ಚಿಕ್ಕಬಳ್ಳಾಪುರ: ಸ್ವಾತಂತ್ರ್ಯದ 75ನೇ ವರ್ಷಾಚರಣೆ ಸಂದರ್ಭದಲ್ಲಿ ಜಿಲ್ಲಾವಾರು ಪಾದಯಾತ್ರೆಗಳನ್ನು ಕೆಪಿಸಿಸಿ ಆಯೋಜಿಸಿದ್ದು, ಇಂತಹ ಸಭೆಯಲ್ಲಿ ಮಾತನಾಡುವ ವೇಳೆ ಆಜಾನ್ ಶಬ್ದ ಕೇಳಿದ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಭಾಷಣವನ್ನು ಅಲ್ಲಿಗೇ ಸ್ಥಗಿತಗೊಳಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟ ಹಾಗೂ ಬಲಿದಾನ ನಡೆದ ವಿದುರಾಶ್ವತ್ಥಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ, ಪಾದಯಾತ್ರೆ ನಂತರ ಬಹಿರಂಗ ಸಭೆಯಲ್ಲಿ ಮಾತನಾಡಲು ಆರಂಭಿಸಿದರು.
ವಿದುರಾಶ್ವತ್ಥ ಒಂದು ಐತಿಹಾಸಿಕ ಸ್ಥಳ. ಬ್ರಿಟಿಷರೇ ದೇಶ ಬಿಟ್ಟು ತೊಲಗಿ ಎಂದು ಹೋರಾಟಗಾರರು ಪ್ರಾಣ ಕಳೆದುಕೊಂಡ ಸ್ಥಳ ಎಂದು ಹೇಳುತ್ತಿದ್ದರು. ಇದೇ ವೇಳೆಗೆ ಸಮೀಪದ ಮಸೀದಿಯೊಂದರಿಂದ ಆಜಾನ್ ಶಬ್ದ ಕೇಳಿಬಂದಿತು.
ಈ ವೇಳೆಗ ತಕ್ಷಣವೇ ಭಾಷಣ ನಿಲ್ಲಿಸಿದ ಸಿದ್ದರಾಮಯ್ಯ, ಸಂಪೂರ್ಣ ಮೌನವಾದರು, ಕೆಲಕಾಲ ತಲೆತಗ್ಗಿಸಿ ನಿಂತರು. ಕಾರ್ಯಕ್ರಮದಲ್ಲಿ ಇದ್ದವರೂ ಮೌನಕ್ಕೆ ಶರಣಾದರು. ಆಜಾನ್ ಮುಗಿದ ನಂತರ ಸಿದ್ದರಾಮಯ್ಯ ಭಾಷಣವನ್ನು ಮುಂದುವರಿಸಿದರು.
ಇದನ್ನೂ ಓದಿ | ಎಸಿಬಿ ಸ್ವತಂತ್ರ ತನಿಖಾ ಸಂಸ್ಥೆಯಾಗಿತ್ತು: ಮಾಜಿ ಸಿಎಂ ಸಿದ್ದರಾಮಯ್ಯ ಸಮರ್ಥನೆ
ನಂತರ ಮಾತನಾಡಿದ ಸಿದ್ದರಾಮಯ್ಯ, ರಾಜ್ಯದಲ್ಲಿ 40% ಸರ್ಕಾರವಿದೆ. ಕಾಂಟ್ರಾಕ್ಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಕೆಂಪಣ್ಣ, ಕಮಿಷನ್ ವಿಚಾರವಾಗಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಆದರೆ ಮೋದಿ ಒಂದೇ ಒಂದು ಕ್ರಮ ಕೈಗೊಂಡಿಲ್ಲ. ನಾನು ತಿನ್ನಲ್ಲ, ತಿನ್ನಲು ಬಿಡುವುದಿಲ್ಲ ಎಂದು ಮೋದಿ ಹೇಳುತ್ತಾರೆ, ತಮ್ಮನ್ನು ತಾವು ಚೌಕಿದಾರ್ ಎಂದು ಹೇಳಿಕೊಳ್ಳುತ್ತಾರೆ. ಆದರೆ ಕಮಿಷನ್ ವಿಚಾರವಾಗಿ ಕ್ರಮ ತೆಗೆದುಕೊಂಡಿಲ್ಲ ಎಂದರು.
ಬಿಜೆಪಿಯವರು ಅಸಮಾನತೆ ಪರ ಇರುವವರು. ಕಾಂಗ್ರೆಸ್ ಸಮಾನತೆ ಪರವಿದೆ. ದೇಶದ ಇತಿಹಾಸದಲ್ಲಿ ಅತೀ ಹೆಚ್ಚು ಅಣೆಕಟ್ಟು ಕಟ್ಟಿದ್ದು ಕಾಂಗ್ರೆಸ್. ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಿದ್ದು ಕಾಂಗ್ರೆಸ್. ಬಿಜೆಪಿಯವರು ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡಲು ಹೊರಟಿದ್ದಾರೆ. ಆರ್ಥಿಕ ಪರಿಸ್ಥಿತಿ ಹಾಳು ಮಾಡುವವರು ಕೇಂದ್ರ, ರಾಜ್ಯದಲ್ಲಿದ್ದಾರೆ. ಬಿಜೆಪಿಯವರನ್ನು ಅಧಿಕಾರದಿಂದ ಕಿತ್ತೊಗೆಯಬೇಕು ಎಂದು ನಾವೆಲ್ಲರೂ ಪ್ರಮಾಣ ಮಾಡಬೇಕು.
ಬಿಜೆಪಿಯವರು ವ್ಯಾಪಾರಕ್ಕೆ ಬಂದ ಗಿರಾಕಿಗಳು. ಚಿಕ್ಕಬಳ್ಳಾಪುರಕ್ಕೆ ತುಂಬ ಗಿರಾಕಿಗಳು ಬಂದಿದ್ದಾರೆ. ಸಿನಿಮಾ ಮುಗಿದ ಮೇಲೆ ಟೆಂಟ್ ಕಿತ್ತುಕೊಂಡು ಹೋಗುತ್ತಾರೆ. ದುಡ್ಡಿನ ಚೀಲವನ್ನು ಹೊತ್ತಕೊಂಡು ಬಂದವರನ್ನು ಓಡಿಸಿ ಎಂದು ಕರೆ ನೀಡಿದರು.
ಇದನ್ನೂ ಓದಿ | ಸುಮ್ಮನೆ ಇರದಿದ್ದರೆ ಸುಧಾಕರ್ ಹಿನ್ನೆಲೆಯನ್ನು ಬಿಚ್ಚಿಡಬೇಕಾಗುತ್ತದೆ: ಸಿದ್ದರಾಮಯ್ಯ ಎಚ್ಚರಿಕೆ