ಇಲ್ಲಿವೆ.

ಅವರು ಮತ್ತು ನನ್ನ ನಡುವೆ ಒಂದು ತಮಾಷೆ ಪ್ರಸಂಗ ಇದೆ. ಅವರು ಚಿತ್ರ ಬರೆಯಲು ಆರಂಭಿಸಿದ್ದು ಪ್ರಜಾಮತದಲ್ಲಿ ಕಲಾವಿದರಾಗಿ ಸೇರಿಕೊಂಡು. ಅಲ್ಲಿ ಒಂದು ದಿನ ಅವರು ನಾಯಿಯ ಚಿತ್ರ ಬರೆಯಬೇಕಾಗಿತ್ತು. ಅವರು ತಮ್ಮ ಚಿತ್ರಕ್ಕೆ ಮಾಡೆಲ್‌ ಅಂದರೆ ನಾಯಿಯನ್ನು ಹುಡುಕಿಕೊಂಡು ಕಚೇರಿಯಿಂದ ಹೊರಗೆ ಹೋದರು. ಎಷ್ಟು ಅಲೆದರೂ ಅವರಿಗೆ ನಾಯಿ ಸಿಗಲಿಲ್ಲ. ಕಡೆಗೆ ಸಂಜೆ ಎಲ್ಲೋ ಒಂದು ಕಡೆ ನಾಯಿ ಸಿಕ್ಕಿತು. ಅದರ ಚಿತ್ರ ಬರೆದುಕೊಂಡು ಮರುದಿನ ಬಂದರು. ಕಚೇರಿಯಲ್ಲಿ ಇದು ಅಸಮಾಧಾನ, ಜಗಳಕ್ಕೆ ಕಾರಣವಾಯಿತು. ವರ್ಮಾ ಸಿಟ್ಟಿಗೆದ್ದು ರಾಜೀನಾಮೆ ನೀಡಿದರು. ನಂತರ ಆ ಉದ್ಯೋಗಕ್ಕೆ ನಾನು ಸೇರಿಕೊಂಡೆ.

ಅವರ ಜನಪ್ರಿಯತೆ, ಜನರನ್ನು ವಶಪಡಿಸಿಕೊಳ್ಳುತ್ತಿದ್ದ ಕೌಶಲ್ಯ ಅದ್ಭುತವಾದುದು. ಒಂದು ಸಲ ಅವರ ಜೊತೆಗೆ ನಾವು ಸುಮಾರು ಕಲಾವಿದರು ಕೆಜಿಎಫ್‌ಗೆ ಹೋಗಿದ್ದೆವು. ಅಲ್ಲಿ ಕಲಾಮೇಳವಿತ್ತು. ಹಿಂದಿನ ದಿನ ಕೆಲವು ಜನ ಬಂದರು. ಅವರ ಕೆಲವು ಚಿತ್ರಗಳನ್ನು ವರ್ಮಾ ಮಾಡಿದರು. ಅದು ಅಲ್ಲೇ ಮಾರಾಟವಾಯಿತು. ಮರುದಿನ ಬೆಳಗ್ಗೆ, ನೀವು ನಂಬಲಾರಿರಿ, ಸಾವಿರಾರು ಮಂದಿ ಸೇರಿದ್ದರು. ವರ್ಮಾ ಅವರನ್ನು ಹೊರಗೆ ಕಳಿಸಿ ಎಂದು ಒತ್ತಡ. ಯಾಕೆ ಅಂದರೆ, ಚಿತ್ರ ರಚಿಸಿಕೊಡಿ ಅಂತ. ಅಷ್ಟೂ ಮಂದಿಗೆ ಸ್ಥಳದಲ್ಲಿಯೇ ತತ್‌ಕ್ಷಣ ವರ್ಮಾ ಚಿತ್ರ ರಚಿಸಿಕೊಟ್ಟರು. ಸಾಕಷ್ಟು ಹಣ ಸಂಗ್ರಹವಾಯಿತು.

ಲೇಪಾಕ್ಷಿ ಪ್ರವಾಸದಲ್ಲಿ ಬಿಕೆಎಸ್‌ ವರ್ಮಾ, ಕುಮಾರ್‌ ಮತ್ತಿತರರು

ಇದನ್ನೂ ಓದಿ: BKS Varma Death News : ಖ್ಯಾತ ಕಲಾವಿದ ಬಿ.ಕೆ.ಎಸ್. ವರ್ಮಾ ನಿಧನ

ನಲುವತ್ತು ವರ್ಷಗಳಿಂದಲೂ ನನ್ನ ಆತ್ಮೀಯರಾಗಿದ್ದರು. ಮಹಾ ವಿನಯವಂತ. ಎಷ್ಟೇ ಜನಪ್ರಿಯತೆ ಗಳಿಸಿದ್ದರೂ ಅದು ಅವರ ತಲೆಯನ್ನೇರಿ ಕೂತಿರಲಿಲ್ಲ. ಎಲ್ಲರ ಜತೆಗೂ ಬಹಳ ವಿನಯವಂತರಾಗಿ ಇರುತ್ತಿದ್ದರು. ಇತ್ತೀಚೆಗೆ ತಮ್ಮ ಜೀವನದ ಅನುಭವಗಳ ಚಿತ್ರಗಳನ್ನು ಮಾಡಬೇಕು, ಅದನ್ನು ಒಂದು ದೊಡ್ಡ ಪ್ರದರ್ಶನ ಮಾಡಬೇಕು ಎಂದುಕೊಂಡಿದ್ದರು. ಅವರು ಜಗತ್ತಿನಾದ್ಯಂತ ತುಂಬಾ ಪ್ರವಾಸ ಮಾಡಿದ್ದಾರೆ. ಆ ಅನುಭವಗಳೆಲ್ಲ ಅವರಲ್ಲಿದ್ದವು. ಆದರೆ ಅದನ್ನು ಮಾಡುವ ಆಸೆ ಹಾಗೇ ಉಳಿದುಹೋಯಿತು. ಇತ್ತೀಚೆಗೆ, ಅವರಿಗೆ ಬೈಪಾಸ್‌ ಹಾರ್ಟ್‌ ಸರ್ಜರಿ ಆದ ಬಳಿಕ ಒಮ್ಮೆ ಅವರದೇ ಖರ್ಚಿನಲ್ಲಿ ನಾವು ಅನೇಕ ಕಲಾವಿದರನ್ನು ಲೇಪಾಕ್ಷಿಗೆ ಕರೆದುಕೊಂಡು ಹೋಗಿದ್ದರು. ಎಲ್ಲ ಖರ್ಚುವೆಚ್ಚಗಳನ್ನೂ ಅವರೇ ನೋಡಿಕೊಂಡರು. ಹಾಗೆ ಮಾಡಬೇಕೆಂದು ಅವರಿಗೆ ಯಾಕೆ ಅನಿಸಿತೋ ಗೊತ್ತಿಲ್ಲ.

ಅವರು ಕೆಲಸ ಮಾಡುತ್ತಿದ್ದ ರೀತಿ ಮಾತ್ರ ಅದ್ಭುತ. ಬೆಳಗ್ಗೆ ಎಂಟು ಗಂಟೆಗೆ ಕೆಲಸಕ್ಕೆ ಕೂರುತ್ತಿದ್ದರು, ರಾತ್ರಿ ಎಂಟು ಗಂಟೆಯವರೆಗೂ ಅದನ್ನೇ ಮಾಡುತ್ತಿದ್ದರು. ಜೀವನದ ಎಂಬತ್ತು ಪ್ರತಿಶತ ಭಾಗ ಕೆಲಸವನ್ನೇ ಮಾಡುತ್ತಾ ಕಳೆದಿದ್ದಾರೆ ಅಂದುಕೊಳ್ಳಬಹುದು. ಆದರೆ ಆರಂಭದ ದಿನಗಳಲ್ಲಿ ಅವರ ಕೆಲಸಕ್ಕೆ ಸಾಕಷ್ಟು ಪ್ರತಿಫಲ ಸಿಕ್ಕಿರಲಿಲ್ಲ. ತುಂಬಾ ಕೆಲಸ ಮಾಡಿಸಿಕೊಂಡ ಹಲವರು ಅವರಿಗೆ ಹಣ ನೀಡದೆ ಮೋಸ ಮಾಡಿದ್ದರು. ಇತ್ತೀಚೆಗೆ ಅದರಿಂದ ಪಾಠ ಕಲಿತಿದ್ದರು. ಇತ್ತೀಚೆಗಿನ ಅವರ ಕೃತಿಗಳು ಸಾಕಷ್ಟು ಗಳಿಕೆ ತಂದುಕೊಟ್ಟವು ಎಂದು ಪ.ಸ. ಕುಮಾರ್‌ ನೆನಪಿಸಿಕೊಂಡರು.

ಇದನ್ನೂ ಓದಿ: BKS Varma Death: ಬಿಕೆಎಸ್ ವರ್ಮಾ ಅವರಿಂದಲೇ ರಾಘವೇಂದ್ರ ಸ್ವಾಮಿಗಳ ಚಿತ್ರ ಬರೆಸಿದ್ದರು ರಜನಿಕಾಂತ್‌

Exit mobile version