ಮೈಸೂರು: ʻʻಗುಂಬಜ್ ಒಡೆಯುತ್ತೇನೆ ಅನ್ನೋದಕ್ಕೆ ಪ್ರತಾಪ್ ಸಿಂಹ ಯಾವನ್ ರೀʼʼ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಮೈಸೂರು- ಊಟಿ ರಸ್ತೆಯಲ್ಲಿ ಕೆಲವು ಕಡೆ ಬಸ್ ಶೆಲ್ಟರ್‌ಗಳ ಮೇಲೆ ಗುಂಬಜ್ ಮಾದರಿಯ ನಿರ್ಮಾಣ ಮಾಡಿರುವ ವಿಚಾರಕ್ಕೆ ಸಂಬಂಧಿಸಿ ಗುಂಬಜ್‌ನಂಥ ನಿರ್ಮಾಣಗಳನ್ನು ತೆರವು ಮಾಡಲು ಸಂಸದ ಪ್ರತಾಪ್ ಸಿಂಹ ನಾಲ್ಕು ದಿನ ಗಡುವು ನೀಡಿದ್ದರು. ಅದರೊಳಗೆ ತೆಗೆಯದಿದ್ದರೆ ತಾವೇ ಒಡೆದು ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪ್ರತಾಪ್ ಸಿಂಹ ಅವರ ಈ ಮಾತಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ʻʻಸಂಸದನಾಗಿ ಕಾಮನ್ ಸೆನ್ಸ್ ಬೇಡ್ವಾ? ಏನು ಅವರು ಮನೆಯಿಂದ ದುಡ್ಡು ಹಾಕಿ ಬಸ್ ನಿಲ್ದಾಣ ಕಟ್ಟಿಸಿದ್ದಾರಾ? ಅಧಿಕಾರಿಗಳು ವಿನ್ಯಾಸ ಕೊಡುವಾಗ ಏನು ಮಾಡ್ತಿದ್ರು? ಈಗ ನಾನೇ ಒಡೆಯುತ್ತೇನೆ ಅಂದ್ರೆ ಅದ್ರ ಅರ್ಥ ಏನು?ʼʼ ಎಂದು ಪ್ರಶ್ನಿಸಿದರು.
ʻʻಈಗ ಅಶಾಂತಿ ನಿರ್ಮಾಣ ಮಾಡಲು ಈ ರೀತಿ ಮಾಡುತ್ತಿದ್ದಾರೆ. ಚುನಾವಣೆ ಸಂಧರ್ಭದಲ್ಲಿ ಮತವನ್ನು ಕ್ರೋಡೀಕರಣ ಮಾಡಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ. ಹೀಗೇ ಇರಬೇಕು ಎಂಬ ರೂಲ್ಸ್ ಎಲ್ಲಿದೆ? ಸರ್ಕಾರಿ ಅಧಿಕಾರಿಗಳು ಮಾಡಿರುವ ಪ್ಲ್ಯಾನ್ ಇದು. ಗುಂಬಜ್ ರೀತಿ ಇರುವುದನ್ನೆಲ್ಲ ಒಡೆದು ಬಿಡುತ್ತೀರ?ʼʼ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ʻʻಬಿಜೆಪಿಯ ಈ ತಂತ್ರಗಾರಿಕೆ ವರ್ಕ್ ಔಟ್ ಆಗಲ್ಲ. ಕರ್ನಾಟಕ ಮತ್ತು ಈ ದೇಶದ ಜನರು ಜಾತ್ಯತೀತರು. ಜಾತಿ ಧರ್ಮದ ವಿಚಾರದಲ್ಲಿ ಇಂಥ ತಂತ್ರಗಳನ್ನು ಜನರು ಒಪ್ಪುವುದಿಲ್ಲʼʼ ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ | ಶೆಲ್ಟರ್‌ನಲ್ಲಿ ಗುಂಬಜ್!| ಇನ್ನು 2 ದಿನದಲ್ಲಿ ಬಸ್ ಶೆಲ್ಟರ್ ಮೇಲಿನ ಗುಂಬಜ್ ತೆಗೆಯದಿದ್ದರೆ ನಾನೇ ಒಡೀತೇನೆ ಎಂದ ಪ್ರತಾಪ್ ಸಿಂಹ