ಶಿವಮೊಗ್ಗ: ಬಿಜೆಪಿ ಈಗಾಗಲೇ ಮೂರು ಹಂತಗಳಲ್ಲಿ 222 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿತ್ತು. ಇದೀಗ ಉಳಿದ ಎರಡು ಕ್ಷೇತ್ರಗಳಾದ ಶಿವಮೊಗ್ಗ ಹಾಗೂ ಮಾನ್ವಿ ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು (Karnataka Election 2023) ಘೋಷಿಸಿದೆ. ಕುತೂಹಲ ಕೆರಳಿಸಿದ್ದ ಶಿವಮೊಗ್ಗ ಕ್ಷೇತ್ರದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಆಪ್ತ ಚನ್ನಬಸಪ್ಪಗೆ ಬಿಜೆಪಿ ಟಿಕೆಟ್ ಸಿಕ್ಕಿದ್ದು, ಮಾನ್ವಿಯಲ್ಲಿ ಮಂಗಳವಾರವಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಮಾಜಿ ಸಂಸದ ಬಿ.ವಿ.ನಾಯಕ್ ಅವರಿಗೆ ಟಿಕೆಟ್ ಲಭಿಸಿದೆ. ಆದರೆ, ಈಶ್ವರಪ್ಪ ಪುತ್ರ ಕಾಂತೇಶ್ ಈಶ್ವರಪ್ಪ ಅವರಿಗೆ ಬಿಜೆಪಿ ಟಿಕೆಟ್ ಘೋಷಿಸಿಲ್ಲ.
ಶಿವಮೊಗ್ಗದಲ್ಲಿ ಈಶ್ವರಪ್ಪ ಕಣದಿಂದ ಹಿಂದಕ್ಕೆ ಸರಿದ ಬಳಿಕ ಅವರ ಪುತ್ರನಿಗೆ ಟಿಕೆಟ್ ಸಿಗಲಿದೆ ಎಂದು ಭಾವಿಸಲಾಗಿತ್ತು. ಆದರೆ ಈಗ ಈಶ್ವರಪ್ಪ ಅವರ ಆಪ್ತ ಚನ್ನಬಸಪ್ಪ ಅವರಿಗೆ ಟಿಕೆಟ್ ಸಿಕ್ಕಿದೆ. ಇವರು ಶಿವಮೊಗ್ಗ ಪಾಲಿಕೆ ಸದಸ್ಯರಾಗಿದ್ದು, ಉಪ ಮೇಯರ್ ಆಗಿ ಸೇವೆ ಸಲ್ಲಿಸಿದ್ದಾರೆ. ಈ ಹಿಂದೆ ಪಾಲಿಕೆ ಆಡಳಿತ ಪಕ್ಷದ ನಾಯಕರಾಗಿದ್ದ ಇವರು, ಶಿವಮೊಗ್ಗ ನಗರಸಭೆ ಆಗಿದ್ದಾಗ ಅಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: Karnataka Election 2023: ಮುಗಿಯದ ಟಿಕೆಟ್ ಗೊಂದಲ; ಮಂಡ್ಯದಲ್ಲಿ ಜೆಡಿಎಸ್ ಸ್ಥಿತಿ ‘ಮನೆಯೊಂದು ಮೂರು ಬಾಗಿಲು’
ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿ ಮತ್ತಿತರ ಹಿರಿಯ ನಾಯಕರಿಗೆ ಬಿಜೆಪಿ ಟಿಕೆಟ್ ಕೈತಪ್ಪುವುದಕ್ಕೂ ಮೊದಲು ಶಿವಮೊಗ್ಗದಲ್ಲಿ ಮಾಜಿ ಸಚಿವ ಈಶ್ವರಪ್ಪ ಪುತ್ರನಿಗೆ ಟಿಕೆಟ್ ಮಿಸ್ ಆಗಲಿದೆ ಎಂದು ವಿಸ್ತಾರ ನ್ಯೂಸ್ ವರದಿ ಮಾಡಿತ್ತು. ಚನ್ನಬಸಪ್ಪ ಅವರು ಶಿವಮೊಗ್ಗ ಪಾಲಿಕೆ ಸದಸ್ಯರಾಗಿದ್ದು, ಇವರು ಮಾಜಿ ಮೇಯರ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ.
ಇದರೊಂದಿಗೆ ಬಿಜೆಪಿಯು ಎಲ್ಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಿದಂತಾಗಿದೆ. ಇದುವರೆಗೆ 222 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದ ಪಕ್ಷವು, ಶಿವಮೊಗ್ಗ ಹಾಗೂ ಮಾನ್ವಿ ಕ್ಷೇತ್ರದ ಟಿಕೆಟ್ ಬಾಕಿ ಉಳಿಸಿಕೊಂಡಿತ್ತು. ಶಿವಮೊಗ್ಗದಲ್ಲಿ ಈಶ್ವರಪ್ಪ ಪುತ್ರನಿಗೇ ಟಿಕೆಟ್ ನೀಡುವ ಕಾರಣ ಹೀಗೆ ಹಲವು ಕಾರಣಗಳಿಂದ ಟಿಕೆಟ್ ಘೋಷಣೆ ಆಗಿರಲಿಲ್ಲ. ಆದರೆ, ಬಿಜೆಪಿಯು ಅಚ್ಚರಿಯ ಅಭ್ಯರ್ಥಿಯನ್ನೇ ಕೊನೆಗೆ ಘೋಷಿಸಿದೆ. ಇಬ್ಬರೂ ಅಭ್ಯರ್ಥಿಗಳು ಗುರುವಾರ ನಾಮಪತ್ರ ಸಲ್ಲಿಸಲಿದ್ದಾರೆ.