ದೊಡ್ಡಬಳ್ಳಾಪುರ: ರಾಜ್ಯದಲ್ಲಿರುವ ಬಿಜೆಪಿ ಸರ್ಕಾರದ ವಿರುದ್ಧ 40% ಲಂಚದ ಆರೋಪ ಹೊರಿಸುವ ಕಾಂಗ್ರೆಸ್ ನಾಯಕರಿಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತ್ಯುತ್ತರ ನೀಡಿದ್ದು, ಸಿದ್ದರಾಮಯ್ಯ ಅವರದ್ದು ಕೆಲಸವನ್ನೇ ಮಾಡದೆ ಬಿಲ್ ಮಾಡಿಕೊಳ್ಳುವ 100% ಸರ್ಕಾರ ಎಂದು ವಾಗ್ದಾಳಿ ನಡೆಸಿದ್ದಾರೆ. ನಿಮಗೆ ತಾಕತ್ ಇದ್ದರೆ, ದಮ್ ಇದ್ದರೆ ನಮ್ಮನ್ನು ತಡೆಯಿರಿ ನೋಡೋಣ ಎಂದು ಕಾಂಗ್ರೆಸ್ ನಾಯಕರಿಗೆ ಬೊಮ್ಮಾಯಿ ಸವಾಲು ಹಾಕಿದ್ದಾರೆ.
ಬಿಜೆಪಿ ಸರ್ಕಾರಕ್ಕೆ ಮೂರು ವರ್ಷ ಹಾಗೂ ಬೊಮ್ಮಾಯಿ ಸರ್ಕಾರಕ್ಕೆ ಒಂದು ವರ್ಷದ ಸಂದರ್ಭದಲ್ಲಿ ದೊಡ್ಡಬಳ್ಳಾಪುರದಲ್ಲಿ ಆಯೋಜಿಸಲಾಗಿರುವ ಜನಸ್ಪಂದನ ಕಾರ್ಯಕ್ರಮದಲ್ಲಿ ಆಕ್ರಮಣಕಾರಿಯಾಗಿ ಮಾತನಾಡಿದರು. ಸಾಮಾನ್ಯವಾಗಿ ಆಧ್ಯಾತ್ಮಿಕ ಉದಾಹರಣೆಗಳ ಮೂಲಕ, ಸೌಮ್ಯವಾಗಿ ಮಾತನಾಡುವ ಬೊಮ್ಮಾಯಿ ಅವರ ಭಾಷಣದಲ್ಲಿ ಉಗ್ರ ಸ್ವರೂಪ ಕಂಡುಬಂದರೆ, ವಿಶೇಷವಾಗಿ ಸಿದ್ದರಾಮಯ್ಯ ಅವರ ವಿರುದ್ಧ ದಾಳಿ ನಡೆಸಿದ್ದು ವಿಶೇಷವಾಗಿತ್ತು.
ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಅತಿ ಹೆಚ್ಚು ಸ್ಥಾನವನ್ನು ಜನರು ನೀಡಿದ್ದರು. ಅಂದೇ ಯಡಿಯೂರಪ್ಪ ಸಿಎಂ ಆಗಬೇಕಿತ್ತು. ಆದರೆ ಕಾಂಗ್ರೆಸ್‌ನ ಅಧಿಕಾರದ ಲಾಲಸೆ, ಕಾಂಗ್ರೆಸ್ ಕುತಂತ್ರದಿಂದಾಗಿ ಸಮ್ಮಿಶ್ರ ಸರ್ಕಾರ ಮಾಡಿ ಬಿಜೆಪಿಯನ್ನು ಹೊರಗಿಡುವ ಪ್ರಯತ್ನ ಮಾಡಲಾಯಿತು. ಸಿದ್ದರಾಮಯ್ಯ ಅವರೇ, ಅಪ್ಪನಾಣೆಗೆ ಕುಮಾರಸ್ವಾಮಿ ಆಯ್ಕೆಯಾಗುವುದಿಲ್ಲ ಎಂದಿರಿ. ಆದರೂ ಜೆಡಿಎಸ್ ಜತೆಗೆ ಕೈ ಜೋಡಿಸಿದಿರಿ. ಎಲ್ಲಿತ್ತು ನಿಮ್ಮ ನೀತಿ? ಇದೇನಾ ನಿಮ್ಮ ರಾಜಕೀಯ ನೈತಿಕತೆ? ನಿಮ್ಮಿಂದ ಯಾರೂ ಪಾಠ ಕಲಿಯಬೇಕಿಲ್ಲ. ಅಧಿಕಾರಕ್ಕಾಗಿ ನೀವು ಏನು ಮಾಡಲೂ ಸಿದ್ಧ ಎನ್ನುವುದು ಅವತ್ತೇ ಸಿದ್ಧವಾಗಿದೆ ಎಂದರು.
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ರಾಜೀನಾಮೆ ನೀಡಿ ಹೊರಬಂದ 17 ಶಾಸಕರನ್ನು ವೀರರು ಎಂದು ಬೊಮ್ಮಾಯಿ ಸಂಬೋಧಿಸಿದರು. ಕಾಂಗ್ರೆಸ್ ಜತೆಗಿದ್ದು ರಾಜ್ಯವನ್ನು ಹಾಳುಮಾಡಬಾರದು ಎಂದು 17 ಜನರು ರಾಜೀನಾಮೆ ನೀಡಿ ಹೊರಬಂದರು. ಜನರ ಬಳಿಗೆ ತೆರಳಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂಬ ಧೈರ್ಯ ಈ ಹದಿನೇಳು ಜನ ವೀರರಿಗಿತ್ತು. ಅವರೆಲ್ಲರೂ ಯಡಿಯೂರಪ್ಪ ಅವರಿಗೆ ಬಲ ನೀಡಿದರು, ಸರ್ಕಾರ ರಚನೆ ಆಯಿತು ಎಂದರು.
ಯಡಿಯೂರಪ್ಪ ಅವರ ಆಡಳಿತದಲ್ಲಿ ಕೋವಿಡ್ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಿದ್ದೇವೆ. ಕೈಗೆ ಕೆಲಸ ಇಲ್ಲದ ಸಂದರ್ಭದಲ್ಲಿ ಬಡವರಿಗೆ ಸಹಾಯ ಮಾಡಿದ್ದೇವೆ. ದೇಶದಲ್ಲಿ ನೂರಾ ಮೂವತ್ತು ಕೋಟಿ ಜನಸಂಖ್ಯೆಗೆ ಉಚಿತವಾಗಿ ಎರಡು ಡೋಸ್ ಲಸಿಕೆಯನ್ನು ಭಾರತದಲ್ಲಿ ಮಾತ್ರ ನೀಡಲಾಗಿದೆ. ಕೇಂದ್ರದಲ್ಲಿ ಮೋದಿ, ಇಲ್ಲಿ ಯಡಿಯೂರಪ್ಪ ಅಲ್ಲದೆ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಿದ್ದರೆ ನರಕಕ್ಕೆ ತಳ್ಳುತ್ತಿದ್ದರು ಎಂದು ಬೊಮ್ಮಾಯಿ ಬಣ್ಣಿಸಿದರು.
ಮತ್ತೆ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮುಂದುವರಿಸಿದ ಬೊಮ್ಮಾಯಿ, ಅನ್ನಭಾಗ್ಯವನ್ನು ನೀವು ಕೊಟ್ಟಿರಿ ಎಂದು ಹೇಳಿಕೊಂಡಿರಿ. ಏಳು ಕೆಜಿ ಅಕ್ಕಿ ಕೊಡುತ್ತೇವೆ ಎಂದು ಅದನ್ನು ಮೂರು ಕೆಜಿಗೆ ಇಳಿಸಿ ಆಮೇಲೆ ಚುನಾವಣೆ ಸಂದರ್ಭದಲ್ಲಿ ಏಳು ಕೆಜಿಗೆ ಹೆಚ್ಚಿಸಿದಿರಿ. ಇದರಲ್ಲಿ ಅಕ್ಕಿಯನ್ನು ಮೋದಿ ಸರ್ಕಾರ ನೀಡಿದರೆ ಅದರ ಚೀಲ ಮಾತ್ರ ನೀಡಿದಿರಿ ಎಂದು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಗರಣ ಆರೋಪಗಳ ಪಟ್ಟಿ
ಸಿದ್ದರಾಮಯ್ಯ ಸರ್ಕಾರದಲ್ಲಿ ಹಗರಣಗಳು ನಡೆದಿದ್ದವು ಎಂದು ದೊಡ್ಡ ಪಟ್ಟಿ ಮಾಡಿದ ಸಿಎಂ ಬೊಮ್ಮಾಯಿ, ಅನ್ನಭಾಗ್ಯ ಹಗರಣವನ್ನು ತನಿಖೆ ಮಾಡುತ್ತಿದ್ದ ಅನುರಾಗ್ ತಿವಾರಿಯ ಸಾವು ಅನುಮಾನಾಸ್ಪದವಾಗಿ ಉತ್ತರ ಪ್ರದೇಶದಲ್ಲಿ ನಡೆಯಿತು. ಮರಳು ದಂಧೆಯಲ್ಲಿ ಸಚಿವ ಸಂಪುಟದ ಸದಸ್ಯರ ಮಗನ ಮೇಲೆ ಪ್ರಕರಣ ದಾಖಲಾಯಿತು. ರೈತರಿಗೆ ಬೋರ್‌ವೆಲ್ ಕೊರೆಯಿಸುವ ಯೋಜನೆಯಲ್ಲಿ ಒಂದೇ ದಿನದಲ್ಲಿ ಮೂವತ್ತಾರು ಸಾವಿರ ಬೋಈರ್‌ವೆಲ್ ಕೊರೆಸುವ ಹಗರಣ ಮಾಡಿದಿರಿ. ಎಸ್‌ಸಿಎಸ್‌ಟಿ ಹಾಸ್ಟೆಲ್‌ಗಳ ಹಾಸಿಗೆ ದಿಂಬಿನಲ್ಲಿ, ಬಿಡಿಎ ಅರ್ಕಾವತಿಯಲ್ಲಿ, ಲ್ಯಾಪ್‌ಟಾಪ್ ನೀಡುವುದರಲ್ಲಿ ಹಗರಣ ಮಾಡಿದಿರಿ ಎಂದರು. ಸಣ್ಣ ನೀರಾವರಿಯಲ್ಲಿ ಕೆಲಸವನ್ನೇ ಮಾಡದೆ ನಲವತ್ತು ಸಾವಿರ ಕೋಟಿ ಬಿಲ್ ಮಾಡಿದಿರಿ ಎಂದ ಸಿಎಂ ಬೊಮ್ಮಾಯಿ, ನಮ್ಮ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುತ್ತಿದ್ದೀರಿ. ನಿಮ್ಮದು 100% ಸರ್ಕಾರ. ಕೆಲಸವನ್ನೇ ಮಾಡದೆ ಬಿಲ್ ಮಾಡುವ ಸರ್ಕಾರ ನಿಮ್ಮದು ಎಂದರು.
ಸಿದ್ದರಾಮಯ್ಯ ಅವರ ಅವಧಿಯಲ್ಲಿ ಪೊಲೀಸ್ ನೇಮಕಾತಿ ಹಗರಣದಲ್ಲಿ ದೂರು ದಾಖಲಾಯಿತಾದರೂ ಯಾರ ಮೇಲೆಯೂ ಏನೂ ಕ್ರಮ ಆಗಲಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನುಮತಿ ನೀಡಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು. ನಿಮ್ಮ ಅವಧಿಯಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಮೂರು ಬಾರಿ ಪರೀಕ್ಷೆ ಮುಂದೂಡಲ್ಪಟ್ಟಿತು. ಪರೀಕ್ಷೆಯನ್ನೇ ತೆಗೆದುಕೊಳ್ಳದವರಿಗೆ ನೇಮಕಾತಿ ಮಾಡಿದ್ದೀರ ಎಂದರು.
ಹಗರಣಗಳನ್ನು ಬಯಲಿಗೆಳೆಯುತ್ತೇವೆ
ಇಂತಹ ನಾಟಕ, ದುಷ್ಟ ನಾಟಕ ಕರ್ನಾಟಕದಲ್ಲಿ ನಡೆಯುವುದಿಲ್ಲ ಎನ್ನುವುದನ್ನು ತೋರಿಸಲು ಈ ಕಾರ್ಯಕ್ರಮ ನಡೆಯುತ್ತಿದೆ ಎಂದ ಬೊಮ್ಮಾಯಿ, ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಹಗರಣಗಳನ್ನು ಬಯಲಿಗೆಳೆಯುವುದಾಗಿ ಘೋಷಿಸಿದರು.
ಕರ್ನಾಟಕದ ಜನ ನಿಮ್ಮ ಭ್ರಷ್ಟಾಚಾರವನ್ನು ನೋಡಿದ್ದಾರೆ. ದೊಡ್ಡಬಳ್ಳಾಪುರದಿಂದ ಆರಂಭವಾದ ಜನಸ್ಪಂದವನ್ನು ಧಂ ಇದ್ದರೆ, ತಾಕತ್ತಿದ್ದರೆ ನಿಲ್ಲಿಸುವ ಪ್ರಯತ್ನ ಮಾಡಿ. ಕರ್ನಾಟಕದ ಹಳ್ಳಿ ಹಳ್ಳಿಗೂ ಇದು ಹಬ್ಬಲಿದೆ. ಭ್ರಷ್ಟಾಚಾರದಿಂದ ಕೂಡಿಟ್ಟ ನಿಮ್ಮ ಹಣ ಪ್ರಯೋಜನಕ್ಕೆ ಬರುವುದಿಲ್ಲ. ನಿಮ್ಮ ಬಂಡವಾಳ, ನಿಮ್ಮ ಹಣದ ಬಂಡವಾಳ ಬಯಲಾಗುತ್ತದೆ.
ಮೇಲೆ ತಿಳಿಸಿದ ಎಲ್ಲ ಹಗರಣಗಳೂ ಸ್ವಲ್ಪ ದಿನದಲ್ಲೇ ಬಯಲಾಗುತ್ತವೆ. ನಿಮ್ಮ ನಿಜ ಸ್ವರೂಪವನ್ನು ಜನರ ಮುಂದೆ ಇಡುತ್ತೇವೆ. ಆಗ ಜನರು ನಿಮ್ಮನ್ನು ಛೀ ಥೂ ಎನ್ನುತ್ತಾರೆ. ಡಬಲ್ ಇಂಜಿನ್ ಸರ್ಕಾರದ ಉಪಯೋಗಗಳನ್ನು ರಿಪೋರ್ಟ್‌ಕಾರ್ಡ್‌ನೊಂದಿಗೆ ಜನರ ಎದುರು ಬಂದು ಆಶೀರ್ವಾದ ಮಾಡಿ ಎಂದು ಕೋರುತ್ತೇವೆ. ಜನಸ್ಪಂದನೆಯನ್ನು ವಿಜಯೋತ್ಸವದಲ್ಲಿ ನಾವು ಪರಿವರ್ತನೆ ಮಾಡುತ್ತೇವೆ. 2023ರಲ್ಲಿ ಬಿಜೆಪಿ ಸರ್ಕಾರವೇ ಬರುತ್ತದೆ. ನವ ಕರ್ನಾಟಕದಿಂದ ನವ ಭಾರತ ನಮ್ಮ ಗುರಿ, ಅದಕ್ಕೆ ನಿಮ್ಮೆಲ್ಲರ ಬೆಂಬಲ ಇರಲಿ ಎಂದರು.
ಎತ್ತಿನ ಹೊಳೆ ಯೋಜನೆ ಆಗುತ್ತದೆ
ಬಿಜೆಪಿ ಪಕ್ಷದಲ್ಲೆ ಭಿನ್ನಮತವಿರುಬ ಎತ್ತಿನಹೊಳೆ ಯೋಜನೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಪ್ರಸ್ತಾಪಿಸಿದರು. ಎತ್ತಿನಹೊಳೆ ಯೋಜನೆಯನ್ನು ನಾವು ಆರಂಭಿಸಿದೆವು. ಈಗ ಎತ್ತಿನಹೊಳೆ ಯೋಜನೆ ಬಗ್ಗೆ ಮಾತನಾಡುವವರಿಗೆ ಎತ್ತಿನ ಹೊಳೆ ಎಲ್ಲಿದೆ ಎನ್ನುವುದೇ ಗೊತ್ತಿಲ್ಲ. ಇದರಲ್ಲಿ ನೀರೇ ಬರುವುದಿಲ್ಲ ಎಂದು ಇದೇ ನಾಯಕರು ಹೇಳಿದರು. ಆದರೆ ಈಗ ಪಂಪ್ ಮಾಡಿ ಈ ಕಡೆಗೆ ಬರುವಾಗ, ತಾವೇ ಮಾಡಿದ್ದಾಗಿ ಹೇಳುತ್ತಿದ್ದಾರೆ. ನಿಜವಾಗಲೂ ಈ ಯೋಜನೆಗೆ ಹಣವನ್ನು ನಮ್ಮ ಸರ್ಕಾರ ನೀಡುತ್ತಿದೆ. ಕೋಲಾರ, ಚಿಕ್ಕಬಳ್ಳಾಪುರ ಕಾಮಗಾರಿ ಆರಂಭಿಸಿ ಭೈರಗೊಂಡಲುವರೆಗೆ ಈ ವರ್ಷವೇ ನೀರನ್ನು ಹರಿಸುತ್ತೇವೆ. ನಾವೇ ಆರಂಭಿಸಿದ ಯೋಜನೆಯಲ್ಲಿ, ನಮ್ಮಿಂದಲೇ ನೀರು ಬರಬೇಕೆಂದು ದೈವೇಚ್ಛೆ ಎಂದರು.
ಇದನ್ನೂ ಓದಿ | BJP ಜನಸ್ಪಂದನ | ಅಣ್ಣಾವ್ರ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ MTB, ವಿಶ್ವನಾಥ್ !