ಬೆಂಗಳೂರು: ಪಾದಯಾತ್ರೆ ಅಂದರೆ ನಡೆದುಕೊಂಡು ಹೋಗುವುದು ಎಂದುಕೊಂಡಿದ್ದೆ. ಆದರೆ ಈ ರೀತಿ ವಾಹನದಲ್ಲಿ ಹೋಗೋದು ಎಂದು ಗೊತ್ತಿರಲಿಲ್ಲ ಎಂದು ಕಾಂಗ್ರೆಸ್ ವತಿಯಿಂದ ರಾಹುಲ್ ಗಾಂಧಿ ನೇತೃತ್ವದಲ್ಲಿ ಆಯೋಜಿಸಿರುವ ಭಾರತ್ ಜೋಡೋ ಪಾದಯಾತ್ರೆ ಕುರಿತು ಸಚಿವ ವಿ. ಸೋಮಣ್ಣ ಲೇವಡಿ ಮಾಡಿದ್ದಾರೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೋಮಣ್ಣ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ 75 ವರ್ಷಗಳ ನಂತರ ಕಾಂಗ್ರೆಸ್ ಪಕ್ಷದವರಿಗೆ ಜ್ಞಾನೋದಯವಾಗಿದೆ. ಅವರಿಗೆ ಅಭಾರಿಯಾಗಿದ್ದೇನೆ. ಭಾರತೀಯರ ಸಾರ್ವಭೌಮತೆ, ದೇಶಪ್ರೇಮ, ಇವೆಲ್ಲಕ್ಕಿಂತ ಪ್ರಮುಖವಾಗಿ ನಮ್ಮ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ವಿಶ್ವದ ಭೂಪಟದಲ್ಲಿ ಕೈಗೊಂಡ ದೂರದೃಷ್ಟಿಯ ಚಿಂತನೆಗೆ ಕವಲುದಾರಿ ತರಲು ಕಾಂಗ್ರೆಸ್‍ನವರು ಈ ಯಾತ್ರೆ ಹಮ್ಮಿಕೊಂಡಿದ್ದಾರೆ.
ಈ ಹಿಂದೆ ಜನತಾ ಪಕ್ಷದ ಅಧ್ಯಕ್ಷರಾಗಿದ್ದ ಚಂದ್ರಶೇಖರ್ ಅವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನಡೆದುಕೊಂಡು ಬಂದಿದ್ದರು. ನಾನೂ ನೂರಾರು ಕಿಲೋಮೀಟರ್ ಸುತ್ತಾಡಿಕೊಂಡು ಬಂದಿದ್ದೆ. ಇದು ಪಾದಯಾತ್ರೆ ಅಲ್ಲ; ಅಲ್ಲಲ್ಲಿ ಹತ್ತುವುದು- ಇಳಿಯುವ ಯಾತ್ರೆ ಇದು.
ಪಾದಯಾತ್ರೆ ಎಂದರೆ ನಡೆದುಕೊಂಡು ಹೋಗುವುದು ಎಂದುಕೊಂಡಿದ್ದೆ. ಸುಲ್ತಾನ್ ಬತ್ತೇರಿಯಿಂದ ಗುಂಡ್ಲುಪೇಟೆವರೆಗೂ 60 ಕಿ.ಮೀ ಇದೆ. ಇಷ್ಟು ದೂರು ನಡೆದು ಬರುತ್ತಾರೆ ಎಂದು ಕೊಂಡಿದ್ದೆ. ಆದರೆ ವಾಹನ ಹತ್ತಿ ಬಂದಿದ್ದಾರೆ ಎಂದು ಸೋಮಣ್ಣ ಹೇಳಿದರು.
ಗುಂಡ್ಲುಪೇಟೆಯಲ್ಲಿ ಯಾತ್ರೆ ಆರಂಭಿಸಿ ಸಭೆ ನಡೆಸಿ ಅಲ್ಲಿ ಕೆಲವು ವಿಚಾರಗಳನ್ನು ವ್ಯಕ್ತಪಡಿಸಿದ್ದಾರೆ. ಚಾಮರಾಜನಗರ ಜಿಲ್ಲೆ ಪ್ರಾರಂಭಿಸಿದ್ದು ದಿವಂಗತ ಜೆ.ಎಚ್.ಪಟೇಲ್ ಅವರು. ಆಗ ನಾನು ಸಚಿವನಾಗಿ ಕೆಲಸ ಮಾಡುತ್ತಿದ್ದೆ. ಪಟೇಲರು ಚಾಮರಾಜನಗರ ಜಿಲ್ಲಾ ನಾಮಕರಣ ಮಾಡಿ ಜಿಲ್ಲಾ ಕೇಂದ್ರ ಕಟ್ಟಿದ್ದನ್ನು ಹೊರತುಪಡಿಸಿದರೆ ಮುಂದೆ ಬಂದ ಕಾಂಗ್ರೆಸ್ ಸರ್ಕಾರ ಏನು ಮಾಡಿದೆ, ಏನಿಲ್ಲ ಎಂಬ ಬಗ್ಗೆ ಚರ್ಚೆಗೆ ಸಿದ್ಧ ಎಂದು ಸವಾಲೆಸೆದರು.
ಚಾಮರಾಜನಗರ ಜಿಲ್ಲೆಯ ಇತಿಹಾಸದಲ್ಲಿ ಏನಾದರೂ ಒಂದಷ್ಟು ಕೆಲಸಗಳಾಗಿದ್ದರೆ, ಅದು ಬಿಜೆಪಿಯಿಂದ ಆಗಿದೆ. ಸುಮಾರು 212 ಕೋಟಿ ರೂಪಾಯಿಯಲ್ಲಿ 22 ಕೆರೆಗಳಿಗೆ ನೀರು ತುಂಬಿಸುವ ಕೆಲಸ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಆರಂಭವಾಯಿತು. ಇವತ್ತಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗ ನೀರಾವರಿ ಸಚಿವರಾಗಿದ್ದರು. ನಾನು ಆ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಒಂದೇ ಬಾರಿಗೆ 110 ಕೋಟಿ ರೂಪಾಯಿ ಬಿಡುಗಡೆ ಮಾಡಿಸಿದ್ದೇನೆ. 14-15 ಕೆರೆಗಳಿಗೆ ನೀರು ತುಂಬಿಸಿ ಬರಡು ಭೂಮಿ, ಉದ್ಧಾರ ಆಗದ ಜಿಲ್ಲೆ ಎಂಬ ಭಾವನೆಯನ್ನು ಅಳಿಸಿಹಾಕಲು ಬಿಜೆಪಿ ಸರಕಾರ ಕ್ರಮ ಕೈಗೊಂಡಿದೆ ಎಂದು ವಿವರಿಸಿದರು.
ಜಿಲ್ಲೆ ಅಭಿವೃದ್ಧಿ ಕಾಣಲು 2012-13ರಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಲಾಗಿದೆ. ಕಾಲೇಜಿಗೆ ಜಾಗವನ್ನೂ ನೀಡಿದ್ದೇವೆ. ರಾಷ್ಟ್ರೀಯ ಹೆದ್ದಾರಿ ಇಲ್ಲಿ ಬರಲು ನಾವೇ ಚಿಂತನೆ ಮಾಡಿದ್ದೇವೆ. ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ಆಗಿದೆ. ಗುಂಡ್ಲುಪೇಟೆ, ಬಂಡೀಪುರ, ನಾಗರಹೊಳೆ ಇಲ್ಲಿದ್ದು, ಪ್ರಕೃತಿಗೆ ಮತ್ತೊಂದು ಹೆಸರು ಎಂದು ಹೆಸರುವಾಸಿಯಾಗಿದೆ ಎಂದು ತಿಳಿಸಿದರು.
ಜಗದೀಶ ಶೆಟ್ಟರ್ ಅವರು ಸಿಎಂ ಆಗಿದ್ದಾಗ ಮಲೆ ಮಾದೇಶ್ವರ ಪ್ರಾಧಿಕಾರ ಆರಂಭಿಸಿ 8ರಿಂದ 10 ಕೋಟಿ ಇದ್ದ ಆದಾಯವು 110 ಕೋಟಿ 120 ಕೋಟಿಗೆ ಏರಿದೆ. ಭಕ್ತರಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ತೀವ್ರ ಇದ್ದರೂ ಕಾಂಗ್ರೆಸ್ ಅತ್ತ ಗಮನ ಕೊಟ್ಟಿರಲಿಲ್ಲ. ಆ ಸಮಸ್ಯೆ ಪರಿಹರಿಸಿದ್ದೇವೆ. ಹನೂರು ತಾಲ್ಲೂಕು ಮಾಡಿದ್ದೇವೆ ಎಂದು ತಿಳಿಸಿದರು.
ಮಲೆ ಮಾದೇಶ್ವರ ಬೆಟ್ಟದ ರಸ್ತೆಗಳ ವಿಸ್ತರಣೆ ಮತ್ತು ಅಭಿವೃದ್ಧಿ ನಡೆದಿದೆ. 200ಕ್ಕೂ ಹೆಚ್ಚು ಕೆರೆಗಳನ್ನು ಗುರುತಿಸಿ ಅವುಗಳಿಗೆ ನೀರು ಹರಿಸಲು ಯೋಜನೆ ರೂಪಿಸಿದ್ದು, ಅಕ್ಟೋಬರ್ 15ರವೇಳೆಗೆ ಬೊಮ್ಮಾಯಿಯವರು ಯೋಜನೆಗೆ ಚಾಲನೆ ಕೊಡಲಿದ್ದಾರೆ. 2ರಿಂದ 3 ವರ್ಷಗಳಲ್ಲಿ ಎಲ್ಲ ಕೆರೆಗಳಿಗೆ ನೀರು ಹರಿಸಲಾಗುವುದು. ಗುಡಿಸಲುರಹಿತ ಜಿಲ್ಲೆ ಮಾಡಲಾಗುವುದು. ಜಿಲ್ಲೆ ಶಾಪಗ್ರಸ್ಥ ಎಂಬ ಹಣೆಪಟ್ಟಿಯಿಂದ ಹೊರಬರಲು ಇದು ಪೂರಕ ಎಂದರು.
ಸಿದ್ದರಾಮಯ್ಯರವರು ಸಿಎಂ ಆಗುವ ಹಗಲುಕನಸು ಕಾಣುತ್ತಿರುವಂತಿದೆ. ಚಾಮರಾಜನಗರ ಜಿಲ್ಲೆಯಲ್ಲಿ 4ರಲ್ಲಿ ಇಬ್ಬರು ಶಾಸಕರು ನಮ್ಮವರಿದ್ದಾರೆ. ಸ್ಥಳೀಯ ಸಂಸ್ಥೆಗಳು ನಮ್ಮ ಅಧಿಕಾರ ಹೊಂದಿವೆ. ದಲಿತರಿಗೆ ಅನ್ಯಾಯ ಮಾಡುವ ಕೂಗು ಕಾಂಗ್ರೆಸ್ಸಿಗರದು. 2018ರ ಚುನಾವಣೆಯಲ್ಲಿ ಡಾ. ಪರಮೇಶ್ವರ್ ಅವರಿಗೆ ಯಾರು ಅನ್ಯಾಯ ಮಾಡಿದರೆಂದು ನೀವೇ ನೋಡಿಕೊಳ್ಳಿ ಎಂದು ತಿಳಿಸಿದರು.
ರಾಹುಲ್ ಗಾಂಧಿಯವರು ರಾಷ್ಟ್ರೀಯ ಪಕ್ಷದ ಮುಖಂಡರ ಮಗ. ಅವರ ಬಗ್ಗೆ ಹಗುರವಾಗಿ ಮಾತನಾಡುವುದಿಲ್ಲ. ಅವರ ಬಗ್ಗೆ ಅಪಾರವಾದ ಗೌರವವಿದೆ. ಸಿದ್ದರಾಮಯ್ಯನವರು ಮತ್ತಿತರ ಕಾಂಗ್ರೆಸ್ ಮುಖಂಡರು ಜೋಡಿಸಿಕೊಂಡಾದರೂ ಹೋಗಲಿ; ಕುಡ್ಕೊಂಡಾದರೂ ಹೋಗಲಿ; ನೀವುಗಳು ಹೇಗಿದ್ದೀರೆಂದು ರಾತ್ರಿ ಆದ ಮೇಲೆ ತಿಳಿಯುತ್ತದೆ. ನಿಮ್ಮ ಗುಂಪು- ಆ ಗುಂಪು ಇದೆಯಲ್ಲವೇ? ಆ ಗುಂಪುಗಳು ಶಾಶ್ವತವಾಗಿರಲಿ ಎಂದು ವಿನಂತಿಸುವೆ ಎಂದರು.
ಕಾಂಗ್ರೆಸ್ ಕಟೌಟ್ ಹರಿದ ಕುರಿತು ಪ್ರತಿಕ್ರಿಯಿಸಿದ ಸೋಮಣ್ಣ, ಬಿಜೆಪಿ ಶಿಸ್ತಿನ ಪಕ್. ಸ್ವಯಂಕೃತವಾಗಿ ಅವರೇನಾದರೂ ಮಾಡಿದ್ದಾರೋ ಗೊತ್ತಿಲ್ಲ. ನಾವು ಮಾಡಿದ್ದಂತೂ ಅಲ್ಲ ಎಂದು ತಿಳಿಸಿದರು. ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರ ಮನೆಯ ಹತ್ತಿರ ಏನಾಯಿತು? ಬೆಂಕಿ ಇಟ್ಟವರು, ಮಾಡಬಾರದ್ದನ್ನು ಮಾಡಿದ್ದು ಯಾರು? ನಿಮ್ಮವರೇ ಮಾಡಿ ಇನ್ನೊಬ್ಬರಿಗೆ ಹೇಳುತ್ತೀರಲ್ಲ ಎಂದು ಕಾಂಗ್ರೆಸ್ ಮುಖಂಡರಿಗೆ ಪ್ರಶ್ನೆ ಹಾಕಿದರು.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ, ರಾಜ್ಯ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಕೇಶವ್ ಪ್ರಸಾದ್ ಉಪಸ್ಥಿತರಿದ್ದರು.
ಇದನ್ನೂ ಓದಿ | ಇಂದು ಭಾರತ್ ಜೋಡೋ ಯಾತ್ರೆ ರಾಜ್ಯ ಪ್ರವೇಶ, 21 ದಿನ ಹೆಜ್ಜೆ ಹಾಕಲಿರುವ ರಾಹುಲ್ ಗಾಂಧಿ