ಬೆಂಗಳೂರು: ಕೋಡಿಹಳ್ಳಿ ಚಂದ್ರಶೇಖರ್ ಕಿಕ್‌ಬ್ಯಾಕ್ ಆರೋಪದ ಕುರಿತು ಸ್ಪಷ್ಟನೆ ನೀಡಲು ಬಂದಿದ್ದ ಭಾರತೀಯ ಕಿಸಾನ್ ಯೂನಿಯನ್ ಮಾಜಿ ಮುಖಂಡ ರಾಕೇಶ್ ಟಿಕಾಯತ್ ಮುಖಕ್ಕೆ ವ್ಯಕ್ತಿಯೊಬ್ಬ ಮಸಿ ಬಳಿದಿದ್ದಾನೆ. ಇವರ ಜತೆ ಬಂದಿದ್ದ ಯದುವೀರ್ ಸಿಂಗ್ ಎಂಬುವರನ್ನು ಕುರ್ಚಿಗಳಿಂದ ಹಲ್ಲೆ ನಡೆಸಲಾಗಿದೆ. ಬೆಂಗಳೂರಿನ ಗಾಂಧಿ ಭವನದಲ್ಲಿ ಸುದ್ದಿಗೋಷ್ಠಿ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಶನಿವಾರವಷ್ಟೇ ಕೋಡಿಹಳ್ಳಿ ಚಂದ್ರಶೇಖರ್ ಮುಖಕ್ಕೆ ಮಸಿ ಬಳಿಯಲಾಗಿತ್ತು. 2021ರಲ್ಲಿ ನಡೆದ ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರದ ವೇಳೆ ಹೋರಟದ ನೇತೃತ್ವ ವಹಿಸಿದ್ದ ನೌಕರರ ಸಂಘದ ಗೌರವಾಧ್ಯಕ್ಷರಾಗಿದ್ದ ಕೋಡಿಹಳ್ಳಿ ಚಂದ್ರಶೇಖರ್ ಹೋರಾಟ ನಿಲ್ಲಿಸಲು ಕಿಕ್‌ಬ್ಯಾಕ್ ಪಡೆದುಕೊಂಡಿದ್ದರು ಎಂದು ಸ್ಟಿಂಗ್ ಆಪರೇಷನ್ ನಡೆಸಿದ ವೇಳೆ ಬೆಳಕಿಗೆ ಬಂದಿದೆ ಎಂದು ಖಾಸಗಿ ಸುದ್ದಿವಾಹಿನಿಯೊಂದು ಆರೋಪಿಸಿತ್ತು. ಈ ಕುರಿತು ಸಿಬಿಐ ತನಿಖೆ ನಡೆಸಬೇಕೆಂದು ನೌಕರರ ಸಂಘಟನೆ ಆಗ್ರಹಿಸಿತ್ತು.
ಇದನ್ನೂ ಓದಿ | ಕೋಡಿಹಳ್ಳಿ ಚಂದ್ರಶೇಖರ್ ಮೇಲೆ ಮಸಿ ಎರಚಿ ಪ್ರತಿಭಟನೆ- ಮಾರಾಮಾರಿ
ಈ ಬಗ್ಗೆ ಸ್ಪಷ್ಟನೆ ನೀಡಲು ಕೋಡಿಹಳ್ಳಿ ಚಂದ್ರಶೇಖರ್ ಪತ್ರಿಕಾಗೋಷ್ಠಿ ಕರೆದಿದ್ದರು. ಪತ್ರಿಕಾಗೋಷ್ಠಿ ನಡೆಸಲು ಪ್ರೆಸ್‌ಕ್ಲಬ್‌ಗೆ ಆಗಮಿಸಿದ್ದ ಕೋಡಿಹಳ್ಳಿ ಚಂದ್ರಶೇಖರ್ ಮೇಲೆ ಮಸಿ ಎರಚಲಾಗಿತ್ತು ಈ ಸಂದರ್ಭದಲ್ಲಿ ಚಂದ್ರಶೇಖರ್ ಜತೆಗಿದ್ದ ಕಾರ್ಯಕರ್ತರು ಮತ್ತು ಪ್ರತಿಭಟನಾಗಾರರ ನಡುವೆ ಹೊಡೆದಾಟ ನಡೆದಿತ್ತು.
ಇದೇ ವಿಚಾರದಲ್ಲಿ ರಾಕೇಶ್ ಟಿಕಾಯತ್ ಬೆಂಗಳೂರಿಗೆ ಆಗಮಿಸಿದ್ದರು. ಕೋಡಿಹಳ್ಳಿ ಅವರಿಗೂ ಕಿಸಾನ್ ಯೂನಿಯನ್‌ಗೂ, ರೈತ ಹೋರಾಟಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡುವ ಸಲುವಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ʼರೈತ ಹೋರಾಟ ಅವಲೋಕನ ಮತ್ತು ಸ್ಪಷ್ಟೀಕರಣ ಸಭೆʼ ಏರ್ಪಡಿಸಲಾಗಿತ್ತು.
ಈ ಸಮಯದಲ್ಲಿ ಪತ್ರಕರ್ತರ ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ವೇದಿಕೆ ಮೇಲೇರಿದ್ದಾನೆ. ರಾಕೇಶ್ ಟಿಕಾಯತ್ ಹಾಗೂ ಯದುವೀರ್ ಮೇಲೆ ಮೇಲೆ ಮಾಧ್ಯಮದ ಮೈಕ್‌ನಿಂದ ಹಲ್ಲೆ ಮಾಡಿದ್ದಾನೆ. ಆತನನ್ನು ಬಿಡಿಸಲು ಮುಂದಾದಾಗ ಮಸಿಯನ್ನು ರಾಕೇಶ್ ಟಿಕಾಯತ್ ಮುಖಕ್ಕೆ ಎರಚಿದ್ದಾನೆ.
ಈತನನ್ನು ಭರತ್ ಶೆಟ್ಟಿ ಎಂದು ಗುರುತಿಸಲಾಗಿದೆ. ಈತನ ಜತೆಗೆ ಮತ್ತೊಬ್ಬ ವ್ಯಕ್ತಿಯೂ ಇದ್ದದ್ದು ಸಭಾಂಗಣದಲ್ಲಿದ್ದವರಿಗೆ ತಿಳಿದನಂತರ ಆತನನ್ನೂ ಹಿಡಿದಿದ್ದಾರೆ. ಇಬ್ಬರನ್ನೂ ಅಲ್ಲಿದ್ದ ಕುರ್ಚಿಗಳಿಂದ ಹೊಡೆದಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರನ್ನೂ ಹೊಯ್ಸಳ ವಾಹನದಲ್ಲಿ ಕರೆದೊಯ್ದಿದ್ದಾರೆ.
ಪೊಲೀಸರು ವಾಹನದಲ್ಲಿ ಕರೆದೊಯ್ಯುವ ವೇಳೆ, ಮೋದಿಗೆ ಜೈಕಾರ ಹಾಕಿದ್ದಾನೆ. ನಕಲಿ ಹೋರಾಟಗಾರ ಟಿಯಾಯತ್‌ಗೆ ಧಿಕ್ಕಾರ ಎಂದು ಘೋಷಣೆ ಕೂಗಿದ್ದಾನೆ.
ಇದನ್ನೂ ಓದಿ | ವಿಸ್ತಾರ Details: ಡೀಲ್ ಸುಳಿಯಲ್ಲಿ ರೈತ ನಾಯಕ ಕೋಡಿಹಳ್ಳಿ; ಆಪ್ ಈಗ ಏನು ಮಾಡಬಹುದು?