ನವ ದೆಹಲಿ: ಚಾಮರಾಜಪೇಟೆ ಮೈದಾನದಲ್ಲಿ ಕಳೆದ ೨೦೦ ವರ್ಷಗಳಿಂದ ಅನ್ಯ ಧರ್ಮದ ಧಾರ್ಮಿಕ ಕಾರ್ಯಕ್ರಮಗಳು ನಡೆದಿಲ್ಲ. ಅದನ್ನು ನೀವು ಕೂಡಾ ಒಪ್ಪಿಕೊಳ್ಳುತ್ತೀರಿ. ಹಾಗಿದ್ದರೆ ಈ ಬಾರಿಯೂ ಯಥಾಸ್ಥಿತಿ ಯಾಕೆ ಬೇಡ? ೨೦೦ ವರ್ಷಗಳಿಂದ ನಡೆಯದೆ ಇರುವುದು ಈ ವರ್ಷವೂ ಬೇಡ ಬಿಡಿ- ಎಂಬರ್ಥದ ಅಭಿಪ್ರಾಯವನ್ನು ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠ ನೀಡಿದೆ.
ಚಾಮರಾಜಪೇಟೆ ಮೈದಾನದಲ್ಲಿ ಯಥಾಸ್ಥಿತಿ ಕಾಪಾಡುವಂತೆ (ವರ್ಷಕ್ಕೆ ಎರಡು ಬಾರಿ ಮುಸ್ಲಿಂ ಧಾರ್ಮಿಕ ಪ್ರಾರ್ಥನೆಗೆ ಅವಕಾಶ ಮತ್ತು ಆಟದ ಮೈದಾನವಾಗಿ ಬಳಕೆ) ರಾಜ್ಯ ಹೈಕೋರ್ಟ್‌ನ ಏಕ ಸದಸ್ಯ ಪೀಠ ಆದೇಶಿಸಿತ್ತು. ಆದರೆ, ಬಳಿಕ ಸರಕಾರದ ಮೇಲ್ಮನವಿಯನ್ನು ಆಲಿಸಿದ ಹೈಕೋರ್ಟ್‌ನ ದ್ವಿಸದಸ್ಯ ಪೀಠ ಕೆಲವು ದಿನದ ಮಟ್ಟಿಗೆ ರಾಜ್ಯ ಸರಕಾರ ತನ್ನ ವಿವೇಚನೆ ಬಳಸಿ ಧಾರ್ಮಿಕ ಕಾರ್ಯಕ್ರಮಕ್ಕೆ ಅವಕಾಶ ನೀಡಬಹುದು ಎಂದು ಹೇಳಿತ್ತು. ಇದರಿಂದ ಇಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ ಸಿಗುವ ಭರವಸೆ ಮೂಡಿತ್ತು. ಈ ನಡುವೆ ವಕ್ಫ್ ಮಂಡಳಿಯು ದ್ವಿಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿತ್ತು. ಮೊದಲು ದ್ವಿಸದಸ್ಯ ಪೀಠ (ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ) ಮುಂದೆ ನಡೆದ ವಿಚಾರಣೆ ಅಪೂರ್ಣ ಮತ್ತು ತಾತ್ವಿಕ ಅಂತ್ಯಕ್ಕೆ ಬರಲು ವಿಫಲವಾಗಿದ್ದರಿಂದ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ, ಎ.ಎಸ್. ಓಕ್ ಮತ್ತು ಎಂ.ಎಂ. ಸುಂದರೇಶ್ ಅವರನ್ನು ಒಳಗೊಂಡ ತ್ರಿಸದಸ್ಯ ವಿಭಾಗೀಯ ಪೀಠ ಪ್ರಕರಣವನ್ನು ಕೈಗೆತ್ತಿಕೊಂಡಿತು. ವಿಚಾರಣೆ ನಡೆಸಿದ ತ್ರಿಸದಸ್ಯ ಪೀಠ ಗಣೇಶೋತ್ಸವಕ್ಕೆ ಅನುಮತಿ ನೀಡಬಹುದು ಎಂದು ಹೇಳಿದ ದ್ವಿಸದಸ್ಯ ಪೀಠದ ಆದೇಶವನ್ನು ತಳ್ಳಿ ಹಾಕಿತು. ಯಥಾಸ್ಥಿತಿ ಕಾಪಾಡಬೇಕು ಎಂದು ಸೂಚಿಸಿದ ಏಕಸದಸ್ಯ ಪೀಠದ ಆದೇಶವನ್ನು ಎತ್ತಿಹಿಡಿಯಿತು.
ಹಿಂದೂ ಸಮುದಾಯದವರು ಬೇರೆ ಕಡೆಯಲ್ಲಿ ಗಣೇಶೋತ್ಸವ ಆಚರಿಸುವಂತೆಯೂ ಸುಪ್ರೀಂಕೋರ್ಟ್ ಸಲಹೆ ನೀಡಿತು.
ʻʻವಿಶೇಷ ರಜಾ ಕಾಲದ ದಾವೆಯಲ್ಲಿ ಎತ್ತಲಾದ ವಿಚಾರಗಳ ಬಗ್ಗೆ ಎರಡೂ ತಂಡಗಳು ಹೈಕೋರ್ಟ್‌ನ ಮುಂದೆ ಅಹವಾಲು ಮಂಡಿಸಬಹುದು. ಹೀಗಾಗಿ ಸದ್ಯಕ್ಕೆ ಎರಡೂ ತಂಡಗಳು ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಬೇಕು. ಅರ್ಜಿಯನ್ನು ಇಲ್ಲಿಗೆ ವಜಾಮಾಡಲಾಗಿದೆʼʼ ಎಂದು ಪೀಠ ಹೇಳಿತು.
ಸೋಮವಾರದಂದು ಮುಖ್ಯ ನ್ಯಾಯಮೂರ್ತಿಗಳಾದ ಉದಯ್ ಯು. ಲಲಿತ್ ಅವರ ಮುಂದೆ ವಿಶೇಷ ಅರ್ಜಿಯನ್ನು ಸಲ್ಲಿಸಿದ್ದ ಹಿರಿಯ ನ್ಯಾಯವಾದಿ ದುಷ್ಯಂತ್ ದವೆ ಅವರು, ಈ ವಿಚಾರವನ್ನು ತುರ್ತಾಗಿ ಪರಿಗಣಿಸಬೇಕಾಗಿದೆ. ಹೀಗೆ ಮಾಡದಿದ್ದರೆ ೨೦೦ ವರ್ಷಗಳಿಂದ ಕಾಪಾಡಿಕೊಂಡು ಬಂದಿರುವ ಯಥಾಸ್ಥಿತಿ ಕದಡಲಿದೆ ಎಂದು ವಾದಿಸಿದ್ದರು. ಅದನ್ನು ಪರಿಗಣಿಸಿ ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠ ರಚಿಸಿ ತುರ್ತು ವಿಚಾರಣೆ ನಡೆಸಿತ್ತು.
ʻಪೂಜಾ ಸ್ಥಳಗಳ ವಿಧೇಯಕದ ಸೆಕ್ಷನ್ ಮೂರರ ಪ್ರಕಾರ, ಒಂದು ಧರ್ಮದ ಧಾರ್ಮಿಕ ನೆಲವನ್ನು ಇನ್ನೊಂದು ಧರ್ಮದ ಬಳಕೆಗೆ ನೀಡುವುದಕ್ಕೆ ಸ್ಪಷ್ಟವಾದ ನಿರ್ಬಂಧವಿದೆʼ ಎಂದು ದವೆ ಅರ್ಜಿಯಲ್ಲಿ ಹೇಳಿದ್ದರು. ೧೮೭೧ರಿಂದ ಈ ಮೈದಾನ ನಿರಂತರವಾಗಿ ಮುಸ್ಲಿಂ ಸಮುದಾಯದ ಕೈಯಲ್ಲೇ ಇದೆ. ಇದನ್ನು ಪ್ರಾರ್ಥನಾ ಸ್ಥಳವಾಗಿ ಮತ್ತು ಸ್ಮಶಾನವಾಗಿ ಮುಸ್ಲಿಂ ಸಮುದಾಯ ಬಳಸಿಕೊಂಡು ಬಂದಿದೆ. ಸಂವಿಧಾನದ ೨೫ ಮತ್ತು ೨೬ನೇ ವಿಧಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ತಮ್ಮ ಆಸ್ತಿಪಾಸ್ತಿಯನ್ನು ರಕ್ಷಿಸಿಕೊಳ್ಳುವ ಅವಕಾಶವನ್ನು ನೀಡುತ್ತದೆʼʼ ವಿವರಿಸಿದ್ದರು.
ಸರ್ಕಾರದ ಪರವಾಗಿ ವಾದಿಸಿದ ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರು ಒಂದು ಹಂತದಲ್ಲಿ ೨೦೦೬ರಲ್ಲಿ ಇದೇ ಮೈದಾನದಲ್ಲಿ ಗಣೇಶೋತ್ಸವ ಮತ್ತು ಶಿವರಾತ್ರಿಯನ್ನು ಆಚರಿಸಲಾಗಿದೆ. ಆಗ ಇಲ್ಲದ ವಿರೋಧ ಈಗ ಯಾಕೆ ಎಂದು ಪ್ರಶ್ನಿಸಿದ್ದರು. ಆದರೆ ಅಂತಿಮವಾಗಿ ʻಒಂದೊಮ್ಮೆ ಈ ಹಿಂದೆ ಬಳಸಿಲ್ಲ ಎಂದಾದರೂ ಅದು ಈಗ ಬಳಸಬಾರದು ಎಂಬ ವಾದಕ್ಕೆ ಕಾರಣ ಆಗಬಾರದುʼʼ ಎಂದು ನುಡಿದರು.
ವಕ್ಫ್ ಮಂಡಳಿ ಪರವಾಗಿ ವಾದಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ʻʻಮೈಸೂರು ರಾಜ್ಯ ವಕ್ಫ್ ಮಂಡಳಿಯು ಈದ್ಗಾ ಮೈದಾನವನ್ನು ವಕ್ಫ್ ಕಾಯಿದೆಯ ಸೆಕ್ಷನ್ ೫(೨) ಅಡಿ ವಕ್ಫ್ ಆಸ್ತಿ ಎಂದು ಘೋಷಿಸಿದೆ. ಒಮ್ಮೆ ಇದು ವಕ್ಫ್ ಎಂದು ಘೋಷಿಸಲ್ಟಟ್ಟರೆ ಅದನ್ನು ಬದಲಾಯಿಸಲಾಗದು. ಹಾಗೆ ಮಾಡುವುದಿದ್ದರೂ ಆರು ತಿಂಗಳ ಒಳಗೆ ಆಕ್ಷೇಪ ಸಲ್ಲಿಸಬೇಕು. ಆಗ ಯಾರೂ ಪ್ರಶ್ನಿಸಿಲ್ಲ. ಈಗ ೨೦೨೨ರಲ್ಲಿ ವಿವಾದ ಎದ್ದಿದೆʼʼ ಎಂದು ಹೇಳಿದರು. ಇದೊಂದು ವಕ್ಫ್ ಭೂಮಿ ಎಂದು ನಿರ್ಧಾರವಾದ ಮೇಲೆ ಮಾಲೀಕತ್ವವನ್ನು ಸಾಬೀತುಪಡಿಸುವ ಪ್ರಶ್ನೆಯೇ ಬರುವುದಿಲ್ಲ. ಹಾಗೆ ಪ್ರಶ್ನೆ ಮಾಡುವ ಅಧಿಕಾರ ಬಿಬಿಎಂಪಿಯ ಜಂಟಿ ಕಮೀಷನರ್‌ಗೆ ಎಲ್ಲಿಂದ ಬರುತ್ತದೆ ಎಂದು ಸಿಬಲ್ ಪ್ರಶ್ನಿಸಿದರು.
ಅಂತಿಮವಾಗಿ ಸರಕಾರದ ಪರ ವಕೀಲರು, ಎರಡು ದಿನ ಗಣೇಶೋತ್ಸವ ಆಚರಿಸಲಿಕ್ಕಾದರೂ ಅವಕಾಶ ಕೊಡಿ. ನಾವು ಯಾವುದೇ ಶಾಶ್ವತ ನಿರ್ಮಾಣಗಳನ್ನು ಮಾಡುವುದಿಲ್ಲ. ಗಣಪತಿ ಮೂರ್ತಿಯನ್ನು ವಿಸರ್ಜನೆ ಮಾಡಲಾಗುತ್ತದೆ ಎಂದು ಹೇಳಿದರು. ಆದರೆ, ಕೋರ್ಟ್ ಅದಕ್ಕೆ ಅವಕಾಶ ಕೊಡದೆ ಯಥಾಸ್ಥಿತಿ ಕಾಪಾಡಲು ಸೂಚಿಸಿತು.
ಚಾಮರಾಜಪೇಟೆ ಮೈದಾನ | ಯಥಾಸ್ಥಿತಿ ಕಾಪಾಡಲು ಸುಪ್ರೀಂ ಆದೇಶ, ಗಣೇಶೋತ್ಸವಕ್ಕೆ ಅವಕಾಶ ಇಲ್ಲ