ಬೆಂಗಳೂರು: ರಾಜಭವನ ಮುತ್ತಿಗೆ ಹಾಕಲು ಹೊರಟ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ಕ್ವೀನ್ಸ್ ರಸ್ತೆಯ ಬಾಳೆಕುಂದ್ರಿ ವೃತ್ತದ ಬಳಿ ಪೊಲೀಸರು ವಶಕ್ಕೆ ಪಡೆದರು. ಇದಕ್ಕೂ ಮೊದಲು ಕಾಂಗ್ರೆಸ್ ಭವನದಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಂವಿಧಾನಕ್ಕೆ ಮೂರು ಕಾಸಿನ ಬೆಲೆ ಕೊಡದ ಬಿಜೆಪಿ ನಾಯಕರು ಪ್ರತಿಭಟನೆಯ ಹಕ್ಕನ್ನೇ ಕಿತ್ತುಕೊಳ್ಳುತ್ತಿದ್ದಾರೆ. ಬ್ರಿಟಿಷರು ಇಂಥ ನೀಚ ಕೆಲಸ ಮಾಡಿರಲಿಲ್ಲ. ಆದರೆ ಬಿಜೆಪಿ ನೀಚ ಕೆಲಸ ಮುಂದುವರಿಸಿದೆ. ಇದನ್ನು ಹೀಗೆ ಬಿಟ್ಟರೆ ಸಮಾಜ ಹಾಳಾಗಲಿದೆ. ಹೋರಾಟದ ಹಕ್ಕು ತೆಗೆಯಲು ಸಾಧ್ಯವಿಲ್ಲ ಸಂವಿಧಾನಕ್ಕೆ ಬಿಜೆಪಿಯವರು ಬೆಲೆ ಕೊಡುತ್ತಿಲ್ಲ. ಬದಲಿಗೆ ದಬ್ಬಾಳಿಕೆಯನ್ನ ಮಾಡುತ್ತಿರುವುದಾಗಿ ಕಿಡಿಕಾರಿದರು.
ಇದನ್ನೂ ಓದಿ | National Herald case| ಶುಕ್ರವಾರ ವಿಚಾರಣೆಗೆ ಹಾಜರಾಗಲು ರಾಹುಲ್‌ಗೆ ಮತ್ತೆ ಇಡಿ ಸಮನ್ಸ್
ದೆಹಲಿಯಲ್ಲಿ ಸಂಸದ ಡಿ.ಕೆ.ಸುರೇಶ್, ವೇಣುಗೋಪಾಲ್ ವಿರುದ್ಧ ಹೇಗೆ ನಡೆದುಕೊಂಡಿದ್ದಾರೆ ಅಂದರೆ ಪ್ರಜಾಪ್ರಭುತ್ವದ ಕಗ್ಗೊಲೆ ನಡೆದಿದೆ. ಇವರಿಗೆ ತಕ್ಕ ಪಾಠ ಕಲಿಸಬೇಕು, ಆ ನಿಟ್ಟಿನಲ್ಲಿ ಕಾಂಗ್ರೆಸ್ ಹೋರಾಟಕ್ಕಿಳಿದಿದೆ. ಇವತ್ತು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದು ನಾಳೆ ಬೇರೆ ಪಕ್ಷಕ್ಕೆ ಆಗಲಿದೆ. ಹೀಗಾಗಿ ಇದನ್ನ ಎಲ್ಲರೂ ಪ್ರತಿಭಟಿಸಬೇಕು, ಇತರೆ ಪಕ್ಷದ ನಾಯಕರಾದ ಮಮತಾ ಬ್ಯಾನರ್ಜಿ, ಸ್ಟಾಲಿನ್, ಶರದ್ ಪವಾರ್, ಅಖಿಲೇಶ್ ಯಾದವ್ ಎಲ್ಲರೂ ವಿರೋಧಿಸಬೇಕು ಎಂದರು.
ಇದು ದೇಶದ ಮೇಲೆ ಮಾಡಿರುವ ಗದಾಪ್ರಹಾರ, ಇದನ್ನ ಎಲ್ಲರೂ ಖಂಡಿಸಬೇಕು. ಇಂದು ಮೊದಲ ಹಂತವಾಗಿ ರಾಜ್ಯಪಾಲರಿಗೆ ಮನವಿ ಸಲ್ಲಿಸ್ತೇವೆ. ಅವರ ಮೂಲಕ ರಾಷ್ಟ್ರಪತಿಗಳಿಗೆ ದೂರು ನೀಡಲಾಗುತ್ತದೆ. ರಾಷ್ಟ್ರಪತಿಗಳು ಪ್ರಜಾಪ್ರಭುತ್ವ ಎತ್ತಿಹಿಡಿಯಬೇಕು. ಕೇಂದ್ರ ಬಿಜೆಪಿ ಸರ್ಕಾರ ಸುಳ್ಳು ಆರೋಪ ಮಾಡುತ್ತಿದ್ದು, ಮನಿ ಲಾಂಡ್ರಿಂಗ್ ಆರೋಪಿಸಿ ಸುಬ್ರಹ್ಮಣಿಯನ್ ಸ್ವಾಮಿ ನೀಡಿದ ದೂರಿನಡಿ ತನಿಖೆಗೆ ಮುಂದಾಗಿದ್ದಾರೆ. ರಾಹುಲ್, ಸೋನಿಯಾ ಅವರ ವರ್ಚಸ್ಸು ಕಡಿಮೆ ಮಾಡೋಕೆ ಯತ್ನ ಇದಾಗಿದೆ. ಭಾರತ್ ಜೂಡೋಗೆ ರಾಹುಲ್ ಗಾಂಧಿ ಕರೆ ನೀಡಿದ್ದರು. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಯಾತ್ರೆ ನಡೆಸಲು ಮುಂದಾಗಿದ್ದ ಅವರನ್ನ ಹತ್ತಿಕ್ಕಲು ಬಿಜೆಪಿ ಷಡ್ಯಂತ್ರಕ್ಕೆ ಮುಂದಾಗಿದೆ. ಕೆಟ್ಟ ಆಲೋಚನೆಯಿಂದ ಕೇಸ್ ಹಾಕಿ ಇ.ಡಿ, ಸಿ.ಬಿ.ಐ, ಐ.ಟಿ. ಬಳಸಿಕೊಂಡು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಕೇಂದ್ರದ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣದ ಫಲವಾಗಿ ಜಾರಿ ನಿರ್ದೇಶನಾಲಯವು (ಇ.ಡಿ.) ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಮುಖಂಡ ರಾಹುಲ್ ಗಾಂಧಿಗೆ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ. ಇದನ್ನು ವಿರೋಧಿಸಿ ದಿಲ್ಲಿಯಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಮುಖಂಡರ ಮೇಲೆ ಅಲ್ಲಿನ ಪೊಲೀಸರು ದೌರ್ಜನ್ಯ ನಡೆಸಿದ್ದು, ಅದನ್ನ ಖಂಡಿಸಿ ರಾಜಭವನ ಮುತ್ತಿಗೆ ಮಾಡಲಾಗುತ್ತಿದೆ ಎಂದರು.
ಆರೋಗ್ಯ ಸಚಿವ ಸುಧಾಕರ್ ಕೋವಿಡ್ ನಿಯಮ ಉಲ್ಲಂಘನೆ ಕೇಸು ದಾಖಲು ಮಾಡಲಾಗುವುದು ಎಂಬ ವಿಚಾರಕ್ಕೆ ಉತ್ತರಿಸಿದ ಡಿ.ಕೆ. ಶಿವಕುಮಾರ್, ಮೊದಲು ಸುಧಾಕರ್ ಮೇಲೆ ಕೇಸ್ ಹಾಕಬೇಕು. ಬಿಜೆಪಿಯವರು ಯಾವುದೇ ಸಭೆ ಸಮಾರಂಭ ನಡೆದಾಗ ಕೇಸ್ ಹಾಕಿಲ್ಲ, ಕಾಂಗ್ರೆಸ್ ಸಮಾರಂಭ ಅಂದರೆ ಕೇಸ್ ಹಾಕಲು ಮುಂದಾಗುತ್ತಾರೆ. ಹೆಣದ ಮೇಲೆ, ಔಷಧಿ ಮೇಲೆ ದುಡ್ಡು ಹೊಡೆದ ಸುಧಾಕರ್ ಮೇಲೆ ಕೇಸು ದಾಖಲು ಮಾಡಲಿ ಎಂದು ವಾಗ್ದಾಳಿ ನಡೆಸಿದರು. ಅವರು ಕೇಸ್ ಹಾಕಿದ್ದರೆ ಹಾಕಿಕೊಳ್ಳಿ ನಮಗೇನು ಇಲ್ಲ, ಈ ಬಿಜೆಪಿ ಸರ್ಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಗುಡುಗಿದರು.
ಇದನ್ನೂ ಓದಿ | ರಾಹುಲ್ ಗಾಂಧಿ ನಿವಾಸ ತಲುಪಿದ ಪ್ರಿಯಾಂಕಾ ಗಾಂಧಿ; ಕೆಲವೇ ಕ್ಷಣಗಳಲ್ಲಿ ಇ ಡಿ ಕಚೇರಿಯತ್ತ