ದಾವಣಗೆರೆ: ಶಾಸಕ ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್ ಸಾವು (Chandru Death) ಪ್ರಕರಣ ಇನ್ನೂ ನಿಗೂಢವಾಗಿಯೇ ಇದ್ದು, ಸಾವಿನ ಸಂಬಂಧ ಹಲವು ಆಯಾಮಗಳು ಹುಟ್ಟಿಕೊಂಡಿವೆ. ಕಳೆದ ಅಕ್ಟೋಬರ್ 30ರಂದು ನಾಪತ್ತೆಯಾಗಿದ್ದ ಚಂದ್ರುಗೆ ಆ ರಾತ್ರಿ ಒಂದೇ ನಂಬರ್‌ನಿಂದ 10ಕ್ಕೂ ಹೆಚ್ಚು ಬಾರಿ ಕರೆ ಹಾಗೂ ಸಂದೇಶ ಬಂದಿರುವುದು ತನಿಖೆ ವೇಳೆ ತಿಳಿದು ಬಂದಿದೆ.
ಚಂದ್ರು ನಂಬರ್ ಸಿಡಿಆರ್ ತೆಗೆಸಿ ನೋಡಿದಾಗ ಒಂದೇ ನಂಬರ್‌ನಿಂದ ನಿರಂತರ ಕರೆ ಬಂದಿದೆ. ಚಂದ್ರು ನಾಪತ್ತೆಯಾದ ಅಕ್ಟೋಬರ್ 30ರ ರಾತ್ರಿ 9.30ರಿಂದ 10ರ ವರೆಗೆ ಆ ಒಂದು ನಂಬರ್‌ನಿಂದ ನಿರಂತರವಾಗಿ ಸಂದೇಶ ಬಂದಿದ್ದಲ್ಲದೆ, ಪರಸ್ಪರ ಇಬ್ಬರಿಂದಲೂ ಕರೆ ಮತ್ತು ಮಾತುಕತೆ ನಡೆದಿದೆ ಎಂಬ ವಿಷಯ ಬೆಳಕಿಗೆ ಬಂದಿದೆ. ಚಂದ್ರುಗೆ ಅಷ್ಟು ಬಾರಿ ನಿರಂತರ ಕರೆ ಮಾಡಿದ್ದು ಯಾರು? ಯಾಕೆ ಎಂಬ ಬಗ್ಗೆ ಪೊಲೀಸರು ಈಗ ತನಿಖೆ ಕೈಗೊಂಡಿದ್ದಾರೆ.
ಕರೆ ಬಂದ ಸಮಯದಲ್ಲಿ ಗೌರಿ ಗದ್ದೆಯಲ್ಲಿಯೇ ಇದ್ದ ಚಂದ್ರು
ಚಿಕ್ಕಮಗಳೂರಿನ ಕೊಪ್ಪದ ಸತೀಶ್ ಎಂಬಾತನ ಜತೆ ಚಂದ್ರಶೇಖರ್ ನಿರಂತರ ಸಂಭಾಷಣೆಯಲ್ಲಿದ್ದರು ಎಂದು ತಿಳಿದು ಬಂದಿದೆ. ಈ ವೇಳೆ ರಾತ್ರಿ ಹತ್ತು ಗಂಟೆವರೆಗೂ ಗೌರಿ ಗದ್ದೆಯ ವಿನಯ್ ಗುರೂಜಿ ಬಳಿಯೇ ಚಂದ್ರು ಇದ್ದ ಎನ್ನಲಾಗಿದೆ. ಈ ಸತೀಶ್ ಎಂಬಾತನ ಜತೆಗೆ ಚಂದ್ರ ಏನು ಸಂಭಾಷಣೆ ನಡೆಸಿದ್ದಾರೆ? ಅವರಿಬ್ಬರ ನಡುವೆ ಆಗಿರುವ ಮಾತುಕತೆ ಏನು? ಈ ವೇಳೆ ಆ ವ್ಯಕ್ತಿ ಬಳಿ ಚಂದ್ರ ಏನಾದರೂ ಮಾಹಿತಿಯನ್ನು ಹೇಳಿದ್ದರೇ? ಅಥವಾ ಆ ವ್ಯಕ್ತಿ ಚಂದ್ರುಗೆ ಬೆದರಿಕೆ ಏನಾದರೂ ಹಾಕಿದ್ದಾರೆ? ಇಬ್ಬರ ನಡುವೆ ಏನು ವ್ಯವಹಾರ ಇದೆ ಎಂಬ ಬಗ್ಗೆ ತನಿಖೆ ನಡೆಯುತ್ತಿದ್ದು, ವಿಷಯ ಇನ್ನೂ ನಿಗೂಢವಾಗಿದೆ. ಯಾರು ಈ ಸತೀಶ್ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.
ಇದನ್ನೂ ಓದಿ | Chandru Death | ಮಣ್ಣಲ್ಲಿ ಮಣ್ಣಾದ ಚಂದ್ರಶೇಖರ್; ಜಂಗಮ ಸಂಪ್ರದಾಯದಂತೆ ನೆರವೇರಿದ ಅಂತ್ಯಕ್ರಿಯೆ