ಮೈಸೂರು: ಸ್ವಾತಂತ್ರ್ಯ ವೀರ ಸಾವರ್ಕರ್ ಕುರಿತು ಮಾಜಿ ಸಿದ್ದರಾಮಯ್ಯ ಅವರ ಮಾತಿಗೆ, ಕಾಂಗ್ರೆಸ್ ನಾಯಕಿ ಇಂದಿರಾ ಗಾಂಧಿ ಅವರ ಮಾತಿನ ಮೂಲಕವೇ ಪ್ರತಿಕ್ರಿಯೆಯನ್ನು ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ನೀಡಿದ್ದಾರೆ.
ಮೈಸೂರಿನ ಸಾವರ್ಕರ್ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾಗಿರುವ ಎಂಟು ದಿನಗಳ ಸಾವರ್ಕರ್ ರಥಯಾತ್ರೆಗೆ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಚಾಲನೆ ನೀಡಿ ಬಿ.ಎಸ್. ಯಡಿಯೂರಪ್ಪ ಮಾತನಾಡಿದರು.
ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮೈಸೂರಿಗೆ ವಿಶಿಷ್ಠ ಸ್ಥಾನವಿದೆ. ಇಂತಹ ಪುಣ್ಯಭೂಮಿಯಲ್ಲಿ ಸಾವರ್ಕರ್ ಯಾತ್ರೆಗೆ ಚಾಲನೆ ನೀಡುತ್ತಿರುವುದು ನನ್ನ ಸೌಭಾಗ್ಯ. ಎಂಟು ದಿನಗಳ ಯಾತ್ರೆ ಅಷ್ಟ ದಿಕ್ಕುಗಳಲ್ಲೂ ಸಾವರ್ಕರ್ ಅವರ ಜೀವನ, ದೇಶಪ್ರೇಮದ ಸಂದೇಶವನ್ನು ನೀಡಲಿ ಎಂದು ಆಶಿಸಿದ ಯಡಿಯೂರಪ್ಪ, ಕನ್ನಡ ನೆಲದಲ್ಲಿ ಸಾವರ್ಕರ್ ವಿಚಾರಕ್ಕೆ ವಿರೋಧ ವ್ಯಕ್ತವಾಗುತ್ತಿರುವುದಕ್ಕೆ ನೋವು ವ್ಯಕ್ತಪಡಿಸಿದರು.
ದೇಶ ಇಂದು ಮಹತ್ವದ ಕಾಲಘಟ್ಟದಲ್ಲಿದೆ. ಒಂದೆಡೆ ದೇಶ ವಿಶ್ವಗುರುವಾಗುವತ್ತ ದಾಪುಗಾಲಿಡುತ್ತಿದೆ, ಇನ್ನೊಂದೆಡೆ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದೇವೆ. ದೇಶದ ಮೌಲ್ಯಗಳಿಗೆ ಮಸಿ ಬಳಿಯುವ ಕೆಲಸ ಕೆಲವರಿಂದ ನಡೆಯುತ್ತಿದೆ. ಸಾವರ್ಕರ್ ಸಂದೇಶವನ್ನು ಪ್ರತಿ ಮನೆ, ಮನಗಳಿಗೆ ತಲುಪಿಸಬೇಕು ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ತಿಳಿಸಿದ್ದರು. ದೇಶದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಅವರಿಂದ ವೀರ ಎಂದು ಕರೆಸಿಕೊಂಡ ಸಾವರ್ಕರ್ ಅವರ ವಿರುದ್ಧ ಕನ್ನಡ ನಾಡಿನಲ್ಲಿ ಅಪಪ್ರಚಾರ ನಡೆಯುತ್ತಿದೆ. ಸಾವರ್ಕರ್ ಅವರನ್ನು ರಿಮಾರ್ಕೆಬಲ್ ಸನ್ ಆಫ್ ಇಂಡಿಯಾ ಎಂದಿದ್ದ ಇಂದಿರಾ ಗಾಂಧಿ, ಸಾವರ್ಕರ್ ಸ್ಮಾರಕಕ್ಕೆ ಸ್ವಂತ ಹಣವನ್ನೂ ನೀಡಿದ್ದರು, ಅಂಚೆ ಚೀಟಿಯನ್ನೂ ಬಿಡುಗಡೆ ಮಾಡಿದ್ದರು ಎಂದರು.
ಇದನ್ನೂ ಓದಿ | Savarkar’s Rath Yatra| ಸಿದ್ದರಾಮಯ್ಯ ತವರಿನಲ್ಲಿ ಸಾವರ್ಕರ್ ರಥಯಾತ್ರೆಗೆ ಬಿಎಸ್‌ವೈ ಚಾಲನೆ
ಸಾವರ್ಕರ್ ಅವರನ್ನು ನಿಂದಿಸುವವರಿಗೆ ಬಸವಣ್ಣನವರ ವಚನದಿಂದಲೇ ಉತ್ತರ ನೀಡಿದ ಬಿ.ಎಸ್. ಯಡಿಯೂರಪ್ಪ, ಇವನಾರವ, ಇವನಾರವ ಎನ್ನದಿರಯ್ಯ, ಇವ ನಮ್ಮವ, ಇವ ನಮ್ಮವ ಎಂದೆನಿಸಯ್ಯ ಎಂಬ ಭಾವನೆ ನಮ್ಮಲ್ಲಿ ಮೂಡಬೇಕು. ಬ್ರಿಟಿಷರ ಎದೆಯನ್ನು ನಡುಗಿಸಿದ ಸಾವರ್ಕರ್ ಅವರನ್ನು ಸ್ವಾತಂತ್ರ್ಯ ಹೋರಾಟಗಾರರೆಂದು ಕರೆಯಲು ಹಿಂಜರಿಯುತ್ತಿರುವವರು ಬಸವಣ್ಣನವರ ವಚನ ಓದಬೇಕು. ಕ್ಷುಲ್ಲಕ ರಾಜಕಾರಣಕ್ಕಾಗಿ ಸಾವರ್ಕರ್ ವಿರೋಧಿಸುವುದು ಅಕ್ಷಮ್ಯ ಅಪರಾಧ ಎಂದರು.
ಸಾವರ್ಕರ್ ಅವರು ಮೃತಪಟ್ಟಾಗ, ದೇಶ ತನ್ನ ಹೆಮ್ಮೆಯ ಪುತ್ರನನ್ನು ಕಳೆದುಕೊಂಡಿದೆ ಎಂದು ರಾಮ ಮನೋಹರ ಲೋಹಿಯಾ ಅವರು ಹೇಳಿದ್ದರು ಎಂದು ಸಿದ್ದರಾಮಯ್ಯ ಅವರಿಗೆ ತಿವಿದ ಯಡಿಯೂರಪ್ಪ, ಸಾವರ್ಕರ್ ಅಂತಿಮ ಯಾತ್ರೆಯಲ್ಲಿ ಕಾಂಗ್ರೆಸ್, ಕಮ್ಯುನಿಸ್ಟ್ ನಾಕರೆಲ್ಲರೂ ಭಾಗವಹಿಸಿದ್ದರು. ಇಡೀ ಮುಂಬೈ ಭಾವನಾತ್ಮಕ ವಿದಾಯ ಹೇಳಿತ್ತು. ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಆಚಾರ್ಯ ಕೃಪಲಾನಿಯವರೂ ಸಾವರ್ಕರರನ್ನು ಶ್ಲಾಘಿಸಿದ್ದರು ಎಂದು ಹೇಳಿದರು.
ಮೈಸೂರಿನಿಂದ ಆರಂಭವಾಗುತ್ತಿರುವ ಸಾವರ್ಕರ್ ರಥಯಾತ್ರೆ ಕೇವಲ ರಥಯಾತ್ರೆ ಅಲ್ಲ. ದೇಶದೊಳಗಿನ ವಿದ್ರೋಹಿಗಳಿಗೆ ಎಚ್ಚರಿಕೆ, ಸ್ವಾಭಿಮಾನದ ಕಿಚ್ಚು ಹೊತ್ತಿಸುವ ಪ್ರಯತ್ನ. ಭಾರತ ಮಾತೆಯ ರಕ್ಷಣೆಗಾಗಿ ನಾವಿನ್ನೂ ಬದುಕಿದ್ದೇನೆ ಎನ್ನುವ ಸಂದೇಶ ನೀಡುವ ವೀರ ಸಾವರ್ಕರ್ ರಥಯಾತ್ರೆಯು ದುಷ್ಟ ಸಂಹಾರಕ್ಕಾಗಿ, ರಾಮರಾಜ್ಯದ ಸಾಕಾರಕ್ಕಾಗಿ ನಡೆಯಲಿ ಎಂದು ಆಶಿಸಿದರು.
ಇದನ್ನೂ ಓದಿ | Mysore : ಸಾವರ್ಕರ್ ರಥಯಾತ್ರೆಗೆ ಪೊಲೀಸರ ಸರ್ಪಗಾವಲು