ಬೆಂಗಳೂರು: ಅಗ್ನಿಶಾಮಕ ದಳ ಅಂದರೆ ಬೆಂಕಿ ಆರಿಸುವ ಕೆಲಸ ಮಾತ್ರ ಮಾಡೋದಲ್ಲ. ಯಾರಿಗೆ ಏನು ತೊಂದರೆ ಆದರೂ, ಯಾರು ಕಷ್ಟದಲ್ಲಿ ಸಿಲುಕಿದರೂ ಬಂದು ರಕ್ಷಣೆ ಮಾಡುತ್ತಾರೆ ಅದರ ಸಿಬ್ಬಂದಿ. ಈ ಬಾರಿ ಅವರು ರಕ್ಷಣೆಗೆ ಮುಂದಾಗಿದ್ದು ಮನುಷ್ಯರನ್ನಲ್ಲ, ಮುಂದೇನು ಎಂದು ದಿಕ್ಕು ತೋಚದೆ ಕುಳಿತಿದ್ದ ಒಂದು ಬೆಕ್ಕನ್ನು.
ಅಚ್ಚರಿ ಎಂದರೆ ನನ್ನನ್ನು ರಕ್ಷಿಸಿ ಎಂದು ಬೆಕ್ಕು ಕೂಗಿ ಕರೆದದ್ದೂ ಅಲ್ಲ. ಬೆಕ್ಕು ಕಷ್ಟದಲ್ಲಿದೆ ಅಂತ ನೋಡಿದವರೂ ಕರೆ ಮಾಡಿದ್ದಲ್ಲ. ಬೆಕ್ಕಿನ ಮಾಲೀಕರೂ ೧೦೧ ನಂಬರ್‌ಗೆ ಕರೆ ಮಾಡಿ ನಮ್ಮ ಬೆಕ್ಕು ಈ ತರ ಸಿಲುಕಿಕೊಂಡಿದೆ. ದಯವಿಟ್ಟು ಕಾಪಾಡಿ ಎಂದು ಕೇಳಿಕೊಂಡಿಲ್ಲ.
ಯಾರೋ ಸ್ಥಳೀಯರು ಟ್ವಿಟರ್‌ನಲ್ಲಿ ತಮ್ಮ ಬೆಕ್ಕು ಕಟ್ಟಡದ ಮೇಲ್ಭಾಗದಲ್ಲಿ ಸಿಕ್ಕಿ ಹಾಕಿಕೊಂಡಿದೆ ಎಂದು ಬರೆದುಕೊಂಡಿದ್ದರು. ಇದನ್ನು ನೋಡಿದ ಅಗ್ನಿ ಶಾಮಕದಳದವರು ಕೂಡಲೇ ಧಾವಿಸಿ ಮೂಕ ಪ್ರಾಣಿಯನ್ನು ರಕ್ಷಣೆ ಮಾಡಿದರು.
ಈ ಘಟನೆ ನಡೆದಿರುವುದು ಬೆಂಗಳೂರಿನ ಬಾಣಸವಾಡಿಯ ಕಲ್ಯಾಣ ನಗರದಲ್ಲಿ. ಇಲ್ಲಿನ ರೆಸಿಡೆನ್ಶಿಯಲ್ ಕಟ್ಟಡದ ತುತ್ತ ತುದಿಯಲ್ಲಿ ಬೆಕ್ಕು ಸಿಲುಕಿತ್ತು. ಅಲ್ಲಿಂದ ಕೆಳಗೆ ಬರಲು ಸಾಧ್ಯವಾಗದೆ ಒದ್ದಾಡುತ್ತಿತ್ತು. ರಾತ್ರಿಯ ನೀರವತೆಯಲ್ಲಿ ಬೆಕ್ಕು ಅಳುತ್ತಿರುವುದನ್ನು ಯಾರೋ ಕೇಳಿಸಿಕೊಂಡಿದ್ದರು. ಬಳಿಕ ಅದು ಎಲ್ಲರಿಗೂ ಗೊತ್ತಾಯಿತು. ಆದರೆ, ರಕ್ಷಿಸುವ ದಾರಿ ಯಾರಿಗೂ ಕಾಣಲಿಲ್ಲ. ಅಥವಾ ದಾರಿ ಗೊತ್ತಿದ್ದವರು ಯಾರೂ ಈ ಬೆಕ್ಕಿನ ಬಗ್ಗೆ ಮಾನವೀಯವಾಗಿ ಯೋಚನೆ ಮಾಡಲಿಲ್ಲ.
ಈ ನಡುವೆ, ಸ್ಥಳೀಯರೊಬ್ಬರು ನಮ್ಮ ಮನೆ ಪಕ್ಕದಲ್ಲಿ ಈ ರೀತಿ ಬೆಕ್ಕೊಂದು ಕಟ್ಟಡದ ಮೇಲೆ ಸಿಕ್ಕಿಬಿದ್ದಿದೆ ಎಂದು ಟ್ವೀಟ್ ಮಾಡಿದ್ದರು. ಇದನ್ನು ಗಮನಿಸಿದ ಅಗ್ನಿಶಾಮಕ ದಳದ ಮಾನವೀಯ ಸಿಬ್ಬಂದಿಯೊಬ್ಬರು ತಕ್ಷಣವೇ ತಮ್ಮ ಇತರ ಸಿಬ್ಬಂದಿಗೆ ವಿಷಯ ತಿಳಿಸಿದರು. ಎಲ್ಲರೂ ಮಾತನಾಡಿಕೊಂಡು ಬೆಕ್ಕನ್ನು ರಕ್ಷಿಸಲು ಮುಂದಾದರು. ಹೀಗೆ ಅವರೆಲ್ಲರ ಮಾನವೀಯ ನಿಲುವಿನಿಂದ ಅಗ್ನಿಶಾಮಕದಳದ ವಾಹನವೇ ರೆಸಿಡೆನ್ಶಿಯಲ್ ಕಟ್ಟಡದ ಮುಂದೆ ಬಂದು ನಿಂತಿತು.
ನೋಡಿದರೆ ಬೆಕ್ಕು ತುಂಬ ಎತ್ತರದಲ್ಲಿ ಸಿಕ್ಕಿಹಾಕಿಕೊಂಡಿತು. ಆದರೆ, ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದ ಸಿಬ್ಬಂದಿ ತುಂಬಾ ಸಾಹಸ ಮಾಡಿ ವಾಹನ ಬಳಸಿ, ಕೋಲುಗಳನ್ನು ಬಳಸಿ ಬೆಕ್ಕನ್ನು ಹೇಗೋ ಇಳಿಸಿದರು. ಎದುರಾದ ಸಂಕಷ್ಟದಿಂದ ಭಯಗೊಂಡಿದ್ದ, ಆಹಾರವಿಲ್ಲದೆ ಬಸವಳಿದಿದ್ದ ಬೆಕ್ಕು ಬದುಕಿದೆಯಾ ಬಡಜೀವ ಎಂಬಂತೆ ಭಯದಿಂದಲೇ ಕೆಳಗೆ ಇಳಿದುಬಂತು. ಅಗ್ನಿಶಾಮಕ ದಳದ ಸಿಬ್ಬಂದಿ ತಾವೊಂದು ದೊಡ್ಡ ಕೆಲಸ ಮಾಡಿದಂತೆ ತೃಪ್ತಿಯ ನಗು ಬೀರಿದರು. ಅಗ್ನಿಶಾಮಕ ದಳದ ಸಿಬ್ಬಂದಿಯ ಈ ಮಾನವೀಯ ಕಾರ್ಯಕ್ಕೆ ಸ್ಥಳೀಯರು ಶಹಭಾಸ್ ಹೇಳಿದ್ದಾರೆ. ಹಿರಿಯ ಅಧಿಕಾರಿಗಳೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ |Viral Video | ನಂಗೂ ಮಸಾಜ್ ಬೇಕು ಎಂದು ಮುಖ ಕೊಟ್ಟ ಬೆಕ್ಕು!