ಚಿಕ್ಕೋಡಿ: ಬೆಳಗಾವಿ-ಚಿಕ್ಕೋಡಿ ರಾಜ್ಯ ಹೆದ್ದಾರಿಯ ಜೈನಾಪುರ ಗ್ರಾಮದ ಬಳಿ ಕಳೆದ ರಾತ್ರಿ ಕಾರೊಂದು ಧಗಧಗನೇ ಹೊತ್ತಿ ಉರಿದು ಸಂಪೂರ್ಣ (Car Fire) ಸುಟ್ಟು ಕರಕಲಾಗಿತ್ತು. ಕಾರಿನೊಳಗೆ ವ್ಯಕ್ತಿಯೊಬ್ಬ ಸಜೀವ ದಹನವಾಗಿದ್ದ, ಹೀಗಾಗಿ ಗುರುತು ಪತ್ತೆಯಾಗಿರಲಿಲ್ಲ. ಹೀಗಾಗಿ ಪೊಲೀಸರು ಕಾರಿನ ಚಾರ್ಸಿ ನಂಬರ್ ಮೂಲಕ ಮಾಲೀಕನ ಪತ್ತೆಗೆ ಮುಂದಾಗಿದ್ದರು.
ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು, ಅದರ ತೀವ್ರತೆಗೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಪೈರೋಜ್ ಬಡಗಾಂವ (40) ಕಾರಿನಲ್ಲಿದ್ದ ವ್ಯಕ್ತಿ ಎನ್ನಲಾಗುತ್ತಿದೆ. ಪೈರೋಜ್ ಚಿಕ್ಕೋಡಿ ಪಟ್ಟಣದ ಮುಲ್ಲಾ ಪ್ಲಾಟ್ ನಿವಾಸಿಯಾಗಿದ್ದಾರೆ. ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಟ್ಟ ಕಾರು ಹಾಗೂ ಮೃತದೇಹವನ್ನು ಎಫ್‌ಎಸ್‌ಎಲ್ ತಂಡ ಪರಿಶೀಲಿಸುತ್ತಿದೆ. ಸ್ಥಳೀಯರು ಇದು ಅಪಘಾತವೋ ಕೊಲೆಯೋ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ನೇಣು ಬಿಗಿದ ಸ್ಥಿತಿಯಲ್ಲಿ ಅಸ್ತಿಪಂಜರ ಪತ್ತೆ
ನೇಣು ಬಿಗಿದ ಸ್ಥಿತಿಯಲ್ಲಿ ಅಸ್ತಿಪಂಜರ ಪತ್ತೆಯಾಗಿದೆ. ಉತ್ತರಕನ್ನಡದ ಭಟ್ಕಳದ ಬಂದರು ರಸ್ತೆಯ ಮುಗ್ದುಂ ಕಾಲೋನಿಯ ಸಮೀಪ ಪತ್ತೆಯಾಗಿದೆ. ವ್ಯಕ್ತಿಯೊರ್ವ ಹಾರೆಯ ಹಿಡಿಗೋಲಿಗಾಗಿ ಕಟ್ಟಿಗೆ ಹುಡುಕುತ್ತಿದ್ದಾಗ ಅಸ್ತಿಪಂಜರ ಕಂಡಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಒಂದೆರಡು ತಿಂಗಳ ಹಿಂದೆ ಮೃತಪಟ್ಟಿರುವ ಶಂಕೆ ಇದೆ. ನೆಲದಿಂದ ಸುಮಾರು 10 ಅಡಿ ಎತ್ತರದಲ್ಲಿ ನೈಲಾನ ಹಗ್ಗದಿಂದ ಮರಕ್ಕೆ ಬಿಗಿದ ಸ್ಥಿತಿಯಲ್ಲಿರುವ ಶವ ಸಿಕ್ಕಿದೆ. ಶವ ಕೊಳೆತು ದೇಹದಿಂದ ಬೇರ್ಪಟ್ಟು ರುಂಡ ಕೆಳಗೆಬಿದ್ದಿದೆ. ಅಸ್ತಿಪಂಜರದ ಪಕ್ಕದಲ್ಲಿ ಪುರುಷನ ಪಾದರಕ್ಷೆ ಪತ್ತೆಯಾಗಿರುವುದರಿಂದ ಇದು ಪುರುಷನ ಶವ ಎಂದು ಗುರುತಿಸಿದ್ದಾರೆ. ಅಸ್ಥಿಪಂಜರ ಪರೀಕ್ಷೆಗೆ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಭಟ್ಕಳ ನಗರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಭಟ್ಕಳ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬರ್ತ್ ಡೇ ಸೆಲೆಬ್ರೇಷನ್‌ನಲ್ಲಿ ಪಿಸ್ತೂಲ್ ಸದ್ದು!
ರಿಯಲ್ ಎಸ್ಟೇಟ್ ಉದ್ಯಮಿ ಬರ್ತ್ ಡೇ ಸಂಭ್ರಮದಲ್ಲಿ 6 ಸುತ್ತು ಏರ್ ಫೈರ್ ಮಾಡಿ ಪುಂಡಾಟ ಮೆರೆದಿದ್ದಾರೆ. ಸೆಪ್ಟೆಂಬರ್ 22 ರಂದು ಘಟನೆ ನಡೆದಿದೆ. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಸ್ಕ್ರಾಪ್ ಗೋಡೌನ್‌ನಲ್ಲಿ ಸೈಯದ್ ಅಲ್ತಫ್ ಅಹಮದ್ ಗುಂಡು ಹಾರಿಸಿದ್ದಾನೆ. ಸೆಪ್ಟೆಂಬರ್ 22 ರಂದು ಮೊಯಿನ್ ಖಾನ್ ಎಂಬಾತನ ಹುಟ್ಟು ಹಬ್ಬವಿತ್ತು. ಬರ್ತ್ ಡೇ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದ ಅಲ್ತಫ್ ಈ ವೇಳೆ ಏರ್ ಫೈರ್ ಮಾಡಿ ಪುಂಡಾಟ ಮೆರೆದಿದ್ದಾನೆ.
ಮಾತ್ರವಲ್ಲ ಅದನ್ನು ಇನ್ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡಿ ಬಿಲ್ಡಪ್ ತೆಗೆದುಕೊಂಡಿದ್ದಾರೆ. ಘಟನೆ ವಿಡಿಯೊ ಜುಬೇರ್ ಖಾನ್ ಲಿಮ್ರಾ ಎಂಬ ಇನ್ಸ್ಟಾ ಅಕೌಂಟ್‌ನಲ್ಲಿ ಪೋಸ್ಟ್ ಆಗಿತ್ತು. ಇದನ್ನು ಗಮನಿಸಿದ್ದ ಬೆಂಗಳೂರು ಪೊಲೀಸ್ ಸೋಷಿಯಲ್ ಮೀಡಿಯಾ ವಿಂಗ್ ತಕ್ಷಣ ಅಪರಾಧ ವಿಭಾಗ-2 ಡಿಸಿಪಿ ಶ್ರೀನಿವಾಸ್ ಗೌಡಗೆ ಮಾಹಿತಿ ನೀಡಿದೆ. ಮಾಹಿತಿ ಆಧರಿಸಿ ಸಿಸಿಬಿಯಲ್ಲಿ ಎಫ್ಐಆರ್ ದಾಖಲಾಗಿತ್ತು. ಆರೋಪಿ ಅಲ್ತಾಫ್‌ನ ಆರ್ಮ್ಸ್ ಆ್ಯಕ್ಟ್ ಅಡಿಯಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ