ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ ಒಬಿಸಿ 3ಬಿ ಮೀಸಲಾತಿ ಕೊಟ್ಟಿದ್ದೇ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ. ಅವರು ಈ ಮೀಸಲಾತಿ ಪರವಾಗಿಯೇ ಇದ್ದಾರೆ. ಸದನದಲ್ಲೂ ಸಹ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ನಮ್ಮ ಮೇಲೆ ರಾಜಕೀಯ ಆರೋಪ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಪಂಚಮಸಾಲಿ ಸಮುದಾಯಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಅವರೇ ಅಡ್ಡಿ ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಯತ್ನಾಳ್ ಅವರಿಗೆ ನಮ್ಮ ಮೇಲೆ ಪ್ರೀತಿ ಜಾಸ್ತಿ. ಆಗಾಗ ನಮ್ಮ ಹೆಸರನ್ನು ಬಳಸುತ್ತಾರೆ. ಆದರೆ, ಅವರ ಆರೋಪದಲ್ಲಿ ಹುರುಳಿಲ್ಲ. ಯಡಿಯೂರಪ್ಪ ಅವರು ಪಂಚಮಸಾಲಿಗಳ ಪರವಾಗಿಯೇ ಇದ್ದಾರೆ. ಇದನ್ನು ಸದನದಲ್ಲೂ ಪ್ರಸ್ತಾಪ ಮಾಡುವ ಮೂಲಕ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಯಡಿಯೂರಪ್ಪ ಅವರನ್ನು ರಾಜ್ಯದ ಜನ ಜಾತ್ಯತೀತವಾಗಿ ಒಪ್ಪಿದ್ದಾರೆ. ಅವರು ಎಲ್ಲ ಸಮುದಾಯಗಳ ಪರ ಕೆಲಸ ಮಾಡಿದ್ದಾರೆ. ಆದರೆ, ಕಾಂಗ್ರೆಸ್ ವಿನಾಕಾರಣ ರಾಜಕಾರಣ ಮಾಡುತ್ತಿದೆ. ಆದರೆ ಈಗ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡುವ ಮೂಲಕ ನಮಗಷ್ಟೇ ಅಲ್ಲ, ಪಕ್ಷಕ್ಕೂ ಡ್ಯಾಮೇಜ್ ಮಾಡುತ್ತಿದ್ದಾರೆ ಎಂದು ವಿಜಯೇಂದ್ರ ಅಸಮಾಧಾನ ಹೊರಹಾಕಿದರು.
ಇದು ಕಾಂಗ್ರೆಸ್ ಪಿತೂರಿ
ಯಡಿಯೂರಪ್ಪ ಅವರು ಸದಾ ಪಂಚಮಸಾಲಿ ಮೀಸಲಾತಿಯ ಪರವಾಗಿದ್ದವರು. ಇದು ಕಾಂಗ್ರೆಸ್ ಪಿತೂರಿಯಾಗಿದೆ. ಪಂಚಮಸಾಲಿ ಸಮುದಾಯದವರನ್ನು ಎತ್ತಿಕಟ್ಟುವ ಕೆಲಸವನ್ನು ಮಾಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವನ್ನು ತಂದರು. ಲಿಂಗಾಯತ ಸಮುದಾಯಕ್ಕೆ ಒಳ್ಳೆಯದು ಮಾಡುವ ಉದ್ದೇಶ ಇದರ ಹಿಂದೆ ಇರಲಿಲ್ಲ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ತಂದರು ಎಂದು ಸುದ್ದಿಗಾರರಿಗೆ ವಿಜಯೇಂದ್ರ ಉತ್ತರಿಸಿದರು.
ಇದನ್ನೂ ಓದಿ | ಪಂಚಮಸಾಲಿ ಮೀಸಲಾತಿಗೆ ಬಿ.ಎಸ್. ಯಡಿಯೂರಪ್ಪ ಅಡ್ಡ ಬಂದಿದ್ದಾರ?: ಈ ಕುರಿತು ಸಚಿವ ನಿರಾಣಿ ಸ್ಪಷ್ಟನೆ
30 ಕೇಸ್ ಆಗಿದೆ, 31ನೇ ಕೇಸನ್ನೂ ಎದುರಿಸುತ್ತೇವೆ- ವಿಜಯೇಂದ್ರ
ಬಿಡಿಎ ವಸತಿ ಯೋಜನೆಯಡಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಕೇಳಿಬಂದಿರುವ ಅಕ್ರಮ ಆರೋಪದಲ್ಲಿ ಕೇಸ್ ವಿಚಾರದಲ್ಲಿ ಯಾವುದೇ ಹುರುಳಿಲ್ಲ. ರಾಜ್ಯದ ಇತಿಹಾಸದಲ್ಲಿ ಒಬ್ಬ ಮಾಜಿ ಮುಖ್ಯಮಂತ್ರಿ ವಿರುದ್ಧ 28, 30 ಕ್ರಿಮಿನಲ್ ಕೇಸ್ ಹಾಕಿದ ಉದಾಹರಣೆಯೇ ಇಲ್ಲ. ನಾವು ಬಹುತೇಕ ಎಲ್ಲ ಕೇಸ್‌ಗಳಲ್ಲಿ ಜಯಶಾಲಿ ಆಗಿದ್ದೇವೆ. ಈಗ ಮೂವತ್ತೊಂದನೇ ಕೇಸ್ ಅನ್ನೂ ಅಷ್ಟೇ ಸಮರ್ಥವಾಗಿ ಎದುರಿಸುತ್ತೇವೆ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.
ಈ ಪ್ರಕರಣದಲ್ಲಿ ಯಡಿಯೂರಪ್ಪ ಅವರ ವಿರುದ್ಧದ ಲೋಕಾಯುಕ್ತ ತನಿಖೆಗೆ ಸುಪ್ರೀಂ ಕೋರ್ಟ್ ಸ್ಟೇ ಕೊಟ್ಟಿದೆ. ಯಾವ ಪುಣ್ಯಾತ್ಮ ಯಡಿಯೂರಪ್ಪ ಕುಟುಂಬದ ವಿರುದ್ಧ ಪಿತೂರಿ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡಿದ್ದರೋ ಅವರ ವಿರುದ್ಧ ನಾನು ಮಾನನಷ್ಟ ಮೊಕದ್ದಮೆ ಹಾಕಿದ್ದೇನೆ. ಈಗಾಗಲೇ ಕೋರ್ಟ್‌ನಲ್ಲಿ ವಿಚಾರಣೆ ಆಗಿದೆ. ಪ್ರಕರಣ ತಾರ್ಕಿಕ ಹಂತಕ್ಕೆ ಬಂದಿದೆ ಎಂದು ತಿಳಿಸಿದರು.
ಯಡಿಯೂರಪ್ಪ ಸಿಎಂ ಆಗಿದ್ದಾಗ ಬಿಡಿಎ ಇಲಾಖೆಯಲ್ಲಿ ಖಾಸಗಿ ಕಂಪನಿಗೆ ಗುತ್ತಿಗೆ ಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪ ಮಾಡೋರು ಯಾವ ಕಂಪನಿಗೆ ಗುತ್ತಿಗೆ ಕೊಟ್ಟಿದ್ದಾರೆ ಅಂತಲೂ ಹೇಳಬೇಕಲ್ಲವೇ? ಅದನ್ನು ಎಲ್ಲೂ ಅರ್ಜಿದಾರರು ಉಲ್ಲೇಖ ಮಾಡಿಲ್ಲ. ಯಡಿಯೂರಪ್ಪ ಅವರು ಬಿಡಿಎದಲ್ಲಿ ಯಾವ ಕಂಪನಿಗೂ ಗುತ್ತಿಗೆ ಕೊಟ್ಟಿಲ್ಲ. ಆ ಕಂಪನಿಯಿಂದ ಕೋಲ್ಕತ್ತಾ ಮೂಲದ ಐದು ಕಂಪನಿಗಳಿಗೆ 7.5 ಕೋಟಿ ರೂ. ಸಂದಾಯವಾಗಿದೆ ಎಂಬ ಆರೋಪವನ್ನು ಮಾಡಲಾಗಿದೆ. ಒಂದು ರೂಪಾಯಿಯೂ ಸಂದಾಯ ಆಗಿಲ್ಲ. ಇದೆಲ್ಲದರ ಬಗ್ಗೆ ನಾವು ಮಾನನಷ್ಟ ಪ್ರಕರಣದಲ್ಲಿ ಪ್ರಶ್ನಿಸಿದ್ದೇವೆ ಎಂದು ತಿಳಿಸಿದರು.
ಈಗಾಗಲೇ ಈ ಆರೋಪದ ಬಗ್ಗೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಪೊಲೀಸ್ ಠಾಣೆಯಲ್ಲಿ ತನಿಖೆ ಆಗಿದೆ. ಎಸಿಬಿಯಲ್ಲಿ ಇದೇ ಅಬ್ರಹಾಂ ದೂರು ಕೊಟ್ಟಿದ್ದರು. ರಾಜ್ಯಪಾಲರಿಗೆ ಅನುಮತಿ ಕೋರಿದಾಗ ಅವರು ತಿರಸ್ಕರಿಸಿದ್ದರು ಎಂದು ವಿಜಯೇಂದ್ರ ತಿಳಿಸಿದರು.
ಯಡಿಯೂರಪ್ಪ ಮೇಲಿನ ಆರೋಪದಲ್ಲಿ 0.1%ರಷ್ಟೂ ಸತ್ಯ ಇಲ್ಲ. ನಾವು ಹೆದರಿ ಓಡಿ ಹೋಗುವುದಿಲ್ಲ. ನ್ಯಾಯಾಲಯದ ಮೇಲೆ ನಮಗೆ ವಿಶ್ವಾಸ ಇದೆ. ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮುಗಿಸಬೇಕು ಎಂಬ ಕುತಂತ್ರ ಇದು. ವಿಜಯೇಂದ್ರ ರಾಜಕೀಯವಾಗಿ ಬೆಳೆಯಬಾರದು ಎಂದು ಕುತಂತ್ರ ಹೂಡಲಾಗಿದೆ. ಇದಕ್ಕೆ ತಕ್ಕ ಉತ್ತರವನ್ನು ಎಲ್ಲಿ ಕೊಡಬೇಕು? ಯಾರಿಗೆ ಕೊಡಬೇಕು ಎಂಬುದು ಗೊತ್ತಿದೆ. ಇಂತಹ ಸವಾಲು ಬಂದಾಗಲೇ ನಾವು ಬೆಳೆಯಲು ಸಾಧ್ಯವಾಗುವುದು. ನಮ್ಮ ರಾಜಕೀಯ ಬೆಳವಣಿಗೆ ಸಹಿಸದವರು ಇದನ್ನು ಮಾಡುತ್ತಿದ್ದಾರೆ. ವಿಜಯೇಂದ್ರ ಪಕ್ಷದಲ್ಲಿ ಎಷ್ಟು? ಯಾವ ರೀತಿ ಬೆಳೆಯಬೇಕು ಎಂದು ಕೇಂದ್ರ ನಾಯಕರು ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.
ನಾನು ಸಮುದಾಯವನ್ನು ಎಳೆದು ತರಲ್ಲ
ಕಾಂಗ್ರೆಸ್ ನಡೆಸುತ್ತಿರುವ ಪೇಸಿಎಂ ಅಭಿಯಾನ ಲಿಂಗಾಯತ ಸಿಎಂಗೆ ಅಪಮಾನ ಎಂಬ ಫೋಸ್ಟರ್ ವೈರಲ್ ಆಗುತ್ತಿರುವ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದಾಗ, ನಾನು ಸಮುದಾಯವನ್ನು ಎಳೆದು ತರಲು ಇಷ್ಟಪಡುವುದಿಲ್ಲ. ಕಾಂಗ್ರೆಸ್‌ಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ. ಕಾಂಗ್ರೆಸ್ ಅಭಿಯಾನಕ್ಕೆ ಜನರೇ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡುತ್ತಾರೆ ಎಂದು ಹೇಳಿದರು.
ಯಡಿಯೂರಪ್ಪ ಅವರ ಮುಗಿಸಲು ಆಗಲ್ಲ
ಯಡಿಯೂರಪ್ಪ ಸಿಎಂ ಆಗುವುದನ್ನು ತಪ್ಪಿಸಲು ಯಾರಿಂದಲೂ ಆಗಲಿಲ್ಲ. ರಾಜಕೀಯ ವಿರೋಧಿಗಳು ಯಡಿಯೂರಪ್ಪ ರಾಜಕೀಯ ಭವಿಷ್ಯ ಮುಗಿಸಲು ಏನೇ ಷಡ್ಯಂತ್ರ ಮಾಡಿದರೂ ಆಗಲಿಲ್ಲ. ಮುಂದೆಯೂ ಅದರಲ್ಲಿ ಯಶಸ್ವಿ ಆಗಲಾರರು. ಅವರೂ ಮುನ್ನುಗ್ಗಿ ಪಕ್ಷ ಸಂಘಟನೆ ಮಾಡುತ್ತಾರೆ ಎಂದು ವಿಜಯೇಂದ್ರ ಹೇಳಿದರು.
ಇದನ್ನೂ ಓದಿ | STAY | ಯಡಿಯೂರಪ್ಪ ವಿರುದ್ಧದ ಲೋಕಾಯಕ್ತ ತನಿಖೆಗೆ ಸುಪ್ರೀಂ ಕೋರ್ಟ್ ತಡೆ, ಉಳಿದವರ ವಿಚಾರಣೆ ಅಬಾಧಿತ