ಆನೇಕಲ್: ಇಲ್ಲಿನ ಹುಲ್ಲಹಳ್ಳಿ ಬಳಿಯ ಚಿನ್ನಯ್ಯನಪಾಳ್ಯದ ಬುಜಂಗ ದಾಸಯ್ಯನ ಕೆರೆಯಲ್ಲಿ ವಿದ್ಯಾರ್ಥಿಯ ಮೃತದೇಹವೊಂದು ಪತ್ತೆಯಾಗಿದೆ. ಈತನ ಹೆಸರು ನ್ಯಾಷನಲ್ ಕಾಲೇಜಿನ ವಿನ್ಯಾಸ್ ಎಂದು ತಿಳಿದು ಬಂದಿದೆ. ಕಳೆದ ಶುಕ್ರವಾರ ಪಾರ್ಟಿಗೆ ತೆರಳುತ್ತಿದ್ದ ವೇಳೆ ರ‍್ಯಾಶ್ ಡ್ರೈವಿಂಗ್‌ನಿಂದ ನಿಯಂತ್ರಣ ತಪ್ಪಿ ಕಾರು ಕೆರೆಗೆ ಉರುಳಿ (Car Accident) ಬಿದ್ದಿತ್ತು.
ಈ ಘಟನೆಯಲ್ಲಿ 7 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದು, ಎಲ್ಲರೂ ಸೇಫ್ ಎಂದು ಪೊಲೀಸರು ಹೇಳಿದ್ದರು. ಆದರೆ ಅದೇ ಕೆರೆಯಲ್ಲೀಗ ಮೂರನೇ ದಿನ (ಆ.14) ವಿದ್ಯಾರ್ಥಿಯ ಮೃತ ದೇಹ ತೇಲಿ ಬಂದಿದೆ.
ಐಡಿ ಕಾರ್ಡ್‌ನಿಂದ ಗುರುತು ಪತ್ತೆ
ಇತ್ತೀಚೆಗೆ ಮೀನು ಹಿಡಿಯಲು ಕೆಲವರು ಬಂದಿದ್ದ ಕಾರಣದಿಂದ ಶವ ತೇಲಿ ಬಂದಾಗ ಇದು ಕಾರಿನಲ್ಲಿದ್ದ ವಿದ್ಯಾರ್ಥಿಯ ಶವವೋ ಅಥವಾ ಮೀನು ಹಿಡಿಯಲು ಬಂದವರದ್ದೋ ಎಂದು ಪೊಲೀಸರು ಗೊಂದಲಕ್ಕೆ ಸಿಲುಕಿದರು.
ಇದನ್ನೂ ಓದಿ | Bike Accident | ಮೂರು ಪ್ರತ್ಯೇಕ ಅಪಘಾತ; ಮೂವರು ಸ್ಥಳದಲ್ಲೇ ಸಾವು
ಸ್ಥಳೀಯರ ಸಹಾಯದಿಂದ ಕೆರೆಯಲ್ಲಿ ತೇಲುತ್ತಿದ್ದ ಮೃತ ದೇಹವನ್ನು ಪೊಲೀಸರು ಹೊರ ತೆಗೆದರು. ಮೃತನ ಪ್ಯಾಂಟ್ ಜೇಬಿನಲ್ಲಿ ಕಾಲೇಜಿನ ಐಡಿ ಕಾರ್ಡ್, ಫೋನ್, ಎಟಿಎಂ ಕಾರ್ಡ್ ಪತ್ತೆಯಾದಾಗ ಇದು ವಿದ್ಯಾರ್ಥಿಯ ಶವ ಎನ್ನುವುದು ತಿಳಿದು ಬಂದಿದೆ.
ಪೊಲೀಸರ ನಿರ್ಲಕ್ಷ್ಯ?
ಆಗಸ್ಟ್ 12 ರಂದು ಕಾರು ಕೆರೆಗೆ ಬಿದ್ದಾಗಲೇ ಬನ್ನೇರುಘಟ್ಟ ಪೊಲೀಸರು ಎಚ್ಚರ ವಹಿಸಬೇಕಿತ್ತು ಎಂಬ ಮಾತು ಸ್ಥಳೀಯರಲ್ಲಿ ಕೇಳಿ ಬಂದಿದೆ. ಘಟನೆ ನಡೆದಾಗ ಪ್ರಕರಣ ದಾಖಲಿಸಿಕೊಂಡು ಸುಮ್ಮನಾಗಿದ್ದ ಬನ್ನೇರುಘಟ್ಟ ಪೊಲೀಸರ ನಿರ್ಲಕ್ಷ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಘಟನೆ ನಡೆದಾಗ ವಿದ್ಯಾರ್ಥಿಗಳನ್ನು ಕರೆದು ವಿಚಾರಣೆ ನಡೆಸಬೇಕಿತ್ತು. ಪೊಲೀಸರು ಅದನ್ನೂ ಸರಿಯಾಗಿ ಮಾಡಿಲ್ಲ.
ಅನುಮಾನದ ಹೊಗೆ
ಅಂದು ಕಾರನ್ನು ಜೆಸಿಬಿ ಮೂಲಕ ಮೇಲಕ್ಕೆತ್ತುತ್ತಿದ್ದಂತೆ ವಿದ್ಯಾರ್ಥಿಗಳು ಪರಾರಿಯಾಗಿದ್ದರು. ಜತೆಯಲ್ಲಿದ್ದ ಸ್ನೇಹಿತನ ಬಗ್ಗೆ ಮಾಹಿತಿ ನೀಡದೆ ಅವರು ಕಾಲ್ಕಿತ್ತಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕಾರಿನೊಳಗೆ ಇದ್ದವರೆಲ್ಲ ಕ್ರೈಸ್ಟ್ ಕಾಲೇಜಿನ ವಿದ್ಯಾರ್ಥಿಗಳೆಂದು ಹೇಳಲಾಗುತ್ತಿತ್ತು. ಆದರೆ ಈಗ ಮೃತದೇಹ ಪತ್ತೆಯಾಗಿರುವುದು ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿಯದ್ದಾಗಿದೆ. ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿ ಕ್ರೈಸ್ಟ್ ಕಾಲೇಜಿನ ವಿದ್ಯಾರ್ಥಿಗಳ ಜತೆ ಹೋಗಿದ್ದನೆ ಎಂಬ ಪ್ರಶ್ನೆ ಎದ್ದಿದೆ.
ಇದನ್ನೂ ಓದಿ | Bike Accident | ಭಿಕ್ಷುಕನಿಗೆ ಡಿಕ್ಕಿ ಹೊಡೆದು ಪಲ್ಟಿಯಾದ ಬೈಕ್: ವೃದ್ಧ, ಸವಾರ ಇಬ್ಬರೂ ಮೃತ್ಯು