ಮಂಡ್ಯ: ಕೆಎಸ್ಸಾರ್ಟಿಸಿಯ (KSRTC) ಮಂಡ್ಯ ವಿಭಾಗದ ನಾಗಮಂಗಲ ಘಟಕದಲ್ಲಿ ಚಾಲಕ ಕಮ್ ನಿರ್ವಾಹಕರಾಗಿರುವ (Bus conductor) ಜಗದೀಶ್ ಎಂಬವರನ್ನು ಮದ್ದೂರು ವಿಭಾಗಕ್ಕೆ ವರ್ಗಾವಣೆ ಮಾಡಿರುವ ವಿದ್ಯಮಾನ ಭಾರಿ ರಾಜಕೀಯ ಸಂಚಲನ ಸೃಷ್ಟಿ ಮಾಡಿದೆ. ಜಗದೀಶ್ ಅವರನ್ನು ನಾಗಮಂಗಲದ ಶಾಸಕರು ಮತ್ತು ಕೃಷಿ ಸಚಿವರಾಗಿರುವ ಚಲುವರಾಯ ಸ್ವಾಮಿ (Chaluvaraya swamy) ಅವರ ಸೂಚನೆಯಂತೆ ವರ್ಗಾವಣೆ ಮಾಡಲಾಗಿದೆ ಎಂದು ಸ್ವತಃ ಜಗದೀಶ್ ಅವರೇ ಹೇಳಿದ್ದಾರೆ.
ಈ ವರ್ಗಾವಣೆಯಿಂದ ನೊಂದ ಜಗದೀಶ್ ಅವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಅದಕ್ಕಿಂತ ಮೊದಲು ಬರೆದಿಟ್ಟ ನೋಟ್‌ನಲ್ಲಿ ಏನೇನಾಯಿತು ಎನ್ನುವ ಎಲ್ಲ ವಿಚಾರಗಳನ್ನು ಬರೆದಿದ್ದಾರೆ. ಕೃಷಿ ಸಚಿವರ ಸೂಚನೆ ಮೇರೆಗೆ ಈ ವರ್ಗಾವಣೆ ನಡೆದಿದೆ ಎಂದು ನಿಯಂತ್ರಣಾಧಿಕಾರಿಗಳು ಹೇಳಿದ್ದಾರೆ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ. ಕೃಷಿ ಸಚಿವರು ಯಾಕೆ ದ್ವೇಷ ಸಾಧಿಸುತ್ತಿದ್ದಾರೆ ಎಂದು ತಿಳಿಯದೆ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಅವರು ನೋಟ್‌ನಲ್ಲಿ ಬರೆದಿದ್ದಾರೆ.
ನೋಟ್‌ನಲ್ಲಿ ಬರೆದಿಟ್ಟಂತೆಯೇ ಜಗದೀಶ್ ಅವರು ಆತ್ಮಹತ್ಯೆಗೆ ಪ್ರಯತ್ನ ನಡೆಸಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೊದಲು ನಾಗಮಂಗಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಗದೀಶ್ ಅವರನ್ನು ಈಗ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ.
ಜಗದೀಶ್ ಅವರ ವರ್ಗಾವಣೆ, ಅವರು ಬರೆದಿಟ್ಟ ನೋಟ್ ರಾಜಕೀಯವಾಗಿ ಭಾರಿ ಸದ್ದು ಮಾಡಿದೆ. ರಾಜ್ಯದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂಬ ಆರೋಪವನ್ನು ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ಮತ್ತು ಬಿಜೆಪಿ ಮಾಡುತ್ತಿದೆ. ಅದರ ನಡುವೆಯೇ ಈ ಪ್ರಕರಣ ಕುಮಾರಸ್ವಾಮಿ ಅವರ ಕೈಗೆ ಸಿಕ್ಕಿದೆ. ಹೀಗಾಗಿ ಇದು ದೊಡ್ಡ ಮಟ್ಟದ ರಾಜಕೀಯ ತಿರುವನ್ನೂ ಪಡೆದಿದೆ.
ಜಗದೀಶ್ ಬರೆದಿಟ್ಟ ಪತ್ರದಲ್ಲಿ ಏನಿದೆ?
ಆತ್ಮಹತ್ಯೆಗೆ ಯತ್ನಿಸುವ ಮುನ್ನ ಚಾಲಕ ಕಮ್ ನಿರ್ವಾಹಕ ಜಗದೀಶ್ ಅವರು ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಒಂದು ಪತ್ರ ಬರೆದಿದ್ದಾರೆ. ಅದರಲ್ಲಿ ವರ್ಗಾವಣೆಯ ಘಟನಾವಳಿಗಳನ್ನು ವಿವರಿಸಿದ್ದಾರೆ.
ಜುಲೈ 5ರಂದು ಬೆಳಗ್ಗೆ ಎಂದಿನಂತೆ ನಾಗಮಂಗಲ ಘಟಕಕ್ಕೆ ಕರ್ತವ್ಯಕ್ಕೆ ಹೋದಾಗ ನನ್ನ ಟಿಕೆಟ್ ಮೆಷಿನನ್ನು ಪಡೆದುಕೊಂಡ ಅಧಿಕಾರಿಗಳು, ನಿಮಗೆ ಮದ್ದೂರು ಘಟಕಕ್ಕೆ ವರ್ಗಾವಣೆ ಮಾಡಲಾಗಿದೆ. ಅಲ್ಲಿಗೆ ಹೋಗಿ ಎಂದು ತಿಳಿಸಿದರು. ನನ್ನ ವರ್ಗಾವಣೆಗೆ ಕಾರಣ ಏನೆಂದು ಡಿಪೋ ಮ್ಯಾನೇಜರ್ ಕೇಳಿದೆ. ಅವರು ನಿಯಂತ್ರಣಾಧಿಕಾರಿಗಳು ವರ್ಗಾವಣೆ ಮಾಡಿದ್ದಾರೆ ಎಂದರು.
ನಾನು ನಿಯಂತ್ರಣಾಧಿಕಾರಿಗಳನ್ನು ದೂರವಾಣಿ ಮೂಲಕ ವಿಚಾರಿಸಿದಾಗ ಕೃಷಿ ಸಚಿವರೂ ಆಗಿರುವ ನಾಗಮಂಗಲ ಶಾಸಕರಾದ ಚಲುವರಾಯ ಸ್ವಾಮಿ ಅವರ ಆದೇಶದ ಮೇರೆಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದರು. ನನ್ನ ಮೇಲೆ ಸಚಿವರಿಗೆ ಯಾಕಿಷ್ಟು ಕೋಪವೆಂದು ತಿಳಿಯದೆ ನೊಂದಿದ್ದೇನೆ. ಈ ಒತ್ತಡ, ಅವಮಾನವನ್ನು ಸಹಿಸಲು ನನ್ನಿಂದ ಆಗುತ್ತಿಲ್ಲ. ಆದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳಲು ಅನುಮತಿ ಕೊಡಿ ಎಂದು ಹೇಳಿಕೊಳ್ಳುತ್ತೇನೆ. ನನ್ನ ಆತ್ಮಹತ್ಯೆಗೆ ಶಾಸಕರೇ ಕಾರಣ- ಎಂದು ಪತ್ರದಲ್ಲಿ ಬರೆದಿದ್ದಾರೆ.
ಎಚ್.ಡಿ. ಕುಮಾರಸ್ವಾಮಿ ಹೇಳುವುದೇನು?
ಕಂಡಕ್ಟರ್ ಜಗದೀಶ್ ಆತ್ಮಹತ್ಯೆ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಚಲುವರಾಯ ಸ್ವಾಮಿ ಅವರನ್ನು ಪದಚ್ಯುತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಜತೆಗೆ ಜಗದೀಶ್ ಬರೆದಿಟ್ಟಿರುವ ಪತ್ರದ ಆಧಾರದಲ್ಲಿ ಎಫ್ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಒಬ್ಬ ಸಚಿವರಾಗಿ ಈ ರೀತಿ ಕಂಡಕ್ಟರ್ ವರ್ಗಾವಣೆಗೆ ಕೈ ಹಾಕಿದ್ದನ್ನು ಅವರು ಆಕ್ಷೇಪಿಸಿದ್ದಾರೆ.
ನಾನು ಹೇಳಿಲ್ಲ, ಪತ್ರವೂ ಬರೆದಿಲ್ಲ ಎಂದ ಚಲುವರಾಯ ಸ್ವಾಮಿ
ವರ್ಗಾವಣೆ ಸಹಜ ಪ್ರಕ್ರಿಯೆ. ಸರ್ಕಾರದ ಬದಲಾದಾಗ ಎಲ್ಲರ ಕಾಲದಲ್ಲೂ ವರ್ಗಾವಣೆ ಆಗಿರುತ್ತದೆ. ನಾನು ಆ ಚಾಲಕನ ವರ್ಗಾವಣೆಗೆ ಲೆಟರ್ ಕೊಟ್ಟಿಲ್ಲ, ವರ್ಗಾವಣೆ ಮಾಡಿ ಅಂತ ಹೇಳಿಲ್ಲ. ಆದರೆ ವರ್ಗಾವಣೆ ಆಗಿದೆ. ಇದರಲ್ಲಿ ನನ್ನ ಕೈವಾಡ ಏನೂ ಇಲ್ಲ ಎಂದು ಚಲುವರಾಯ ಸ್ವಾಮಿ ಹೇಳಿದ್ದಾರೆ.
ʻʻಆ ಚಾಲಕನ ಬಾವ ನನಗೆ ಫೋನ್ ಮಾಡಿದರು. ಹಾಗಾಗಿ ಅದನ್ನು ನಾನೇ ಹೋಲ್ಡ್ ಮಾಡುವಂತೆ ಹೇಳಿದ್ದೇನೆ. ಏನಾದ್ರೂ ತಪ್ಪಿದ್ದರೆ ತನಿಖೆ ಮಾಡಿ ಆಮೇಲೆ ವರ್ಗಾವಣೆ ಮಾಡಿ ಅಂತ ಹೇಳಿದ್ದೆ. ಇದಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ. ಹಿಂದೆಯೂ ಸಾಕಷ್ಟು ವರ್ಗಾವಣೆ ಆಗಿದೆ. ಹಾಗಾಂತ ಜೆಡಿಎಸ್ ನವರೆಲ್ಲರನ್ನೂ ವರ್ಗಾವಣೆ ಮಾಡೋಕಾಗುತ್ತಾʼʼ ಎಂದು ಮಂಡ್ಯದಲ್ಲಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಎಚ್.ಡಿ. ಕುಮಾರಸ್ವಾಮಿ ಅವರಿಗೆ ಈ ಚಾಲಕ ಹುಷಾರಾಗೋದು ಬೇಕಾಗಿಲ್ಲ. ಅವರು ನಾಗಮಂಗಲದಲ್ಲೇ ಚಿಕಿತ್ಸೆ ಕೊಡಿಸಬೇಕು ಎಂದು ಹಠ ಹಿಡಿದಿದ್ದರು. ನಾನು ಒತ್ತಾಯ ಮಾಡಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಿದ್ದೇನೆ ಎಂದರು.
ರಾಜಕೀಯದ ವಾಸನೆ ಇದೆ ಎಂದ ಸಿದ್ದರಾಮಯ್ಯ
ವರ್ಗಾವಣೆ ಇಲಾಖೆಯಿಂದ ನಡೆದಿದೆ. ಇದರಲ್ಲಿ ರಾಜಕೀಯ ಇರಬಹುದು ಎಂದು ನನಗೆ ಅನಿಸುತ್ತದೆ. ನನಗೆ ಪೂರ್ಣ ಮಾಹಿತಿ ಇಲ್ಲ. ವಿಚಾರಿಸುತ್ತೇನೆ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ ಅವರು.
ʻʻಅವರ ಹೆಂಡತಿ ಪಂಚಾಯತ್ ಮೆಂಬರ್, ಅಧ್ಯಕ್ಷರಾಗಲು ಪ್ರಯತ್ನ ಮಾಡ್ತಾ ಇದ್ದಾರೆ ಎಂದು ಹೇಳಲಾಗುತ್ತಿದೆ. ಇದು ರಾಜಕೀಯ ಇರಬಹುದು ಎಂಬುದು ನನಗೆ ಅನಿಸುತ್ತದೆ. ವರ್ಗಾವಣೆ ಆಯಿತು ಎಂದು ವಿಷ ಕುಡಿದ್ದಾರೆ ಎಂಬುದು ಸುದ್ದಿ. ಕುಮಾರಸ್ವಾಮಿ ಅವರ ಆರೋಪದಲ್ಲಿ ಹುರುಳಿಲ್ಲ. ಆದರೂ ವರದಿ ತರಿಸಿಕೊಳ್ಳುತ್ತೇನೆʼʼ ಎಂದು ಸಿದ್ದರಾಮಯ್ಯ ಹೇಳಿದರು. ಈ ನಡುವೆ ಜಗದೀಶ್ ಅವರ ಸಂಬಂಧಿಗಳು ಕುಮಾರಸ್ವಾಮಿ ಅವರ ಜತೆಗೆ ಕೆಲಸ ಮಾಡುತ್ತಿದ್ದು, ಇದರಿಂದಾಗಿ ಎಚ್.ಡಿಕೆ. ಈ ಪ್ರಕರಣ ಎತ್ತಿಕೊಂಡಿದ್ದಾರೆ ಎಂಬ ಮಾಹಿತಿಯೂ ಇದೆ.
ಇದನ್ನೂ ಓದಿ: HD Kumaraswamy : ಹಿಟ್ ಆ್ಯಂಡ್ ರನ್ ಅಲ್ಲ, ಗಾಳಿಯಲ್ಲಿ ಗುಂಡಲ್ಲ, ಟೈಮಿಗೆ ಸರಿಯಾಗಿ ಬಿಡ್ತೀನಿ ಎಂದ ಎಚ್‌ಡಿಕೆ