Site icon Vistara News

Chalo Delhi: ಕರ್ನಾಟಕ ಕಾಂಗ್ರೆಸ್‌ ಪ್ರತಿಭಟನೆಗೆ ದಿಲ್ಲಿಯ ಜಂತರ್ ಮಂತರ್‌ ಸಜ್ಜು; ʼರಾಜ್ಯ ಕಾಂಗ್ರೆಸ್‌ ಬೆತ್ತಲಾಗಿದೆʼ ಎಂದು ಎಚ್‌ಡಿಕೆ

Karnataka Congress Government protest against Centre

ಹೊಸದಿಲ್ಲಿ: ರಾಜ್ಯಕ್ಕೆ ತೆರಿಗೆ ಹಣ ಪಾವತಿಯಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಎಸಗಿದೆ ಎಂದು ಆಪಾದಿಸಿ ಇಂದು ಕರ್ನಾಟಕ ಕಾಂಗ್ರೆಸ್ (Karnataka congress) ದಿಲ್ಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ (Chalo Delhi) ನಡೆಸುತ್ತಿದ್ದು, ಕೊನೆಯ ಕ್ಷಣದ ಸಿದ್ಧತೆಗಳು ಆಗಿವೆ. ʼನಮ್ಮ ತೆರಿಗೆ ನಮ್ಮ ಹಕ್ಕುʼ ಘೋಷವಾಕ್ಯದಡಿ ಬೃಹತ್ ಕಾಂಗ್ರೆಸ್ ಪ್ರತಿಭಟನೆ ನಡೆಯಲಿದ್ದು, ರಾಜ್ಯದ ಕಾಂಗ್ರೆಸ್ ಶಾಸಕರು, ಸಂಸದರು, ಸಚಿವರು ಭಾಗಿಯಾಗಲಿದ್ದಾರೆ.

ಜಂತರ್‌ ಮಂತರ್‌ನಲ್ಲಿ ಸಿದ್ಧತೆಗಳನ್ನು ಕಾಂಗ್ರೆಸ್ ಕಾರ್ಯಕರ್ತರು ನಡೆಸುತ್ತಿದ್ದು, ಇದರ ಉಸ್ತುವಾರಿಯನ್ನು ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ನೋಡಿಕೊಳ್ಳುತ್ತಿದ್ದಾರೆ. ಬೆಳಿಗ್ಗೆ 11 ಗಂಟೆಯಿಂದ ಪ್ರತಿಭಟನೆ ಆರಂಭವಾಗಿ ಮಧ್ಯಾಹ್ನ ಒಂದು ಗಂಟೆಗೆ ಮುಕ್ತಾಯವಾಗಲಿದೆ. ದೆಹಲಿ ಪೊಲೀಸರು ನಿಗದಿಪಡಿಸಿರುವ ಸಮಯ ಹಾಗೂ ಸ್ಥಳದಲ್ಲಿ ಮಾತ್ರ ಪ್ರತಿಭಟನೆಗೆ ಅವಕಾಶವಿದೆ. ಜಂತರ್‌ ಮಂತರ್‌ನಲ್ಲಿ 200 ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ವೇದಿಕೆ ನಿರ್ಮಾಣ ಮಾಡಲಾಗಿದೆ. ಸಿಎಂ, ಡಿಸಿಎಂ ಮತ್ತು ಹಲವು ಸಚಿವರು ಮಾತನಾಡಲಿದ್ದಾರೆ.

ಪ್ರತಿಭಟನೆಯ ನಂತರ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಕಾಂಗ್ರೆಸ್ ನಾಯಕರು ಕಾಲಾವಕಾಶ ಕೇಳಿದ್ದಾರೆ. ನಿರ್ಮಲಾ ಸೀತಾರಾಮನ್ ಮನೆಗೆ ಹೋಗಿ ಕಾಂಗ್ರೆಸ್ ನಾಯಕರಿಂದ ಮನವಿ ಸಲ್ಲಿಸಲಾಗಿದೆ. ರಾಜ್ಯಕ್ಕೆ ಆದ ಅನ್ಯಾಯದ ಬಗ್ಗೆ ಮತ್ತು ಕೇಂದ್ರದಿಂದ ಬರಬೇಕಾದ ಹಣದ ಕುರಿತು ಮನವಿ ಪತ್ರವನ್ನು ಕಾಂಗ್ರೆಸ್‌ನ ನಾಯಕರುಗಳು ಸಲ್ಲಿಸಲಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿ ಒಟ್ಟು ಐದು ಜನರು ಕೇಂದ್ರ ಸಚಿವರ ಭೇಟಿ ಮಾಡುವ ಸಾಧ್ಯತೆ ಇದೆ.

ಬೆತ್ತಲಾದ ರಾಜ್ಯ ಕಾಂಗ್ರೆಸ್:‌ ಎಚ್‌ಡಿಕೆ

ಕಾಂಗ್ರೆಸ್‌ ಪಕ್ಷದ ಎರಡು ತಲೆ ರಾಜಕಾರಣ ಈಗ ಬೆತ್ತಲಾಗಿದೆ. ಇದರ ಉದ್ದೇಶ ಲೋಕಸಭೆ ಚುನಾವಣೆ ಮಾತ್ರ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ. ಎಚ್‌ಡಿ ಕುಮಾರಸ್ವಾಮಿ ಅವರು ಈ ಕುರಿತು ಮಾಡಿರುವ ಎಕ್ಸ್‌ ಪೋಸ್ಟ್‌ನ ಪೂರ್ಣ ರೂಪ ಹೀಗಿದೆ:

“ತೆರಿಗೆ ಪಾಲು, ಅನುದಾನದಲ್ಲಿ ಅನ್ಯಾಯವಾಗಿದೆ ಎಂದು ದಿಲ್ಲಿಗೆ ಯಾತ್ರೆ ಹೊರಟಿರುವ @INCKarnataka ಪಕ್ಷದ ಎರಡು ತಲೆ ರಾಜಕಾರಣ ಈಗ ಬೆತ್ತಲಾಗಿದೆ. ಅದರ ವರಸೆ ಹೇಗಿದೆ ಎಂದರೆ., ಕರ್ನಾಟಕಕ್ಕೆ ಒಂದು ನೀತಿ. ಕೇರಳಕ್ಕೆ ಮತ್ತೊಂದು ನೀತಿ! ಉದ್ದೇಶ: ಲೋಕಸಭೆ ಚುನಾವಣೆ!!”

“ಕೇರಳದ ಸಿಎಂ ಪಿಣರಾಯಿ ವಿಜಯನ್ ಅವರು, “ನಮ್ಮ ರಾಜ್ಯಕ್ಕೆ ತೆರಿಗೆ ಪಾಲು, ಅನುದಾನದಲ್ಲಿ ಅನ್ಯಾಯ ಆಗಿದೆ. ಅದಕ್ಕೆ ಕೇಂದ್ರದ ವಿರುದ್ಧ ದನಿ ಎತ್ತೋಣ ಬನ್ನಿ, ಸಹಕಾರ ನೀಡಿ” ಎಂದು ಕರೆದರೆ, ಅದಕ್ಕೆ ಕೇರಳ ಕಾಂಗ್ರೆಸ್ಸಿಗರು ಕೊಟ್ಟ ಉತ್ತರ ಹೀಗಿತ್ತು; “ಜನರ ಹಣವನ್ನು ನೀವು ಅನಗತ್ಯ ವೆಚ್ಚಗಳಿಗೆ ಪೋಲು ಮಾಡುತ್ತಿದ್ದೀರಿ, ನಾವು ಬರಲ್ಲ” ಎಂದಿದ್ದಾರೆ!!”

“ವಿಜಯನ್ ಅವರು ಕರೆದಿದ್ದ ಸರ್ವಪಕ್ಷ ಸಭೆಗೂ ಅಸಹಕಾರ ತೋರಿರುವ ಕಾಂಗ್ರೆಸ್ಸಿಗರು, ಕೇಂದ್ರ ಸರಕಾರದ ವಿರುದ್ಧ ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸುವಾಗಲೂ ಗೈರುಹಾಜರಾಗಿದ್ದಾರೆ ಮತ್ತು ಕಲಾಪವನ್ನೇ ಬಹಿಷ್ಕರಿಸಿದ್ದಾರೆ. ಅಷ್ಟೇ ಅಲ್ಲ; ಫೆಬ್ರುವರಿ 8ನೇ ತಾರೀಖು ದಿಲ್ಲಿಯಲ್ಲಿ ವಿಜಯನ್ ಅವರು ಹಮ್ಮಿಕೊಂಡಿರುವ ಪ್ರತಿಭಟನೆಯನ್ನೂ ಕೇರಳ ಕಾಂಗ್ರೆಸ್ಸಿಗರು ಬಹಿಷ್ಕರಿಸಿದ್ದಾರೆ!!”

“ಕರ್ನಾಟಕದ ಕಾಂಗ್ರೆಸ್, ಕೇರಳಕ್ಕೆ ತದ್ವಿರುದ್ಧ ದಿಕ್ಕಿನಲ್ಲಿದೆ. ಒಂದೆಡೆ @BJP4Karnataka ಸಂಸದರು ಶೋ ಪೀಸುಗಳು, ಗಂಡಸ್ತನ ಇಲ್ಲದವರು ಎಂದು ಕಾಂಗ್ರೆಸ್ ನಾಯಕರು ನಾಲಿಗೆ ಜಾರಿ ಬಿಡುತ್ತಿದ್ದಾರೆ. ಈಗ ನೋಡಿದರೆ, “ಪ್ರತಿಭಟನೆಗೆ ಬನ್ನಿ. ನಿಮ್ಮ ಸಹಕಾರವೂ ಇರಲಿ..” ಎಂದು ಆ ಪಕ್ಷದ ಸಂಸದರನ್ನು ಅದೇ ನಾಲಿಗೆಯಿಂದಲೇ ಕರೆಯುತ್ತಿದ್ದಾರೆ. @JanataDal_S ಸಂಸದರಿಗೂ ಪತ್ರ ಬರೆದಿದ್ದಾರೆ. ಇದೆಂಥಾ ವೈರುಧ್ಯ? ಇದೆಂಥಾ ಚೋದ್ಯ?”

ಕೇರಳದ LDF ಸರಕಾರ ಜನರ ತೆರಿಗೆ ಹಣ ಪೋಲು ಮಾಡುತ್ತಿದೆ ಎಂದಾದರೆ, ಕರ್ನಾಟಕದಲ್ಲಿ ಗ್ಯಾರಂಟಿ ಹೆಸರಿನಲ್ಲಿ ಕಾಂಗ್ರೆಸ್ ಮಾಡುತ್ತಿರುವುದೇನು? ಯೋಜನೆಗಳ ಹೆಸರಿನಲ್ಲಿ ಕೊಳ್ಳೆ ಹೊಡೆಯುತ್ತಿರುವುದೇನು? ಕೇರಳದಲ್ಲಿ ಅಸಹಕಾರ! ಕರ್ನಾಟಕದಲ್ಲಿ ಸಹಕಾರ!! ಇದೆಂಥಾ ನೀತಿ? ಎರಡು ತಲೆಗಳು ಮಾತ್ರವಲ್ಲ, ರಾವಣ ತಲೆಗಳ @INCKarnataka ಪಕ್ಷಕ್ಕೆ ಮೈಯ್ಯೆಲ್ಲಾ ರಾಜಕೀಯವೇ ತುಂಬಿದೆ. ಅದೂ ಸ್ವಾರ್ಥ ರಾಜಕೀಯ.

ಇದನ್ನೂ ಓದಿ: Farmers protest : ಅನ್ನದಾತರಿಂದ ಬೆಂಗಳೂರು ಚಲೋ; ಸಾಲ ಮನ್ನಾ, ರೈತ ಪರ ಬಜೆಟ್‌ಗೆ ಹಕ್ಕೊತ್ತಾಯ

Exit mobile version