Site icon Vistara News

BTS 2022 | ಕರ್ನಾಟಕದಲ್ಲಿ 6 ಹೊಸ ಹೈಟೆಕ್‌ ನಗರಗಳ ಸ್ಥಾಪನೆ; ಬೆಂಗಳೂರಿನ ಬಳಿಯೂ ಒಂದು: ಸಿಎಂ ಬೊಮ್ಮಾಯಿ ಘೋಷಣೆ

bommai bts 2022

ಬೆಂಗಳೂರು: ಕರ್ನಾಟಕದಲ್ಲಿ ಸದ್ಯದಲ್ಲಿಯೇ ಆರು ಹೊಚ್ಚ ಹೊಸ ಹೈಟೆಕ್‌ ನಗರಗಳನ್ನು ಸೃಷ್ಟಿ ಮಾಡಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಎಲೆಕ್ಟ್ರಾನಿಕ್ಸ್‌, ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಬೆಂಗಳೂರು ಅರಮನೆಯಲ್ಲಿ ಆಯೋಜಿಸಿರುವ ಬೆಂಗಳೂರು ಟೆಕ್‌ ಸಮ್ಮಿಟ್‌-2022 (BTS 2022) ಉದ್ಘಾಟನಾ ಸಮಾರಂಭದಲ್ಲಿ ಈ ಘೋಷಣೆ ಮಾಡಿದರು.

ಎಲ್ಲರಿಗಿಂತಲೂ ಅತಿ ದೊಡ್ಡ ಸೃಜನಶೀಲ ವ್ಯಕ್ತಿ ಯಾರು? ನಮ್ಮೆಲ್ಲರನ್ನೂ ಸೃಷ್ಟಿಸಿದ ದೇವರು ಎಲ್ಲರಿಗಿಂತಲೂ ದೊಡ್ಡ ಸೃಷ್ಟಿಕರ್ತ. ಸೃಷ್ಟಿಯ ಸಮಯದಲ್ಲಿ ಬಹುಶಃ ದೇವರಿಗೆ ಸುಸ್ತಾಗಿತ್ತು. ಹಾಗಾಗಿ, ತನ್ನ ಸೃಷ್ಟಿ ಕ್ರಿಯೆಯನ್ನು ಮುಂದುವರಿಸಿಕೊಂಡು ಹೋಗಲು ಮನುಷ್ಯರನ್ನು ಸೃಷ್ಟಿಸಿದ. ಎಲ್ಲ ಸೌಲಭ್ಯಗಳನ್ನೂ ಬಳಸಿಕೊಂಡು ಮಾನವತೆ ಹಾಗೂ ಇಡೀ ಪರಿಸರವನ್ನು ಒಟ್ಟಿಗೆ ಉತ್ತಮವಾಗಿಸುವ ಜವಾಬ್ದಾರಿ ನಮ್ಮ ಮೇಲಿದೆ. ನೈಸರ್ಗಿಕ ಸಂಪನ್ಮೂಲಗಳು ಪ್ರತಿ ಸೆಕೆಂಡ್‌ಗೂ ಕುಗ್ಗುತ್ತಿವೆ ಎನ್ನುವ ಆತಂಕವಿದೆ. ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಪ್ರಪಂಚವನ್ನು ನೀಡಬೇಕಿದೆ.

ಯಾವುದೇ ತಂತ್ರಜ್ಞಾನ ಹಾಗೂ ಸೃಷ್ಟಿಯ ಮುಖ್ಯ ಉದ್ದೇಶವು ಪರಿಸರ ಸಂರಕ್ಷಣೆ, ವಿಶ್ವವನ್ನು ಸಂಪರ್ಕಿಸುವ ಉದ್ದೇಶವನ್ನು ಹೊಂದಿರಬೇಕು. ಇಡೀ ವಿಶ್ವದಲ್ಲಿ ನಡೆಯುತ್ತಿರುವ ಡಿಜಿಟಲ್‌ ಕಂದಕವನ್ನು ಕಡಿಮೆ ಮಾಡುವ ಗುರಿ ಹೊಂದಿರಬೇಕು. ನಾವು ಪರಿಸರ ಸ್ನೇಹಿ ತಂತ್ರಜ್ಞಾನ, ಪರಿಸರ ಸ್ನೇಹಿ ನಾವೀನ್ಯತೆ ಹಾಗೂ ಪರಿಸರ ಸ್ನೇಹಿ ಆರ್ಥಿಕತೆಯನ್ನು ಹೊಂದಬೇಕು. ಮುಂದೆ ಪಶ್ಚಾತ್ತಪ ಪಡುವುದು ಬೇಡ. ಈಗಿನಿಂದಲೇ ಕಾರ್ಯಪ್ರವೃತ್ತವಾಗೋಣ ಎಂದರು.

ನಾವು ಆರು ಹೊಸ ನಗರಗಳನ್ನು ಸೃಷ್ಟಿಸುತ್ತಿದ್ದೇವೆ. ಕಲಬುರ್ಗಿ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಮೈಸೂರು, ಮಧ್ಯ ಕರ್ನಾಟಕದಲ್ಲಿ ಹಾಗೂ ಬೆಂಗಳೂರಿನ ಬಳಿ ಈ ನಗರಗಳ ಸ್ಥಾಪನೆ ಆಗಲಿದೆ. ಒಂದೊಂದು ನಗರಕ್ಕೆ ಒಂದೊಂದು ಉದ್ದೇಶ ಇರಲಿದೆ. ಬೆಂಗಳೂರಿನ ಬಳಿಯ ನಗರವು ಜ್ಞಾನ, ವಿಜ್ಞಾನ ತಂತ್ರಜ್ಞಾನ ನಗರವಾಗಲಿದೆ. ಬೆಂಗಳೂರಿನ ವಿಮಾನ ನಿಲ್ದಾಣದ ಹತ್ತಿರ ಸ್ಥಾಪನೆಯಾಗಲಿದೆ. ಇಲ್ಲಿ ಅತ್ಯುತ್ತಮ ವಿವಿಗಳು, ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರಗಳು ಇರಲಿವೆ. ಸದ್ಯದಲ್ಲೇ ಈ ನಗರಗಳನ್ನು ಘೋಷಣೆ ಮಾಡಲಿದ್ದೇವೆ ಎಂದರು.

ಸ್ಟಾರ್ಟಪ್‌ಗಳನ್ನು ಉತ್ತೇಜಿಸುವ ಸಲುವಾಗಿ ಸ್ಟಾರ್ಟಪ್‌ ಪಾರ್ಕ್‌ ಸ್ಥಾಪನೆ ಮಾಡಲಿದ್ದೇವೆ ಎಂದೂ ಘೋಷಿಸಿದ ಸಿಎಂ ಬೊಮ್ಮಾಯಿ, ಅಲ್ಲಿ ಎಲ್ಲ ರೀತಿಯ ಸ್ಟಾರ್ಟಪ್‌ಗಳನ್ನೂ ಸ್ಥಾಪನೆ ಮಾಡಬಹುದು. ಇದನ್ನೂ ವಿಮಾನ ನಿಲ್ದಾಣದ ಬಳಿ ಸ್ಥಾಪಿಸುತ್ತೇವೆ ಎಂದರು.

ಮಾನವತೆಗಾಗಿ ತಂತ್ರಜ್ಞಾನ

ನಮ್ಮೆದುರು ಅತಿ ದೊಡ್ಡ ದತ್ತಾಂಶ ಸಂಗ್ರಹವಿದೆ. ಆದನ್ನು ಬಳಸಿಕೊಂಡು ಮಾನವತೆಗೆ ಉಪಯೋಗವಾಗುವ ನಿರ್ಧಾರ ಕೈಗೊಳ್ಳಬೇಕು ಎಂದು ಸಿಎಂ ಬೊಮ್ಮಾಯಿ ಕರೆ ನೀಡಿದರು. ಜೈವಿಕ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆಗಳನ್ನು ಬಳಸಿಕೊಂಡು ಇಡೀ ವಾತಾವರಣವನ್ನು ಉತ್ತಮವಾಗಿಸಬೇಕು. ಸೃಷ್ಟಿಕರ್ತನ ಉದ್ದೇಶ ಹಾಗೂ ಪೂರ್ವಜನರ ಕೊಡುಗೆಗಳನ್ನು ಮುಂದಿನ ಪೀಳಿಗೆಗೆ ಒಯ್ಯಬೇಕು.

ಕನ್ನಡಿಗರು ಎಂದಿಗೂ ನವೀನ ತಂತ್ರಜ್ಞಾನಗಳಿಗೆ ಹೊಂದಿಕೊಳ್ಳುತ್ತಾರೆ. ಮೈಸೂರು ಮಹಾರಾಜರು ವಿಜ್ಞಾನ ಹಾಗೂ ತಂತ್ರಜ್ಞಾನಕ್ಕೆ ಅಪಾರ ಕೊಡುಗೆ ನೀಡಿದರು. ಶಿಕ್ಷಣ, ಕೈಗಾರಿಕೆಗಳಿಗೆ ಅವರು ನೀಡಿದ ಒತ್ತಿನಿಂದಾಗಿ ಸ್ವಾತಂತ್ರ್ಯಾನಂತರ ಸಾರ್ವಜನಿಕ ಉದ್ದಿಮೆಗಳು ಆಗಮಿಸಿದವು. ಈ ಆಧಾರದ ಮೇಲೆ ಐಟಿಬಿಟಿ ಕ್ಷೇತ್ರವು ಅತಿ ಹೆಚ್ಚು ಕೊಡುಗೆಗಳನ್ನು ನೀಡುತ್ತಿದೆ. ಬೆಂಗಳೂರಿನ ಶಕ್ತಿಕೇಂದ್ರ ಬದಲಾಗಿದೆ. ಹಿಂದೆಲ್ಲ ವಿಧಾನಸೌಧ ವೀಕ್ಷಣೆಗೆ ಆಗಮಿಸುತ್ತಿದ್ದರು. ಆದರೆ ಇದೀಗ ಇನ್ಫೋಸಿಸ್‌ ಕ್ಯಾಂಪಸ್‌, ಬಯೋಕಾನ್‌ ಕ್ಯಾಂಪಸ್‌ಗಳನ್ನು ವೀಕ್ಷಿಸಲು ಆಗಮಿಸುತ್ತಾರೆ. ಇದು ಶಕ್ತಿಕೇಂದ್ರದಲ್ಲಾದ ಅಗಾಧ ಬದಲಾವಣೆ.

ಕಲ್ಪನೆ ಹಾಗೂ ಸೃಷ್ಟಿಯ ನಡುವೆ ಬಹುದೊಡ್ಡ ನೆರಳು ಇರುತ್ತದೆ ಎಂದು ತಿರುವಳ್ಳೂವರ್‌ ಹೇಳಿದ್ದಾರೆ. ಆದರೆ ಬೆಂಗಳೂರಿನ ಮಟ್ಟಿಗೆ ಈ ನೆರಳು ಅತ್ಯಂತ ಕಡಿಮೆ ಆಗಿದೆ. ಇದು ಬೆಂಗಳೂರಿನ ಸಾಮರ್ಥ್ಯ. ಜನರು ಇದನ್ನು ಗಮನಿಸಬೇಕು. ನಮ್ಮ ಯುವ ವಿಜ್ಞಾನಿಗಳ, ಇಂಜಿನಿಯರ್‌ಗಳ ಶ್ರಮವನ್ನು ಗುರುತಿಸಬೇಕು. ಬೆಂಗಳೂರಿನಲ್ಲಿ ಮನಸ್ಸಿದ್ದರೆ ಏನನ್ನೂ ಸಾಧನೆ ಮಾಡಬಹುದು.

ನಮ್ಮ ಸ್ಮಾರ್ಟ್‌ ಸಿಟಿಗಳಲ್ಲಿ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳದಿದ್ದರೆ ಜೀವನ ಕಷ್ಟವಾಗುತ್ತದೆ. ಗ್ರಾಮೀಣ ಪ್ರದೇಶಗಳಿಗಿಂತಲೂ ನಗರಗಳಲ್ಲಿ ಜೀವಿಸುವುದು ಕಷ್ಟವಾಗುವುದನ್ನು ತಪ್ಪಿಸಲು ತಂತ್ರಜ್ಞಾನ ಕ್ಷೇತ್ರ ಕೊಡುಗೆ ನೀಡಬೇಕು.

ಬೆಂಗಳೂರಿನ ಹೊರಕ್ಕೂ ತಂತ್ರಜ್ಞಾನ ಸಾಗಬೇಕು ಎಂಬುದಕ್ಕೆ ನಾವು ಎಲ್ಲ ಪ್ರಯತ್ನ ಮಾಡುತ್ತೇವೆ. ಏಕೆಂದರೆ ನಮಗೆ ಕರ್ನಾಟಕದ ಎಲ್ಲ ಪ್ರತಿಭೆಗಳ ಮೇಲೆ ನಮಗೆ ಭರವಸೆ ಇದೆ. ನೀವೆಲ್ಲರೂ ಕರ್ನಾಟಕದ ಎಲ್ಲ ಬೆಳವಣಿಗೆಗಳಲ್ಲಿ ಭಾಗಿಯಾಗಬೇಕು ಎಂದು ಆಹ್ವಾನಿಸುತ್ತೇವೆ ಎಂದರು

ಐಟಿಬಿಟಿ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ:

ಗುಣಮಟ್ಟದ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. 2025ರ ವೇಳೆಗೆ 30 ಸಾವಿರ ಕೋಟಿ ಡಾಲರ್‌ ಡಿಜಿಟಲ್‌ ಆರ್ಥಿಕತೆ ನಿರ್ಮಿಸುವತ್ತ ನಾವು ಮುನ್ನಡೆ ಸಾಧಿಸುತ್ತಿದ್ದೇವೆ. ದೇಶದ ಮೊದಲ ಹಾಗೂ ನೂರನೇ ಯೂನಿಕಾರ್ನ್‌ಗಳು ಬೆಂಗಳೂರಿನಲ್ಲೇ ಆರಂಭವಾದವು. ಹಾಗಾಗಿ ಇಲ್ಲಿನ ಆರ್ಥಿಕತೆಯ ಅತ್ಯಂತ ಉತ್ಸಾಹಭರಿತವಾಗಿದೆ. ರಾಜ್ಯದಲ್ಲಿ ಅತ್ಯುತ್ತಮ ಮೂಲಸೌಕರ್ಯ ನೀಡಲು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಬದ್ಧವಾಗಿದೆ. ಬೆಂಗಳೂರಿಗರ ಜೀವನವನ್ನು ಉತ್ತಮವಾಗಿಸಲು ಎಲ್ಲ ಪ್ರಯತ್ನ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಮ್ಮ ನಡುವೆ ಯಾವುದೇ ನಿರ್ಬಂಧಗಳಿಲ್ಲದೆ, ಸಮಗ್ರವಾಗಿ ಜೀವಿಸುವ ನಿರೀಕ್ಷೆಯನ್ನು ಹೊಂದಿದ್ದೇವೆ.

ಕರ್ನಾಟಕ ಸಂಶೋಧನೆ, ಅಭಿವೃದ್ಧಿ ಹಾಗೂ ನಾವೀನ್ಯತಾ ನೀತಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದರು.
Exit mobile version