Site icon Vistara News

Cauvery Dispute : ಸುಪ್ರೀಂನಲ್ಲಿ ನಾಳೆ ಕಾವೇರಿ ಕದನ; ತ.ನಾಡು ಕೇಳಿದಷ್ಟು ನೀರು ಬಿಡಲಾಗದು ಎಂದ ಕರ್ನಾಟಕ

Cauvery supreme court

ಬೆಂಗಳೂರು: ಕಾವೇರಿ ನೀರು ಬಿಡುಗಡೆ (Cauvery Water Dispute) ಮಾಡುವಂತೆ ಕರ್ನಾಟಕಕ್ಕೆ ಸೂಚಿಸುವಂತೆ ಕೋರಿ ತಮಿಳುನಾಡು ಸಲ್ಲಿಸಿರುವ ಅರ್ಜಿಯ ವಿಚಾರಣೆ ಶುಕ್ರವಾರ ಸುಪ್ರೀಂಕೋರ್ಟ್‌ನಲ್ಲಿ (Supreme court) ನಡೆಯಲಿದೆ. ಈ ಪ್ರಕರಣದ ವಿಚಾರಣೆಗಾಗಿ ಸುಪ್ರೀಂಕೋರ್ಟ್‌ ಈಗಾಗಲೇ ಸಲ್ಲಿಸಿರುವ ಪ್ರತ್ಯೇಕ ಪೀಠದಲ್ಲಿ ವಿಚಾರಣೆ ನಡೆಯಲಿದೆ. ಈ ನಡುವೆ ಕರ್ನಾಟಕ ಸರ್ಕಾರ ಅಫಿಡವಿಟ್‌ (Affidavit from Karnataka) ಒಂದನ್ನು ಸಲ್ಲಿಸಿದೆ ತಮಿಳುನಾಡಿನ ಅರ್ಜಿಗೆ ಯಾವುದೇ ಮಾನ್ಯತೆ ಇಲ್ಲ ಮತ್ತು ಅದು ಕೇಳಿದಷ್ಟು ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ರಾಜ್ಯಕ್ಕೆ ದಿನಕ್ಕೆ 24,000 ಕ್ಯೂಸೆಕ್ ನೀರು ಹರಿಸಬೇಕು ಎಂದು ತಮಿಳುನಾಡು ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು. ತಮಿಳುನಾಡಿನ ಅರ್ಜಿ ಯಾವುದೇ ಕಾನೂನು ಆಧಾರ ಹೊಂದಿಲ್ಲ ಎಂದು ಕರ್ನಾಟಕ ಸರ್ಕಾರ ತಿಳಿಸಿದೆ.

ತನ್ನ ಪಾಲಿನ ನೀರನ್ನು ಕರ್ನಾಟಕದಿಂದ ಬಿಡಬೇಕು ಎಂದು ತಮಿಳುನಾಡು ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು. ಇದರಿಂದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸಿವೈ ಚಂದ್ರಚೂಡ್ ಅವರು ಎರಡು ಸರ್ಕಾರಗಳ ಮನವಿಯನ್ನು ಆಲಿಸಲು ಪೀಠವನ್ನು ರಚಿಸಿದ್ದರು.

ತಮಿಳುನಾಡು ಸರ್ಕಾರ ನೀರು ಹಂಚಿಕೆ ಒಪ್ಪಂದದ ಆಧಾರದಲ್ಲಿ ಕರ್ನಾಟಕಕ್ಕೆ ಆದೇಶ ನೀಡಬೇಕು ಎಂದು ಸುಪ್ರೀಂಕೋರ್ಟ್‌ನಲ್ಲಿ ಮನವಿ ಮಾಡಿತ್ತು. ಸುಪ್ರೀಂ ಕೋರ್ಟ್‌ ಕರ್ನಾಟಕದ ಅಭಿಪ್ರಾಯ ಕೇಳಿತ್ತು. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಫಿಡವಿಟ್‌ ಸಿದ್ಧಪಡಿಸುವಂತೆ ಅಡ್ವೊಕೇಟ್ ಜನರಲ್‌ಗೆ ಸೂಚಿಸಿದ್ದು, ಅವರು ಸಿದ್ಧಪಡಿಸಿದ ಅಫಿಡವಿಟ್‌ನ್ನು ಸಲ್ಲಿಸಲಾಗಿದೆ.

ಇದನ್ನೂ ಓದಿ: Cauvery water dispute : ಕಾವೇರಿ ಜಲ ವಿವಾದ; ಕಾನೂನು ಹೋರಾಟಕ್ಕೆ ಸರ್ವಪಕ್ಷ ಮುಖಂಡರ ತೀರ್ಮಾನ

ಅಫಿಡವಿಟ್‌ನಲ್ಲಿರುವ ಅಂಶಗಳೇನು?

  1. ಈ ವರ್ಷ ರಾಜ್ಯದಲ್ಲಿ ವಾಡಿಕೆಯಷ್ಟು ಮಳೆಯಾಗಿಲ್ಲ. ಮಳೆ ಕೊರತೆಯ ಹಿನ್ನೆಲೆ ನಮ್ಮ ರೈತರಿಗೂ ನೀರಿನ ಅವಶ್ಯಕತೆ ಇದೆ. ಆದ್ದರಿಂದ ತಮಿಳುನಾಡು ಕೇಳಿರುವಷ್ಟು ನೀರನ್ನು ಬಿಡಲು ಆಗುವುದಿಲ್ಲ.
  2. ಸೆಪ್ಟೆಂಬರ್ 2023ಕ್ಕೆ ನಿಗದಿಪಡಿಸಿದಂತೆ 36.76 ಟಿಎಂಸಿ ನೀರನ್ನು ಬಿಡುಗಡೆ ಮಾಡಬೇಕು ಎಂದು ತಮಿಳುನಾಡು ಸಲ್ಲಿಸಿದ ಅರ್ಜಿಗೆ ಯಾವುದೇ ಕಾನೂನು ಆಧಾರವಿಲ್ಲ. ಏಕೆಂದರೆ, ಈ ನೀರಿನ ಪ್ರಮಾಣವನ್ನು ಸಾಮಾನ್ಯ ಮಳೆ ವರ್ಷದಲ್ಲಿ ನಿಗದಿಪಡಿಸಲಾಗಿದೆ. ಆದರೆ, ಈ ಬಾರಿ ಇದುವರೆಗೂ ಹೆಚ್ಚಿನ ಮಳೆಯಾಗಿಲ್ಲ.
  3. ಕರ್ನಾಟಕದ ರೈತರು ಸಂಕಷ್ಟದಲ್ಲಿದ್ದಾರೆ. ಹಾಗಾಗಿ ತಮಿಳುನಾಡಿನ ವಾದ ಇಲ್ಲಿ ಅನ್ವಯಿಸುವುದಿಲ್ಲ.
  4. ಪ್ರಸ್ತುತ ಸಮಸ್ಯೆ ಸೃಷ್ಟಿ ಮಾಡಿರುವುದೇ ತಮಿಳುನಾಡು. ಕಾರಣವಿಲ್ಲದೆ ಮೇಕೆದಾಟು ಯೋಜನೆಗೆ ವಿರೋಧಿಸುತ್ತಿದೆ. ಮೇಕೆದಾಟು ಕುಡಿಯುವ ನೀರಿನ ಯೋಜನೆಯಾಗಿದ್ದು, ಇದರಿಂದ ತಮಿಳುನಾಡಿಗೆ ಹೆಚ್ಚು ಸಹಾಯವಾಗುತ್ತದೆ. ಮಳೆ ಕೊರತೆಯ ವರ್ಷದಲ್ಲಿ ತಮಿಳುನಾಡಿಗೆ ನೀರು ಹರಿಸಬಹುದು. 13 ಟಿಎಂಸಿ ನೀರು ಬಳಕೆ ಮಾಡಬಹುದು.
  5. ಕಾವೇರಿ ಜಲಾನಯನದಲ್ಲಿರುವ ನೀರು ಕರ್ನಾಟಕಕ್ಕೆ ಸಾಕಾಗುವುದಿಲ್ಲ. ಬೆಳೆ ಮತ್ತು ಕುಡಿಯುವ ನೀರಿಗೆ ಕೊರತೆ ಆಗುತ್ತದೆ. ಬೆಂಗಳೂರಿನಂತಹ ಮಹಾ ನಗರಕ್ಕೂ ನೀರಿನ ಕೊರತೆಯಾಗಲಿದೆ. ಆದಾಗ್ಯೂ ಕರ್ನಾಟಕ ತಮಿಳುನಾಡಿಗೆ ನೀರು ಹರಿಸಿದೆ. ಪ್ರಾಧಿಕಾರದ ಆದೇಶವನ್ನು ಕರ್ನಾಟಕ ಪಾಲಿಸಿದೆ.
  6. ಜಲವರ್ಷದ ಆರಂಭದಲ್ಲಿ ತಮಿಳುನಾಡು ಜಲಾಶಯಗಳಲ್ಲಿ 69 ಟಿಎಂಸಿ ನೀರಿತ್ತು. ಕರ್ನಾಟಕ ಅಗಸ್ಟ್ 22ರವರೆಗೂ 26 ಟಿಎಂಸಿ ನೀರು ಹರಿಸಿದೆ. ಇದರಿಂದ 96 ಟಿಎಂಸಿ ನೀರು ತಮಿಳುನಾಡು ಬಳಿ ಸಂಗ್ರಹವಾದ ಹಾಗೆ ಆಗಿದೆ.
  7. ಸದ್ಯ ತಮಿಳುನಾಡು 21 ಟಿಎಂಸಿ ನೀರಿದೆ ಎಂದು ಹೇಳುತ್ತಿದೆ. ಕುರುವೈ ಬೆಳೆಗೆ 32 ಟಿಎಂಸಿ ನೀರು ಬೇಕಾಗಿದೆ. ಈಗಾಗಲೇ 22 ಟಿಎಂಸಿ ನೀರು ಬಳಕೆ ಮಾಡಿಕೊಂಡಿದೆ. ಬಾಕಿ 9.83 ಟಿಎಂಸಿ ನೀರು ಸೆಪ್ಟೆಂಬರ್ ಅಂತ್ಯದವರೆಗೂ ಬಳಸಬಹುದು. ಆದರೆ ಹೆಚ್ಚು ಪ್ರದೇಶದಲ್ಲಿ ಕುರುವೈ ಬೆಳೆದು ಅಗತ್ಯಕ್ಕಿಂತ ಹೆಚ್ಚು ನೀರಿನ ಕೇಳುತ್ತಿದೆ.
  8. 1.85 ಲಕ್ಷ ಎಕರೆ ಮೀರಿ ಕುರುವೈ ಬೆಳೆ ಬೆಳೆದಿದೆ. ಇದು ನ್ಯಾಯಾಧಿಕರಣ ಐತೀರ್ಪು ಉಲ್ಲಂಘನೆಯಾಗಿದೆ. ಕಾವೇರಿ ನೀರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ : Cauvery Dispute: ನಮ್ಮ ನೀರು ನಮ್ಮ ಹಕ್ಕು ಅಂತ ಹೋರಾಟ ಮಾಡಿ ಈಗ ಕಾವೇರಿ ನೀರು ಬಿಟ್ಟಿದ್ದಾರೆ: ಎಚ್‌ಡಿಕೆ ಕಿಡಿ

Exit mobile version