Site icon Vistara News

Blackmail | ಖಾಸಗಿ ವಿಡಿಯೊ: ಸಿಸಿಬಿ ಪೊಲೀಸರ ಹೆಸರಿನಲ್ಲಿ ಗೆಳೆಯನಿಗೇ ಖೆಡ್ಡಾ! 15 ಲಕ್ಷ ರೂ., ಚಿನ್ನ ಸುಲಿಗೆ!

blackmail

ಬೆಂಗಳೂರು: ಯಾರೋ ಫೋನ್‌ ಮಾಡಿ, ವಿಡಿಯೊ ಮೂಲಕ ಮಾತನಾಡಿ, ಆಮಿಷ ಒಡ್ಡಿ ಹನಿ ಟ್ರ್ಯಾಪ್‌ ಮಾಡೋದು ಕೇಳಿದ್ದೇವೆ. ಪೊಲೀಸರ ಹೆಸರಿನಲ್ಲಿ ದುಡ್ಡು ವಸೂಲಿಯೂ ಹೊಸತಲ್ಲ. ಆದರೆ, ಇಲ್ಲೊಂದು ಯುವಕರ ತಂಡ ತಮ್ಮ ಗೆಳೆಯನನ್ನೇ ಬ್ಲ್ಯಾಕ್‌ ಮೇಲ್‌ ಮಾಡಿ ೧೫ ಲಕ್ಷ ರೂ. ಸುಲಿಗೆ ಮಾಡಿ ಸಿಕ್ಕಿಹಾಕಿಕೊಂಡಿದೆ. ಇದು ತುಂಬಾ ನಂಬಿಕೆ ಇಟ್ಟಿದ್ದ ಗೆಳೆಯರೇ ಯುವಕನ ಸಂಕಷ್ಟದ ಸ್ಥಿತಿಯನ್ನು ಎನ್‌ಕ್ಯಾಶ್‌ ಮಾಡಿಕೊಂಡ ವಂಚನೆಯ ಕಥೆ.

ಏನಿದು ಪ್ರಕರಣ?
ಚಾಮರಾಜಪೇಟೆಯ ಚಿನ್ನಾಭರಣ ವ್ಯಾಪಾರಿಯೊಬ್ಬರ ಪುತ್ರನಿಗೆ ಇತ್ತೀಚೆಗೆ ಇನ್‌ಸ್ಟಾ ಗ್ರಾಂನಲ್ಲಿ ಯುವತಿಯೊಬ್ಬಳ ಪರಿಚಯ ಆಗಿತ್ತು. ಇಬ್ಬರ ನಡುವೆ ಆತ್ಮೀಯತೆ ಬೆಳೆದು ಪರಸ್ಪರ ಚಾಟಿಂಗ್’ ಮಾಡಿಕೊಂಡು ಖಾಸಗಿಯಾಗಿ ವಿಡಿಯೋ‌ಕಾಲ್ ನಲ್ಲಿ ಮಾತನಾಡಿಕೊಂಡಿದ್ದರು.

ಕೆಲದಿನಗಳ ಬಳಿಕ ಯುವಕ ಮತ್ತು ಯುವತಿ ಗಲಾಟೆ‌ ಮಾಡಿಕೊಂಡು ಸಂಬಂಧ ಹಳಸಿತ್ತು. ಈ‌ ವಿಚಾರವನ್ನು ಚಿನ್ನದ ವ್ಯಾಪಾರಿಯ ಪುತ್ರ ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದ. ಮಾತ್ರವಲ್ಲ, ಖಾಸಗಿ ವಿಡಿಯೊಗಳ ಫೋಟೊಗಳನ್ನು ಶೇರ್‌ ಮಾಡಿಕೊಂಡಿದ್ದ.

ಸ್ನೇಹಿತ‌ನ ಖಾಸಗಿ ವಿಡಿಯೋ ಸ್ಕ್ರೀನ್ ಶಾರ್ಟ್‌ಗಳನ್ನೇ ಬಂಡವಾಳ ಮಾಡಿಕೊಂಡ‌ ಸ್ನೇಹಿತರು ಅವನಿಂದ ದುಡ್ಡು ಕೀಳಲು ಹವಣಿಸಿದರು. ಯುವತಿ ಜತೆ ಖಾಸಗಿ ವಿಡಿಯೊ ಚಾಟ್ ಮಾಡಿರುವ ವಿಚಾರ ಸಿಸಿಬಿ ಪೊಲೀಸರಿಗೆ ಗೊತ್ತಾಗಿದೆ. ಅವರು ನಿನ್ನನ್ನು ಬಂಧಿಸುತ್ತಾರೆ ಎಂದು ಬ್ಲ್ಯಾಕ್ ಮೇಲ್ ಮಾಡಲು ಶುರು ಮಾಡಿದರು.

ನಮಗೆ ಐಪಿಎಸ್ ಅಧಿಕಾರಿಗಳು ಗೊತ್ತು. ಅವರ ಪರಿಚಯವಿದೆ. ಹೀಗಾಗಿ ವಿವಾದವನ್ನು ಸೆಟಲ್‌ಮೆಂಟ್ ಮಾಡೋಣ ಎಂದರು. ಹಾಗೆ ಸೆಟಲ್‌ಮೆಂಟ್‌ಗೆ ಹಣ ಕೇಳುತ್ತಾರೆ ಎಂದು ದುಡ್ಡಿಗೆ ಬೇಡಿಕೆ ಇಟ್ಟರು.

ಮೊದಲು 99 ಗ್ರಾಂ ತೂಕದ ಚಿನ್ನದ ಬಿಸ್ಕತ್ತನ್ನು ಸ್ನೇಹಿತರಿಗೆ ನೀಡಿದ್ದ ಈ ಯುವಕ. ಆದರೆ, ಅಷ್ಟಕ್ಕೇ ತೃಪ್ತರಾಗದ ಗೆಳೆಯರು ಸಿಸಿಬಿ ಪೊಲೀಸರು ಇನ್ನೂ ಹೆಚ್ಚಿನ ಹಣ ಕೇಳುತ್ತಿದ್ದಾರೆ ಎಂದು ಹೆದರಿಸಿ 3.50 ಲಕ್ಷ ರೂ. ಪಡೆದಿದ್ದರು. ಬ್ಲ್ಯಾಕ್‌ಮೇಲ್ ಮಾಡಿ ಸಿಸಿಬಿ ಪೊಲೀಸರ ಹೆಸರಲ್ಲಿ ಹಂತ ಹಂತವಾಗಿ 15.90 ಲಕ್ಷ ರೂ. ಪಡೆದರು.

ಈ ನಡುವೆ ಯುವಕನಿಗೆ ತನ್ನ ಸ್ನೇಹಿತರ ಮೇಲೆಯೇ ಅನುಮಾನ ಬಂತು. ಕೊನೆಗೆ ಸಿಸಿಬಿ ಪೊಲೀಸರಲ್ಲಿ ಬೇರೆಯವರ ಮೂಲಕ ವಿಚಾರಿಸಿದಾಗ ಅಲ್ಲಿ ಇಂಥ ಪ್ರಕರಣವೇ ಇಲ್ಲ ಎನ್ನುವುದು ಗೊತ್ತಾಯಿತು!

ಇದಾದ ಬಳಿಕ ಆತ ಈಗ ಗೆಳೆಯರು ಹಣ ಪಡೆದು ಬ್ಲ್ಯಾಕ್ ಮೇಲ್ ಮಾಡಿರುವ ಬಗ್ಗೆ ತಿಲಕ್‌ ನಗರ ಠಾಣೆಗೆ ದೂರು ನೀಡಿದ. ಪ್ರಕರಣ ಈಗ ತಿಲಕ್ ನಗರ ಠಾಣೆಯಿಂದ ಚಾಮರಾಜಪೇಟೆ ಗೆ ವರ್ಗಾವಣೆ ಮಾಡಲಾಗಿದೆ. ಪೊಲೀಸರು ಸುನಿಲ್, ಹೇಮಂತ್, ಪ್ರವೀಣ್ ಎಂಬುವವರ ವಿರುದ್ಧ ಎಫ್ ಐಆರ್ ದಾಖಲಿಸಿ ಹುಡುಕಾಟ ಆರಂಭಿಸಿದ್ದಾರೆ.

Exit mobile version