ಚಿಕ್ಕಮಗಳೂರು: ಸಂಭ್ರಮದ ದತ್ತಜಯಂತಿ ಸಹಿಸಲಾಗದೆ, ಕೋಮು ಗಲಭೆ ಸೃಷ್ಟಿಸಲೆಂದೇ ದಾರಿಯಲ್ಲಿ ಮೊಳೆ ಚೆಲ್ಲಿದ್ದೆವು ಎಂದು ಕುಕೃತ್ಯ ನಡೆಸಿದ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಕಾಫಿನಾಡಲ್ಲಿ ಕೇಸರಿ ಕಂಡು ಕೆರಳಿದ್ದ ಈ ಸಂಚುಕೋರರು, ಸರ್ಕಾರಿ ಕೆಲಸವನ್ನೇ ಬಳಸಿಕೊಂಡು ಕೋಮು ಗಲಭೆಗೆ ಹುನ್ನಾರ ಮಾಡಿದ್ದು ಈಗ ಗೊತ್ತಾಗಿದೆ. ದತ್ತಪೀಠದಲ್ಲಿ ಸಿಸಿಟಿವಿಗೆ ಕ್ಲ್ಯಾಂಪ್ ಹಾಕಲು ಚಿಪ್ಸ್ ಕೆಫೆ ಸಂಸ್ಥೆಗೆ ಸೂಚನೆ ನೀಡಲಾಗಿತ್ತು. ಈ ಸಂದರ್ಭವನ್ನೇ ಬಳಸಿಕೊಂಡಿದ್ದ ಖದೀಮರು ಕ್ಲ್ಯಾಂಪ್ ಹಾಕಲು ಹೋಗಿ ಜೊತೆಗೆ ಮೊಳೆಯನ್ನೂ ದಾರಿಗೆ ಸುರಿದಿದ್ದರು. ಡಿಸೆಂಬರ್ 5ರಂದೇ ರಸ್ತೆಯ ಎಡಬದಿ ಮೊಳೆ ಹಾಕಿದ್ದರು.
ದತ್ತಜಯಂತಿ ಮೆರವಣಿಗೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಗೇಲಿ ಮಾಡಿದ್ದರು. ಆ ಸಿಟ್ಟಿನಿಂದ ದತ್ತಜಯಂತಿ ಕೆಡಿಸಲು ಈ ಕೃತ್ಯ ಎಸಗಿದೆವು ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಅವರ ಹಿನ್ನೆಲೆ ಬಗ್ಗೆ ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಇಬ್ಬರೂ ಆರೋಪಿಗಳು ನಿಷೇಧಿತ ಪಿಎಫ್‌ಐ ಸಂಘಟನೆಯ ಕಾರ್ಯಕರ್ತರು ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ.
ಇದನ್ನೂ ಓದಿ | C T Ravi | ದತ್ತ ಪೀಠದ ದಾರಿಯಲ್ಲಿ ಮೊಳೆಗಳನ್ನು ಚೆಲ್ಲಿದ ಪ್ರಕರಣದಲ್ಲಿ ಇಬ್ಬರ ಬಂಧನ ಸ್ವಾಗತಾರ್ಹ: ಸಿ.ಟಿ. ರವಿ
ಅಂದು ಏನಾಗಿತ್ತು?
ಡಿಸೆಂಬರ್ ೬, ೭, ೮ರಂದು ದತ್ತ ಪೀಠದಲ್ಲಿ ದತ್ತಜಯಂತಿ ಆಚರಣೆಗೆ ಅವಕಾಶ ನೀಡಲಾಗಿತ್ತು. ಇದೇ ಮೊದಲ ಬಾರಿ ಇಬ್ಬರು ಹಿಂದು ಅರ್ಚಕರಿಗೂ ಪೂಜೆಯ ಅವಕಾಶ ದೊರೆತಿತ್ತು. ಇದು ಕೆಲವರ ಕಣ್ಣು ಕೆಂಪಗಾಗುವಂತೆ ಮಾಡಿತ್ತು. ದತ್ತ ಜಯಂತಿಯ ಮೊದಲ ದಿನ ಅನಸೂಯಾ ಸಂಕೀರ್ತನೆ ನಡೆದಿತ್ತು. ಅಂದು ಸಾವಿರಾರು ಮಹಿಳೆಯರು ದತ್ತ ಪೀಠಕ್ಕೆ ಸಂಕೀರ್ತನಾ ಮೆರವಣಿಗೆ ನಡೆಸಿದ್ದರು. ಅವರು ಪೀಠಕ್ಕೆ ಹೋಗುವ ದಾರಿಯಲ್ಲಿ ಮೊಳೆಗಳನ್ನು ಚೆಲ್ಲಲಾಗಿತ್ತು.
ಈ ರೀತಿ ಮೊಳೆ ಚೆಲ್ಲಿದ್ದರಿಂದ ಪೊಲೀಸ್ ಸೇರಿದಂತೆ ನಾಲ್ಕೈದು ವಾಹಗಳು ಪಂಚರ್ ಆಗಿ ರಸ್ತೆ ಮಧ್ಯೆ ನಿಂತಿದ್ದವು. ದುಷ್ಕರ್ಮಿಗಳು ಚಿಕ್ಕಮಗಳೂರಿನ ಹಾರ್ಡ್‍ವೇರ್ ಶಾಪ್‍ನಲ್ಲಿ 4 ಕೆ.ಜಿ. ಮೊಳೆಗಳನ್ನು ಖರೀದಿಸಿ ಆಯಕಟ್ಟಿನ ಜಾಗದಲ್ಲಿ ಚೆಲ್ಲಿದ್ದರು. ಇದೊಂದು ದುಷ್ಕರ್ಮಿ ಕೃತ್ಯ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಅಂದೇ ಆರೋಪಿಸಿದ್ದರು.
ಇದನ್ನೂ ಓದಿ | Datta jayanti | ದತ್ತ ಪೀಠಕ್ಕೆ ಹೋಗುವ ರಸ್ತೆಯಲ್ಲಿ ಮೊಳೆ ಚೆಲ್ಲಿ ಕುಕೃತ್ಯ ನಡೆಸಿದ್ದ ಇಬ್ಬರು ದುಷ್ಕರ್ಮಿಗಳು ಅರೆಸ್ಟ್