Site icon Vistara News

Chikkamagalu Election Results: ಚಿಕ್ಕಮಗಳೂರಲ್ಲಿ ಸಿ.ಟಿ. ರವಿಗೆ ಮುಖಭಂಗ; ಆಪ್ತ ತಮ್ಮಯ್ಯ ಗೆದ್ದರಯ್ಯ!

Chikkamagaluru assembly Election results winner HD Tammaih

ಚಿಕ್ಕಮಗಳೂರು: ಕಳೆದ ನಾಲ್ಕು ಚುನಾವಣೆಗಳಲ್ಲಿ ಸತತವಾಗಿ ಗೆಲ್ಲುತ್ತಾ ಬಂದಿರುವ ಮಾಜಿ ಸಚಿವ ಸಿ.ಟಿ. ರವಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರವನ್ನು ಬಿಜೆಪಿಯ ಭದ್ರಕೋಟೆಯಾಗಿಸಿಕೊಂಡಿದ್ದರು. ಆದರೆ, ಈ ಬಾರಿ ಕಾಂಗ್ರೆಸ್‌ ತೀವ್ರ ಸವಾಲೊಡ್ಡಿದ್ದು, ಫಲಿತಾಂಶ (chikkamagalu Election Results) ಹೊರಬಿದ್ದಿದೆ. ಅಂತಿಮ ಸೆಣಸಾಟದಲ್ಲಿ ಸಿ.ಟಿ. ರವಿ ಅವರು ಸೋಲು ಕಾಣುವ ಮೂಲಕ ಮುಖಭಂಗ ಅನುಭವಿಸಿದ್ದಾರೆ.

ಸಿ.ಟಿ. ರವಿಗೆ ಮುಖಭಂಗ

ಬಿಜೆಪಿಯಿಂದ ಸಿಡಿದೆದ್ದು ಕಾಂಗ್ರೆಸ್ ಸೇರಿರುವ ಸಿ.ಟಿ. ರವಿ ಅವರ ಆಪ್ತ ಎಚ್‌.ಡಿ. ತಮ್ಮಯ್ಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದು ಬಿಜೆಪಿಗೆ ಆತಂಕವನ್ನುಂಟು ಮಾಡಿತ್ತು. ಅದೂ ಅಲ್ಲದೆ, ತಮ್ಮಯ್ಯ ಅವರು ಸಿ.ಟಿ. ರವಿ ಅವರ ಆಪ್ತರಾಗಿದ್ದರು. ರವಿ ಅವರ ಎಲ್ಲ ಪಟ್ಟುಗಳನ್ನು ಬಲ್ಲ ಅವರೇ ಈ ಬಾರಿ ಎದುರಾಳಿಯಾಗಿದ್ದರಿಂದ ಕ್ಷೇತ್ರವನ್ನು ಕೈಬಿಡದಂತೆ ನೋಡಿಕೊಳ್ಳಲು ಸಿ.ಟಿ. ರವಿ ತೀವ್ರ ಕಸರತ್ತು ನಡೆಸಿದ್ದರು. ಜತೆಗೆ ಅವರ ಪತ್ನಿ ಸಹ ಅಖಾಡಕ್ಕೆ ಇಳಿದಿದ್ದರು. ಇನ್ನು ಲಿಂಗಾಯತ ವಿರೋಧಿ ಎಂಬ ಹಣೆಪಟ್ಟಿಯನ್ನೂ ಇವರಿಗೆ ಕಟ್ಟಲಾಗಿತ್ತು. ಈ ಎಲ್ಲ ಕಾರಣಗಳ ನಡುವೆ ಎಷ್ಟೇ ಹೋರಾಟ ನಡೆಸಿದರೂ ಸಿ.ಟಿ. ರವಿ ಅವರು ಜಯ ಕಾಣಲು ಸಾಧ್ಯವಾಗಲೇ ಇಲ್ಲ. ಈ ಮೂಲಕ ತೀವ್ರ ಮುಖಭಂಗವನ್ನು ಅನುಭವಿಸಿದ್ದಾರೆ.

ಮೊದಲ ಯತ್ನದಲ್ಲೇ ಗೆದ್ದ ತಮ್ಮಯ್ಯ

ಸೋಲಿಲ್ಲದ ಸರದಾರ ಎಂದು ಬಿಂಬಿತವಾಗಿರುವ ಸಿ.ಟಿ. ರವಿ ಈ ಬಾರಿಯೂ ಗೆಲ್ಲುವ ಫೇವರೆಟ್ ಅಭ್ಯರ್ಥಿ ಎಂದೇ ಬಿಂಬಿತರಾಗಿದ್ದರು. ಆದರೆ, ಕ್ಷೇತ್ರದಲ್ಲಿ ಹರಿದಾಡಿದ ಲಿಂಗಾಯತ ವಿರೋಧಿ ಎಂಬ ಸುದ್ದಿಗಳು ಅವರು ಹಿನ್ನಡೆ ಅನುಭವಿಸಲು ಒಂದು ಕಾರಣವಾದರೆ, ಇನ್ನೊಂದೆಡೆ ಲಿಂಗಾಯತ ಸಮುದಾಯದವರೇ ಆಗಿರುವ ಎಚ್‌.ಡಿ. ತಮ್ಮಯ್ಯ ಅವರಿಗೆ ಪೂರ್ಣವಾಗಿ ಲಿಂಗಾಯತ ಮತಗಳು ಒಲಿದಿರುವುದು ಗೆಲುವಿಗೆ ಶ್ರೀರಕ್ಷೆಯಾಗಿದೆ.

ಕಾಂಗ್ರೆಸ್‌ ಜತೆ ಕೈಜೋಡಿಸಿದ್ದ ಜೆಡಿಎಸ್‌

ಜನತಾಪರಿವಾರದ ನೆಲೆ ಹೊಂದಿರುವ ಈ ಕ್ಷೇತ್ರದಲ್ಲಿ ಜೆಡಿಎಸ್ ನೆಪ ಮಾತ್ರಕ್ಕೆ ಸ್ಪರ್ಧೆ ಮಾಡಿದೆ. ಜೆಡಿಎಸ್ ಅಭ್ಯರ್ಥಿ ತಿಮ್ಮ ಶೆಟ್ಟಿ ಕಣದಲ್ಲಿ ಇದ್ದರಾದರೂ ಯಾವುದೇ ಪ್ರಚಾರ ನಡೆಸದೇ ದೂರ ಉಳಿದಿದ್ದರು. ಜೆಡಿಎಸ್ ಮತ್ತು ಕಾಂಗ್ರೆಸ್ ಒಂದಾಗಿ ಸಿ.ಟಿ. ರವಿಯನ್ನು ಈ ಬಾರಿ ಶತಾಯಗತಾಯ ಸೋಲಿಸಲು ರಣತಂತ್ರ ಹೂಡಿದ್ದರು. ಅದೂ ಅಲ್ಲದೆ, ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಆಪ್ತ ಎಸ್.ಎಲ್. ಭೋಜೇಗೌಡ ನೇರವಾಗಿ ಕಾಂಗ್ರೆಸ್ ಪರ ಪ್ರಚಾರ ನಡೆಸಿದ್ದರು. ಇದು ಸಹ ಕಾಂಗ್ರೆಸ್‌ ಅಭ್ಯರ್ಥಿ ಗೆಲುವಿಗೆ ಶ್ರೀರಕ್ಷೆಯಾಗಿದೆ.

ಕಳೆದ ಚುನಾವಣೆಯ ಫಲಿತಾಂಶ ಏನು?
ಸಿ ಟಿ ರವಿ (ಬಿಜೆಪಿ) : 70,863 – ಬಿ ಎಲ್ ಶಂಕರ್ (ಕಾಂಗ್ರೆಸ್): 44,549- ಬಿ.ಎಚ್ ಹರೀಶ್ (ಜೆಡಿಎಸ್)- 38,317- ಗೆಲುವಿನ ಅಂತರ: 26,314

ಈ ಬಾರಿಯ ಚುನಾವಣೆಯ ಫಲಿತಾಂಶ
ಎಚ್.ಡಿ. ತಿಮ್ಮಯ್ಯ (ಕಾಂಗ್ರೆಸ್‌): 85054 | ಸಿ.ಟಿ. ರವಿ (ಬಿಜೆಪಿ): 79128 |
ಗೆಲುವಿನ ಅಂತರ: 5822

ಇದನ್ನೂ ಓದಿ: Karnataka Election Results Live Updates: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಬೆಳವಣಿಗೆ

ಕರ್ನಾಟಕ ಚುನಾವಣೆಯ ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Exit mobile version