ಬೆಂಗಳೂರು: ಅರಮನೆಯಲ್ಲಿ ನಡೆಯುತ್ತಿರುವ ಮೂರು ದಿನಗಳ ಬೆಂಗಳೂರು ಟೆಕ್ ಸಮ್ಮಿಟ್-2022ರಲ್ಲಿ (BTS 2022) ಪ್ರಧಾನಿ ನರೇಂದ್ರ ಮೋದಿ ಉದ್ಘಾಟನಾ ಮಾತುಗಳನ್ನಾಡಿದ್ದಾರೆ. ಪ್ರಧಾನಿ ನಂತರದಲ್ಲಿ ಐಟಿಬಿಟಿ ಕ್ಷೇತ್ರಗಳ ಅನೇಕ ದಿಗ್ಗಜರು ಬೆಂಗಳೂರು, ಭಾರತದ ತಂತ್ರಜ್ಞಾನದ ಕುರಿತು ತಮ್ಮ ಅನಿಸಿಕೆಗಳಣ್ನು ಹಂಚಿಕೊಂಡಿದ್ದಾರೆ.
ಫಿನ್ಲೆಂಡ್ ವಿಜ್ಞಾನ ಮತ್ತು ಸಂಸ್ಕೃತಿ ಸಚಿವ ಪಿಟ್ರಿ ಹಂಕನೆನ್
ಬೆಂಗಳೂರು ಮತ್ತೊಮ್ಮೆ ವಿಶ್ವದ ಅನ್ವೇಷಣಾ ನಗರ ಪಟ್ಟಿಯಲ್ಲಿ ಸ್ಥಾನ ಪಡೆದದ್ದಕ್ಕೆ ಅಭಿನಂದನೆಗಳು. ನೋಕಿಯಾ ಸಂಸ್ಥೆಯು ತನ್ನ ಅತಿ ದೊಡ್ಡ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಭಾರತದಲ್ಲಿ ಹೊಂದಿದೆ. ಸಮಾಜ ಹಾಗೂ ಉದ್ಯಮದಲ್ಲಿ ಬದಲಾವಣೆ ಆಘುತ್ತಿರುವಾಗ ತಂತ್ರಜ್ಞಾನ ಅತ್ಯವಶ್ಯ. ಜಾಗತಿಕ ತಾಪಮಾನವನ್ನೂ ಡಿಜಿಟಲೀಕರಣದಿಂದ ಸಶಕ್ತವಾಗಿ ಎದುರಿಸಬಹುದು. ಮಾನವ ಕೇಂದ್ರಿತ ದತ್ತಾಂಶ ಆರ್ಥಿಕತೆಯತ್ತ ನಾವು ಗಮನ ಹರಿಸಬೇಕು. ಹಾಗೂ ಅವುಗಳನ್ನು ಜವಾಬ್ದಾರಿಯುತವಾಗಿ ಬಳಕೆ ಮಾಡಬೇಕು. ಈ ನಿಟ್ಟಿನಲ್ಲಿ ಫಿನ್ಲೆಂಡ್ ಹಾಗೂ ಭಾರತದ ಪಾಲುದಾರಿಕೆ ಮುಖ್ಯವಾಗಿದೆ.
ಸಾಫ್ಟ್‌ವೇರ್ ಪಾರ್ಕ್ಸ್ ಆಫ್ ಇಂಡಿಯಾ ಮಹಾ ನಿರ್ದೇಶಕ ಅರವಿಂದ್ ಕುಮಾರ್
ಎಸ್‌ಟಿಪಿಐ ಹಾಗೂ ಕರ್ನಾಟಕ ಸರ್ಕಾರ ಅನೇಕ ದಶಕಗಳಿಂದಲೂ ಜತೆಗೆ ಕೆಲಸ ಮಾಡುತ್ತಿವೆ. ಅದರಿಂದಾಗಿ ಇಂದು ಐಟಿ ವಲಯದಲ್ಲಿ ಬಹುದೊಡ್ಡ ಆರ್ಥಿಕ ಕೊಡುಗೆ ಲಭಿಸುತ್ತಿದೆ. ದೇಶದ ಐಟಿ ಆದಾಯದಲ್ಲಿ ಕರ್ನಾಟಕ ಶೇ.40 ಪಾಲು ಹೊಂದಿದ್ದು, ಉಳಿದ ರಾಜ್ಯಗಳು ಬಹಳ ಹಿಂದೆ ಇವೆ. ಮುಂದಿನ ದಿನಗಳಲ್ಲಿ ಸ್ಟಾರ್ಟಪ್, ಐಒಟಿ ಸೇರಿ ಅನೇಕ ಕ್ಷೇತ್ರಗಳತ್ತ ಎಸ್‌ಟಿಪಿಐ ಗಮನ ನೀಡಲಿದೆ.
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಅಧ್ಯಕ್ಷ ಬಿ.ವಿ. ನಾಯ್ಡು
ಇಷ್ಟು ಪ್ರಮಾಣದಲ್ಲಿ ವಿಶ್ವದ ಯಾವುದೇ ಉತ್ಸವ ನಿರಂತರವಾಗಿ ನಡೆದಿಲ್ಲ. ಇಷ್ಟು ಸುದೀರ್ಘ ಸಮಯದ ನಂತರವೂ ಅದೇ ಉತ್ಸಾಹ ಉಳಿಸಿಕೊಳ್ಳಲು ಸಚಿವರಾದ ಡಾ. ಸಿ.ಎನ್. ಅಶ್ವತ್ಥನಾರಾಯಣ, ಮುರುಗೇಶ್ ನಿರಾಣಿ ಜತೆಗೆ ಎಲ್ಲ ಅಧಿಕಾರಿಗಳೂ ಕಾರಣರಾಗಿದ್ದಾರೆ. ಕರ್ನಾಟಕದಿಂದ ಸುಮಾರು 40% ಕೊಡುಗೆ ಐಟಿ ಕ್ಷೇತ್ರಕ್ಕೆ ಲಭಿಸುತ್ತಿದ್ದು, ಈ ಬೆಳವಣಿಗೆಯನ್ನು ಬೆಂಗಳೂರನ್ನು ಹೊರತುಪಡಿಸಿ ಉಳಿದೆಡೆಗೆ ಪಸರಿಸಬೇಕಿದೆ. ಇದಕ್ಕಾಗಿ ಎಲ್ಲರೂ ಕಾರ್ಯಪ್ರವೃತ್ತರಾಗಿದ್ದೇವೆ.
ಸ್ಟಾರ್ಟಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್
ಇಲ್ಲಿವರೆಗೆ ದೇಶದ ಅನೇಕ ಸಮಸ್ಯೆಗಳನ್ನು ಪರಿಹರಿಸಲು ಕಾರ್ಯನಿರ್ವಹಿಸುತ್ತಿರುವ ಸ್ಟಾರ್ಟಪ್‌ಗಳು ಮುಂದಿನ 3-5 ವರ್ಷದಲ್ಲಿ ವಿಶ್ವದ ಅನೇಕ ಸಮಸ್ಯೆಗಳನ್ನು ಪರಿಹರಿಸುತ್ತವೆ. ಇದೀಗ ಹೆಚ್ಚಿನ ಸಂಖ್ಯೆಯಲ್ಲಿರುವ ಸ್ಟಾರ್ಟಪ್‌ಗಳು ಮುಂದಿನ 3-5 ವರ್ಷದಲ್ಲಿ ಲಾಭದಾಯಕವಾಗಲಿವೆ. ನೂರು ಯೂನಿಕಾರ್ನ್‌ಗಳಲ್ಲಿ ಕನಿಷ್ಟ 25 ಐಪಿಒಗೆ ತೆರಳುತ್ತವೆ. ಹೂಡಿಕೆದಾರರಿಗೆ ಇವುಗಳು ಹಣವನ್ನು ಹಿಂದಿರುಗಿಸಿ ನೀಡುತ್ತವೆ. ಇಲ್ಲಿವರೆಗೆ ಸ್ಟಾರ್ಟಪ್‌ಗಳು ಹೆಚ್ಚಾಗಿ ನಗರದ ವಿಚಾರಗಳನ್ನೇ ಕೇಂದ್ರೀಕೃತವಾಗಿಸಿವೆ. ಮುಂದಿನ ಐದು ವರ್ಷದಲ್ಲಿ, ನಮ್ಮ ರೈತರು ತಮ್ಮ ಆದಾಯವನ್ನು ದ್ವಿಗುಣಗೊಳಿಸಿಕೊಳ್ಳಲು ಸ್ಟಾರ್ಟಪ್‌ಗಳು ಸಹಾಯಕವಾಗಲಿವೆ.
ಐಟಿ ವಿಷನ್ ಗ್ರೂಪ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್
ಕೋವಿಡ್ ಸಮಯದಲ್ಲಿ ಡಿಜಿಟಲೀಕರಣ ವೇಗ ಪಡೆಯಿತು. ತಾವು ಯಾವುದೇ ಆಘಾತವನ್ನೂ ಎದುರಿಸಬಲ್ಲೆವು ಎನ್ನುವುದನ್ನು ಭಾರತೀಯ ತಂತ್ರಜ್ಞಾನ ಕಂಪನಿಗಳು ಸಾಬೀತುಪಡಿಸಿದವು. ಈಗಾಗಲೆ ಐಟಿ ಸೇವಾ ಸಂಸ್ಥೆಗಳು ಬೆಂಗಳೂರಿನಿಂದ ಹೊರಗೆ ಕೇಂದ್ರಗಳನ್ನು ಆರಂಭಿಸುತ್ತಿವೆ. ಮುಂದಿನ ದಿನಗಳಲ್ಲಿ ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿರಲಿವೆ. ಐಟಿ ಕಂಪನಿಯು 8-10% ವೇಗದಲ್ಲಿ ಬೆಳವಣಿಗೆ ಕಾಣಲಿದೆ, ಇದು ಸಣ್ಣ ವಿಚಾರವಲ್ಲ
ಬಿಟಿ ವಿಷನ್ ಗ್ರೂಪ್ ಅಧ್ಯಕ್ಷೆ ಕಿರಣ್ ಮಜುಮ್‌ದಾರ್ ಷಾ
2025ರ ವೇಳೆಗೆ 10 ಸಾವಿರ ಕೋಟಿ ಡಾಲರ್ ಗಾತ್ರದ ಬಯೋ ಟೆಕ್ನಾಲಜಿ ಆರ್ಥಿಕತೆಯಾಗುವತ್ತ ಮುನ್ನುಗ್ಗುತ್ತಿದ್ದೇವೆ. ಕೃಷಿಯಲ್ಲಿ ಸುಸ್ಥಿರತೆ ತರುವುದೇ ಬಯೋ ಆರ್ಥಿಕತೆ. ಇಂದು ಬಯೋ ಟೆಕ್ನಾಲಜಿಯಿಂದಾಗಿ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರಕುತ್ತಿದೆ. ಕೃತಕ ಬುದ್ಧಿಮತ್ತೆಯ ಬಳಕೆಯಿಂದಾಗಿ ಮತ್ತಷ್ಟು ವಿಸ್ತಾರವಾದ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಐಟಿ ಹಾಗೂ ಬಿಟಿ ಒಟ್ಟೊಟ್ಟಿಗೆ ಕಾರ್ಯನಿರ್ವಹಿಸುತ್ತಿರುವುದು ವಿಶೇಷ.
ಇದನ್ನೂ ಓದಿ | BTS 2022 | ಭಾರತದ ತಂತ್ರಜ್ಞಾನ ಅಭಿವೃದ್ಧಿಗೆ ಬೆಂಗಳೂರಿನ ಕೊಡುಗೆ ಗಣನೀಯ: ಪ್ರಧಾನಿ ಮೋದಿ ಶ್ಲಾಘನೆ