ಬೆಂಗಳೂರು: ದೇಶಾದ್ಯಂತ ಪಿಎಫ್‌ಐ ಕಚೇರಿಗಳು ಹಾಗೂ ಮುಖಂಡರ ನಿವಾಸಗಳ ಮೇಲೆ ಗುರುವಾರ ಮುಂಜಾನೆ ಎನ್‌ಐಎ ದಾಳಿ ರಾಜ್ಯದಲ್ಲೂ ಕಾರ್ಯಗತವಾಗಿತ್ತು. ಬೆಂಗಳೂರು ಮತ್ತು ಮಂಗಳೂರಿನಲ್ಲಿ ಈ ದಾಳಿ ನಡೆದಿದೆ. ಆದರೆ, ಇದರ ನಡುವೆಯೇ ಬೆಂಗಳೂರು ಸೇರಿದಂತೆ ಏಳು ಜಿಲ್ಲೆಗಳಲ್ಲಿ ರಾಜ್ಯ ಪೊಲೀಸರು ಕೂಡಾ ದಾಳಿ ನಡೆಸಿದ್ದಾರೆ. ಇದು ಉಗ್ರ ಚಟುವಟಿಕೆಯನ್ನು ಬೆಂಬಲಿಸುತ್ತಿರುವ ಆರೋಪ ಎದುರಿಸುತ್ತಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಕ್ಕೆ ಇದು ದೊಡ್ಡ ಆಘಾತವಾಗಿದೆ.
ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಪಿಎಫ್ಐ ಕಚೇರಿ ಹಾಗೂ ನಾಯಕರ ಮನೆ ಮೇಲೆ ಗುರುವಾರ ಬೆಳಗ್ಗೆ ಎನ್ಐಎ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮತ್ತೊಂದೆಡೆ ಅದೇ ಪಿಎಫ್ಐ ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಆಧಾರದ ಮೇಲೆ ಸಿಸಿಬಿ ಹಾಗೂ ಬೆಂಗಳೂರಿನ ಪೂರ್ವ ವಿಭಾಗ ಪೊಲೀಸರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೆಗಾ ರೇಡ್ ಮಾಡಿ ಭಯೋತ್ಪಾದನ ಕೃತ್ಯಗಳಲ್ಲಿ ತೊಡಗಿದ್ದ ಬರೋಬ್ಬರಿ 14 ಮಂದಿಯನ್ನು ವಶಪಡಿಸಿಕೊಂಡಿದ್ದಾರೆ.
ಎನ್‌ಐಎ ದಾಳಿ ಬೆಂಗಳೂರು ಮತ್ತು ಮಂಗಳೂರಿನಲ್ಲಿ ನಡೆದರೆ, ಸಿಸಿಬಿ ಹಾಗೂ ಬೆಂಗಳೂರು ಪೊಲೀಸರು ಬೆಂಗಳೂರು, ಉತ್ತರ ಕನ್ನಡ, ಶಿವಮೊಗ್ಗ, ದಾವಣಗೆರೆ, ಮೈಸೂರು, ಕಲಬುರಗಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ದಾಳಿ ನಡೆಸಿದರು.
ಯಾಕೆ ನಡೆಯಿತು ಈ ದಾಳಿ?
ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡಿಸಿ, ಭಯೋತ್ಪಾದನಾ ಕೃತ್ಯವೆಸಗಲು ಸಿದ್ದತೆ ನಡೆಸುತ್ತಿದ್ದ ಶಂಕಿತರನ್ನು ಶಿವಮೊಗ್ಗ ಹಾಗೂ ಮಂಗಳೂರಿನಲ್ಲಿ ವಶಪಡಿಸಿಕೊಂಡ ಬೆನ್ನಲ್ಲೇ ಬೆಂಗಳೂರಿನಲ್ಲಿ ಕೆ.ಜಿ. ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿತ್ತು. ಆರೋಪಿಗಳ ವಿಚಾರಣೆ ವೇಳೆ ಸಿಕ್ಕಿದ ಮಾಹಿತಿ ಆಧರಿಸಿ ಏಳು ಜಿಲ್ಲೆಗಳಲ್ಲಿದ್ದ ಪಿಎಫ್‌ಐ ನಾಯಕರನ್ನು ಟಾರ್ಗೆಟ್ ಮಾಡಲಾಯಿತು.
ಪಿಎಫ್ಐ ಕಾರ್ಯಕರ್ತರಿಗೆ ಭಯೋತ್ಪಾದಕ ಕೃತ್ಯವೆಸಗಲು ತರಬೇತಿ ನೀಡಲಾಗುತ್ತಿದೆ ಎನ್ನುವ ಮಾಹಿತಿ ಸಿಕ್ಕಿತ್ತು. ಆ ಮಾಹಿತಿ ಆಧಾರದ ಮೇಲೆ ಕೆ.ಜಿ. ಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಪ್ರಕರಣದಲ್ಲಿ ಪ್ರಮುಖವಾಗಿ ಕೇಳಿ ಬಂದಿದ್ದ ಆರೋಪಿಗಳಾದ ಬೆಂಗಳೂರಿನ ನಾಸಿರ್ ಹಾಗೂ ಮನ್ಸೂರ್‌ನನ್ನು ವಶಕ್ಕೆ ಪಡೆದ ಕೆ.ಜಿ. ಹಳ್ಳಿ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದರು.. ವಿಚಾರಣೆ ವೇಳೆ ಆರೋಪಿಗಳ ನೆಟ್ ವರ್ಕ್ ಕೇವಲ ಬೆಂಗಳೂರಿಗೆ ಮಾತ್ರವಲ್ಲದೇ ರಾಜ್ಯವ್ಯಾಪಿ ಇದೆ ಅನ್ನೋ ಸ್ಪೋಟಕ ಮಾಹಿತಿ ಆರೋಪಿಗಳ ಬಾಯಿಂದ ಹೊರ ಬಿದ್ದಿತ್ತು. ತುರ್ತು ಸಭೆ ನಡೆಸಿದ ಪೊಲೀಸರು ದಾಳಿಗೆ ತೀರ್ಮಾನಿಸಿದರು.
ತಡರಾತ್ರಿಯೇ ರೆಡಿ ಆಯ್ತು ಪ್ಲ್ಯಾನ್
ಅದೇ ರೀತಿ ತಡರಾತ್ರಿಯೇ ರಾಜ್ಯದ ಯಾವ ಯಾವ ಸ್ಥಳಗಳಲ್ಲಿ ದಾಳಿ ಮಾಡಬೇಕು ಎನ್ನುವ ಬಗ್ಗೆ ತೀರ್ಮಾನ ಮಾಡಿ ಬೆಳಗಾಗುವುದರ ಒಳಗೆ ಬೆಂಗಳೂರು, ಶಿವಮೊಗ್ಗ, ಮೈಸೂರು, ಉತ್ತರ ಕನ್ನಡ, ಕೊಪ್ಪಳ, ದಾವಣಗೆರೆ ಹಾಗೂ ಕಲಬುರಗಿಯಲ್ಲಿ ಕಾರ್ಯಾಚರಣೆ ನಡೆಸಿ,14 ಮಂದಿ ಪಿಎಫ್ಐ ಸಂಘಟನೆ ಸದಸ್ಯರನ್ನು ಬಂಧಿಸಲಾಯಿತು.
ಆಡುಗೋಡೆ ಸೆಲ್‌ನಲ್ಲಿ ವಿಚಾರಣೆ
ಬೆಂಗಳೂರಿನಲ್ಲಿ ವಶಕ್ಕೆ ಪಡೆದಿರುವ ಮನ್ಸೂರ್‌ನನ್ನು ಆಡುಗೋಡಿ ಟೆಕ್ನಿಕಲ್ ಸೆಲ್ ನಲ್ಲಿ ಇಟ್ಟು ವಿಚಾರಣೆ ನಡೆಸಲಾಗುತ್ತಿದೆ. ರಾಜ್ಯದ ಬೇರೆ ಭಾಗಗಳಲ್ಲಿ ವಶಕ್ಕೆ ಪಡೆದಿರುವ ಆರೋಪಿಗಳನ್ನು ಬೆಂಗಳೂರಿಗೆ ಕರೆ ತರಲಾಗುತ್ತಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಿ ವಶಕ್ಕೆ ತೆಗೆದುಕೊಳ್ಳಲು ಪೊಲೀಸರು ತೀರ್ಮಾನಿಸಿದ್ದಾರೆ. ಆರೋಪಿಗಳನ್ನ ವಶಕ್ಕೆ ಪಡೆದ ಬಳಿಕ ಮತ್ತಷ್ಟು ಸ್ಪೋಟಕ ಮಾಹಿತಿ ಜೊತೆಗೆ ಮತ್ತಷ್ಟು ಆರೋಪಿಗಳ ಸೆರೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ NIA Raid | ಪಿಎಫ್ಐ ನಿಷೇಧ ಪ್ರಕ್ರಿಯೆಯ ಮೊದಲ ಹೆಜ್ಜೆಯೇ ಇಂದಿನ ಎನ್ಐಎ ದಾಳಿ?